ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಸಿದ್ದರಾಮಯ್ಯ Archives » Page 3 of 13 » Dynamic Leader
November 24, 2024
Home Posts tagged ಸಿದ್ದರಾಮಯ್ಯ (Page 3)
ರಾಜ್ಯ

ಬೆಂಗಳೂರು: “ಸರಣಿ ಭ್ರಷ್ಟಾಚಾರದ ಸರದಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕರ್ಮಕಾಂಡ ಅಗೆದಷ್ಟು ಆಳವಾಗಿದೆ; ಬಗೆದಷ್ಟು ಹೊರಬರುತ್ತಿದೆ” ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

“ಸಹಕಾರ ಇಲಾಖೆಯ ಅಪೆಕ್ಸ್ ಬ್ಯಾಂಕ್ ಗಳಲ್ಲಿ ಬಹುಕೋಟಿ ರೂಪಾಯಿ ಮೊತ್ತದ ಬೃಹತ್ ಹಗರಣ ಬೆಳಕಿಗೆ ಬಂದಿದ್ದು, ಹಗರಣದ ತನಿಖೆ ನಡೆಸುವಂತೆ ಮಾನ್ಯ ಹೈಕೋರ್ಟ್ ತಾಕೀತು ಮಾಡಿದೆ” ಎಂದು ಹೇಳಿರುವ ಆರ್.ಅಶೋಕ್,

“ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ತಮ್ಮ ಸರ್ಕಾರದಲ್ಲಿ ಹಣಗರಣವಿಲ್ಲದ ಇಲಾಖೆ ಇಲ್ಲ ಎಂಬ ನಾಚಿಕೆಗೇಡು ಪರಿಸ್ಥಿತಿ ಇದೆ. ಇನ್ನಾದರೂ ರಾಜೀನಾಮೆ ಕೊಟ್ಟು ಕರ್ನಾಟಕದ ಮರ್ಯಾದೆ ಉಳಿಸಿ” ಎಂದು ಕಿಡಿಕಾರಿದ್ದಾರೆ.

ರಾಜ್ಯ

ಬೆಂಗಳೂರು: ಇಂದು ಮಧ್ಯಾಹ್ನ 3 ಗಂಟೆಗೆ ಸುಮನಹಳ್ಳಿ ಸರ್ಕಲ್ ಸಮೀಪದ ನಿರಾಶ್ರಿತರ ಪರಿಹಾರ ಕೇಂದ್ರದ ಬಳಿ ನೂತನವಾಗಿ ನಿರ್ಮಿಸಿದ ಡಾ.ಬಾಬು ಜಗಜೀವನ ರಾಮ್ ಭವನ ಹಾಗೂ ಸಂಶೋಧನಾ ಸಂಸ್ಥೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.

ಈ ಉದ್ಘಾಟನಾ ಸಮಾರಂಭಕ್ಕೆ “ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ, ನಾವು ನೀವು ಎಲ್ಲರೂ ಜೊತೆಗೂಡಿ ಹಸಿರು ಕ್ರಾಂತಿಯ ಹರಿಕಾರ, ಕಾರ್ಮಿಕ ವರ್ಗದ ಹಿತಚಿಂತಕ, ರಾಷ್ಟ್ರದ ಹೆಮ್ಮೆಯ ಉಪಪ್ರಧಾನಿಯಾಗಿದ್ದ ಬಾಬು ಜಗಜೀವನ ರಾಮ್ ಅವರನ್ನು ಈ ಮೂಲಕ ಸ್ಮರಿಸಿ, ಗೌರವಿಸೋಣ” ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಆಹ್ವಾನ ನೀಡಿದ್ದಾರೆ.

ಬೆಳಿಗ್ಗೆ 11 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭವನದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಉಪಸ್ಥಿತರಿರುತ್ತಾರೆ. ಲೋಕಸಭೆಯ ಮಾಜಿ ಸ್ಪೀಕರ್ ಶ್ರೀಮತಿ ಮೀರಾಕುಮಾರ್ ಅವರು ಗೌರವಾನ್ವಿತ ಆಹ್ವಾನಿತರಾಗಿ ಭಾಗವಹಿಸಲಿರುವ ಈ ಕಾರ್ಯಕ್ರಮಕ್ಕೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ರಾಜ್ಯ

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಹಿರಿಯ ಪತ್ರಕರ್ತೆ ಆಯೇಷಾ ಖಾನಂ ಅವರನ್ನು ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ಹಿರಿಯ ಪತ್ರಕರ್ತೆ ಆಯೇಷಾ ಖಾನಂ ದಿ ಏಷಿಯನ್​ ಏಜ್​, ಸ್ಟಾರ್​ ನ್ಯೂಸ್​, ಆಜ್​ ತಕ್​, ದೂರದರ್ಶನ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ.

ಇವತ್ತಿನವರೆಗೂ ಮಾಧ್ಯಮ ಅಕಾಡೆಮಿಗೆ ಅಲ್ಪಸಂಖ್ಯಾತ ಸಮುದಾಯದವರನ್ನು ಮತ್ತು ಮಹಿಳೆಯನ್ನು ಯಾವ ಮುಖ್ಯಮಂತ್ರಿಯೂ ನೇಮಿಸಿಲ್ಲ. ಈ ಕೊರತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಗಿಸಿದ್ದಾರೆ. ಆಯೇಷಾ ಅವರು ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯವರು.

ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತ ಸಮುದಾಯದವರನ್ನು ಮತ್ತು ಮಹಿಳೆಯನ್ನು ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ವಿಶೇಷವಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ನಿರಂತರವಾಗಿ ವೃತ್ತಿಪರತೆ ಕಾಪಾಡಿಕೊಂಡು ಬಂದಿರುವ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮಹಿಳಾ ಪ್ರತಿನಿಧಿಯೊಬ್ಬರು ಅಲಂಕರಿಸುತ್ತಿದ್ದಾರೆ.

ಹಾಗೆಯೇ ಜನಪರ ಹೋರಾಟದಿಂದಲೇ ಪತ್ರಿಕೋದ್ಯಮಕ್ಕೆ ಪ್ರವೇಶಿಸಿ ಸಾಮಾಜಿಕ ಕಾಳಜಿಗಳನ್ನಿಟ್ಟುಕೊಂಡು ವೃತ್ತಿಯಲ್ಲಿ ತೊಡಗಿರುವ ಚಿತ್ರದುರ್ಗದ ಅಹೋಬಳಪತಿ ಅವರ ಜೊತೆಗೆ ಬೆಂಗಳೂರಿನ ಪತ್ರಿಕಾ ಛಾಯಾಗ್ರಾಹಕರಾದ ಕೆ.ವೆಂಕಟೇಶ್ ಮತ್ತು ಕೊಪ್ಪಳದ ಹಿರಿಯ ಪತ್ರಕರ್ತರಾದ ಕೆ.ನಿಂಗಜ್ಜ ಮುಂತಾದವರನ್ನು ಅಕಾಡೆಮಿ ಸದಸ್ಯರನ್ನಾಗಿ ನೇಮಿಸಲಾಗಿದೆ.

ದೇಶ

ಬೆಂಗಳೂರು: ಮುಸ್ಲಿಂ ಸಮುದಾಯದ ಆಧ್ಯಾತ್ಮಿಕ ನಾಯಕರು, ಹಿರಿಯರು ಆದ ಸೈಯ್ಯದ್ ಕೂರತ್ ತಂಙಳ್ ಅವರ ನಿಧನದ ಸುದ್ದಿ ನೋವುಂಟುಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸದಾಕಾಲ ಸಮಾಜದ ಹಿತವನ್ನು ಬಯಸುತ್ತಿದ್ದ, ಕೋಮುಸಾಮರಸ್ಯಕ್ಕಾಗಿ ದುಡಿದ ಹಿರಿಯ ಚೇತನದ ಅಗಲಿಕೆ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲ, ಇಡೀ ನಾಡಿಗೆ ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೈಯ್ಯದ್ ಕೂರತ್ ತಂಙಳ್ ಅವರ ಕುಟುಂಬವರ್ಗ ಮತ್ತು ಅನುಯಾಯಿಗಳಿಗೆ ಸಂತಾಪ ಸೂಚಿಸಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂನಲ್ಲಿರುವ ಮನೆಯಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಹೃದಯ ಸ್ತಂಭನದಿಂದ ತಂಙಳ್ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಇಂದು ಅಪರಾಹ್ನ ಉಳ್ಳಾಲ ಸೈಯದ್ ಮದನಿ ದರ್ಗಾ ವಠಾರದಲ್ಲಿ ನಿಗದಿಯಾಗಿದ್ದ ಸೈಯದ್ ಮದನಿ ಶರೀಅತ್ ಕಾಲೇಜು ವಿದ್ಯಾರ್ಥಿಗಳ ನೂತನ ಹಾಸ್ಟೆಲ್ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಬೆಳಗ್ಗೆ ಎಟ್ಟಿಕ್ಕುಳಂನಲ್ಲಿರುವ ಮನೆಯಲ್ಲಿ ಸಿದ್ಧರಾಗುತ್ತಿದ್ದರು ಈ ವೇಳೆ ಹೃದಯ ಸ್ತಂಭನ ಆಗಿ ನಿಧನರಾಗಿದ್ದಾರೆ.

ರಾಜ್ಯ

ಬೆಂಗಳೂರು: ದೇಶದ ಪ್ರತಿಷ್ಠಿತ ಇಂಡಿಯಾ ಜಸ್ಟೀಸ್‌ ರಿಪೋರ್ಟ್‌ ನವರು ನಡೆಸಿದ ಸಮೀಕ್ಷಾ ವರದಿಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಇಡೀ ದೇಶದಲ್ಲೇ ನ್ಯಾಯ ನೀಡಿಕೆ (Justice Delivery) ಯಲ್ಲಿ ಪ್ರಥಮ‌ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಒಟ್ಟು 10 ಅಂಕಗಳನ್ನು ಆಧಾರವಾಗಿಟ್ಟು ನಡೆಸಿದ ಈ ವೈಜ್ಞಾನಿಕ ಸಮೀಕ್ಷೆಯಲ್ಲಿ ಕರ್ನಾಟಕ ಪೊಲೀಸರು 6.38 ಅಂಕಗಳಿಕೆಯ ಮೂಲಕ ಪ್ರಥಮ‌ ಸ್ಥಾನದಲ್ಲಿರುವುದು ಗಮನಾರ್ಹ.

ಅಪರಾಧ ಕೃತ್ಯಗಳನ್ನು ಪತ್ತೆಹಚ್ಚುವುದು, ಅಪರಾಧಿಗಳ ಬಂಧನ, ಕೃತ್ಯದ ಸಾಕ್ಷ್ಯ ಸಂಗ್ರಹಣೆ ಹೀಗೆ ನ್ಯಾಯಾಲಯದಿಂದ ಪ್ರಕರಣದ ತೀರ್ಪು ಬಂದು ಸಂತ್ರಸ್ತರಿಗೆ ನ್ಯಾಯ ದೊರಕುವ ವರೆಗೆ ವಿವಿಧ ಹಂತಗಳಲ್ಲಿ ಪೊಲೀಸ್‌ ಇಲಾಖೆಯು ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದಿದ್ದಾರೆ.

ಈ ಎಲ್ಲಾ ಕಾರ್ಯಗಳನ್ನು ನಾಡಿನ ಪೊಲೀಸ್‌ ಇಲಾಖೆ ದೇಶದ ಇತರೆ ಎಲ್ಲಾ ರಾಜ್ಯಗಳ ಪೊಲೀಸರಿಗಿಂತ ಅತ್ಯಂತ ದಕ್ಷವಾಗಿ, ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ ಎಂಬುದು ಶ್ಲಾಘನೀಯ. ನಾಗರಿಕರ ಪ್ರಾಣ ರಕ್ಷಣೆ, ಸಮಾಜಘಾತುಕರ ಹೆಡೆಮುರಿ ಕಟ್ಟಲು ಹಗಲಿರುಳೆನ್ನದೆ ಶ್ರಮಿಸುತ್ತಿರುವ ಕರ್ನಾಟಕ ಪೊಲೀಸ್‌ ಇಲಾಖೆಗೆ ಧನ್ಯವಾದಗಳು ತಿಳಿಸಿದ್ದಾರೆ.

ರಾಜ್ಯ

ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ಸಾಹಿತಿ ಡಾ.ಕಮಲ ಹಂಪನಾ ಅವರ ಪ್ರಾರ್ಥಿವ ಶರೀರದ ದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ‌ನಮನ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

“ಕನ್ನಡದ ಉತ್ತಮ ಸಾಹಿತಿಯನ್ನು ನಾವು ಕಳೆದುಕೊಂಡಿದ್ದೇವೆ. ಕಮಲಾ ಹಂಪನಾ ಅವರನ್ನು ನಾಲ್ಕೈದು ತಿಂಗಳ ಹಿಂದೆ ಭೇಟಿಯಾಗಿದ್ದೆ. ಮಹಿಳಾ ಸಾಹಿತಿಗಳ ಪೈಕಿ ಅತಿ ಹೆಚ್ಚು ಅಂದರೆ 48 ಕೃತಿಗಳನ್ನು ಬರೆದಿದ್ದಾರೆ. ಬೋಧಕರಾಗಿ, ಸಂಶೋಧಕರಾಗಿ, ಸಾಹಿತಿಯಾಗಿ ಕನ್ನಡ ಭಾಷೆಗಾಗಿ ಬಹಳ ಶ್ರಮಿಸಿದ್ದಾರೆ.

ಪ್ರಾಕೃತ ಭಾಷೆಯ ಕುರಿತು ಸಂಶೋಧನೆ ಮಾಡಿದ್ದಾರೆ. ಬೆಂಗಳೂರು, ಮೈಸೂರು, ವಿಜಯನಗರಗಳಲ್ಲಿ ಕನ್ನಡ ಬೋಧಕರಾಗಿ ಕೆಲಸ ಮಾಡಿದ್ದಾರೆ. ನಾಡು ನುಡಿಗೆ ಅಪಾರ ದುಡಿದ ಅವರ ನಿಧನದಿಂದ ಸಾಹಿತ್ಯ ಲೋಕ ಬಡವಾಗಿದೆ.

ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಹಂಪನಾ ಮತ್ತು ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ತೆರಿಗೆ ಹೆಚ್ಚಳದ ಅನಿವಾರ್ಯತೆಯನ್ನು ಹೇಗೆ ಸೃಷ್ಟಿಸಿದೆ? ರಾಜ್ಯದ ಪಾಲಿನ ಹಣವನ್ನು ಕೊಡದೆ ಇರುವುದರಿಂದ ಸೃಷ್ಟಿ ಆಗಿರುವ ಪರಿಸ್ಥಿತಿಯನ್ನು ಮಾಧ್ಯಮಗಳಿಗೆ ವಿವರಿಸಿದರು.

“ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದ ಬಳಿಕವೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ, ದಕ್ಷಿಣ ಭಾರತದ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಇಂಧನ ಬೆಲೆ ಕಡಿಮೆ ಇದೆ. 2015ರ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅರ್ಧಕ್ಕರ್ಧ ಕಡಿಮೆ ಆದಾಗಲೂ ಅದರ ಲಾಭವನ್ನು ದೇಶದ ಜನರಿಗೆ ನೀಡದೆ ಮೋದಿ ಸರ್ಕಾರ ಇಂಧನ ಬೆಲೆಯನ್ನು ನಿರಂತರವಾಗಿ ಏರಿಸುತ್ತಾ ಹೋಗಿದೆ” ಎಂದು ವಿವರಿಸುತ್ತಾ ಹೋದರು.

“ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಹೆಚ್ಚಳದಿಂದ ಸಂಗ್ರಹವಾಗುವ ಅಂದಾಜು 3,000 ಕೋಟಿ ರೂಪಾಯಿಗಳು ರಾಜ್ಯದ ಖಜಾನೆಗೆ ಸಂದಾಯವಾಗುತ್ತದೆ, ಆ ಹಣ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗವಾಗುತ್ತದೆ, ಅದು ನಮ್ಮ ಜೇಬಿಗೆ ಹೋಗುವುದಿಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ರಾಜ್ಯದ ಪ್ರತಿಯೊಂದು ಯೋಜನೆಗಳಲ್ಲಿಯೂ 40% ತೆರಿಗೆ ಹಣ ಬಿಜೆಪಿ ನಾಯಕರ ಜೇಬಿಗೆ ಹೋಗುತ್ತಿತ್ತು.

ಈ ರೀತಿ ಅಂದಾಜು ಒಂದುವರೆ ಲಕ್ಷ ಕೋಟಿ ರೂಪಾಯಿಗಳಷ್ಟು ರಾಜ್ಯದ ಜನರ ಬೆವರಗಳಿಕೆಯ ತೆರಿಗೆ ಹಣವನ್ನು ಬಿಜೆಪಿ ನಾಯಕರು ತಮ್ಮ ಜೇಬಿಗೆ ತುಂಬಿಸಿಕೊಂಡಿದ್ದರು.ಇಂತಹ ಲೂಟಿಕೋರ, ಭ್ರಷ್ಟ, ಜನವಿರೋಧಿ ಬಿಜೆಪಿ ನಾಯಕರಿಗೆ ಜನಕಲ್ಯಾಣಕ್ಕಾಗಿ ಸ್ಪಲ್ಪ ಪ್ರಮಾಣದ ತೆರಿಗೆ ಹೆಚ್ಚಿಸಿದ್ದನ್ನು ಪ್ರಶ್ನಿಸುವ ಅರ್ಹತೆ ಎಲ್ಲಿದೆ?” ಎಂದು ಕಿಡಿಕಾರಿದರು.

“ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 60 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಇಷ್ಟೂ ಹಣ ರಾಜ್ಯದ ಎಲ್ಲಾ ಜಾತಿ-ಸಮುದಾಯಗಳ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೋಗುತ್ತದೆ. ಸದ್ಯದ ಅಲ್ಪ ಪ್ರಮಾಣದ ಡೀಸೆಲ್-ಪೆಟ್ರೋಲ್ ತೆರಿಗೆ ಹೆಚ್ಚಳದಿಂದ ನಮಗೆ ಹೆಚ್ಚುವರಿಯಾಗಿ ಸಂಪನ್ಮೂಲ ಸಂಗ್ರಹ ಆಗುವುದು ಕೇವಲ 3 ಸಾವಿರ ಕೋಟಿ ರೂಪಾಯಿ ಮಾತ್ರ. ಆದರೆ ಗ್ಯಾರಂಟಿಗಳಿಗೆ ನಾವು ಕೊಡುತ್ತಿರುವುದು 60 ಸಾವಿರ ಕೋಟಿ ರೂಪಾಯಿ.

ಹೀಗಾಗಿ ವಿಪಕ್ಷ ನಾಯಕ ಆರ್.ಅಶೋಕ್ ಅವರ ಮಾತುಗಳಿಗೆ ಅರ್ಥವಿಲ್ಲ. ಆರ್.ಅಶೋಕ್ ಗೆ ಇದೆಲ್ಲಾ ಅರ್ಥ ಆಗುವುದೂ ಇಲ್ಲ, ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೂ ಅವರಲ್ಲಿ ಇಲ್ಲ. ಜನರಿಗೆ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಸಂಪನ್ಮೂಲ ಕ್ರೋಢೀಕರಣದ ಉದ್ದೇಶದೊಂದಿಗೆ ಪೆಟ್ರೋಲ್‌, ಡೀಸೆಲ್‌ ಮಾರಾಟ ತೆರಿಗೆಯಲ್ಲಿ 3 ರೂ. ಗಳಷ್ಟು ಹೆಚ್ಚಿಸಲಾಗಿದೆ” ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.

“ಕೇಂದ್ರ ಬಿಜೆಪಿ ಸರ್ಕಾರ ಜಿ.ಎಸ್.ಟಿ. ವ್ಯವಸ್ಥೆ ಜಾರಿಗೊಳಿಸಿದ ನಂತರ ರಾಜ್ಯ ಸರ್ಕಾರಗಳ ಸಂಪನ್ಮೂಲ ಕ್ರೋಢೀಕರಣಕ್ಕೆ ಇರುವ ಅವಕಾಶ ಸೀಮಿತಗೊಂಡಿದೆ. ಕೇಂದ್ರ ಸರ್ಕಾರ ಜಿ.ಎಸ್.ಟಿ. ಆದಾಯ ತೆರಿಗೆ, ಕೇಂದ್ರ ಅಬಕಾರಿ ಸುಂಕ ಮೊದಲಾದ ಮೂಲಗಳಿಂದ ತೆರಿಗೆ ಸಂಗ್ರಹಿಸುತ್ತದೆ. ರಾಜ್ಯ ಸರ್ಕಾರಕ್ಕೆ ಕೇವಲ ನೋಂದಣಿ ಮತ್ತು ಮುದ್ರಾಂಕ ಶುಲ್ಕ, ವಾಹನ ತೆರಿಗೆ, ಪೆಟ್ರೋಲ್‌, ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಹಾಗೂ ಮದ್ಯದ ಮೇಲಿನ ಮಾರಾಟ ತೆರಿಗೆ ಹೊರತು ಪಡಿಸಿ ಯಾವುದೇ ಆದಾಯ ಮೂಲಗಳು ಉಳಿದಿಲ್ಲ.

ಈ ಹಿನ್ನೆಲೆಯಲ್ಲಿ ಇತರ ರಾಜ್ಯಗಳ ಪೆಟ್ರೋಲ್‌ ಡೀಸೆಲ್‌ ಬೆಲೆಗೆ ಹೋಲಿಸಿದರೆ ರಾಜ್ಯದ ದರಗಳು ಕಡಿಮೆ ಇರುವುದು ಗಮನಿಸಿ, ರಾಜ್ಯ ಸರ್ಕಾರ ಅಲ್ಪ ಪ್ರಮಾಣದ ತೆರಿಗೆ ಹೆಚ್ಚಳ ಮಾಡಿದೆ. ಅಬಕಾರಿ ಸುಂಕ ಏರಿಕೆ ಬಗ್ಗೆ ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಪ್ರತಿಭಟನೆ ಮಾಡುವ ನೈತಿಕ ಹಕ್ಕು ಎಲ್ಲಿದೆ?

ಡಾ. ಮನಮೋಹನ್‌ ಸಿಂಗ್‌ ಅವರ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 113 ಡಾಲರ್‌ ಇತ್ತು. 2015 ರಲ್ಲಿ ಈ ಬೆಲೆ ಅರ್ಧಕ್ಕರ್ಧ ಕಡಿಮೆಯಾದರೂ, ಬೆಲೆ ಇಳಿಸಿ, ಜನರ ಹೊರೆ ಕಡಿಮೆ ಮಾಡುವ ಕಾಳಜಿಯನ್ನು ನರೇಂದ್ರ ಮೋದಿ ಅವರು ತೋರಲಿಲ್ಲ. ಬಿಜೆಪಿಯವರು ಯಾರ ವಿರುದ್ಧ ಹೋರಾಡಬೇಕು?” ಎಂದು ಪ್ರಶ್ನಿಸಿದರು.

“ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಸರ್ಕಾರದಿಂದ ನಿರಂತರ ಅನ್ಯಾಯವಾಗುತ್ತ ಬಂದಿದ್ದರೂ, ಇಲ್ಲಿನ ಬಿಜೆಪಿಯವರು ದನಿ ಎತ್ತಿಲ್ಲ? ತೆರಿಗೆ ಅನ್ಯಾಯವಾದಾಗ ಸಂಸದರು ಈ ವಿಷಯದ ಕುರಿತು ಮಾತನಾಡಿಲ್ಲ. ರಾಜ್ಯಕ್ಕೆ 15ನೇ ಹಣಕಾಸು ಆಯೋಗವು ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿದ್ದರೂ ಕೇಂದ್ರ ಸರ್ಕಾರ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಆಯವ್ಯಯದಲ್ಲಿ ನಿರ್ಮಲಾ ಸೀತಾರಮನ್ ಅವರು 5,000 ಕೋಟಿ ರೂ. ಒದಗಿಸುವುದಾಗಿ ಘೋಷಿಸಿದರೂ ಬಿಡಿಗಾಸೂ ನೀಡಿಲ್ಲ. ಈ ವಿಷಯಗಳ ಕುರಿತು ಬಿಜೆಪಿಯವರು ದನಿ ಎತ್ತಿದ್ದಾರೆಯೇ?” ಎಂದು ಕಿಡಿಕಾರಿದರು

“ಬರಪರಿಹಾರ ತೆಗೆದುಕೊಳ್ಳಲು ಸುಪ್ರೀಂ ಕೋರ್ಟಿಗೆ ಹೋಗಬೇಕಾಗಿ ಬಂತು. ಕೋರ್ಟು ಸೂಚನೆ ನೀಡಿದ ನಂತರ 18 ಸಾವಿರ ಕೋಟಿ ಕೇಳಿದರೆ 3,454 ಕೋಟಿ ರೂ. ಪರಿಹಾರ ನೀಡಿದ್ದಾರೆ. ಬಿಜೆಪಿಯವರು ಬಡವರು, ದಲಿತರು, ಜನಸಾಮಾನ್ಯರ ಕಾರ್ಯಕ್ರಮಗಳ ಕಲ್ಯಾಣ ಕಾರ್ಯಕ್ರಮಗಳಿಗೆ ವಿರುದ್ಧವಿದ್ದಾರೆ. ಬಸ್‌ನಲ್ಲಿ ಉಚಿತ ಪ್ರಯಾಣ, ತಿಂಗಳಿಗೆ ಎರಡು ಸಾವಿರ ನೀಡಿದರೆ ಅವರ ಆರ್ಥಿಕ ಶಕ್ತಿ ಹೆಚ್ಚಾಗುವುದಿಲ್ಲವೇ? ಉಚಿತ ವಿದ್ಯುತ್‌ ನೀಡಿದರೆ ಅವರಿಗೆ ಉಳಿತಾಯವಾಗುವುದಿಲ್ಲವೇ? ಹೆಚ್ಚುವರಿ ಅಕ್ಕಿ ಕೇಳಿದರೆ, ಕೊಟ್ಟಿಲ್ಲ. ಬಿಜೆಪಿ ಪಕ್ಷದಲ್ಲಿ ಈ ಬಗ್ಗೆ ಯಾರಾದರೂ ಮಾತಾಡಿದರೇ?” ಎಂದು ಖಾರವಾಗಿ ನುಡಿದರು.

“ಈ ಬೆಲೆ ಏರಿಕೆಯಿಂದ ಸುಮಾರು 3,000 ಕೋಟಿ ರೂ. ಸಂಪನ್ಮೂಲ ದೊರೆಯಲಿದೆ. ಗ್ಯಾರಂಟಿ ಯೋಜನೆಗಳಿಗೆ 60,000 ಕೋಟಿ ರೂ. ಅಗತ್ಯವಿದೆ. ಸರ್ಕಾರ ಪಾಪರ್‌ ಆಗಿದೆ ಎಂದು ವಿರೋಧ ಪಕ್ಷದ ನಾಯಕರು ಹೇಗೆ ಹೇಳುತ್ತಾರೆ? ನಾವು ಯಾರದ್ದಾದರೂ ಸಂಬಳ ನಿಲ್ಲಿಸಿದ್ದೇವೆಯೇ? ಆಯವ್ಯಯದಲ್ಲಿ ಘೋಷಿಸಿದ ಕಾರ್ಯಕ್ರಮಗಳಿಗೆ ಅನುದಾನ ಒದಗಿಸದೇ ಸ್ಥಗಿತ ಗೊಳಿಸಿದ್ದೇವೆಯೇ?

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ ಪೆಟ್ರೋಲ್‌ ಮೇಲೆ ಕೇಂದ್ರ ಅಬಕಾರಿ ಸುಂಕ 9.48 ರೂಗಳಷ್ಟಿತ್ತು. 2020ರ ಮೇ ನಲ್ಲಿ 32.98 ರೂ.ಗಳಿಗೆ ಹೆಚ್ಚಾಗಿದೆ. ಈ ಮಟ್ಟದ ಏರಿಕೆ ವಿರುದ್ಧ ಬಿಜೆಪಿಯವರಾಗಲೀ, ಆರ್.ಅಶೋಕ್ ಆಗಲಿ ಬಾಯಿ ಬಿಟ್ಟಿಲ್ಲ. ಅವರಿಗೆ ಇದು ಅರ್ಥ ಆಗಿದೆಯೋ? ಇಲ್ಲವೋ? ಎಂಬುದೇ ನನಗಿರುವ ಅನುಮಾನ” ವ್ಯಂಗ್ಯವಾಡಿದರು.

ರಾಜ್ಯ

ಬೆಂಗಳೂರು: ಕರ್ನಾಟಕ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಅದರಂತೆ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಕ್ರಮವಾಗಿ ಶೇ.29.84 ಮತ್ತು ಶೇ.18.44ಕ್ಕೆ ಪರಿಷ್ಕರಿಸಿದೆ.

ಈ ತೆರಿಗೆ ಹೆಚ್ಚಳದಿಂದಾಗಿ ಪೆಟ್ರೋಲ್ ಬೆಲೆ ರೂ.3, ಡೀಸೆಲ್ ಬೆಲೆ ರೂ.3.50ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿರುವ ಬಿಜೆಪಿ, ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕೆ ಎಂದು ಒತ್ತಾಯಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಮ್ಮ ‘ಎಕ್ಸ್’ ಜಾಲತಾಣದಲ್ಲಿ ಪ್ರಕಟಿಸಿರುವ ಪ್ರಕಟಣೆಯಲ್ಲಿ, “ಕಾಂಗ್ರೆಸ್ಸಿಗರೇ, ರಾಜ್ಯದ ಜನತೆ ನಿಮ್ಮ ಬಳಿ ಯಾವ ಭಾಗ್ಯವನ್ನೂ ಬೇಡಿರಲಿಲ್ಲ; ನೀವು ಯಾವ ಭಾಗ್ಯವನ್ನು ಕೊಡದಿದ್ದರೂ ಪರವಾಗಿಲ್ಲ. ಬೆಲೆ ಏರಿಕೆಯ ದೌರ್ಭಾಗ್ಯವನ್ನು ಮಾತ್ರ ನಮ್ಮ ಮೇಲೆ ಹೇರಬೇಡಿ. ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಕ್ಕೇರುವ ಒಂದೇ ಕಾರಣಕ್ಕಾಗಿ ಪಂಚ ಭಾಗ್ಯದ ಮೋಡಿ ಮಾಡಿ, ನೀವು ರಾಜ್ಯದ ಮತದಾರರನ್ನು ದಿಕ್ಕು ತಪ್ಪಿಸಿದ್ದು ನಾಡಿನ ದೌರ್ಭಾಗ್ಯವಲ್ಲದೇ ಬೇರೇನೂ ಅಲ್ಲ” ಎಂದು ಆಕ್ರೋಶ ವ್ಯಕ್ತಪ್ಡಿಸಿದ್ದಾರೆ.

“ದಿನ ಬಳಕೆ ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಸರಣೀ ರೂಪದಲ್ಲಿ ಏರಿಸುತ್ತಲೇ ಇದ್ದೀರಿ, ಇದೀಗ ಪೆಟ್ರೋಲ್ ಬೆಲೆ ರೂ.3, ಡೀಸೆಲ್ ಬೆಲೆ ರೂ.3.50ಕ್ಕೆ ದರಗಳನ್ನು ಏರಿಸಿ ಜನಸಾಮಾನ್ಯರ ಕೈ ಸುಟ್ಟಿದ್ದೀರಿ. ಈ ಬೆಲೆ ಏರಿಕೆಯ ಪ್ರತಿಕೂಲ ಪರಿಣಾಮ ಸಹಜವಾಗಿಯೇ ಸರಕು ಸಾಗಾಣಿಕೆ, ಹಾಗೂ ಸಾರಿಗೆ ದರಗಳೂ ವಿಪರೀತ ಹೆಚ್ಚಳ ಕಂಡು ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಯೂ ಏರಲಿದೆ” ಎಂದು ಕಿಡಿಕಾರಿದ್ದಾರೆ.

“ಬರಿದಾಗಿರುವ ನಿಮ್ಮ ಖಜಾನೆ ತುಂಬಿಸಲು ಜನಸಾಮಾನ್ಯರು ಹಾಗೂ ಕಡು ಬಡವರ ಜೇಬು ಖಾಲಿ ಮಾಡಲು ಹೊರಟಿರುವ ನಿಮ್ಮ ಜನ ವಿರೋಧಿ ನೀತಿ ನಿರ್ಧಾರಗಳನ್ನು ಬಿಜೆಪಿ ಪ್ರಬಲವಾಗಿ ಖಂಡಿಸಿ ಪ್ರತಿಭಟಿಸುತ್ತದೆ. ಈ ಕೂಡಲೇ ಪೆಟ್ರೋಲ್ ಡೀಸೆಲ್ ದರ ಏರಿಕೆ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಳ್ಳದಿದ್ದರೆ ಜನಾಕ್ರೋಶವನ್ನು ಪ್ರತಿನಿಧಿಸಿ ಜಿಜೆಪಿ ಬೀದಿಗಿಳಿದು ಹೋರಾಡಲಿದೆ” ಎಂದು ಹೇಳಿದ್ದಾರೆ.

“ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಮುಖ್ಯಮಂತ್ರಿಗಳು ಹಾಗೂ ಸರಕಾರ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ, ಸೋಮವಾರ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿಭಟನೆ ನಡೆಸುತ್ತೇವೆ. ಹಾಗಾಗಿ ಇಂಧನ ಬೆಲೆ ಏರಿಕೆ ನಿರ್ಧಾರವನ್ನು ಈ ಕೂಡಲೇ ಕೈಬಿಡಬೇಕು” ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯ

40% ಕಮಿಷನ್ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಾಹುಲ್ ಗಾಂಧಿ ಇಂದು ಬೆಂಗಳೂರು ನ್ಯಾಯಾಲಯದಲ್ಲಿ ಹಾಜರಾದರು.

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಕಳೆದ ವರ್ಷ (2023) ನಡೆದಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಆರೋಪಿಸಿದರು. ಇದು ಅವರ ಪ್ರಚಾರದ ಮುಖ್ಯ ವಿಷಯವಾಗಿತ್ತು. ಈ ಆರೋಪ ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತು.

ಈ ಪ್ರಕರಣದ ತನಿಖೆ ಕಳೆದ 1 ರಂದು ನಡೆದಿತ್ತು. ಅಂದು ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಕೋರ್ಟ್ ಆದೇಶಿಸಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಾತ್ರ ಖುದ್ದು ಹಾಜರಾಗಿದ್ದರು. ಅವರಿಗೆ ಜಾಮೀನು ನೀಡಲಾಯಿತು.

ರಾಹುಲ್ ಗಾಂಧಿ ಪರ ವಕೀಲರು ಖುದ್ದು ಹಾಜರಾಗಲು ಕಾಲಾವಕಾಶ ಕೋರಿದ್ದರು. ಇದನ್ನು ಮಾನ್ಯ ಮಾಡಿದ ನ್ಯಾಯಾಲಯ ಜೂನ್ 7 ರಂದು (ಇಂದು) ರಾಹುಲ್ ಗಾಂಧಿ ಖುದ್ದು ಹಾಜರಾಗುವಂತೆ ಆದೇಶಿಸಿತು.

ಈ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ಇಂದು ಬೆಂಗಳೂರು ನ್ಯಾಯಾಲಯಕ್ಕೆ ಖುದ್ದು ಹಾಜರಾದರು. ಬಳಿಕ ಅವರಿಗೆ ಜಾಮೀನು ನೀಡಲಾಯಿತು. ಇದಕ್ಕಾಗಿ ಇಂದು ಬೆಳಗ್ಗೆ ದೆಹಲಿಯಿಂದ ಖಾಸಗಿ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದರು ಎಂಬುದು ಗಮನಾರ್ಹ.

ರಾಜ್ಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ದೇವರಾಜ ಅರಸುರವರ 42ನೇ ಪುಣ್ಯಸ್ಮರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ದೇವರಾಜ ಅರಸು ಅವರು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿ ಈ ರಾಜ್ಯದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರು. ಅವರ ಹಾದಿಯಲ್ಲಿಯೇ ನಡೆಯುವ ಪ್ರಯತ್ನವನ್ನು ನಮ್ಮ ಸರ್ಕಾರವೂ ಮಾಡುತ್ತಿದೆ. ಅದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ಭಾವಿಸಿದ್ದೇನೆ” ಎಂದು ಹೇಳಿದರು.

“ದೇವರಾಜ ಅರಸು ಅವರು ಒಬ್ಬ ಜಾತ್ಯಾತೀತ ವ್ಯಕ್ತಿ, ಸಾಮಾಜಿಕ ನ್ಯಾಯದ ಹರಿಕಾರ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಸಮಾಜದ ತಳವರ್ಗದ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮೇಲಕ್ಕೆತ್ತುವ, ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದರು. ಹಾವನೂರು ಆಯೋಗವನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತಂದರು. ಮೈಸೂರು ರಾಜ್ಯವು ಕರ್ನಾಟಕವಾಗಿ ಏಕೀಕರಣಗೊಂಡ ನಂತರ 1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದರು. ಈ ವರ್ಷ ಅದರ 50ನೇ ವರ್ಷಾಚರಣೆಯನ್ನು ರಾಜ್ಯದಲ್ಲಿ ಆಚರಿಸಲಾಗುತ್ತಿದೆ” ಎಂದರು.

“ದೇವರಾಜ ಅರಸು ಅವರು ಬಡವರ, ಶೋಷಿತರ, ಸಾಮಾಜಿಕ ನ್ಯಾಯದ ಪರವಾಗಿದ್ದ ನಾಯಕ. ಅದಕ್ಕೇ ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತೇವೆ. ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಉಳುವವನೇ ಭೂಮಿಯ ಒಡೆಯ ಎಂದು ಘೋಷಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ದೇವರಾಜ ಅರಸು ಅವರು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಎಂಟು ವರ್ಷಗಳ ಕಾಲ ಸಾಮಾಜಿಕ ನ್ಯಾಯದ ಅಡಿಪಾಯ ಹಾಕಿದರು. ಅದರ ಬುನಾದಿಯ ಮೇಲೆ ಸಾಮಾಜಿಕ ನ್ಯಾಯ ಕರ್ನಾಟಕದಲ್ಲಿ ಮುಂದುವರೆದಿದೆ. ಕಾಂಗ್ರೆಸ್ ಪಕ್ಷ ಮಾತ್ರ ಸಾಮಾಜಿಕ ನ್ಯಾಯ ಪಾಲಿಸುತ್ತಿದೆ. ಇತರೆ ಪಕ್ಷಗಳಿಗೆ ಸಾಮಾಜಿಕ ನ್ಯಾಯದ ಕುರಿತು ಬದ್ಧತೆ ಇಲ್ಲ. ಬದಲಿಗೆ ಅದರ ವಿರುಧ್ಧವಾಗಿವೆ” ಎಂದು ಹೇಳಿದರು.