• ಅರುಣ್ ಕುಮಾರ್ ಜಿ
ಬೆಂಗಳೂರು: ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಎ.ಆರ್.ವಿಖ್ಯಾತ್ ನಿರ್ಮಾಣದ, ನವರಸ ನಾಯಕ ಜಗ್ಗೇಶ್ ಅಭಿನಯದ, ಮಠ ಗುರುಪ್ರಸಾದ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ “ರಂಗನಾಯಕ” ಮಾರ್ಚ್ 15 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಚಿತ್ರದ ಝಲಕ್ ತೋರಿಸುವ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಮಠ, ಎದ್ದೇಳು ಮಂಜುನಾಥ ಚಿತ್ರಗಳ ನಂತರ ಗುರುಪ್ರಸಾದ್ – ಜಗ್ಗೇಶ್ ಜೋಡಿ ನಗುವಿನ ಅಲೆ ಎಬ್ಬಿಸಲು ಮತ್ತೊಮ್ಮೆ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಟ್ರೈಲರ್ ಪ್ರದರ್ಶನದ ನಂತರ ನಡೆದ ಸಂವಾದದಲ್ಲಿ ಚಿತ್ರದ ಬಗ್ಗೆ ಹೇಳಿದ್ದಕ್ಕಿಂತ ಬೇರೆ ಷಯಗಳ ಬಗ್ಗೆಯೇ ಹೆಚ್ಚು ಚರ್ಚೆಯಾಯಿತು. ಚಿತ್ರದಲ್ಲಿ ನಟಿ ಚೈತ್ರ ಕೋಟೂರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ನಾಯಕನಟ ಜಗ್ಗೇಶ್ ಮಾತನಾಡುತ್ತ “ಇದು ಸಂಪೂರ್ಣವಾಗಿ ಗುರುಪ್ರಸಾದ್ ಸಿನಿಮಾ, ಇಲ್ಲಿ ನಾನೊಬ್ಬ ಕಲಾವಿದ ಅಷ್ಟೇ, ವಿಖ್ಯಾತ್ ನಮ್ಮನೆ ಅಂಗಳದಲ್ಲಿ ಬೆಳೆದ ಹುಡುಗ, ಈಗಿನ ಹುಡುಗರು ನಾನೊಬ್ಬ ಕಲಾವಿದರಾಗಬೇಕು ಅಂತ ಇಷ್ಟಪಡುತ್ತಾರೆ, ಆದರೆ ಈತ ನಿರ್ಮಾಪಕನಾಗಬೇಕೆಂದು ಬಂದಿದ್ದಾನೆ. ಬಾಲ್ಯದಿಂದಲೂ ನನ್ನ ಕನಸು, ನಟನೆ, ನನ್ನನ್ನು ನಗಿಸಲು ಇಟ್ಟುಕೊಂಡು ಗುರುಪ್ರಸಾದ್ ತಮ್ಮ ಬುದ್ದಿಶಕ್ತಿಯನ್ನು ಬಳಸಿಕೊಂಡು ಈ ಸಿನಿಮಾ ಮಾಡಿದ್ದಾರೆ. ನನ್ನ ಹಿಂದಿನ ಯಾವುದೇ ಸಿನಿಮಾದ ನೆರಳು ಈ ಸಿನಿಮಾದಲ್ಲಿಲ್ಲ” ಎಂದು ಹೇಳಿದರು.
ನಿರ್ದೇಶಕ ಗುರುಪ್ರಸಾದ್ ಮಾತನಾಡಿ, “ಮಠ, ಏದ್ದೇಳು ಮಂಜುನಾಥ ಆದಮೇಲೆ ತುಂಬಾ ಪ್ಲ್ಯಾನ್ ಮಾಡಿ “ರಂಗನಾಯಕ” ಮಾಡಿದ್ದೇವೆ. ಇದು ನನ್ನ 5ನೇ ಚಿತ್ರ. ಟ್ರೈಲರ್ ನಲ್ಲಿ ಒಂದಷ್ಟು ಡೈಲಾಗ್ ಗಳನ್ನು ಕೊಟ್ಟು ನಮ್ಮ ಚಿತ್ರ ಹೀಗಿದೆ ನೋಡಿ ಬನ್ನಿ ಎಂದು ಇನ್ವೈಟ್ ಮಾಡುತ್ತೇವೆ. ಚಿತ್ರದಲ್ಲಿ ನಾನೊಬ್ಬ ನಿರ್ದೇಶಕನಾಗಿಯೇ ಅಭಿನಯಿಸಿದ್ದೇನೆ.
ಹತಾಶ ಪ್ರೇಕ್ಷಕನಾದವನು ಏನು ಹೇಳಬೇಕೆಂದಿರುವನೋ ಅದನ್ನೇ ನಾನಿಲ್ಲಿ ಹೇಳಿದ್ದೇನೆ. ಇದನ್ನು ವಿಡಂಬನೆಯ ಚಿತ್ರ ಅನ್ನಲೂಬಹುದು. ಒಂದು ಕಾಲಘಟ್ಟದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ವಿಶೇಷವಾದ ಸಿನಿಮಾ ಇದಾಗಲಿದೆ ಎಂಬ ವಿಶ್ವಾಸ ನನಗಿದೆ.
ಕೆಲವೊಂದು ಸಂಭಾಷಣೆಯನ್ನು ಹತಾಶೆಯ ಪ್ರೇಕ್ಷಕನಾಗಿ ಬರೆದಿದ್ದೇನೆ; ಧೈರ್ಯವಾಗಿ ಹೇಳಿದ್ದೇನೆ. ಚಿತ್ರದಲ್ಲಿ ಮೇಕಿಂಗ್ ಗಿಂತ ಕಂಟೆಂಟ್ ಇರಬೇಕು. ರಂಗನಾಯಕಿ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ. ನಾಯಕ ಜನರಿಗೆ ಎಂಟರ್ ಟೈನ್ ಮಾಡುವನು. ಇದೊಂದು ವಿದೂಷಕನ ಕಥೆಯೂ ಹೌದು” ಎಂದರು. ನಿರ್ಮಾಪಕ ವಿಖ್ಯಾತ್ ಮಾತನಾಡಿ “ಈಗಾಗಲೇ ಹಾಡು ಟೀಸರ್ ಎಲ್ಲರ ಮನ ಗೆದ್ದಿದೆ. ಸಿನಿಮಾ ಇದೇ ತಿಂಗಳ 15 ರಂದು ಬಿಡುಗಡೆಯಾಗಲಿದೆ ಎಂದು ಹೇಳಿದರು.