ನವದೆಹಲಿ: ದೇಶದಲ್ಲಿ 12 ಕೈಗಾರಿಕಾ ನಗರಗಳ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಮೂಲಕ 10 ಲಕ್ಷ ಜನರಿಗೆ ನೇರ ಉದ್ಯೋಗ ಸಿಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ದೇಶದಲ್ಲಿ 12 ಕೈಗಾರಿಕಾ ನಗರಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.
ಖುರ್ಪಿಯಾ (ಉತ್ತರಾಖಂಡ), ರಾಜಪುರ-ಪಟಿಯಾಲ (ಪಂಜಾಬ್), ದಿಘಿ (ಮಹಾರಾಷ್ಟ್ರ), ಪಾಲಕ್ಕಾಡ್ (ಕೇರಳ), ಆಗ್ರಾ, ಪ್ರಯಾಗ್ರಾಜ್ (ಯುಪಿ), ಗಯಾ (ಬಿಹಾರ), ಜಹೀರಾಬಾದ್ (ತೆಲಂಗಾಣ), ಓರ್ವಕಲ್, ಕೊಪ್ಪರ್ತಿ (ಆಂಧ್ರ ಪ್ರದೇಶ) ಮತ್ತು ಜೋಧ್‌ಪುರ – ಪಾಲಿ (ರಾಜಸ್ಥಾನ) ಮುಂತಾದ ಸ್ಥಳಗಳಲ್ಲಿ ಈ ಉದ್ಯಮನಗರಗಳು ಸ್ಥಾಪನೆಯಾಗಲಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, “ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯಡಿ 12 ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ ಸರ್ಕಾರ ರೂ.28,602 ಕೋಟಿ ಹೂಡಿಕೆ ಮಾಡಲಿದ್ದು, ಈ ಮೂಲಕ 10 ಲಕ್ಷ ಮಂದಿಗೆ ನೇರವಾಗಿ ಹಾಗೂ 30 ಲಕ್ಷ ಮಂದಿಗೆ ಪರೋಕ್ಷವಾಗಿ ಉದ್ಯೋಗ ದೊರೆಯಲಿದೆ.
ಎಲ್ಲಾ ಉತ್ಪಾದನಾ ಚಟುವಟಿಕೆಗಳನ್ನು ಈಗ ಭಾರತಕ್ಕೆ ವರ್ಗಾಯಿಸಲಾಗಿದೆ. ಎಲೆಕ್ಟ್ರಾನಿಕ್ಸ್, ಮೊಬೈಲ್ ಫೋನ್ ಮತ್ತು ರಕ್ಷಣಾ ಸಂಬಂಧಿತ ಉತ್ಪಾದನೆ ಎಲ್ಲವೂ ಭಾರತಕ್ಕೆ ಬರಲಿವೆ” ಎಂದು ಅವರು ಹೇಳಿದರು.