ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಭಾಗವಹಿಸಿ ಮಾತನಾಡಿದರು. ಈ ವೇಳೆ ಮಾತನಾಡಿದ ಅವರು, ಭವಿಷ್ಯದಲ್ಲಿ ಭಾರತ ಸೂಪರ್ ಪವರ್ ಆಗಲಿದೆ ಎಂದು ನಾವು ಮಾತ್ರವಲ್ಲ ಇಡೀ ವಿಶ್ವವೇ ಹೇಳುತ್ತಿದೆ.
ಭಾರತವು ವಿಶ್ವಗುರು (ವಿಶ್ವ ನಾಯಕ) ಆಗಿ ಹೊರಹೊಮ್ಮುತ್ತಿದೆ. ಆ ಗುರಿಯನ್ನು ನಾವು ಸಾಧಿಸಬೇಕು. ನಾವು ಯಾರನ್ನೂ ಗೆಲ್ಲಲು ಅಥವಾ ಬದಲಾಯಿಸಲು ಹೋಗುವುದಿಲ್ಲ. ನಾವು ಪ್ರಾಮಾಣಿಕರಾಗಿರಬೇಕು ಎಂದು ಒತ್ತಿ ಹೇಳಿದ ಅವರು, ನಾವೆಲ್ಲರೂ ಋಷಿಮುನಿಗಳ ಮಾರ್ಗದರ್ಶನದಂತೆ ನಡೆದುಕೊಂಡು ಧರ್ಮಮಾರ್ಗದಲ್ಲಿ ನಡೆಯಬೇಕು ಎಂದರು. ನಮ್ಮ ಶಕ್ತಿ ಇತರರಿಗೆ ಸಮಸ್ಯೆಗಳನ್ನು ಸೃಷ್ಟಿಸುವುದಕ್ಕಾಗಿ ಅಥವಾ ನೋವುಂಟು ಮಾಡುವುದಕ್ಕಾಗಿ ಅಲ್ಲ. ವ್ಯತಿರಿಕ್ತವಾಗಿ, ಶಾಂತಿಯನ್ನು ಸೃಷ್ಟಿಸುವುದಕ್ಕಾಗಿ ಮತ್ತು ದುರ್ಬಲರನ್ನು ರಕ್ಷಿಸುವುದಕ್ಕಾಗಿ ಎಂದು ಅವರು ಹೇಳಿದರು.
ವಿಶ್ವದ ರಾಷ್ಟ್ರಗಳು ತಮ್ಮನ್ನು ಬಲಾಢ್ಯರೆಂದು ಸ್ಥಾಪಿಸಿಕೊಳ್ಳಲು ಯುದ್ಧದಲ್ಲಿದ್ದಾಗ, ನಾವು ಯುದ್ಧದಲ್ಲಿ ಗಾಯಗೊಂಡವರಿಗೆ ಮುಲಾಮುವನ್ನು ಹಚ್ಚಿದೆವು. ನಮ್ಮ ಋಷಿಗಳು ನಿಜವಾಗಿಯೂ ಸಮಾಜಕ್ಕೆ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಸನಾತನ ಧರ್ಮವು ಹಿಂದೂ ರಾಷ್ಟ್ರ ಮತ್ತು ಹಿಂದೂ ಸಂಪ್ರದಾಯವಾಗಿದೆ. ಹಾಗಾಗಿಯೇ ಮುಂದಿನ ದಿನಗಳಲ್ಲಿ ಭಾರತ ಸೂಪರ್ ಪವರ್ ಆಗಲಿದೆ. ಆದರೆ, ಅದಕ್ಕೆ ಶಕ್ತಿಯಿಲ್ಲದೆ ಸಾಧ್ಯವಿಲ್ಲ ಎಂದರು.