ಅಮಿತ್ ಶಾ ವಿರುದ್ಧ ವೆಲ್ಫೇರ್ ಪಾರ್ಟಿಯಿಂದ ಚುನಾವಣಾ ಆಯೋಗಕ್ಕೆ ದೂರು!
ಬೆಂಗಳೂರು: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ವಿರುದ್ಧ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಅವಹೇಳನಕಾರಿ ಮಾತನಾಡಿದ ದೇಶದ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ದೂರು ನೀಡಲಾಗಿದೆ.
ಚುನಾವಣಾಧಿಕಾರಿಯನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್, ವೆಲ್ಫೇರ್ ಪಾರ್ಟಿಯು ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಅಮಿತ್ ಶಾ ಸುಳ್ಳಾರೋಪ ಹೊರಿಸಿದ್ದಾರೆ; ಇದು ಪಕ್ಷದ ವರ್ಚಸ್ಸಿಗೆ ದಕ್ಕೆ ತಂದಿರುತ್ತದೆ.
ವೆಲ್ಫೇರ್ ಪಾರ್ಟಿ ಚುನಾವಣಾ ಆಯೋಗದಲ್ಲಿ ಅಧಿಕೃತವಾಗಿ ನೋಂದಾಯಿತ ಪಕ್ಷವಾಗಿದ್ದು ಕಳೆದ 13 ವರ್ಷಗಳಿಂದ ಸಾಂವಿಧಾನಿಕವಾಗಿ ಸೇವೆ ಸಲ್ಲಿಸುತ್ತಿದೆ. ಕಳೆದ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿ, ಯಾವುದೇ ಸಾಧನೆ ಮಾಡದೆ, ಸೋಲಿನ ಸುಳಿವಿನಿಂದ ಹತಾಶರಾಗಿರುವ ಅಮಿತ್ ಶಾ ಅವರು ಇಂತಹ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ.
ಜನರು ಇಂತಹದ್ದಕ್ಕೆ ಚುನಾವಣೆಯಲ್ಲಿ ಸೂಕ್ತ ರೀತಿಯಲ್ಲಿ ಉತ್ತರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ. ತಂಡದಲ್ಲಿ ಪಕ್ಷದ ಉಪಾಧ್ಯಕ್ಷ ಹಬಿಬುಲ್ಲಾಹ ಖಾನ್, ಪ್ರಧಾನ ಕಾರ್ಯದರ್ಶಿ ರಿಯಾಝ್ ಮುಖಂಡರಾದ ಪ್ರಭಾಕರ್ ರವರು ಪಾಲ್ಗೊಂಡಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.