ಜಮ್ಮು: ಮೂರನೇ ಹಂತದ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಪ್ರಿಯಾಂಕಾ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಲು ವಿಫಲವಾಗಿದೆ. ಇದಕ್ಕೆ ಬಿಜೆಪಿ ಪಕ್ಷವೇ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ಕಾಶ್ಮೀರದ ಕಥುವಾ (Kathua) ಜಿಲ್ಲೆಯ ಬಿಲ್ಲಾವರ್ (Billawar) ಮತ್ತು ಬಿಷ್ಣಃ (Bishnah) ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಮನೋಹರ್ ಲಾಲ್ ಅವರಿಗೆ ಬೆಂಬಲ ಸಂಗ್ರಹಿಸಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗಾಗಿ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಪ್ರಿಯಾಂಕಾ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಲು ಸಾಧ್ಯವಾಗದ ಕಾರಣ ಕಾರ್ಯಕ್ರಮಗಳಿಗೆ ಅಡ್ಡಿಯಾಗಿದೆ.
ಈ ಬಗ್ಗೆ ಮಾತನಾಡಿದ ಕಾಶ್ಮೀರ ಕಾಂಗ್ರೆಸ್ ಸಮಿತಿಯ ಮುಖ್ಯ ವಕ್ತಾರ, “ಬಿಜೆಪಿಯ ವಿಧ್ವಂಸಕ ಕೃತ್ಯದಿಂದಾಗಿ ಪ್ರಿಯಾಂಕಾ ಅವರ ಕಾರ್ಯಕ್ರಮ ರದ್ದಾಗಿದೆ. ಈ ಕುರಿತು ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿ ತನಿಖೆಗೆ ಒತ್ತಾಯಿಸುತ್ತೇವೆ” ಎಂದು ಹೇಳಿದರು.