ಭಾರತದಲ್ಲಿ 2023ರ ಹೊತ್ತಿಗೆ ನ್ಯುಮೋನಿಯಾ, ಪೋಲಿಯೊ ಮತ್ತು ದಡಾರದಂತಹ 11 ಮಾರಕ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸುವ ಪ್ರಮುಖ ಲಸಿಕೆಗಳಲ್ಲಿ, ಒಂದೇ ಒಂದು ಲಸಿಕೆಯನ್ನೂ ಪಡೆಯದ 14.4 ಮಕ್ಕಳು ಇದ್ದಾರೆ ಎಂದು ಲ್ಯಾನ್ಸೆಟ್ ಅಧ್ಯಯನವು ಬಹಿರಂಗಪಡಿಸಿದೆ. 204 ದೇಶಗಳಲ್ಲಿ ನಡೆಸಲಾದ ಅಧ್ಯಯನದಲ್ಲಿ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲೇ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಕೊರೊನಾ ಅವಧಿಯ ನಂತರವೇ ಈ ಪರಿಸ್ಥಿತಿ ಮುಂದುವರೆದಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.
ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರಪಂಚದಾದ್ಯಂತ ಲಸಿಕೆ ಹಾಕಿಸಿಕೊಳ್ಳದ 15.7 ಕೋಟಿ ಮಕ್ಕಳಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಕಳು ಕೇವಲ ಎಂಟು ದೇಶಗಳಲ್ಲಿ ವಾಸಿಸುತ್ತಿದ್ದಾರೆ, ಅವರಲ್ಲಿ ಹೆಚ್ಚಿನವರು ಉಪ-ಸಹಾರನ್ ಆಫ್ರಿಕಾದಲ್ಲಿ (53%) ಮತ್ತು ದಕ್ಷಿಣ ಏಷ್ಯಾದಲ್ಲಿ (13%) ಇದ್ದಾರೆ.
ನೈಜೀರಿಯಾದಲ್ಲಿ 24.8 ಲಕ್ಷ ಮಕ್ಕಳು ಮತ್ತು ಭಾರತದಲ್ಲಿ 14.4 ಲಕ್ಷ ಮಕ್ಕಳು ಒಂದೇ ಒಂದು ಲಸಿಕೆಯನ್ನು ಪಡೆದಿಲ್ಲ ಎಂದು ವರದಿ ಹೇಳಿದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (8,82,000), ಇಥಿಯೋಪಿಯಾ (7,82,000), ಸೊಮಾಲಿಯಾ (7,10,000), ಸುಡಾನ್ (6,27,000), ಇಂಡೋನೇಷ್ಯಾ (5,38,000), ಮತ್ತು ಬ್ರೆಜಿಲ್ (4,52,000) ನಂತರದ ಸ್ಥಾನಗಳಲ್ಲಿ ಅತಿ ಹೆಚ್ಚು ಲಸಿಕೆ ಪಡೆಯದ ಮಕ್ಕಳನ್ನು ಹೊಂದಿರುವ ದೇಶಗಳಾಗಿವೆ.
ವಿಶ್ವ ಆರೋಗ್ಯ ಸಂಸ್ಥೆಯು ಪ್ರಪಂಚದಾದ್ಯಂತದ ಎಲ್ಲಾ ಮಕ್ಕಳಿಗೆ ಹದಿಮೂರು ಲಸಿಕೆಗಳ ಸರಣಿಯನ್ನು ಶಿಫಾರಸು ಮಾಡುತ್ತದೆ. ಇವು 1) ಪೋಲಿಯೊ, 2) ಡಿಫ್ತೀರಿಯಾ, 3) ಟೆಟನಸ್, 4) ಪೆರ್ಟುಸಿಸ್, 5) ದಡಾರ, 6) ಮಂಪ್ಸ್, 7) ರುಬೆಲ್ಲಾ, 8) ಕ್ಷಯ, 9) ಹೆಪಟೈಟಿಸ್ ಬಿ, 10) ಹಿಮೋಫಿಲಸ್ ಇನ್ಫ್ಲುಯೆಂಜಾ ಟೈಪ್ ಬಿ (Hib), 11) ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ, 12) ರೋಟ ವೈರಸ್ ಮತ್ತು 13) ವೆರಿಸೆಲ್ಲಾ ಇವುಗಳಿಗೆ ಲಸಿಕೆಗಳಾಗಿವೆ.