ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಪುಟ್ಟಣ್ಣ Archives » Dynamic Leader
October 23, 2024
Home Posts tagged ಪುಟ್ಟಣ್ಣ
ರಾಜ್ಯ

ಬೆಂಗಳೂರು: ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಪುಟ್ಟಣ್ಣನವರು ಜಯಗಳಿಸಿದ ಹಿನ್ನೆಲೆಯಲ್ಲಿ ಕೆಂಗೇರಿಯಲ್ಲಿ ಆಯೋಜಿಸಿದ್ದ ಶಿಕ್ಷಕರ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಮಾಜಿ ಪ್ರಧಾನಿ ದೇವೇಗೌಡರು ಈಗ ಬಿಜೆಪಿ ಜತೆ ಸೇರಿರುವುದು, ನರೇಂದ್ರ ಮೋದಿ ಅವರನ್ನು ವಿಪರೀತ ಹೊಗಳುತ್ತಿರುವುದು ನನಗೆ ತುಂಬಾ ಆಶ್ಚರ್ಯ ಆಗಿದೆ. ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟಲು ಬಯಸುತ್ತೇನೆ. ಬಿಜೆಪಿಗೆ ಯಾವತ್ತೂ ವಿರುದ್ಧವಾಗಿರುತ್ತೇವೆ” ಎಂದು ಈ ಹಿಂದೆ ದೇವೇಗೌಡರು ಹೇಳಿದ್ದುದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

“ಈಗ ತಮ್ಮ ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇಂದು ನಾಡಿನ ಜನತೆ ಪ್ರಜ್ಞಾವಂತರಾಗಿದ್ದಾರೆ. ಇವರ ಹೇಳಿಕೆಗಳನ್ನು ಪರಿಶೀಲಿಸಿ ತುಲನೆ ಮಾಡುವಷ್ಟು ತಿಳಿವಳಿಕೆ ನಾಡಿನ ಜನರಿಗೆ ಬಂದಿದೆ. ರಾಜಕೀಯವಾಗಿ ದೇವೇಗೌಡರು ತಮ್ಮ ಕುಟುಂಬದ ಉಳಿವಿಗಾಗಿ ಯಾವುದೇ ನಿರ್ಧಾರಕ್ಕೆ ಬಂದರೂ ಜನರು ಕಣ್ಣುಮುಚ್ಚಿಕೊಂಡು ಅವರನ್ನು ಬೆಂಬಲಿಸಬೇಕು ಎನ್ನುವ ಸಂದರ್ಭ ಈಗ ಇಲ್ಲ” ಎಂದು ಹೇಳಿದರು.

“ಹಿಂದೆ ನಾನು ಜೆಡಿಎಸ್ ನಲ್ಲಿದ್ದಾಗ, ಪುಟ್ಟಣ್ಣನವರಿಗೆ ಶಿಕ್ಷಕರು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದ್ದು, ಚುನಾವಣೆಗೆ ನಿಲ್ಲುವುದಾಗಿ ತಿಳಿಸಿದ್ದರು. 2002ರಲ್ಲಿ ಜನರ ಆಶೀರ್ವಾದದಿಂದ ಜಯಗಳಿಸಿದರು. ನಂತರ ಐದು ಬಾರಿ ಗೆದ್ದಿದ್ದಾರೆ. ಜನರ ಧ್ವನಿಯಾಗಿ ಸಮರ್ಥವಾಗಿ ಕೆಲಸ ಮಾಡಿದ್ದು, ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂದರೂ ಅವರನ್ನು ಬೆಂಬಲಿಸಿದ ಶಿಕ್ಷಕ ಸಮುದಾಯದ ಪ್ರಜ್ಞಾವಂತಿಕೆಗೆ ಮೆಚ್ಚುವಂತದ್ದು” ಎಂದು ಹೇಳಿದರು.

“ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್ ಅವರನ್ನು ಕಣಕ್ಕೆ 4 ಬಾರಿ ಇಳಿಸಲಾಗಿದೆ. ಈ ಕ್ಷೇತ್ರದಲ್ಲಿ ಅವರು ಖಂಡಿತ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ. ಬಿಜೆಪಿಯವರು ನರೇಂದ್ರ ಮೋದಿಯವರ ಹೆಸರಿನಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆಯೇ ಹೊರತು, ಬಿಜೆಪಿಯವರಿಗೆ ಜನರ ಬಳಿ ಹೋಗಲು ಕಾರಣಗಳೇ ಇಲ್ಲ. ನರೇಂದ್ರ ಮೋದಿಯವರ ಹೆಸರಿನ ಮೇಲೆ ಗೆಲ್ಲುತ್ತೇವೆ ಎಂದು  ಬಿಜೆಪಿ ಭಾವಿಸಿದೆ. ನರೇಂದ್ರ ಮೋದಿಯವರು ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಾದಯಾತ್ರೆ ಮಾಡಿದ್ದರೂ ನಮಗೆ 136 ಸ್ಥಾನಗಳು ದೊರೆತವು” ಎಂದು ಸಮರ್ಥಿಸಿಕೊಂಡರು.

“ಮೋದಿಯವರು ಪ್ರಚಾರ ಮಾಡಿದ್ದ ಯಾವ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲೇ ಇಲ್ಲ. ಹೀಗಾಗಿ ನರೇಂದ್ರ ಮೋದಿಯವರ ಹೆಸರಿನ ಮೇಲೆಯೇ ಗೆಲ್ಲುತ್ತೇವೆ ಎನ್ನುವ ಇವರಷ್ಟು ಮೂರ್ಖರು ಯಾರೂ ಇಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳವವರು, ಕೆಲಸ ಮಾಡಿರುವವರಿಗೆ ತಾನೇ ಕೂಲಿ ಕೊಡುವುದು. ಗೇಯುವ ಎತ್ತಿಗೆ ಹುಲ್ಲು ಹಾಕಬೇಕು. ಕಳ್ಳ ಎತ್ತಿಗೆ ಹುಲ್ಲು ಹಾಕಬಾರದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅವರು 28ಕ್ಕೆ 28 ಗೆಲ್ಲುತ್ತೇವೆ ಎಂದುಕೊಂಡಿದ್ದಾರೆ” ಎಂದು ವ್ಯಂಗ್ಯವಾಡಿದರು.

“ದೇವೇಗೌಡರು ನರೇಂದ್ರ ಮೋದಿ ಅವರನ್ನು ಈಗ ಹೊಗಳಿದ್ದೆ ಹೊಗಳಿದ್ದು. ನನಗೂ ಅವರಿಗೂ ಅವಿನಾಭಾವ ಸಂಬಂಧ ಇದೆ, ಜನ್ಮ ಜನ್ಮದ ಸಂಬಂಧವಿದೆ ಅಂತಲೂ ಎನ್ನುತ್ತಾರೆ. ಗೌಡರು ಹೀಗೇಕಾದರು ಎಂದು ಆಶ್ಚರ್ಯವಾಗಿದೆ. ಇದೇ ದೇವೇಗೌಡರು ನರೇಂದ್ರ ಮೋದಿಯವರು ಪುನಃ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ಈಗ ಹೊಗಳುತ್ತಾರೆ. ಇದೆಂತಹ ದ್ವಂದ್ವ? ದೇಶದ ಪ್ರಧಾನಮಂತ್ರಿಯಾಗಿದ್ದವರು ಈ ರೀತಿ ಹೇಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ” ಆಶ್ಚರ್ಯ ವ್ಯಕ್ತಪಡಿಸಿದರು.