ಚಿಕ್ಕೋಡಿ: ಲಕ್ಷ್ಮಣ ಸವದಿ ಖರ್ಚು ಮಾಡುತ್ತಿರುವ ಹಣ ಬಿಜೆಪಿಯಲ್ಲಿ ಸಂಪಾದನೆ ಮಾಡಿದ್ದು; ಆ ಹಣವನ್ನು ಪಡೆದು ಬಿಜೆಪಿಗೆ ವೋಟ್ ಹಾಕಿ ಎಂದು ಮಾಜಿ ಸಚಿವ ಹಾಗೂ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅಥಣಿ ಕ್ಷೇತ್ರದ ಮತದಾರರಿಗೆ ಪ್ರಚೋದನೆ ನೀಡುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ.
ಪ್ರಚಾರದ ವೇಳೆ ಮಾತನಾಡಿದ ಅವರು, ಸವದಿ ಕಣ್ಣೀರು ಹಾಕಿ ನಾಟಕ ಮಾಡುತ್ತಿದ್ದಾರೆ. ಪಕ್ಷದಿಂದ ಅವರಿಗೆ ಎಲ್ಲವನ್ನೂ ನೀಡಲಾಗಿದೆ. ಆದರೆ ಅವರು ಅಧಿಕಾರ ನೀಡಿದ ಎಲ್ಲರಿಗೂ ಮೋಸ ಮಾಡಿ ಇಲ್ಲಿಂದ ಹೋಗಿದ್ದಾರೆ. ಬಿ.ಎಲ್.ಸಂತೋಷ್ ಮತ್ತು ಉಮೇಶ್ ಕತ್ತಿಗೂ ಮೋಸ ಮಾಡಿದ್ದಾರೆ. ಅವರಿಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಬೇಕು ಎಂದು ಸವದಿಯ ವಿರುದ್ಧ ಮತದಾರರನ್ನು ಎತ್ತಿಕಟ್ಟಿದ್ದಾರೆ.
ಲಕ್ಷ್ಮಣ ಸವದಿ ಖರ್ಚು ಮಾಡುತ್ತಿರುವ ಹಣ, ಬಿಜೆಪಿಯಲ್ಲಿ ಸಂಪಾದನೆ ಮಾಡಿದ್ದು ಎಂದು ಹೇಳುವ ರಮೇಶ್ ಜಾರಕಿಹೋಳಿ, ಬಿಜೆಪಿಯನ್ನು ಭ್ರಷ್ಟ ಪಕ್ಷವೆಂದು ಒಪ್ಪಿಕೊಂಡಿದ್ದಾರೆ. ಭ್ರಷ್ಟಾಚಾರ ಮಾಡದೇ ಹಣ ಬರುತ್ತದೆಯೇ? ಕಾಂಗ್ರೆಸ್ ಪಕ್ಷದ ಲಕ್ಷ್ಮಣ ಸವದಿಯಿಂದ ಹಣವನ್ನು ಪಡೆದುಕೋಂಡು ಬಿಜೆಪಿಗೆ ವೋಟ್ ಹಾಕಿ ಎಂದು ಮತದಾರರಿಗೆ ಆಮಿಷ ಮತ್ತು ಪ್ರಚೋದನೆ ನೀಡುವುದು ಅಪರಾಧವಲ್ಲವೇ?
“ಅವರಿಂದ ಹಣ ಪಡೆದುಕೊಂಡು ನಮಗೆ ವೋಟ್ ಹಾಕಿ” ಎಂದು ಅಭ್ಯರ್ಥಿಗಳು ಹೇಳುವುದು ಸರ್ವ ಸಾಮಾನ್ಯವಾಗಿದೆ. ಈ ರೀತಿ ಹೇಳುವುದು ಚುನಾವಣೆ ನೀತಿಗಳಿಗೆ ವಿರುದ್ಧವಲ್ಲವೇ? ಇದು ಅಪರಾದ ಕ್ರಮವಲ್ಲವೇ? ಇದರ ಬಗ್ಗೆ ಚುನಾವಣಾ ಅಯೋಗವು ಏನು ಕ್ರಮ ತೆಗೆದುಕೊಂಡಿದೆ. ಈ ರೀತಿ ಹೇಳುವುದು ಅಪರಾಧ ಎನ್ನುವುದಾದರೆ, ಮೊದಲು ಮಾಜಿ ಸಚಿವ ಹಾಗೂ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿ ಹೊಳಿಯ ವಿರುದ್ಧ, ಕ್ರಮ ಜರುಗಿಸುವ ಮೂಲಕ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಬೇಕೆಂದು ಮತದಾರರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.