ಬೆಂಗಳೂರು: ಶ್ರೀರಂಗಪಟ್ಟಣದ ಹನುಮಯಾತ್ರೆಯ ಸಂದರ್ಭದಲ್ಲಿ ಮಂಡ್ಯದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಮುಸ್ಲಿಂ ಮಹಿಳೆಯರ ಬಗ್ಗೆ ಅಸಾಂವಿಧಾನಿಕ ಮತ್ತು ಅಸಹ್ಯವಾದ ಅಶ್ಲೀಲ ಮಾತುಗಳನ್ನಾಡಿರುವುದನ್ನು ವೆಲ್‌ಫೇರ್ ಪಾರ್ಟಿ ಮಹಿಳಾ ವಿಭಾಗದ ರಾಜ್ಯ ಘಟಕದ ಅಧ್ಯಕ್ಷೆ ಸಬೀಹಾ ಪಟೇಲ್ ತೀವ್ರವಾಗಿ ಖಂಡಿಸಿದ್ದಾರೆ.
“ಪದೇ ಪದೇ ಒಂದು ಸಮುದಾಯದ ವಿರುದ್ದ ಪ್ರಚೋದನಾಕಾರಿ ಹೇಳಿಕೆಗಳನ್ನು ಕೊಡುತ್ತಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ರಾಜ್ಯ ಸರಕಾರ ಯಾವುದೇ ಕ್ರಮ ಯಾಕೆ ತೆಗೆದುಕೊಳ್ಳುತ್ತಿಲ್ಲ? ವಿಶೇಷವಾಗಿ ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಮಹಿಳೆಯರ ಪರವಾಗಿ ಸಹಾನುಭೂತಿ ತೋರಿಸುವ ರಾಜ್ಯ ಸರ್ಕಾರ ಈಗ ಕೇವಲ ಮೂಕ ಪ್ರೇಕ್ಷಕವಾಗಿದೆ. ಇಂತಹ ತುಚ್ಛ ಹೇಳಿಕೆ ಕೊಟ್ಟ ಕಲ್ಲಡ್ಕ ಪ್ರಭಾಕರ್ ಭಟ್ ಕೇವಲ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಮಾತ್ರ ಹೇಳಿದ ಮಾತುಗಳಲ್ಲ ಬದಲಾಗಿ ಇದು ಇಡೀ ಮಹಿಳಾ ಸಮಾಜಕ್ಕೆ ಅವಮಾನ ಮಾಡಿದ ಹೇಳಿಕೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸ್ತ್ರೀ ವಿರೋಧಿಯಾದ ಇವರು ಈ ಹಿಂದೆ ಎಷ್ಟೋ ಬಾರಿ ಹಿಂದೂ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ‘ಮುಸ್ಲಿಂ ಯುವಕರು ಸೆಂಟ್ ಹೊಡೆದು ಬಂದರೆ ಹಿಂದೂ ಯುವತಿಯರು ಅವರ ಹಿಂದೆ ಓಡಿ ಹೋಗುತ್ತಾರೆ’ ಎಂದು ಈ ಹಿಂದೆ ಅಸಭ್ಯ ಹೇಳಿಕೆಯೊಂದನ್ನು ನೀಡಿದ್ದರು. ಇನ್ನೊಂದು ಕಡೆ ಕ್ರಿಶ್ಚಿಯನ್ ಮಹಿಳೆಯರಿಗೆ ಮತ್ತು ಅವರ ಸೇವೆಗಳನ್ನು ಕೂಡಾ ವ್ಯಂಗ್ಯ ಮಾಡಿದ್ದಾರೆ. ಒಂದು ಸಂದರ್ಭದಲ್ಲಿ ಮಸೀದಿ ದರ್ಶನಕ್ಕೆ ಹೋದ ಸಹಧರ್ಮೀಯ ಮಹಿಳೆಯರಿಗೂ ಅಶ್ಲೀಲವಾದ ಮಾತುಗಳನ್ನಾಡಿದ್ದರು. ಇದು ಚುನಾವಣಾ ದಿನಗಳು ಹತ್ತಿರ ಬರುವಾಗ ಕೋಮುವಾದದ ವಿಷ ಬೀಜ ಬಿತ್ತುವ ಹುನ್ನಾರವಾಗಿದೆ. ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಇಂತಹ ಕೊಳಕು ಮಾತುಗಳು ಅವರ ಸಂಸ್ಕಾರವನ್ನು ಬಿಂಬಿಸುತ್ತಿದೆ” ಎಂದು ಹೇಳಿದ್ದಾರೆ.
ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಯಾರೂ ದಾರಿ ತೋರಿಸುವ ಅವಶ್ಯಕತೆ ಇಲ್ಲ. ಸುಮಾರು 14 ನೂರು ವರ್ಷಗಳ ಹಿಂದೆಯೇ ಇಸ್ಲಾಂ ಧರ್ಮ ಮಹಿಳೆಯ ಸ್ಥಾನಮಾನ ಹಾಗೂ ಅವಳ ಹಕ್ಕುಗಳನ್ನು ಎತ್ತಿ ಹಿಡಿದಿದೆ. ತ್ರಿವಳಿ ತಲಾಖನ್ನು ಮುಂದಿಟ್ಟುಕೊಂಡು ಯಾವುದೇ ಅಧ್ಯಯನ ಇಲ್ಲದೆ ಇಂತಹ ಹೇಳಿಕೆಗಳನ್ನು ಕೊಡುವುದು ಅಸಾಂವಿಧಾನಿಕ. ಹಲವಾರು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿರುವ ಇವರು ಎಂತಹಾ ಧರ್ಮರಕ್ಷಕ? ಎಂತಹಾ ಮುಖಂಡ? ಎನ್ನುವುದು ಒಂದು ದೊಡ್ಡ ಪ್ರಶ್ನೆಯಾಗಿದೆ. ಒಂದು ಸಮುದಾಯವನ್ನು ಅಶ್ಲೀಲವಾಗಿ ನಿಂದಿಸಿದರೆ ಅವರ ವಿರುದ್ಧ ಜಾಮೀನು ರಹಿತ ಕೇಸ್ ದಾಖಲಾಗಬೇಕು. ರಾಜ್ಯದಲ್ಲಿ ಹಿಜಾಬ್ ವಿಚಾರವನ್ನೆತ್ತಿಕೊಂಡು ರಾಜಕೀಯ ನಡೆಸುತ್ತಿರುವ ಸಂದರ್ಭದಲ್ಲಿ ಪುನಃ ಹೇಳಲಿಕ್ಕಾಗದ ಅಶ್ಲೀಲವಾದ ಮಾತುಗಳನ್ನಾಡಿ ಮುಸ್ಲಿಂ ಯುವತಿ ಮುಸ್ಕಾನ್ ಅವರಿಗೆ ಬೆದರಿಕೆ ಕೂಡ ಹಾಕಿದ್ದಾರೆ. ಇದೇ ತರಹ ಇನ್ನೂ ಹಲವಾರು ಪ್ರಕರಣಗಳನ್ನು ಇವರ ವಿರುದ್ಧ ದಾಖಲಿಸಬೇಕಾಗಿದೆ” ಎಂದು ಆಗ್ರಹಿಸಿದ್ದಾರೆ.
“ಇಂತಹ ಪ್ರಚೋದನಾಕಾರಿ ಹೇಳಿಕೆಗಳು ನಿಲ್ಲದಿದ್ದರೆ, ಸರ್ಕಾರ ಇಂತಹ ಅಸಂಸ್ಕೃತಿಯ ಮುಖಂಡರುಗಳ ವಿರುದ್ಧ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳದೇ ಇದ್ದರೆ ವೆಲ್‌ಫೇರ್ ಪಾರ್ಟಿಯ ರಾಜ್ಯ ಮಹಿಳಾ ಘಟಕದ ವತಿಯಿಂದ ನೆಲದ ಕಾನೂನಿನ ಅಡಿಯಲ್ಲಿ ಉಗ್ರ ಹೋರಾಟವನ್ನು ಮಾಡುತ್ತೇವೆ. ಕಲ್ಲಡ್ಕ ಪ್ರಭಾಕರ್ ಭಟ್ ತಮ್ಮ ಈ ಅಶ್ಲೀಲವಾದ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆದು ಸಾರ್ವಜನಿಕವಾಗಿ ಮಹಿಳೆಯರಲ್ಲಿ ಕ್ಷಮೆ ಯಾಚಿಸಬೇಕು” ಎಂದು ವೆಲ್‌ಫೇರ್ ಪಾರ್ಟಿಯ ರಾಜ್ಯ ಮಹಿಳಾ ವಿಭಾಗ ಸಬೀಹಾ ಪಟೇಲ್ ಆಗ್ರಹಿಸಿದ್ದಾರೆ.