ಕಲ್ಲಕುರಿಚಿ: ನೀರಿನಲ್ಲಿ ಮೆಥನಾಲ್ (Methanol) ಬೆರೆಸಿ ಮಾರಾಟ ಮಾಡಿರುವುದು ಸಿಬಿಸಿಐಡಿ ಹಾಗೂ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.
ಕಲ್ಲಕುರಿಚಿಯಲ್ಲಿ ಕಲಬೆರಕೆ ಮದ್ಯ ಸೇವಿಸಿ ಅಸ್ವಸ್ಥರಾದ 229 ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ 150 ಮಂದಿ ಗುಣಮುಖರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ 65 ಮಂದಿ ಸಾವನ್ನಪ್ಪಿದ್ದಾರೆ; 14 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಸಿಬಿಸಿಐಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮದ್ಯ ಮಾರಾಟಗಾರರು, ಮೆಥನಾಲ್ ಪೂರೈಕೆದಾರರು ಸೇರಿ 21 ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ಪೈಕಿ ಪ್ರಮುಖ ಆರೋಪಿಗಳೆಂದು ಪರಿಗಣಿಸಲಾಗಿರುವ ಕನ್ನುಕುಟ್ಟಿ ಗೋವಿಂದರಾಜ್ (50), ಅವರ ಪತ್ನಿ ವಿಜಯಾ (44), ಚಿನ್ನದೊರೈ (36) ಹಾಗೂ ಜೋಸೆಫ್ (40) ಸೇರಿ 11 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ತನಿಖೆಯಲ್ಲಿ, ಚೆನ್ನೈನ ಗೌತಮ್ ಚಂದ್ ಮತ್ತು ಪನ್ಶಿಲಾಲ್ ಮುಂತಾದವರು ಪರವಾನಗಿ (License) ಪಡೆದು, ಹೊರ ರಾಜ್ಯಗಳಿಂದ ಮೆಥನಾಲ್ ಆಮದು ಮಾಡಿ ಮಾರಾಟ ಮಾಡುತ್ತಿದ್ದು, ಯಾವುದೇ ಪರವಾನಗಿ ಇಲ್ಲದ ಚೆನ್ನೈನ ಶಿವಕುಮಾರ್ ಮತ್ತು ಮಡುಕರೈ ಮಾದೇಶ್ ಎಂಬುವವರಿಗೆ ಮಾರಾಟ ಮಾಡಿದ್ದು, ಅದನ್ನು ಕರುಣಾಪುರಂ, ಮಾಧವಚೇರಿ, ಶೇಷಸಮುದ್ರಂ ಭಾಗದ ಮದ್ಯ ಮಾರಾಟಗಾರರು ಖರೀದಿಸಿ ನೀರು ಬೆರೆಸಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಬಂಧನಕ್ಕೊಳಗಾದ 11 ಜನರಲ್ಲಿ ಐದು ಜನರನ್ನು ನಿನ್ನೆ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇತರ ಆರು ಜನರು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಉಳಿದವರನ್ನು ಇಂದು ಸಂಜೆ ನ್ಯಾಯಾಲಯದಲ್ಲಿ ಹಾಜರು ಪಡಿಸುವ ನಿರೀಕ್ಷೆಯಿದೆ.