ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದಾರೆ. ಧಾರ್ಮಿಕ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಬಳಸಲು ಮುಸ್ಲಿಮರು ಚರ ಮತ್ತು ಸ್ಥಿರ ಆಸ್ತಿಯನ್ನು ದಾನ ಮಾಡುತ್ತಾರೆ. ಈ ದೇಣಿಗೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ರಾಜ್ಯಗಳಲ್ಲಿ ವಕ್ಫ್ ಮಂಡಳಿಗಳು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವಕ್ಫ್ ಕೌನ್ಸಿಲ್‌ಗಳಿವೆ. ಇದಲ್ಲದೇ ವಕ್ಫ್ ಟ್ರಿಬ್ಯೂನಲ್ ಕೂಡ ಇದೆ.
ವಕ್ಫ್ ಬೋರ್ಡ್ ಕಾಯ್ದೆ 1995ರಲ್ಲಿ, ವಕ್ಫ್ ಆಸ್ತಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಹಲವಾರು ನಿಬಂಧನೆಗಳನ್ನು ಮಾಡಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ 2013ರಲ್ಲಿ, ಇದರಲ್ಲಿ ಹಲವು ನಿಬಂಧನೆಗಳನ್ನು ಸಡಿಲಗೊಳಿಸಲಾಯಿತು ಮತ್ತು ಉದಾರೀಕರಣಗೊಳಿಸಲಾಯಿತು.
ಪ್ರಸ್ತುತ, 9.4 ಲಕ್ಷ ಎಕರೆ ಪ್ರದೇಶದಲ್ಲಿ 8.7 ಲಕ್ಷ ಆಸ್ತಿಗಳು ದೇಶಾದ್ಯಂತ ವಕ್ಫ್ ಮಂಡಳಿಗಳ ಒಡೆತನದಲ್ಲಿದೆ. ವಕ್ಫ್ ಆಸ್ತಿ ನಿರ್ವಹಣೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ, ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರುವ ಹೊಸ ಮಸೂದೆಯನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್, ಸಮಾಜವಾದಿ ಸೇರಿದಂತೆ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿವೆ.
ಮಸೂದೆಯ ಕೆಲವು ಮುಖ್ಯಾಂಶಗಳು:
• ಕುಟುಂಬದ ಆಸ್ತಿಯಲ್ಲಿ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆಯನ್ನು ಖಾತ್ರಿಪಡಿಸಲಾಗುವುದು.
• ವಕ್ಫ್ ಆಸ್ತಿಗಳನ್ನು ಸರ್ವೆ ಆಯುಕ್ತರಿಂದ ಜಿಲ್ಲಾಧಿಕಾರಿಯವರೆಗೆ ಅಥವಾ ಜಿಲ್ಲಾಧಿಕಾರಿ ನೇಮಿಸಿಸುವ ಉಪ ಜಿಲ್ಲಾಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುವುದು.
• ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರು ಭಾಗವಹಿಸುವಿಕೆಯನ್ನು ಖಾತ್ರಿಪಡಿಸಲಾಗುವುದು.
• ಬೋರ ಮತ್ತು ಅಗಕಾನಿಗಳಿಗೆ ಪ್ರತ್ಯೇಕ ಮಂಡಳಿ ಸ್ಥಾಪಿಸಲಾಗುವುದು. ವಕ್ಫ್ ಬೋರ್ಡ್‌ಗಳು ಸುನ್ನಿ, ಶಿಯಾ, ಬೋರಾ, ಅಗಾಕಾನಿಗಳು ಮತ್ತು ಆ ಧರ್ಮದ ಹಿಂದುಳಿದ ವರ್ಗಗಳನ್ನು ಒಳಗೊಂಡಿರಬೇಕು.
• ಎಲ್ಲಾ ವಕ್ಫ್ ಆಸ್ತಿಗಳನ್ನು ಸಾಮಾನ್ಯ ಕೇಂದ್ರ ತಾಣದ ಮೂಲಕ ನೋಂದಾಯಿಸಬೇಕು. ಅದರ ಮಾಹಿತಿಯನ್ನು ಕ್ರೋಢೀಕರಿಸಬೇಕು.
• ಆಸ್ತಿಯನ್ನು ನೋಂದಾಯಿಸುವ ಮೊದಲು, ಕಂದಾಯ ಕಾನೂನುಗಳನ್ನು ಅನುಸರಿಸಬೇಕು. ಮತ್ತು ಎಲ್ಲಾ ಪಕ್ಷಗಳ ಅಭಿಪ್ರಾಯಗಳನ್ನು ಆಲಿಸಲಾಗುವುದು.
• ವಕ್ಫ್ ಆಸ್ತಿಗಳಿಗೆ, ಇನ್ನು ವಕ್ಫ್ ಬೋರ್ಡ್‌ಗಳು ಮಾತ್ರ ಅಧಿಕಾರವಲ್ಲ.
• ವಕ್ಫ್ ಮಂಡಳಿಯ ಆಸ್ತಿಗಳು ಮತ್ತು ಅದರ ಚಟುವಟಿಕೆಗಳಿಂದ ಸಿಗುವ ಆದಾಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಕೇಂದ್ರ ತಾಣದಲ್ಲಿ ಪೋಸ್ಟ್ ಮಾಡಬೇಕು.
• ನ್ಯಾಯಮಂಡಳಿ ವ್ಯವಸ್ಥೆಯನ್ನು ಪರಿಷ್ಕರಿಸಲಾಗುವುದು. ಮತ್ತು ನ್ಯಾಯಾಧಿಕರಣದ ತೀರ್ಪನ್ನು ಹೈಕೋರ್ಟ್‌ಗಳಲ್ಲಿ ಪ್ರಶ್ನಿಸಬಹುದು. ವಕ್ಫ್ ಆಸ್ತಿ ನಿರ್ವಹಣೆಯಲ್ಲಿ ಸುಧಾರಣೆಗಳನ್ನು ಕೈಗೊಳ್ಳುವ ಸಲುವಾಗಿ ಹೊಸ ಮಸೂದೆಯಲ್ಲಿ ಹಲವು ತಿದ್ದುಪಡಿಗಳನ್ನು ಸೇರಿಸಲಾಗಿದೆ ಎಂದು ಹೇಳಲಾಗಿದೆ.