ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಎಂ.ಎಸ್.ಪಿ Archives » Dynamic Leader
November 23, 2024
Home Posts tagged ಎಂ.ಎಸ್.ಪಿ
ದೇಶ

“ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ; ನಮ್ಮ ಹಕ್ಕುಗಳಿಗಾಗಿ ನಾವು ನಿಲ್ಲಬೇಕು. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳದೆ ಮನೆಗೆ ಹಿಂತಿರುಗುವುದು ಬೇಡ” – ವಿನೇಶ್ ಫೋಗಟ್

ಹರಿಯಾಣದ ರೈತರು ಶಂಭು ಗ್ರಾಮದ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ 200 ದಿನಗಳನ್ನು ತಲುಪಿದ್ದು, ಇಂದು (ಶನಿವಾರ) ದೊಡ್ಡ ಪ್ರಮಾಣದ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ರೈತರೊಂದಿಗೆ ಸೇರಿಕೊಂಡಿದ್ದಾರೆ. “ನಿಮ್ಮ ಮಗಳು ನಿಮ್ಮೊಂದಿಗೆ ನಿಂತಿದ್ದಾಳೆ” ಎಂದು ಮಾತನಾಡಿ, ತಮ್ಮ ದೃಢವಾದ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಫೆಬ್ರವರಿ 13 ರಿಂದ ಹರಿಯಾಣ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನಾತ್ಮಕ ಖಾತ್ರಿ ಸೇರಿದಂತೆ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ಆರಂಭಿಸಿದ್ದಾರೆ. ಹರಿಯಾಣದ ಗಡಿಭಾಗದ ಶಂಭು ಪ್ರದೇಶದಲ್ಲಿ ರೈತರು ದೆಹಲಿಗೆ ತೆರಳದಂತೆ ಅಧಿಕಾರಿಗಳು ತಡೆದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ.

ರೈತರನ್ನು ಉದ್ದೇಶಿಸಿ ಮಾತನಾಡಿದ ವಿನೇಶ್ ಫೋಗಟ್, “ಕೃಷಿಕ ಕುಟುಂಬದಲ್ಲಿ ಹುಟ್ಟಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ. ನಮ್ಮ ಹಕ್ಕುಗಳಿಗಾಗಿ ನಾವು ನಿಲ್ಲಬೇಕು, ಯಾರೂ ನಮಗಾಗಿ ಬರುವುದಿಲ್ಲ. ನಮ್ಮ ಕೋರಿಕೆಗಳು ಈಡೇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳದೆ ಮನೆಗೆ ಹಿಂತಿರುಗುವುದು ಬೇಡ” ಎಂದು ಹೇಳಿದ್ದಾರೆ.

ಅಲ್ಲದೆ, “ರೈತರು ತಮ್ಮ ಹಕ್ಕುಗಳಿಗಾಗಿ ಬಹಳ ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. 200 ದಿನ ಕಳೆದರೂ ಅವರ ಬೇಡಿಕೆ ಈಡೇರದಿರುವುದು ಬೇಸರದ ಸಂಗತಿಯಾಗಿದೆ. ಅವರು ತಮ್ಮ ಹಕ್ಕುಗಳಿಗೆ ಧ್ವನಿಗೂಡಿಸುವುದನ್ನು ನೋಡಿದಾಗ ನಾವು ಹೆಚ್ಚುವರಿ ಶಕ್ತಿಯನ್ನು ಪಡೆಯುತ್ತೇವೆ” ಎಂದೂ ಹೇಳಿದ್ದಾರೆ.

2021ರ ಮುಷ್ಕರವನ್ನು ದೂಷಿಸಿದ ಸಂಸದೆ ಕಂಗನಾ ರಣಾವತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೋರಾಟ ನಿರತ ರೈತರು ಒತ್ತಾಯಿಸಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿಯನ್ನು ಆಗ್ರಹಿಸಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಹರಿಯಾಣ ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರಲು ರೈತರು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ರೈತರ ಚುನಾವಣಾ ತಂತ್ರಗಾರಿಕೆ ಬಗ್ಗೆ ಯಾವುದೆ ಸ್ಪಷ್ಟ ಅಭಿಪ್ರಾಯಗಳಿಲ್ಲ!

ಲೇಖನ

ಜಾಗತಿಕ ರೈತರು ಕ್ವಿಂಟಾಲ್ ಗೋಧಿಯನ್ನು 3,000 ರಿಂದ 4,000 ರೂ.ಗೆ ಮಾರಾಟ ಮಾಡುತ್ತಿರುವಾಗ, ಭಾರತೀಯ ರೈತರಿಗೆ ಸಿಗುವುದು ಕೇವಲ 2,400 ರಿಂದ 2,600 ರೂ. ಮಾತ್ರ!

“ರೈತರು ಬದುಕಬಾರದು” ಎಂಬುದಕ್ಕಾಗಿ ಭಾರತದಲ್ಲಿ ಒಬ್ಬ ವ್ಯಕ್ತಿ ದಣಿವರಿಯದೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರೆ, ಅವರು ಬೇರೆ ಯಾರೂ ಅಲ್ಲ; ಅವರೇ ನಮ್ಮ ‘ದೇವಮಾನವ’ ಭಾರತದ ಪ್ರಧಾನಿ ಮೋದಿ!

ಈ ಹಿಂದೆ, ಭಾರತದ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇನೆ ಎಂದು ಹೇಳುತ್ತಲೇ ಗೋಧಿಯನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಿದ ನಿರ್ದಯಿ ಮಗುವೇ ಈ ದೇವಮಾನವ?

ಒಂದು ಕ್ವಿಂಟಲ್ ಗೋಧಿಯ ಅಂತಾರಾಷ್ಟ್ರೀಯ ಬೆಲೆ ರೂ.3,000 ಕ್ಕಿಂತ ಕಡಿಮೆ ಇಲ್ಲ. ಇದು ಗರಿಷ್ಠ 4,000 ರೂ.ಗೆ ಮಾರಾಟವಾಗುತ್ತದೆ. ವಿಶ್ವದಾದ್ಯಂತ ರೈತರು ಕ್ವಿಂಟಲ್ ಗೋಧಿಯನ್ನು 4,000 ರೂ.ಗೆ ಮಾರಾಟ ಮಾಡುವ ಮೂಲಕ ಲಾಭ ಗಳಿಸುತ್ತಿದ್ದಾರೆ. ಆದರೆ ಭಾರತದ ರೈತರಿಗೆ ಸಿಗುವುದು ಕೇವಲ 2,400 ರಿಂದ 2,600 ರೂ. ಮಾತ್ರ. ಭಾರತ ಸರ್ಕಾರವು ಒದಗಿಸಿದ ಕನಿಷ್ಠ ಬೆಂಬಲ ಬೆಲೆ (Minimum Support Price) ಕೇವಲ 2,275 ರೂ. ಮಾತ್ರ.

ಜಾಗತಿಕವಾಗಿ ಗೋಧಿಯ ಬೆಲೆ ಗಗನಕ್ಕೇರುತ್ತಿರುವಾಗ, ರಫ್ತು ಮಾಡಿದರೆ, ಭಾರತೀಯ ರೈತರಿಗೆ ಸ್ವಯವಾಗಿಯೇ ದುಪ್ಪಟ್ಟು ಆದಾಯ ಸಿಗುತ್ತವೆ. ಆದರೆ, ಇದನ್ನು ‘ದೇವಮಾನವ’ ಸಹಿಸಿಕೊಳ್ಳುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಗೋಧಿ ರಫ್ತನ್ನು ನಿಷೇಧಿಸಲಾಗಿದೆ.

‘ಉತ್ತಮ ಬೆಲೆ ಸಿಕ್ಕರೆ ರೈತರು ನಮ್ಮ ಮಾತು ಕೇಳುವುದಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ, ಬಹಳಷ್ಟು ಗೋಧಿಯನ್ನು ಉತ್ಪಾದಿಸುವವರು ಉತ್ತರದ ರೈತರು. ನಾವು ಅವರನ್ನು ಸದಾ ಸಾಲದಲ್ಲಿಟ್ಟರೆ, ಅವರು ಪ್ರಧಾನಮಂತ್ರಿಗಳ ಆರ್ಥಿಕ ನೆರವು ಯೋಜನೆಯ ಹೆಸರಿನಲ್ಲಿ ನಾವು ನೀಡುವ 6000 ರೂಪಾಯಿಗಾಗಿ ನಮ್ಮ ಪಾದಗಳನ್ನು ಕಾಯುತ್ತಾರೆ’ ಎಂದು ಮೋದಿ ಭಾವಿಸಿರಬಹುದು?

ಈ ದೇವಮಾನವರ ಯೋಜನೆಗಳ ಹೊರತಾಗಿಯೂ, ಪ್ರಕೃತಿ ಈ ವರ್ಷ ರೈತರಿಗೆ ಸ್ವಲ್ಪ ಹೆಚ್ಚುವರಿ ಬೆಲೆ ಪಡೆಯಲು ಸಹಾಯ ಮಾಡಿದೆ. ಹೆಚ್ಚಿನ ಹಾನಿ ಇಲ್ಲದೆ ಬೆಳೆದಿದೆ. ಗೋಧಿ ಆಮದಿಗೆ ಉತ್ತೇಜನ ನೀಡದಿದ್ದರೆ ಭಾರತೀಯ ರೈತರಿಗೆ ಹೆಚ್ಚಿನ ಬೆಲೆ ಸಿಗಲಿದೆ. ಆದರೆ ಮೋದಿ ರಷ್ಯಾದಿಂದ ಐದು ಮಿಲಿಯನ್ ಟನ್ ಗೋಧಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ.

ಸರಿ, ಆಮದು ಮಾಡಿಕೊಂಡು ಹೇಗಾದರೂ ತೊಲಗಲಿ ಎಂದರೂ ಭಾರತದ ಗೋಧಿ ರೈತರು ವಿಶ್ವದ ಗೋಧಿ ರೈತರೊಂದಿಗೆ ಪೈಪೋಟಿ ನಡೆಸುತ್ತಾರೆ ಎಂದು ಬಯಸಿದರೆ, ಆಮದು ಸುಂಕ ಮುಕ್ತಕ್ಕೆ ಅವಕಾಶ ನೀಡುವ ಮೂಲಕ ಮೋದಿ ಭಾರತೀಯ ರೈತರ ಹೊಟ್ಟೆಗೆ ಹೊಡೆದಿದ್ದಾರೆ.

ವಿಶ್ವ ವ್ಯಾಪಾರ ಸಂಸ್ಥೆ (WTO) ನಿಬಂಧನೆಗಳ ಪ್ರಕಾರ, ಭಾರತವು ವಿದೇಶದಿಂದ ಆಮದು ಮಾಡಿಕೊಳ್ಳುವ ಗೋಧಿಗೆ 40% ಸುಂಕವನ್ನು ವಿಧಿಸಬಹುದು. ಆದರೆ ಉದ್ಯಮಿಗಳಿಗಾಗಿ ಅವತರಿಸಿರುವ ‘ದೇವಮಾನವ’ ಹೇಗೆ ತೆರಿಗೆ ವಿಧಿಸುತ್ತಾರೆ? ಬಿಸ್ಕತ್ತು ತಯಾರಕರು ಮತ್ತು ಗೋಧಿ ಹಿಟ್ಟಿನ ಗಿರಣಿ ಮಾಲೀಕರಂತಹ ಕಾರ್ಪೊರೇಟ್ ಕಂಪನಿಗಳಿಗೆ ಲಾಭದಾಯಕವಾಗಲು ಅವರು ಗೋಧಿಯನ್ನು ಸುಂಕ ರಹಿತ ಆಮದು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ.

ಅಂತಹ ಸುಂಕವಿಲ್ಲದೆ ವಿದೇಶಿ ಗೋಧಿ ಭಾರತದ ಮಾರುಕಟ್ಟೆಗೆ ಬರುವುದಾದರೇ ಇಲ್ಲಿ ಗೋಧಿ ಬೆಲೆ ಕ್ವಿಂಟಲ್‌ಗೆ 2000 ರೂಪಾಯಿಗಿಂತ ಕಡಿಮೆಯಾದರೂ ಆಶ್ಚರ್ಯವಿಲ್ಲ. ಇದುವೇ ಈ ‘ದೇವಮಾನವ’ ರೈತನ ಆದಾಯವನ್ನು ದ್ವಿಗುಣಗೊಳಿಸುವ ಯೋಗ್ಯತೆ.

ರೈತರಿಂದ 32 ಮಿಲಿಯನ್ ಟನ್ ಗೋಧಿಯನ್ನು ಖರೀದಿಸುವ ಬದಲು ಭಾರತ ಸರ್ಕಾರವು ಕೇವಲ 26 ಮಿಲಿಯನ್ ಟನ್ ಗೋಧಿಯನ್ನು ಮಾತ್ರ ಖರೀದಿಸಿದೆ.

ಭಾರತವು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಗೋಧಿ ಉತ್ಪಾದಕ ರಾಷ್ಟ್ರವಾಗಿದೆ. ಇದು 2024-25ರ ವಾರ್ಷಿಕ ಗುರಿ 112 ಮಿಲಿಯನ್ ಟನ್‌ಗಳಲ್ಲಿ ಸ್ವಲ್ಪ ಇಳಿಕೆಯಾಗಿದೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನವು ಇಳುವರಿ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಪರಿಸರ ತಜ್ಞರು ಹೇಳುತ್ತಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ನವದೆಹಲಿಯಲ್ಲಿ ತಾಪಮಾನ 52.9C ಗೆ ಏರಿದರೆ, ಭವಿಷ್ಯದಲ್ಲಿ ಭಾರತವು ಇನ್ನೂ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಇದೆಲ್ಲದರ ಬಗ್ಗೆ ಯಾವುದೇ ಆಲೋಚನೆಯಿಲ್ಲದೆ, ‘ದೇವಮಾನವ’ ಕನ್ಯಾಕುಮಾರಿ ವಿವೇಕಾನಂದ ಬಂಡೆಯ ಮೇಲೆ ಕುಳಿತು ಧ್ಯಾನ ಮಾಡುತ್ತಾರೆ. ಇದಕ್ಕೆ ಕಾಲವೇ ಉತ್ತರಿಸಬೇಕು.

ಅವತಾರ ಪುರುಷನಾದ ಶ್ರೀಕೃಷ್ಣನು ತಾಯಿಯ ಗರ್ಭದಲ್ಲಿ ಜನಿಸಿದವರು. ಮತ್ತೊಂದು ಅವತಾರ ಪುರುಷನಾದ ಭಗವಾನ್ ಶ್ರೀರಾಮನು ಕೂಡ ತಾಯಿಯ ಗರ್ಭದಲ್ಲಿ ಜನಿಸಿದವರು. ಆದರೆ ನಮ್ಮ ‘ದೇವಮಾನವ’ ಮೋದಿಜಿ ತನ್ನ ತಾಯಿಯ ಗರ್ಭದಿಂದ ಹುಟ್ಟಿರುವುದನ್ನು ಒಪ್ಪಿಕೊಳ್ಳಲು ನಿರಾಕರಿಸಿ ‘ನಾನು ಆಕಾಶದಿಂದ ಜಿಗಿದವನು’ ಎನ್ನುತ್ತಾರೆ.

ಹೀಗೆ ತಲೆ ಬುರುಡೆ ಒಣಗಿ ಹೋದವರಬಳಿ ಮಾತನಾಡಿ ಏನು ಪ್ರಯೋಜನ? ಜೈ ಭಾರತ್.

ಅಂಕಣಕಾರ: ದೂರನ್ ನಂಬಿ
ಮೂಲ: ವಿಕಟನ್.ಕಾಂ
ಕನ್ನಡಕ್ಕೆ: ಡಿ.ಸಿ.ಪ್ರಕಾಶ್

ದೇಶ

ಪಂಜಾಬ್: ರೈತರ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ, ದೆಹಲಿಯತ್ತ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ರೈತರನ್ನು ರಾಜ್ಯದ ಗಡಿಯಲ್ಲಿರುವ ಖನೌರಿ ಗಡಿಯಲ್ಲಿ ತಡೆದು ನಿಲ್ಲಿಸಲಾಗಿದೆ. ನಿನ್ನೆ, ರೈತರು ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸಿದಾಗ, ಹರಿಯಾಣ ಪೊಲೀಸರು ರಬ್ಬರ್ ಬುಲೆಟ್‌ಗಳನ್ನು ಹಾರಿಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಆ ಸಮಯದಲ್ಲಿ ಪಂಜಾಬ್‌ನ 21 ವರ್ಷದ ರೈತ ಶುಭ ಕರಣ್ ಸಿಂಗ್ ಮೃತನಾದನು.

ಈ ಹಿನ್ನೆಲೆಯಲ್ಲಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಮೃತ ರೈತ ಶುಭ ಕರಣ್ ಸಿಂಗ್ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಮತ್ತು ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ದೇಶ

ರೈತರ ಬೇಡಿಕೆಗಳನ್ನು ಪ್ರತಿಪಾದಿಸುವ ರೈತ ಸಂಘಟನೆಗಳ ಸಾಮಾಜಿಕ ಜಾಲತಾಣಗಳನ್ನು ಮತ್ತು ‘ಎಕ್ಸ್’ ಖಾತೆಗಳನ್ನು ನಿರ್ಬಂಧಿಸಲು ಬಿಜೆಪಿ ಸರ್ಕಾರ ಕಾನೂನು ಕ್ರಮ ಕೈಗೊಂಡಿದೆ ಎಂದು ಎಲಾನ್ ಮಸ್ಕ್ ಅವರ ‘ಎಕ್ಸ್’ ಕಂಪನಿ ಆರೋಪಿಸಿದೆ.

ಕೇಂದ್ರ ಸರಕಾರದ ಕೃಷಿ ವಿರೋಧಿ ನೀತಿಯ ಬಗ್ಗೆ ಜಗತ್ತಿನ ಜನತೆಗೆ ಅರಿವು ಮೂಡಿಸುವಲ್ಲಿ ಸಾಮಾಜಿಕ ಜಾಲತಾಣಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಅದರಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ಎಕ್ಸ್-ಜಾಲತಾಣ (twitter) ವಹಿಸುತ್ತಿದೆ.

ಅದರ ಆಧಾರದ ಮೇಲೆ, ರೈತ ಸಂಘಟನೆಗಳ ಪ್ರತಿನಿಧಿಗಳು, ಕೃಷಿ ತಜ್ಞರು ಮತ್ತು ಸಾರ್ವಜನಿಕರು ರೈತರ ಹೋರಾಟಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ‘ಎಕ್ಸ್’ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ರೈತರ ಹೋರಾಟಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಂಡ ಪ್ರಮುಖ ಜಾಲತಾಣಗಳ ಖಾತೆಗಳನ್ನು ನಿರ್ಬಂಧಿಸಿದೆ.

ಈ ಬಗ್ಗೆ ‘ಎಕ್ಸ್’ ಗ್ರೂಪ್‌ನ ಅಧಿಕೃತ ಖಾತೆ ಗ್ಲೋಬಲ್ ಗವರ್ನಮೆಂಟ್ ಅಫೇರ್ಸ್ (Global Government Affairs) ಪ್ರಕಟಿಸಿದ ಪತ್ರಿಕಾ ಪ್ರಕಟಣೆಯಲ್ಲಿ, “ಒಂದು ನಿರ್ದಿಷ್ಟ ಘಟನೆಯ (ರೈತರ ಪ್ರತಿಭಟನೆ) ಕುರಿತು ಪೋಸ್ಟ್ ಮಾಡುವ ಎಲ್ಲಾ ಖಾತೆಗಳನ್ನು ನಿರ್ಬಂಧಿಸಲು ಭಾರತ ಸರ್ಕಾರವು ಕಾನೂನಾತ್ಮಕವಾಗಿ ವಿನಂತಿಸಿಕೊಂಡಿದೆ.

ಅವರ ಬೇಡಿಕೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿರುವುದರಿಂದ, ಅದರಲ್ಲಿ ನಮಗೆ ಒಪ್ಪಿಗೆಯಿಲ್ಲ. ಆದಾಗ್ಯೂ, ಅವರು ನಮ್ಮನ್ನು ಕಾನೂನಾತ್ಮಕವಾಗಿ ಸಂಪರ್ಕಿಸಿರುವುದರಿಂದ ನಾವು ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಅಲ್ಲದೆ, ಈ ಜಾಲತಾಣ ಖಾತೆಗಳ ನಿರ್ಬಂಧವನ್ನು ಭಾರತದಲ್ಲಿ ಮಾತ್ರ ಜಾರಿಗೊಳಿಸಲಾಗಿದೆ. ಇತರ ದೇಶಗಳಲ್ಲಿ ಈ ಖಾತೆಗಳ ಮೇಲೆ ಯಾವುದೇ ನಿಷೇಧವಿಲ್ಲ” ಎಂದು ಹೇಳಿದೆ.

ಈ ಮೂಲಕ ಕೇಂದ್ರ ಸರ್ಕಾರದ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ರಾಜಕಾರಣ ಭಾರತವನ್ನು ದಾಟಿ ಇಡೀ ಜಗತ್ತಿಗೆ ಬಹಿರಂಗವಾಗಿದೆ. ಇದುವರೆಗೆ ಜಗತ್ತಿನಾದ್ಯಂತ ಸುಮಾರು 30 ಲಕ್ಷ ಮಂದಿ ಈ ಪೋಸ್ಟ್ ನ್ನು ವೀಕ್ಷಿಸಿದ್ದಾರೆ. ‘ಮೋದಿಯವರ ಆಡಳಿತ ನೋಡಿ ಜಗತ್ತೇ ಬೆರಗಾಗುತ್ತಿದೆ’ ಎಂದು ಎರಡು ದಿನಗಳ ಹಿಂದೆ ಅಮಿತ್ ಶಾ ಹೇಳಿದ್ದನ್ನು ಸ್ಮರಿಸಬೇಕಿದೆ.

ದೇಶ

“ರೈತರು, ಅಪರಾಧಿಗಳಲ್ಲ. ರೈತರನ್ನು ಅಪರಾಧಿಗಳಂತೆ ನಡೆಸಿಕೊಳ್ಳಬಾರದು. ಭಾರತದ ಪ್ರಮುಖ ವಿಜ್ಞಾನಿಗಳಾದ ನಿಮ್ಮೆಲ್ಲರಲ್ಲಿ ನಾನು ವಿನಂತಿಸುವುದು ಇದನ್ನೇ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇದುವೇ ನನ್ನ ಕೋರಿಕೆ”

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೆಹಲಿಯಲ್ಲಿ ಫೆಬ್ರವರಿ 13 ರಿಂದ ರೈತರು ಮುಷ್ಕರ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ದಿವಂಗತ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರ ಪುತ್ರಿ ಮಧುರಾ ಸ್ವಾಮಿನಾಥನ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಿಧನರಾದ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಿಸಿದೆ. ಇದಕ್ಕಾಗಿ ಕೃತಜ್ಞತೆ ಸಲ್ಲಿಸಲು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ವತಿಯಿಂದ ನೆನ್ನೆ (ಫೆಬ್ರವರಿ 13) ಸಭೆ ಆಯೋಜಿಸಲಾಗಿತ್ತು. ಸಭೆಗೆ ಎಂ.ಎಸ್.ಸ್ವಾಮಿನಾಥನ್ ಅವರ ಪುತ್ರಿ ಹಾಗೂ ಅರ್ಥಶಾಸ್ತ್ರಜ್ಞೆ ಮಧುರಾ ಸ್ವಾಮಿನಾಥನ್ ಭಾಗವಹಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.

ಆಗ ಮಾತನಾಡಿದ ಅವರು, ‘‘ಪಂಜಾಬ್ ರೈತರು ಇಂದು ದಿಲ್ಲಿಯತ್ತ ಪಾದಯಾತ್ರೆ ನಡೆಸುತ್ತಿದ್ದಾರೆ. ಹರ್ಯಾಣದಲ್ಲಿ ಅವರಿಗಾಗಿ ಜೈಲು ಸಿದ್ಧವಾಗುತ್ತಿದ್ದು, ಅವರನ್ನು ತಡೆಯಲು ಬ್ಯಾರಿಕೇಡ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ನನಗೆ ಪತ್ರಿಕೆಗಳ ಮೂಲಕ ತಿಳಿದುಬಂದಿದೆ.

ನಮಗೆ ಅನ್ನ ನೀಡುವ ರೈತರೊಂದಿಗೆ ಮಾತುಕತೆ ನಡೆಸಬೇಕು. ಅವರು ರೈತರು, ಅಪರಾಧಿಗಳಲ್ಲ. ರೈತರನ್ನು ಅಪರಾಧಿಗಳಂತೆ ನಡೆಸಿಕೊಳ್ಳಬಾರದು. ಭಾರತದ ಪ್ರಮುಖ ವಿಜ್ಞಾನಿಗಳಾದ ನಿಮ್ಮೆಲ್ಲರಲ್ಲಿ ನಾನು ವಿನಂತಿಸುವುದು ಇದನ್ನೇ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇದುವೇ ನನ್ನ ಕೋರಿಕೆಯಾಗಿದೆ” ಎಂದು ಹೇಳಿದರು.

ದೇಶ

ಅಂಬಲಾ ಬಳಿಯ ಶಂಭು ಗಡಿಯಲ್ಲಿ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದರಿಂದ ಉದ್ವಿಗ್ನತೆ ಹೆಚ್ಚಿದೆ.

ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಸೇರಿದಂತೆ ರಾಜ್ಯಗಳ ರೈತ ಸಂಘಟನೆಗಳು, 2021ರಲ್ಲಿ ದಿಲ್ಲಿಯಲ್ಲಿ ನಡೆಸಿದ ಬೃಹತ್ ಪ್ರತಿಭಟನೆಯನ್ನು ಅಂತ್ಯಗೊಳಿಸಲು ರೈತರ ಬೇಡಿಕೆಯನ್ನು ಈಡೇರಿಸಲು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಸಮ್ಮತಿಸಿತು.

ಆದರೆ ಎರಡು ವರ್ಷ ಕಳೆದರೂ ಬೇಡಿಕೆ ಈಡೇರದ ಕಾರಣ, ಹರಿಯಾಣ ಮತ್ತು ದೆಹಲಿಯ ಗಡಿಯಲ್ಲಿ ನಿನ್ನೆಯಿಂದ ರೈತರು ಪ್ರತಿಭಟನೆಯನ್ನು ಮುನ್ನಡೆಸುತ್ತಿದ್ದಾರೆ. ಶಂಭು ಗಡಿಯಲ್ಲಿ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ನಡೆದಿದೆ. ಅಂಬಲಾ ಬಳಿಯ ಶಂಭು ಗಡಿಯಲ್ಲಿ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದರಿಂದ ಉದ್ವಿಗ್ನತೆ ಹೆಚ್ಚಿದೆ.

ಈ ಹಿನ್ನಲೆಯಲ್ಲಿ, ರೈತರು ಅಶ್ರುವಾಯು ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಶ್ರುವಾಯು ಪ್ರಭಾವವನ್ನು ಕಡಿಮೆ ಮಾಡಲು ಅವರು ನೀರಿನ ಬಾಟಲಿಗಳು, ಒದ್ದೆಯಾದ ಬಟ್ಟೆಗಳು ಮತ್ತು ರಕ್ಷಣಾ ಸಾಧನಗಳೊಂದಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಂಡಿದ್ದಾರೆ. ಅಲ್ಲದೆ, ಅಶ್ರುವಾಯು ಸಾಗಿಸುವ ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸಲು ಗಾಳಿಪಟಗಳನ್ನು ಹಾರಿಸುತ್ತಿದ್ದಾರೆ.

ಈ ಕುರಿತು ಮಾತನಾಡುವ ರೈತರು, ‘ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನೈತಿಕವಾಗಿ ಹೋರಾಟ ಮಾಡುತ್ತಿದ್ದೇವೆ. ನಾವು ಯಾವುದೋ ಭಯೋತ್ಪಾದಕರನ್ನು ಎದುರಿಸುತ್ತಿದ್ದೇವೆ ಎಂಬಂತೆ ಸರಕಾರಿ ಯಂತ್ರಗಳು ನಮ್ಮನ್ನು ನಡೆಸಿಕೊಳ್ಳುತ್ತಿದೆ. ಡ್ರೋನ್‌ಗಳ ಮೂಲಕ ಅಶ್ರುವಾಯು ಪ್ರಯೋಗಿಸಿ ನಮ್ಮನ್ನು ಚದುರಿಸಲು ಪ್ರಯತ್ನಿಸುತ್ತಿದ್ದಾರೆ. ಅದನ್ನು ಎದುರಿಸಲು ನಾವು ಈ ರೀತಿ ಗಾಳಿಪಟವನ್ನು ಹಾರಿಸುತ್ತಿದ್ದೇವೆ’ ಎಂದು ಹೇಳಿದರು.

ದೇಶ

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಹರಿಯಾಣ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳ ರೈತರು ದೆಹಲಿಗೆ ತೆರಳಿದ್ದಾರೆ. ಇದರಿಂದ ಸಾರಿಗೆ ದಟ್ಟಣೆ ಸಂಭವಿಸಿದೆ. ಪ್ರತಿಭಟನೆಯನ್ನು ತಡೆಯಲು ಭದ್ರತೆಯನ್ನು ಹೆಚ್ಚಿಸಲಾಗಿದೆ.

ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌ ರಾಜ್ಯಗಳ ರೈತ ಸಂಘಟನೆಗಳು, ಕೃಷಿ ಉತ್ಪನ್ನಗಳಿಗೆ ಎಂ.ಎಸ್.ಪಿ (MSP) ಎಂದು ಕರೆಯಲ್ಪಡುವ ಕನಿಷ್ಠ ಬೆಂಬಲ ಬೆಲೆಗೆ ಖಾತ್ರಿ ನೀಡುವ ಕಾನೂನು, ಪಿಂಚಣಿ, ಭೂಕಬಳಿಕೆಗೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಇಂದು ರಾಜಧಾನಿ ದೆಹಲಿಯತ್ತ ಬೃಹತ್ ಮೆರವಣಿಗೆಗೆ ಕರೆ ನೀಡಿತ್ತು.

ಈ ಹಿನ್ನಲೆಯಲ್ಲಿ, ರಾಜ್ಯಗಳ ರೈತರು ಕೇಂದ್ರ ಸರ್ಕಾರದ ವಿರುದ್ಧ ಮುತ್ತಿಗೆ ಹೋರಾಟ ನಡೆಸಲು ದೆಹಲಿಗೆ ತೆರಳಿದ್ದಾರೆ. ಇದರಿಂದಾಗಿ ದೆಹಲಿಯ ಪ್ರಮುಖ ಗಡಿ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ನಗರದ ಪ್ರಮುಖ ರಸ್ತೆಗಳ ಮಾರ್ಗವನ್ನು ಬದಲಿಸಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.

ಮಾರ್ಚ್ 12ರವರೆಗೆ ದೆಹಲಿಯಲ್ಲಿ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರತಿಭಟನಾಕಾರರು ಯಾವುದೇ ಅಹಿತಕರ ಘಟನೆಗೆ ಒಳಗಾಗದಂತೆ ತಡೆಯಲು ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಅರೆಸೇನಾ ಪಡೆಗಳೂ ಭದ್ರತೆಯಲ್ಲಿ ತೊಡಗಿವೆ.