ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಪತಾಂಜಲಿ Archives » Dynamic Leader
November 25, 2024
Home Posts tagged ಪತಾಂಜಲಿ
ದೇಶ

ನವದೆಹಲಿ: ಬಾಬಾ ರಾಮ್‌ದೇವ್ ಪತಂಜಲಿಯ ಸ್ಥಾಪಕರು. ಅವರ ಕಂಪನಿಯ ಔಷಧಗಳ ಜಾಹೀರಾತಿನಲ್ಲಿ ಸುಳ್ಳು ಮಾಹಿತಿ ಇದೆ ಎಂದು ಆರೋಪಿಸಿ ಅದನ್ನು ನಿಷೇಧಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, “ಜಾಹೀರಾತುಗಳಲ್ಲಿ ಸುಳ್ಳು ಮಾಹಿತಿಯನ್ನು ಪ್ರಕಟಿಸಬೇಡಿ; ಪತಂಜಲಿಯ ಸುಳ್ಳು ಮತ್ತು ದಾರಿತಪ್ಪಿಸುವ ಜಾಹೀರಾತುಗಳನ್ನು ಕೂಡಲೇ ನಿಲ್ಲಿಸಬೇಕು.

ಇಂತಹ ಉಲ್ಲಂಘನೆಗಳನ್ನು ಈ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸುತ್ತದೆ. ಪ್ರತಿ ಉತ್ಪನ್ನದ ಜಾಹೀರಾತಿನ ಮೇಲೆ 1 ಕೋಟಿ ರೂ.ವರೆಗಿನ ದಂಡವನ್ನು ಪರಿಗಣಿಸಬಹುದು. ಈ ನಿಟ್ಟಿನಲ್ಲಿ ಬಾಬಾ ರಾಮ್‌ದೇವ್‌ ಉತ್ತರ ನೀಡಬೇಕು” ಎಂದು ಎಚ್ಚರಿಸಿದರು. ಆದರೂ ಸುಪ್ರೀಂ ಕೋರ್ಟ್ ನೋಟಿಸ್‌ಗೆ ಬಾಬಾ ರಾಮ್‌ದೇವ್‌ ಯಾವುದೇ ಉತ್ತರ ನೀಡಲಿಲ್ಲ. ಏತನ್ಮಧ್ಯೆ, ಪ್ರಕರಣವು ಸುಪ್ರೀಂ ಕೋರ್ಟ್‌ನ ಪೀಠದ ಮುಂದೆ ಕಳೆದ ತಿಂಗಳು 19 ರಂದು ಮತ್ತೆ ವಿಚಾರಣೆಗೆ ಬಂದಿತು.

ಸುಪ್ರೀಂ ಕೋರ್ಟ್ ನೋಟಿಸ್‌ಗೆ ಬಾಬಾ ರಾಮ್‌ದೇವ್ ಯಾವುದೇ ವಿವರಣೆಯನ್ನು ನೀಡಿಲ್ಲ ಮತ್ತು ಪ್ರಕರಣದ ವಿಚಾರಣೆಯ ಮೊದಲ ದಿನವೇ ಉತ್ತರವನ್ನು ಸಲ್ಲಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಬಾಬಾ ರಾಮ್‌ದೇವ್ ಅವರ ಈ ಕ್ರಮಕ್ಕಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದರೆ ಹೇಗೆ? ಈ ಪ್ರಕರಣದ ಮುಂದಿನ ತನಿಖೆಗೆ ಪತಂಜಲಿ ಸಂಸ್ಥಾಪಕ ಬಾಬಾ ರಾಮ್‌ದೇವ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಖುದ್ದು ಹಾಜರಾಗಬೇಕು” ಎಂದು ಕಟ್ಟಾಜ್ಞೆ ಮಾಡಿದರು.

ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಏಪ್ರಿಲ್ 2 ರಂದು ಖುದ್ದು ಹಾಜರಾದ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ನ್ಯಾಯಾಲಯದಲ್ಲಿ ಬೇಷರತ್ ಕ್ಷಮೆಯಾಚಿಸದರು. ಆಗ ನ್ಯಾಯಾಧೀಶರು, “ಪತಂಜಲಿ ಪ್ರಕರಣದಲ್ಲಿ ನಿಮ್ಮ ಕ್ಷಮಾಪಣೆಯನ್ನು ಒಪ್ಪಲು ಸಾಧ್ಯವಿಲ್ಲ. ನ್ಯಾಯಾಲಯದ ಎಲ್ಲಾ ಆದೇಶಗಳನ್ನು ಉಲ್ಲಂಘಿಸಿ, ನೀವು ವಕೀಲರ ಮೂಲಕ ಕ್ಷಮೆಯಾಚಿಸಿದರೆ ಹೇಗೆ ಒಪ್ಪುವುದು?

ಯಾವ ಆಧಾರದ ಮೇಲೆ ನಿಮ್ಮ ಔಷಧವು ಇತರ ಔಷಧಿಗಳಿಗೆ ಪರ್ಯಾಯವಾಗಿದೆ ಎಂದು ನೀವು ಹೇಳುತ್ತಿದ್ದೀರಾ? ಇದು ವೈಜ್ಞಾನಿಕವಾಗಿ ಸಾಬೀತಾಗಿದೆಯೇ? ಅಥವಾ ಸಂಬಂಧಪಟ್ಟ ಸಚಿವಾಲಯಕ್ಕೆ ಯಾವುದಾದರೂ ಮನವಿ ಮಾಡಿದ್ದೀರಾ? ಈ ಪ್ರಕರಣದಲ್ಲಿ ಏಪ್ರಿಲ್ 10ರೊಳಗೆ ಸೂಕ್ತ ವಿವರಣೆ ನೀಡಬೇಕು” ಎಂದು ಹೇಳಿ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಿದರು.

ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ಅಹ್ಸಾನುದ್ದೀನ್ ಅಮಾನುಲ್ಲಾ ಪೀಠವು, “ಈ ಪ್ರಕರಣದಲ್ಲಿ ನಾವು ದಯ ತೋರಿಸಲು ಬಯಸುವುದಿಲ್ಲ. ವಿವಾದಾತ್ಮಕ ಜಾಹೀರಾತುಗಳನ್ನು ಬಿಡುಗಡೆ ಮಾಡಿದರೂ ಪತಂಜಲಿ ವಿರುದ್ಧ ಉತ್ತರಾಖಂಡ ಸರ್ಕಾರ ಕ್ರಮ ಕೈಗೊಳ್ಳದಿರುವುದು ಖಂಡನೀಯ.

ಕ್ಷಮಾಪಣೆಯ ಅಫಿಡವಿಟ್ ಸಲ್ಲಿಸಿರುವುದು ನಮಗೆ ತೃಪ್ತಿ ತಂದಿಲ್ಲ. ನಾವು ಯಾವುದನ್ನೂ ಗಮನಿಸದೇ ಇಲ್ಲ. ಈ ಕ್ಷಮೆಯನ್ನು ಒಪ್ಪಲು ಸಾಧ್ಯವಿಲ್ಲ. ಕ್ಷಮೆ ಕೇವಲ ಕಾಗದದಲ್ಲಿ ಮಾತ್ರ ಇದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ನಮಗೆ ತೃಪ್ತಿ ತಂದಿಲ್ಲ. ಬಾಬಾ ರಾಮದೇವ್ ಅವರು ನ್ಯಾಯಾಂಗ ನಿಂದನೆಯನ್ನು ಲಘುವಾಗಿ ಪರಿಗಣಿಸಿದ್ದಾರೆ” ಎಂದು ಕಿಡಿಕಾರಿ ವಿಚಾರಣೆಯನ್ನು ಮುಂದೂಡಿದ್ದಾರೆ.  

ದೇಶ

ನವದೆಹಲಿ: ಪತಂಜಲಿ ಆಯುರ್ವೇದ ಸಂಸ್ಥೆ ಆಯುರ್ವೇದ ಪುಡಿ, ಸಾಬೂನು ಮತ್ತು ಎಣ್ಣೆ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ. ಅದೇ ವೇಳೆ ಪತಂಜಲಿ ಆಧುನಿಕ ಔಷಧಗಳ ವಿರುದ್ಧವೂ ಜಾಹೀರಾತು ನೀಡುತ್ತಿದೆ. ಇದರಿಂದ ಭಾರತೀಯ ವೈದ್ಯಕೀಯ ಸಂಘವು ಪತಂಜಲಿಯ ಸುಳ್ಳು ಜಾಹೀರಾತುಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು.

ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌, ಅಲೋಪತಿ ಔಷಧಗಳನ್ನು ಗುರಿಯಾಗಿಸಿಕೊಂಡು ಸುಳ್ಳು ಜಾಹೀರಾತು ಪ್ರಕಟಿಸುತ್ತಿರುವ ಪತಂಜಲಿ ಆಯುರ್ವೇದ ಕಂಪನಿಯನ್ನು ತೀವ್ರವಾಗಿ ಖಂಡಿಸಿದೆ. ನ್ಯಾಯಮೂರ್ತಿಗಳಾದ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠ ಪತಂಜಲಿಗೆ ಎಚ್ಚರಿಕೆ ನೀಡಿದೆ.

“ಪತಂಜಲಿ ಆಯುರ್ವೇದ ಸಂಸ್ಥೆಯ ಇಂತಹ ಎಲ್ಲಾ ಸುಳ್ಳು ಜಾಹೀರಾತುಗಳನ್ನು ಕೂಡಲೇ ನಿಲ್ಲಿಸಬೇಕು. ಇಂತಹ ಉಲ್ಲಂಘನೆಯನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸುತ್ತದೆ. ಸುಳ್ಳು ಜಾಹೀರಾತುಗಳು ಮುಂದುವರಿದರೆ 1 ಕೋಟಿ ರೂಪಾಯಿ ದಂಡ ವಿಧಿಸಲಾಗುವುದು. ಈ ದಂಡವು ಪ್ರತಿ ಉತ್ಪನ್ನಕ್ಕೂ ಅನ್ವಯಿಸುತ್ತದೆ” ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.