ವಾಷಿಂಗ್ಟನ್: ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಬಂಧಿಸಲಾಗಿದ್ದ ಉಗ್ರ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನ್ಯಾಯಾಲಯವು ಅನುಮತಿ ನೀಡಿದೆ. 2008ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ 166 ಮಂದಿ ಸಾವನ್ನಪ್ಪಿದ್ದರು. ದಾಳಿಯ ಪ್ರಮುಖ ಶಂಕಿತ ಡೇವಿಡ್ ಹೆಡ್ಲಿಯನ್ನು ಅಮೆರಿಕಾದಲ್ಲಿ ಬಂಧಿಸಲಾಗಿತ್ತು. ಆತನು ಈಗ 35 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಆತನ ಸ್ನೇಹಿತ ಮತ್ತು ಸಹ-ಸಂಚುಕೋರ ಪಾಕಿಸ್ತಾನ ಮೂಲದವನಾಗಿದ್ದು ಕೆನಡಾದಲ್ಲಿ ನೆಲಸಿದ್ದ ಉದ್ಯಮಿ ತಹವ್ವೂರ್ ರಾಣಾವನ್ನು 2020ರಲ್ಲಿ ಅಮೆರಿಕಾದಲ್ಲಿ ಬಂಧಿಸಲಾಗಿತ್ತು. ದಾಳಿಯಲ್ಲಿ ಆತನ ಪಾತ್ರದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಯನ್ನು ನಡೆಸುತ್ತಿದೆ. ಆತನನ್ನು ವಾಂಟೆಡ್ ಕ್ರಿಮಿನಲ್ ಎಂದು ಘೋಷಿಸಿ, ಹಸ್ತಾಂತರಿಸುವಂತೆ ಕೋರಿ ಸಿಬಿಐ ಅಮೆರಿಕದ ಚಿಕಾಗೋ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿತು.
ಲಾಸ್ ಏಂಜಲೀಸ್ ಕೇಂದ್ರ ಜಿಲ್ಲಾ ನ್ಯಾಯಾಧೀಶೆ ಜಾಕ್ವೆಲಿನ್ ಸೂಲ್ಜಿಯನ್ ಅವರು ಮೇ 16 ರಂದು ಹೊರಡಿಸಿದ ಆದೇಶದಲ್ಲಿ, “2008ರ ಮುಂಬೈ ಭಯೋತ್ಪಾದನಾ ದಾಳಿಯ ಶಂಕಿತ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಬಹುದು. ಅವರು ಆರೋಪಿಸಲಾದ ಅಪರಾಧಗಳಿಗಾಗಿ ಅವರನ್ನು ಹಸ್ತಾಂತರಿಸಲು ಆದೇಶಿಸಲಾಗಿದೆ” ಎಂದು ತೀರ್ಪನ್ನು ನೀಡಿದ್ದಾರೆ.