ಬೆಂಗಳೂರು: ಮುಸ್ಲಿಂ ಸಮುದಾಯದ ವಿರುದ್ಧ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ದ್ವೇಷ ಭಾಷಣ ಅವರ ಹತಾಶ ಮನಸ್ಥಿತಿಯನ್ನು ತೋರಿಸುತ್ತಿದೆ. ಇದು ಅತ್ಯಂತ ಖಂಡನೀಯ ಎಂದು ‘ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ’ ಇದರ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.
ಮೊದಲ ಹಂತದ ಮತದಾನದ ಬಳಿಕ ಪ್ರಧಾನಿಗಳಿಗೆ ಸೋಲಿನ ವಾಸನೆ ಬಡಿದಿರಬಹುದು. ಸುಳ್ಳು ಹೇಳಿ ಜನರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಪ್ರಧಾನಿಗಳ ಬಗ್ಗೆ ಜನರಿಗೆ ಅರಿವಾಗತೊಡಗಿದೆ. ಬೇರೆ ದಾರಿ ಕಾಣದೆ ಚುನಾವಣಾ ಪ್ರಚಾರ ಸಭೆಯಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸತೊಡಗಿದ್ದಾರೆ.
ಮುಸ್ಲಿಮರು ನುಸುಳುಕೋರರು ಅವರು ಹೆಚ್ಚು ಮಕ್ಕಳನ್ನು ಹುಟ್ಟಿಸುವವರು ಅವರಿಗೆ ದೇಶದ ವೈಯಕ್ತಿಕ ಸಂಪತ್ತನ್ನು ಕಾಂಗ್ರೆಸ್ ಹಂಚುತ್ತಿದೆ ಎಂಬ ರೀತಿಯ ಕೀಳು ಮಟ್ಟದ ಹೇಳಿಕೆ ನೀಡಿ ಪ್ರಧಾನಿ ಹುದ್ದೆಯ ಘನತೆಗೆ ದಕ್ಕೆ ತಂದಿದ್ದಾರೆ. ಇದೆಂತಹಾ ಸಬ್ಕಾ ಸಾತ್ ಸಬ್ ಕಾ ವಿಕಾಸ್? ಎಂದು ಕಿಡಿಕಾರಿದ್ದಾರೆ.
ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರಗಿಸಬೇಕು. ಚುನಾವಣಾ ಆಯೋಗವು ನ್ಯಾಯೋಚಿತ ರೀತಿಯಲ್ಲಿ ವರ್ತಿಸಬೇಕು. ದೇಶದ ಸ್ವಾಸ್ಥ್ಯ ಕೆಡಿಸುವ ಪ್ರಧಾನಿಗಳ ಶ್ರಮ ಅಪಾಯಕಾರಿ. ಅಲ್ಪಸಂಖ್ಯಾತ ಸಮುದಾಯದ ಜನರನ್ನು ನಿಂಧಿಸಿ ಬಹುಸಂಖ್ಯಾತ ಸಮುದಾಯವನ್ನು ಎತ್ತಿ ಕಟ್ಟುವ ಈ ಪ್ರಧಾನಿಗಳಿಂದ ದೇಶ ಹೇಗೆ ಉದ್ದಾರವಾದೀತು? ಮತದಾರರು ಚುನಾವಣೆಯಲ್ಲಿ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.