“ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ; ನಮ್ಮ ಹಕ್ಕುಗಳಿಗಾಗಿ ನಾವು ನಿಲ್ಲಬೇಕು. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳದೆ ಮನೆಗೆ ಹಿಂತಿರುಗುವುದು ಬೇಡ” – ವಿನೇಶ್ ಫೋಗಟ್
ಹರಿಯಾಣದ ರೈತರು ಶಂಭು ಗ್ರಾಮದ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ 200 ದಿನಗಳನ್ನು ತಲುಪಿದ್ದು, ಇಂದು (ಶನಿವಾರ) ದೊಡ್ಡ ಪ್ರಮಾಣದ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ರೈತರೊಂದಿಗೆ ಸೇರಿಕೊಂಡಿದ್ದಾರೆ. “ನಿಮ್ಮ ಮಗಳು ನಿಮ್ಮೊಂದಿಗೆ ನಿಂತಿದ್ದಾಳೆ” ಎಂದು ಮಾತನಾಡಿ, ತಮ್ಮ ದೃಢವಾದ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ಫೆಬ್ರವರಿ 13 ರಿಂದ ಹರಿಯಾಣ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನಾತ್ಮಕ ಖಾತ್ರಿ ಸೇರಿದಂತೆ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ಆರಂಭಿಸಿದ್ದಾರೆ. ಹರಿಯಾಣದ ಗಡಿಭಾಗದ ಶಂಭು ಪ್ರದೇಶದಲ್ಲಿ ರೈತರು ದೆಹಲಿಗೆ ತೆರಳದಂತೆ ಅಧಿಕಾರಿಗಳು ತಡೆದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ.
ರೈತರನ್ನು ಉದ್ದೇಶಿಸಿ ಮಾತನಾಡಿದ ವಿನೇಶ್ ಫೋಗಟ್, “ಕೃಷಿಕ ಕುಟುಂಬದಲ್ಲಿ ಹುಟ್ಟಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ. ನಮ್ಮ ಹಕ್ಕುಗಳಿಗಾಗಿ ನಾವು ನಿಲ್ಲಬೇಕು, ಯಾರೂ ನಮಗಾಗಿ ಬರುವುದಿಲ್ಲ. ನಮ್ಮ ಕೋರಿಕೆಗಳು ಈಡೇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳದೆ ಮನೆಗೆ ಹಿಂತಿರುಗುವುದು ಬೇಡ” ಎಂದು ಹೇಳಿದ್ದಾರೆ.
ಅಲ್ಲದೆ, “ರೈತರು ತಮ್ಮ ಹಕ್ಕುಗಳಿಗಾಗಿ ಬಹಳ ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. 200 ದಿನ ಕಳೆದರೂ ಅವರ ಬೇಡಿಕೆ ಈಡೇರದಿರುವುದು ಬೇಸರದ ಸಂಗತಿಯಾಗಿದೆ. ಅವರು ತಮ್ಮ ಹಕ್ಕುಗಳಿಗೆ ಧ್ವನಿಗೂಡಿಸುವುದನ್ನು ನೋಡಿದಾಗ ನಾವು ಹೆಚ್ಚುವರಿ ಶಕ್ತಿಯನ್ನು ಪಡೆಯುತ್ತೇವೆ” ಎಂದೂ ಹೇಳಿದ್ದಾರೆ.
2021ರ ಮುಷ್ಕರವನ್ನು ದೂಷಿಸಿದ ಸಂಸದೆ ಕಂಗನಾ ರಣಾವತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೋರಾಟ ನಿರತ ರೈತರು ಒತ್ತಾಯಿಸಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿಯನ್ನು ಆಗ್ರಹಿಸಿದ್ದಾರೆ. ಅಕ್ಟೋಬರ್ನಲ್ಲಿ ನಡೆಯಲಿರುವ ಹರಿಯಾಣ ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರಲು ರೈತರು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ರೈತರ ಚುನಾವಣಾ ತಂತ್ರಗಾರಿಕೆ ಬಗ್ಗೆ ಯಾವುದೆ ಸ್ಪಷ್ಟ ಅಭಿಪ್ರಾಯಗಳಿಲ್ಲ!