ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Sugar Free Archives » Dynamic Leader
November 21, 2024
Home Posts tagged Sugar Free
ದೇಶ

ವಿವಿಧ ಉತ್ಪನ್ನಗಳಲ್ಲಿ ಸಕ್ಕರೆಗೆ ಪರ್ಯಾಯವಾಗಿ ಬಳಸುವ ಕೃತಕ ಸಿಹಿಕಾರಕಗಳು, ತೂಕವನ್ನು ಕಡಿಮೆ ಮಾಡದೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಸಕ್ಕರೆಗೆ ಪರ್ಯಾಯವಾಗಿ, ಡಯಟ್ ಸೋಡ, ಕಾಫಿ ಮುಂತಾದವುಗಳಲ್ಲಿ ದೇಹದ ತೂಕವನ್ನು ಕಡಿಮೆ ಮಾಡಲಿಕ್ಕಾಗಿ ದಿನವೂ ಲಕ್ಷಾಂತರ ಜನರಿಂದ, ಕೃತಕ ಸಿಹಿಕಾರಕಗಳನ್ನು ಬಳಸಲಾಗುತ್ತಿದೆ. ಆದರೆ ಇವು ಆರೋಗ್ಯಕರವೇ ಎಂಬುದರ ಬಗ್ಗೆ ಬಹಳ ಹಿಂದಿನಿಂದಲೂ ವಿವಾದಗಳು ನಡೆಯುತ್ತಲೇ ಇವೆ.

ಈ ವೇಳೆ ಎನ್‌ಎಸ್‌ಎಸ್ (NSS) ಎಂದು ಕರೆಯಲ್ಪಡುವ ಸಕ್ಕರೆ ರಹಿತ ಕೃತಕ ಸಿಹಿಕಾರಕಗಳನ್ನು ಬಳಸುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ, ‘ನಮ್ಮ ಬಳಿ ಇರುವ ಪುರಾವೆಗಳನ್ನು ಮೌಲ್ಯಮಾಪನ ಮಾಡಿದಾಗ, ಹಿರಿಯರು ಮತ್ತು ಮಕ್ಕಳ ಕೊಬ್ಬನ್ನು ಕರಗಿಸುವುದರಲ್ಲಿ ಕೃತಕ ಸಿಹಿಕಾರಕಗಳು ದೀರ್ಘ ಕಾಲದ ಫಲವನ್ನು ನೀಡುವುದಿಲ್ಲ. ದೀರ್ಘ ಕಾಲದಿಂದ ಇದನ್ನು ಬಳಸುವ ಹಿರಿಯರಿಗೆ ಮಧುಮೇಹ, ಹೃದಯ ಸಮಸ್ಯೆ, ಸಾವು ಸೇರಿದಂತೆ ಹೆಚ್ಚಿನ ಅಪಾಯಗಳನ್ನು ಏರ್ಪಡಿಸುವಂತಹ ಸಾಧ್ಯತೆಗಳೇ ಹೆಚ್ಚಾಗಿದ್ದು, ಇದರಿಂದ ಅಹಿತಕರ ಘಟನೆಗಳು ಸಂಭವಿಸಬಹುದು ಎಂಬ ಶಿಫಾರಸ್ಸನ್ನು ಮಾಡಲಾಗುತ್ತದೆ’ ಎಂದು ಅದರಲ್ಲಿ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪೋಷಣೆ ಮತ್ತು ಆಹಾರ ಸುರಕ್ಷತಾ ಇಲಾಖೆಯ ನಿರ್ದೇಶಕ ಫ್ರಾನ್ಸೆಸ್ಕೊ ಬ್ರಾಂಕಾ ಅವರು, ‘ಕೃತಕ ಸಿಹಿಕಾರಕಗಳನ್ನು ಬಳಸುವುದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುವುದಿಲ್ಲ. ಹಣ್ಣುಗಳು ಅಥವಾ ಸಿಹಿ ಅಲ್ಲದ ಆಹಾರ ಮತ್ತು ನೈಸರ್ಗಿಕವಾಗಿ ಸಕ್ಕರೆಗಳನ್ನು ಹೊಂದಿರುವ ಪಾನೀಯಗಳಂತಹ ಆಹಾರಗಳನ್ನು ಹಾಗೂ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಇತರ ಆಹಾರ ವಿಧಾನಗಳನ್ನು ಪರಿಗಣಿಸಬೇಕು.

ಕೃತಕ ಸಿಹಿಕಾರಕವು ಅತ್ಯಗತ್ಯ ಆಹಾರವಲ್ಲ. ಅದರಲ್ಲಿ ಪೌಷ್ಟಿಕಾಂಶವಿಲ್ಲ. ಆದ್ದರಿಂದ, ಜನರು ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು, ಜೀವನದ ಆರಂಭದಿಂದಲೂ ಸಿಹಿ ತಿಂಡಿಗಳ ಸೇವನೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಈಗಾಗಲೇ ಮಧುಮೇಹದಿಂದ ಬಳಲುತ್ತಿರುವವರನ್ನು ಹೊರತುಪಡಿಸಿ ಮತ್ತೆಲ್ಲರಿಗೂ ಇದು ಅನ್ವಯಿಸುತ್ತದೆ’ ಎಂದು ಹೇಳಿದ್ದಾರೆ.

ಹೆಚ್ಚು ವ್ಯಾಪಕವಾಗಿ ಬಳಸುವ ಕೃತಕ ಸಿಹಿಕಾರಕಗಳಲ್ಲಿ Acesulfame K, Aspartame, Advantame, Cyclamates, Neotame, Saccharin, Sucralose, stevia ಮತ್ತು stevia derivatives ಮುಂತಾದವುಗಳು ಒಳಗೊಂಡಿರುತ್ತದೆ.