ವಾರಣಾಸಿ: ‘ಸಣ್ಣ ಕುಶಲಕರ್ಮಿಗಳನ್ನು ಜನಪ್ರಿಯಗೊಳಿಸಲು ಸ್ಥಳೀಯ ಉತ್ಪನ್ನಗಳ ಪರವಾಗಿದ್ದೇನೆ. ಸಣ್ಣ ರೈತರು ಹಾಗೂ ಉದ್ಯಮಿಗಳ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ತಮ್ಮ ತವರು ಕ್ಷೇತ್ರ ವಾರಣಾಸಿಗೆ ಎರಡು ದಿನಗಳ ಪ್ರವಾಸವನ್ನು ಕೈಗೊಂಡಿದ್ದಾರೆ. ಬೆಳಗ್ಗೆ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ, ನಂತರ ಸಂತ ಗುರು ರವಿದಾಸರ 647ನೇ ಜನ್ಮದಿನಾಚರಣೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ವಾರಣಾಸಿಯಲ್ಲಿ 13,000 ಕೋಟಿ ವೆಚ್ಚದ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದರು: ‘ವಾರಣಾಸಿಯಲ್ಲಿ ಕಳೆದ 10 ವರ್ಷಗಳಲ್ಲಿ ಬೆಳವಣಿಗೆ ಹಲವು ಪಟ್ಟು ಹೆಚ್ಚಾಗಿದೆ. ಈ ನಗರದ ಜನರ ಜೀವನಮಟ್ಟವನ್ನು ಹೆಚ್ಚಿಸಲು ನಾನು ಸಂಕಲ್ಪ ಮಾಡಿದ್ದೇನೆ.
ಸಣ್ಣ ಕುಶಲಕರ್ಮಿಗಳನ್ನು ಜನಪ್ರಿಯಗೊಳಿಸಲು ನಾನು ಸ್ಥಳೀಯ ಉತ್ಪನ್ನಗಳಿಗೆ ಧ್ವನಿ ನೀಡುತ್ತಿದ್ದೇನೆ. ಸಣ್ಣ ರೈತರು ಹಾಗೂ ಉದ್ಯಮಿಗಳ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ಹೊಂದಾಣಿಕೆ ರಾಜಕಾರಣದಿಂದಾಗಿ ಉತ್ತರಪ್ರದೇಶ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.
ಕಾಂಗ್ರೆಸ್ ಯುವರಾಜ, ಕಾಶಿ ಮತ್ತು ಉತ್ತರಪ್ರದೇಶ ಯುವಕರನ್ನು ಗುಲಾಮರು ಎಂದು ಕರೆಯುತ್ತಾರೆ. ಇದು ಯಾವ ರೀತಿಯ ವಿಮರ್ಶೆ? ಅವರು ಉತ್ತರಪ್ರದೇಶದ ಯುವಕರ ಮೇಲೆ ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದಾರೆ. ಆದರೆ ಯುವಕರು ತಮ್ಮದೇ ಆದ ರಾಜ್ಯವನ್ನು ಕಟ್ಟುತ್ತಿದ್ದಾರೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.