ಚೆನ್ನೈ: ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯವನ್ನು ದುರ್ಬಲಗೊಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಅಲ್ಲದೇ ಸರ್ಕಾರದ ಆಡಳಿತವನ್ನು ಆರ್ಎಸ್ಎಸ್ ಅಧೀನಕ್ಕೆ ನೀಡವ ಬಿಜೆಪಿ ಸರ್ಕಾರದ ಷಡ್ಯಂತ್ರವನ್ನು ವಿಫಲಗೊಳಿಸಬೇಕು” ಎಂದು ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಹೇಳಿದ್ದಾರೆ.
ಈ ಕುರಿತು, ಅವರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ, ಸಾಮಾಜಿಕ ನ್ಯಾಯವನ್ನು ದುರ್ಬಲಗೊಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಸರ್ಕಾರಿ ಆಡಳಿತದಲ್ಲಿ ಆರ್ಎಸ್ಎಸ್ ಹಿನ್ನೆಲೆಯಿಂದ ಬಂದ ಖಾಸಗಿ ಕಂಪನಿಗಳ ಉನ್ನತ ಅಧಿಕಾರಿಗಳನ್ನು ಸರ್ಕಾರಿ ಕಾರ್ಯದರ್ಶಿಗಳಾಗಿ, ಮತ್ತು ಉನ್ನತ ಅಧಿಕಾರಿಗಳಾಗಿ ನೇಮಕ ಮಾಡಿಕೊಳ್ಳುವ ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಖಾಸಗಿ ವಲಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು (CEO) ನೇರವಾಗಿ ಐಎಎಸ್ ಅಧಿಕಾರಿಗಳಾಗಿ ನೇಮಿಸಿಕೊಳ್ಳುವ ಯೋಜನೆಯನ್ನು 2018ರಲ್ಲಿ ಪರಿಚಯಿಸಲಾಯಿತು. ಈ ಯೋಜನೆಯಲ್ಲಿ ಇದುವರೆಗೆ 63 ಜನರನ್ನು ನೇಮಿಸಲಾಗಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇತ್ತೀಚೆಗೆ ಇದೇ ಯೋಜನೆಯಡಿಯಲ್ಲಿ ಇನ್ನೂ 45 ಜನರನ್ನು ನೇಮಿಸಿಕೊಳ್ಳಲು ಜಾಹೀರಾತನ್ನು ಬಿಡುಗಡೆ ಮಾಡಿದೆ.
ಈ ಯೋಜನೆಯು ಕಾನೂನು ಉಲ್ಲಂಘನೆ ಮಾತ್ರವಲ್ಲ, ಸಂವಿಧಾನದ ಮೇಲಿನ ಕ್ರೂರ ದಾಳಿಯೂ ಆಗಿದೆ. ಈ ಮೂಲಕ ಸರ್ಕಾರದ ಆಡಳಿತವನ್ನು ಸಂಪೂರ್ಣವಾಗಿ ಆರ್ಎಸ್ಎಸ್ ಅಧೀನಕ್ಕೆ ಕೊಡಲು ಸಂಚು ರೂಪಿಸುತ್ತಿರುವುದು ಅತ್ಯಂತ ಖಂಡನೀಯವಾದದ್ದು. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿನ ಪ್ರಮುಖ ಹುದ್ದೆಗಳಿಗೆ ‘ಲ್ಯಾಟರಲ್ ಎಂಟ್ರಿ’ ಮೂಲಕ ಮಾಡುತ್ತಿರುವ ನೇಮಕಾತಿಯಿಂದ SC, ST, OBC ಪಂಗಡದ ಮೀಸಲಾತಿಯನ್ನು ಕೇಂದ್ರ ಸರ್ಕಾರ ಬಹಿರಂಗವಾಗಿ ಕಿತ್ತುಕೊಳ್ಳುತ್ತಿದೆ.
ದೇಶದ ಅತ್ಯುನ್ನತ ಅಧಿಕಾರ ಸೇರಿದಂತೆ ಎಲ್ಲ ಉನ್ನತ ಹುದ್ದೆಗಳಲ್ಲಿ ಪರಿಶಿಷ್ಟ ವರ್ಗದವರಿಗೆ ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ ಎಂದು ಹೇಳುತ್ತಲೇ ಬಂದಿದ್ದೇನೆ. ಇದನ್ನು ಸುಧಾರಿಸುವ ಬದಲು, ‘ಲ್ಯಾಟರಲ್ ಎಂಟ್ರಿ’ ಮೂಲಕ ಪರಿಶಿಷ್ಟ ವರ್ಗದವರನ್ನು ಉನ್ನತ ಸ್ಥಾನಗಳಿಂದ ಇನ್ನಷ್ಟು ದೂರ ತಳ್ಳಲಾಗುತ್ತಿದೆ.
ಈ ಕಾರ್ಯವು UPSC ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಪ್ರತಿಭಾವಂತ ಯುವಕರ ಹಕ್ಕುಗಳನ್ನು ಕಿತ್ತುಕೊಳ್ಳುವ ಕಾರ್ಯವಾಗಿದೆ. ಮತ್ತು ‘ಇದು ತುಳಿತಕ್ಕೊಳಗಾದವರ ಸಾಮಾಜಿಕ ನ್ಯಾಯದ ಮೇಲೆ ಕೇಂದ್ರ ಸರ್ಕಾರದ ದಾಳಿಯಾಗಿದೆ’ ಎಂದು ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿರುವುದು ಗಮನಿಸಬೇಕಾದ ಸಂಗತಿ.
“ಇಂಡಿಯಾ ಮೈತ್ರಿಕೂಟ”ದ ಪಕ್ಷಗಳು ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು, ಒಗ್ಗಟ್ಟಿನಿಂದ ಹೋರಾಡುವ ಮೂಲಕ, ಸರ್ಕಾರದ ಆಡಳಿತವನ್ನು ಆರ್ಎಸ್ಎಸ್ ಅಧೀನಕ್ಕೆ ನೀಡಲು ಮುಂದಾಗುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಷಡ್ಯಂತ್ರವನ್ನು ವಿಫಲಗೊಳಿಸಬೇಕು” ಎಂದು ಹೇಳಿದ್ದಾರೆ.