ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Tamilnadu Archives » Dynamic Leader
October 17, 2024
Home Posts tagged Tamilnadu
ದೇಶ

ಬೆಂಗಳೂರು: ಕೇಂದ್ರ ಸರ್ಕಾರ  ಬರ ಪರಿಹಾರ ಕೊಡುತ್ತಿಲ್ಲ. ಕೇಂದ್ರ ಮಲತಾಯಿ ಧೋರಣೆ ಮಾಡುತ್ತಿದ್ದು, ಮಧ್ಯಪ್ರವೇಶಿಸಿ ಬರ ಪರಿಹಾರ ಬಿಡುಗಡೆ ಮಾಡಿಸುವಂತೆ ಸುಪ್ರೀಂ ಕೋರ್ಟ್​ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಕೆ ಮಾಡಿದೆ.

ಕೇಂದ್ರ ಸರ್ಕಾರ ಅತಿವೃಷ್ಟಿ, ಅನಾವೃಷ್ಟಿ ಆದಾಗ ರಾಜ್ಯ ಸರ್ಕಾರಕ್ಕೆ ಸ್ಪಂದಿಸಬೇಕು. ಅದಕ್ಕಾಗಿ ವಿಪತ್ತು ನಿರ್ವಹಣೆ ಕಾಯ್ದೆ ತರಲಾಗಿದೆ. ಈ ಕಾಯ್ದೆ ಕೂಡ ಅದನ್ನೇ ಹೇಳುತ್ತದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು, 223 ತಾಲೂಕನ್ನು‌ ಬರಪೀಡಿತ ಅಂತ ಘೋಷಣೆ‌ ಮಾಡಲಾಗಿದೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ‌ ಕೃಷಿ, ತೋಟಗಾರಿಕಾ ಬೆಳೆ ನಷ್ಟವಾಗಿದೆ ಎಂದು ಮುಖ್ಯಮಂತ್ರಿ  ಹೇಳಿದ್ದರು.

ಈ ಹಿನ್ನೆಲೆಯಲ್ಲಿ, ಕರ್ನಾಟಕ ಮಾದರಿಯಲ್ಲೇ ತಮಿಳುನಾಡು ಕೂಡ ಇದೀಗ ಮಧ್ಯಂತರ ಪ್ರವಾಹ ಪರಿಹಾರವಾಗಿ 2,000 ಕೋಟಿ ರೂಪಾಯಿಗಳನ್ನು ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ಅರ್ಜಿ ಸಲ್ಲಿಸಿದೆ.

ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ದಕ್ಷಿಣದ ಜಿಲ್ಲೆಗಳು ಮತ್ತು ಚೆನ್ನೈಗೆ ಮಧ್ಯಂತರ ಪರಿಹಾರವಾಗಿ 2,000 ಕೋಟಿ ರೂಪಾಯಿಗಳನ್ನು ನೀಡುಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈಗಾಗಲೇ ಪ್ರಧಾನಿ ಮೋದಿ ಅವರಿಗೆ ಪ್ರವಾಹ ಪರಿಹಾರ ಕೋರಿ ಪತ್ರ ಬರೆದಿರುವುದು ಗಮನಾರ್ಹ.

ವೆಲ್ಲೂರು ಜಿಲ್ಲೆಯ ಕೋಟೆ (Fort) ಮೈದಾನದಲ್ಲಿ ನಿನ್ನೆ ಡಿಎಂಕೆ ಮೈತ್ರಿ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆ ನಡೆಯಿತು. ಇದರಲ್ಲಿ ಮಾತನಾಡಿದ ಎಂ.ಕೆ.ಸ್ಟಾಲಿನ್, “ನಾವೂ ಕೂಡ ಪ್ರವಾಹ ಪರಿಹಾರ ಕೇಳಿದ್ದೇವೆ; ಸಿಕ್ಕಿಲ್ಲ. ನಾಳೆ (ಇಂದು) ಬೆಳಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಹಾಕಲಿದ್ದೇವೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ರಾಜಕೀಯ

ಚೆನ್ನೈ: 2021ರ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಕಟಿಸಲಾದ ಡಿಎಂಕೆ ಚುನಾವಣಾ ಪ್ರಣಾಳಿಕೆಯಲ್ಲಿ ‘ತಮಿಳುನಾಡಿನ ಎಲ್ಲ ಗೃಹಿಣಿಯರಿಗೆ ಮಾಸಿಕ ರೂ.1,000 ಹಕ್ಕುಭತ್ಯೆ ನೀಡುತ್ತೇವೆ’ ಎಂದು ಘೋಷಿಸಲಾಗಿತ್ತು.

ಡಿಎಂಕೆ ಚುನಾವಣೆಯಲ್ಲಿ ಗೆದ್ದು ತಮಿಳುನಾಡಿನಲ್ಲಿ ಸರ್ಕಾರ ರಚಿಸಿದಾಗ, ಹಲವಾರು ಘೋಷಣೆಗಳನ್ನು ಜಾರಿಗೆ ತಂದರೂ, ಮನೆಯ ಎಜಮಾನಿಗೆ ತಿಂಗಳಿಗೆ ರೂ.1,000 ಹಕ್ಕುಭತ್ಯೆ ನೀಡುವ ಯೋಜನೆಯನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಏತನ್ಮಧ್ಯೆ, ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾದ 2023-24ನೇ ಸಾಲಿನ ಬಜೆಟ್‌ನಲ್ಲಿ ಮನೆಯ ಎಜಮಾನಿಗೆ ಮಾಸಿಕ ರೂ.1,000 ಹಕ್ಕುಭತ್ಯೆ ನೀಡುವ ಯೋಜನೆಗೆ ರೂ.7 ಸಾವಿರ ಕೋಟಿ ಹಣವನ್ನು ನಿಗದಿಪಡಿಸಲಾಯಿತು. ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಅಣ್ಣಾದುರೈ ಅವರ ಜನ್ಮದಿನವಾದ ಸೆಪ್ಟೆಂಬರ್ 15 ರಂದು (ಇಂದು) ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿತು.

ಕಳೆದ ಜುಲೈ 24 ರಂದು ಧರ್ಮಪುರಿ ಜಿಲ್ಲೆಯ ತೊಪ್ಪೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಹಿಳೆಯರು ಅರ್ಜಿ ಸಲ್ಲಿಸುವ ಶಿಬಿರವನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಉದ್ಘಾಟಿಸಿದರು. ಇದಕ್ಕಾಗಿ ರಾಜ್ಯಾದ್ಯಂತ 35 ಸಾವಿರದ 925 ಶಿಬಿರಗಳನ್ನು ನಡೆಸಲಾಗಿದೆ. 68 ಸಾವಿರದ 190 ಸ್ವಯಂಸೇವಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರವು ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಗೆ ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಈ ಯೋಜನೆಗೆ ಒಂದು ಕೋಟಿ 63 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಸುಮಾರು 56 ಲಕ್ಷದ 50 ಸಾವಿರ ಅರ್ಜಿಗಳು ಅನರ್ಹವೆಂದು ತಿರಸ್ಕೃತಗೊಂಡಿವೆ. ಅಂತಿಮವಾಗಿ 1 ಕೋಟಿ 6 ಲಕ್ಷದ 55 ಸಾವಿರ ಅರ್ಹ ಅರ್ಜಿಗಳನ್ನು ಸ್ವೀಕರಿಸಲಾಯಿತು. ಈ ಹಿನ್ನಲೆಯಲ್ಲಿ, ಒಂದು ಕೋಟಿ ಮನೆಯ ಎಜಮಾನಿಗೆ ಮಾಸಿಕ ರೂ.1,000 ನೀಡುವ ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಯನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಇಂದು ಉದ್ಘಾಟಿಸಿದರು. ಈ ಯೋಜನೆಯನ್ನು ಇತರ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಯ ಸಚಿವರು ಉದ್ಘಾಟಿಸಿದ್ದಾರೆ.

ಈ ಯೋಜನೆಯಡಿ, ಅರ್ಹ ಗೃಹಿಣಿಯರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ಒಂದು ರೂಪಾಯಿಯನ್ನು ಕಳುಹಿಸಿಕೊಟ್ಟು ಪರೀಕ್ಷಿಸಲಾಗಿದೆ. ಈ ನಡುವೆ ನಿನ್ನೆಯಿಂದ ಹಲವರ ಬ್ಯಾಂಕ್ ಖಾತೆಗೆ ರೂ.1000 ಜಮಾ ಆಗಿದೆ. ಆದರೆ, ತಕ್ಷಣವೇ ಬ್ಯಾಂಕ್ ಖಾತೆಯಿಂದ ಹಣ ತೆಗೆಯಲು ಸಾಧ್ಯವಾಗಲಿಲ್ಲ. ಖಾತೆಯಿಂದ ಇಂದು ಹಣವನ್ನು ತೆಗೆಯಬಹುದು. ಅಲ್ಲದೆ, ತಿರಸ್ಕರಿಸಿದ ಅರ್ಜಿದಾರರಿಗೆ ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ದಾಖಲೆ ಪರಿಶೀಲನೆಯಲ್ಲಿ ಅರ್ಹ ಫಲಾನುಭವಿಗಳಾಗಿದ್ದರೆ ಅವರನ್ನೂ ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಗೆ ಸೇರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ರಾಜಕೀಯ

ಬೆಂಗಳೂರು: ಅಧಿಕಾರಕ್ಕೆ ಬಂದು 100 ದಿನ ಕಳೆಯುವ ಮುನ್ನವೇ ಕೊಳ್ಳಿ ಇಡುವ ಕೆಲಸ ಮಾಡಿಬಿಟ್ಟಿದೆ. ಈ ಅನ್ಯಾಯ ಸಹಿಸುವ ಪ್ರಶ್ನೆಯೇ ಇಲ್ಲ. ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಸಂಕಷ್ಟಸೂತ್ರದ ಪಾಲನೆಗೆ ಒತ್ತಡ ಹೇರಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೇಕೆದಾಟು ಪಾದಯಾತ್ರೆ ಹೈಡ್ರಾಮಾ ಆಡಿ, ಕನ್ನಡಿಗರ ತಲೆ ಮೇಲೆ ಮಕ್ಮಲ್ ಟೋಪಿ ಇಟ್ಟ ಕಾಂಗ್ರೆಸ್, ಈಗ I.N.D.I.A.ಗೆ ಜೀವದಾನ ಮಾಡಲು ರಾಜ್ಯದ ಕಾವೇರಿ ಹಿತವನ್ನೇ ಬಲಿದಾನ ಮಾಡಿದೆ. ಅಂದುಕೊಂಡಿದ್ದೇ ಆಗಿದ್ದು; ನಮ್ಮ ಭಯ ನಿಜವಾಗಿದೆ. ಕಾಂಗ್ರೆಸ್ ಸರಕಾರ ಕನ್ನಡಿಗರಿಗೆ, ಅದರಲ್ಲೂ ಅನ್ನದಾತರಿಗೆ ಘೋರ ವಿಶ್ವಾಸದ್ರೋಹ ಎಸಗಿದೆ.

ಮಳೆ ಅಭಾವದಿಂದ ಜಲಾಶಯಗಳು ತುಂಬಿಲ್ಲ. ರೈತರ ಬೆಳೆಗೆ ನೀರಿಲ್ಲ, ಬೆಂಗಳೂರಿಗೆ ಕುಡಿಯುವ ನೀರಿಗೂ ತತ್ವಾರ. ನಮ್ಮ ಹೊಟ್ಟೆಗೇ ಹಿಟ್ಟಿಲ್ಲ, ನೆರೆಮನೆಯವರ ಜುಟ್ಟಿಗೆ ಮಲ್ಲಿಗೆ ಮುಡಿಸಲು ಹೊರಟಿದೆ ಸರಕಾರ. ಕನ್ನಡಿಗರಿಗೆ ವಂಚಿಸಿ ರಾಜಾರೋಷವಾಗಿ ನೀರು ಹರಿಸುವ ಮೂಲಕ ತಮಿಳುನಾಡು ಜತೆ ರಾಜಕೀಯ ಚೌಕಾಬಾರ ಆಡುತ್ತಿದೆ! ಇದೇನು ಇನ್ನೊಂದು ಗ್ಯಾರಂಟಿನಾ?

2024ರ ಲೋಕಸಭೆ ಗೆಲುವಿಗೆ ಕಾವೇರಿ ಹಿತವನ್ನು ನೆರೆರಾಜ್ಯಕ್ಕೆ ಅಡವಿಟ್ಟಿದೆ ಹಸ್ತಪಕ್ಷ ಸರಕಾರ! ತಮಿಳುನಾಡಿಗೆ ಬೆದರಿ ಶರಣಾಗಿದೆ!! ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ಸಭೆಯಿಂದಲೇ ಹೊರನಡೆದ, ರಾಜ್ಯದ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದ ರಾಜ್ಯದೆದುರು ದೈನೇಸಿಯಾಗಿ ಮಂಡಿಯೂರಿದ್ದು ಕನ್ನಡಿಗರ ಸ್ವಾಭಿಮಾನಕ್ಕೆ ಕೊಟ್ಟ ಕೊಡಲಿಪೆಟ್ಟು.

1962ರಿಂದಲೂ ಕಾವೇರಿ ಕೊಳ್ಳದ ರೈತರಿಗಾಗಿ ಹೆಚ್.ಡಿ.ದೇವೇಗೌಡ ಅವರು ಜೀವವನ್ನೇ ತೇದರು. ಕಾವೇರಿಗಾಗಿ ಹಿಂದಿನ ಪ್ರತೀ ಸರಕಾರವೂ ಕೇಂದ್ರಕ್ಕೆ ಸೆಡ್ಡು ಹೊಡೆದು ತಮಿಳುನಾಡು ಅಬ್ಬರಕ್ಕೆ ಅಂಕೆ ಹಾಕಿದ್ದವು. ಇಂಥ ಕೆಚ್ಚಿನ ಕರ್ನಾಟಕದ ಇತಿಹಾಸದಲ್ಲೇ ಈ ಸರಕಾರವು, ನೆರೆರಾಜ್ಯ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದಾಕ್ಷಣ ಬೆದರಿ ಕೈ ಚೆಲ್ಲಿದೆ.

ಸಂಕಷ್ಟ ಸ್ಥಿತಿಯ ಬಗ್ಗೆ ಕಾಂಗ್ರೆಸ್ ಸರಕಾರ ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಡಲಿಲ್ಲ ಯಾಕೆ? ಕಾನೂನು ತಜ್ಞರ ಜತೆ ಪ್ರತಿಪಕ್ಷ ಮುಖಂಡರ ಜತೆ ಸಮಾಲೋಚನೆ ನಡೆಸದೇ ವಾಯುವೇಗದಲ್ಲಿ ತಮಿಳುನಾಡಿಗೆ ನೀರು ಹರಿಸಿದ ಒಳಗುಟ್ಟೇನು? ಜನತೆಗೆ ಗೊತ್ತಾಗಬೇಕಿದೆ.

ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿಯವರು ತಾವು ಮಂತ್ರಿ ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ? ಅವರು ಸ್ಪಷ್ಟಪಡಿಸಬೇಕಿದೆ. ಕಾವೇರಿ ಕೀಲಿ ಕೇಂದ್ರ ಬಳಿ ಇದೆ ಎಂದಾದರೆ ಇವರ ಹೊಣೆ ಏನು? ಆ ಕೀಲಿ ಈಗ ಸ್ಟಾಲಿನ್ ಅವರ ಕೈಯ್ಯಲ್ಲಿದೆಯೋ ಅಥವಾ ಸೋನಿಯಾ ಗಾಂಧಿ ಅವರ ಕೈಯ್ಯಲ್ಲಿದೆಯೋ?

ಇದನ್ನೂ ಓದಿ: ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹ!

ತಾಕತ್ತಿದ್ದರೆ ಕೋರ್ಟಿಗೆ ಹೋಗಿ ಎಂದು ರೈತರಿಗೆ ಉಪ ಮುಖ್ಯಮಂತ್ರಿಗಳು ಹೇಳಿರುವುದು ದರ್ಪ, ದುರಹಂಕಾರದ ಪರಾಕಾಷ್ಠೆ. ನಿತ್ಯವೂ ಸಾವಿರಾರು ಕ್ಯೂಸೆಕ್ ಕಾವೇರಿ ನೀರು ನೆರೆರಾಜ್ಯಕ್ಕೆ ಹರಿದು ಹೋಗುತ್ತಿದೆ. ಇನ್ನೂ 10 ಟಿಎಂಸಿ ಬಿಡುತ್ತೇವೆ ಎಂದು ಅವರು ಹೇಳಿರುವುದು ಸರಿಯಲ್ಲ?

ಕನ್ನಡಿಗರು ಕೊಟ್ಟ ಪೆನ್ ಈಗ ಗನ್ ರೂಪ ತಳೆದಿದೆಯಾ ಹೇಗೆ? ಕನ್ನಡಿಗರನ್ನು ಕೇಳಿಕೇಳಿ ಪಡೆದುಕೊಂಡ ಪೆನ್ ಈಗ ಪೆಚ್ಚಗೆ, ತೆಪ್ಪಗೆ ಮಲಗಿದೆಯಾ? ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವೇ ರಾಜ್ಯದ ಜಲ ಸಂಕಷ್ಟದ ಬಗ್ಗೆ ಸಭೆಯಲ್ಲೇ ಅಂಕಿ-ಅಂಶ ಸಮೇತ ಹೇಳಿದೆ. ಪಾಪ ಜಲ ಸಂಪನ್ಮೂಲ ಸಚಿವರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ? ಎಂದು ಕಿಡಿಕಾರಿದ್ದಾರೆ.

ಕಾವೇರಿ ವಿಷಯದಲ್ಲಿ ಕಾಂಗ್ರೆಸ್ಸಿನದು ಸದಾ ಎರಡು ನಾಲಿಗೆ! ಕಾವೇರಿ ಪಾಲಿಗೆ ಆ ಪಕ್ಷ ನಯವಂಚನೆ,ನಂಬಿಕೆ ದ್ರೋಹದ ಪ್ರತೀಕ.ಅಧಿಕಾರಕ್ಕೆ ಬಂದು 100 ದಿನ ಕಳೆಯುವ ಮುನ್ನವೇ ಕೊಳ್ಳಿ ಇಡುವ ಕೆಲಸ ಮಾಡಿಬಿಟ್ಟಿದೆ.ಈ ಅನ್ಯಾಯ ಸಹಿಸುವ ಪ್ರಶ್ನೆಯೇ ಇಲ್ಲ.ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಸಂಕಷ್ಟಸೂತ್ರದ ಪಾಲನೆಗೆ ಒತ್ತಡ ಹೇರಬೇಕು.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್, ಸಂಪಾದಕರು

ತಮಿಳುನಾಡು: ತಮಿಳುನಾಡು ವಿಧಾನಸಭೆಯು ಸಾಮಾನ್ಯವಾಗಿ ವರ್ಷದ ಮೊದಲ ಅಧಿವೇಶನವನ್ನು ರಾಜ್ಯಪಾಲರ ಭಾಷಣದೊಂದಿಗೆ ಪ್ರಾರಂಭಿಸುತ್ತದೆ. ಅದರಂತೆ ಇಂದು (ಜನವರಿ 9) ಬೆಳಗ್ಗೆ 10 ಗಂಟೆಗೆ ರಾಜ್ಯಪಾಲ ಆರ್.ಎನ್.ರವಿ ಭಾಷಣದೊಂದಿಗೆ ವರ್ಷದ ಮೊದಲ ಸಭೆ ಆರಂಭವಾಯಿತು.

ಸಭಾಧ್ಯಕ್ಷರು ಎಂ.ಅಪ್ಪಾವು ಹಾಗೂ ಕಾರ್ಯದರ್ಶಿ ಕೆ.ಶ್ರೀನಿವಾಸನ್ ಅವರು ರಾಜ್ಯಪಾಲರನ್ನು ಸ್ವಾಗತಿಸಿದರು. ಇದಾದ ಬಳಿಕ ರಾಜ್ಯಪಾಲರಿಗೆ ಪೊಲೀಸ್ ಪರೇಡ್ ಗೌರವ ಸಲ್ಲಿಸಲಾಯಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ರಾಜ್ಯಪಾಲರು ವಿಧಾನಸಭೆಯಲ್ಲಿ ಭಾಷಣ ಆರಂಭಿಸಿದರು. ಅವರು ಭಾಷಣ ಮಾಡುವಾಗ ಸಾಮಾಜಿಕ ನ್ಯಾಯ, ಸ್ವಾಭಿಮಾನ, ಸಮಗ್ರ ಅಭಿವೃದ್ಧಿ, ಸಮಾನತೆ, ಮಹಿಳಾ ಹಕ್ಕುಗಳು, ಧಾರ್ಮಿಕ ಸೌಹಾರ್ದತೆ, ವೈವಿಧ್ಯತೆ, ಪೆರಿಯಾರ್, ಅಂಬೇಡ್ಕರ್, ಕಾಮರಾಜ್, ಅಣ್ಣಾದುರೈ, ಎಂ.ಕರುಣಾನಿಧಿ, ದ್ರಾವಿಡ ಮಾದರಿ ಆಡಳಿತ, ತಮಿಳುನಾಡು ಶಾಂತಿ ಉದ್ಯಾನದಂತಹ ಪದಗಳನ್ನು ಹೇಳಲು ನಿರಾಕರಿಸಿದರು.

ಭಾಷಣ ಆರಂಭವಾಗುತ್ತಿದ್ದಂತೆ ಡಿಎಂಕೆ ಮಿತ್ರಪಕ್ಷಗಳು “ಗೊ ಬ್ಯಾಕ್ ಗವರ್ನರ್” ಎಂಬ ಘೋಷಣೆಗಳನ್ನು ಕೂಗಿದರು. ರಾಜ್ಯಪಾಲರ ಭಾಷಣದ ನಂತರ ಅದರ ತಮಿಳು ಆವೃತಿಯನ್ನು ಸಭಾಧ್ಯಕ್ಷರು ಎಂ.ಅಪ್ಪಾವು ವಾಚಿಸಿದರು. ಅಪ್ಪಾವು ಅದನ್ನು ಓದುತ್ತಿರುವಾಗ ಮದ್ಯ ಪ್ರವೇಶಿಸಿದ ಪ್ರತಿಪಕ್ಷಗಳು ‘ಸರ್ಕಾರ ಸಿದ್ದಪಡಿಸಿದ್ದ ಭಾಷಣವನ್ನು ರಾಜ್ಯಪಾಲರು ಸರಿಯಾಗಿ ಓದಲಿಲ್ಲ’ ಎಂದು ಆರೋಪ ಮಾಡಿದವು.

ಅಪ್ಪಾವು ಮಾತು ಮುಗಿಸಿದ ಬಳಿಕ ಎದ್ದು ನಿಂತ ಮುಖ್ಯಮಂತ್ರಿ ಸ್ಟಾಲಿನ್, ಸರ್ಕಾರ ಸಿದ್ದಪಡಿಸಿದ್ದ ಭಾಷಣವನ್ನು ರಾಜ್ಯಪಾಲರು ಸರಿಯಾಗಿ ಓದಲಿಲ್ಲ ಎಂದು ಅಪಾದಿಸಿದರು. ರಾಜ್ಯಪಾಲರು ಓದಿದ ಭಾಗಗಳನ್ನು ಟಿಪ್ಪಣಿಗಳಲ್ಲಿ ಸೇರಿಸಬಾರದು ಎಂಬ ಗೊತ್ತುವಳಿಯನ್ನು ಮುಖ್ಯಮಂತ್ರಿ ಸ್ಟಾಲಿನ್ ಮಂಡಿಸಿದರು. ಮುಖ್ಯಮಂತ್ರಿ ಗೊತ್ತುವಳಿಯನ್ನು ಸಭೆಯಲ್ಲಿ ಮಂಡಿಸುತ್ತಿರುವಾಗಲೇ ರಾಜ್ಯಪಾಲರು ವಿಧಾನಸಭೆಯಿಂದ ಹೊರನಡೆದರು. ರಾಜ್ಯಪಾಲರು ತೆರಳಿದನಂತರ ಮುಖ್ಯಮಂತ್ರಿಗಳು ಮಂಡಿಸಿದ ಗೊತ್ತುವಳಿಯನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ವಿಧಾನಸಭೆ ಕಲಾಪ ಮುಗಿದ ಬಳಿಕ ರಾಷ್ಟ್ರಗೀತೆ ಮೊಳಗಿದಾಗ ರಾಜ್ಯಪಾಲರು ಸದನದಲ್ಲಿ ಇರಲಿಲ್ಲ ಎಂಬುದು ಗಮನಾರ್ಹ. ಭಾಷಣವನ್ನು ಅನುಮೋದಿಸಿದ ನಂತರ ಅದನ್ನು ಬದಲಾಯಿಸಿ ಸದನದಲ್ಲಿ ಓದುವುದನ್ನು ಒಪ್ಪಲು ಸಾಧ್ಯವಿಲ್ಲ. ಇದು ಕಲಾಪದ ಸಂಸ್ಕೃತಿಯಲ್ಲ. ಐತಿಹಾಸಿಕವಾದ ದ್ರಾವಿಡ ಚಳುವಳಿಯನ್ನು ಕಟ್ಟಿ, ಬ್ರಾಹ್ಮಣ್ಯಕ್ಕೆ ಸೆಡ್ಡು ಹೊಡೆದು ‘ಸನಾತನ ರೋಗಕ್ಕೆ ದ್ರಾವಿಡವೇ ಮದ್ದು’ ಎಂಬ ನಂಬಿಕೆಯನ್ನು ದಕ್ಷಿಣ ಭಾರತೀಯರಿಗೆ ನೀಡಿರುವ ತಮಿಳುನಾಡು ವಿಧಾನ ಸಭೆಯಲ್ಲಿ ಸಾಮಾಜಿಕ ನ್ಯಾಯ, ಸ್ವಾಭಿಮಾನ, ಸಮಗ್ರ ಅಭಿವೃದ್ಧಿ, ಸಮಾನತೆ, ಮಹಿಳಾ ಹಕ್ಕುಗಳು, ಧಾರ್ಮಿಕ ಸೌಹಾರ್ದತೆ, ವೈವಿಧ್ಯತೆ, ಪೆರಿಯಾರ್, ಅಂಬೇಡ್ಕರ್, ಕಾಮರಾಜ್, ಅಣ್ಣಾದುರೈ, ಎಂ.ಕರುಣಾನಿಧಿ, ದ್ರಾವಿಡ ಮಾದರಿ ಆಡಳಿತ, ತಮಿಳುನಾಡು ಶಾಂತಿ ಉದ್ಯಾನದಂತಹ ಪದಗಳನ್ನು ಹೇಳಲು ರಾಜ್ಯಪಾಲರು ನಿರಾಕರಿಸಿದ್ದಾರೆ ಎಂದರೆ ಇವರು ಎಂತಹ ಉಗ್ರ ಸನಾತನವಾದಿಯಾಗಿರಬೇಕು ಎಂಬುದನ್ನು ನೀವೇ ಊಹಿಸಿಕೊಳ್ಳಿ.

‘ರಾಜ್ಯಪಾಲರು ಇಂತಹ ಹಲವಾರು ಸಮಸ್ಯೆಗಳನ್ನು ದಿನನಿತ್ಯ ಸೃಷ್ಟಿಸುತ್ತಿರುವುದು ನಿಜಕ್ಕೂ ನನಗೆ ನೋವು ತಂದಿದೆ’ ಎಂದು ವಿಧಾನಸಭೆ ಸಭಾಪತಿ ಅಪ್ಪಾವು ಹೇಳಿರುವುದು ಗಮನಾರ್ಹವಾದದ್ದು.

‘ರಾಜ್ಯಪಾಲ ಆರ್.ಎನ್.ರವಿ ಉಗ್ರ ಸನಾತನವಾದಿ, ದ್ರಾವಿಡ ವಿರೋಧಿ, ಬಿಜೆಪಿ ಏಜೆಂಟ್’ ಎಂದೆಲ್ಲ ತಮಿಳುನಾಡು ಜನರು ಹೇಳುವುದು ಸರಿಯಾಗಿಯೇ ಇದೆ ಎಂಬುದನ್ನು ಇಂದಿನ ನಡವಳಿಕೆ ನಮಗೆ ತೋರಿಸಿಕೊಟ್ಟಿದೆ.