ಬಿಜೆಪಿ ನಾಯಕನ ಕೈಯಲ್ಲಿ 'ರಫೇಲ್' ಕೈ ಗಡಿಯಾರ!  » Dynamic Leader
October 22, 2024
ದೇಶ

ಬಿಜೆಪಿ ನಾಯಕನ ಕೈಯಲ್ಲಿ ‘ರಫೇಲ್’ ಕೈ ಗಡಿಯಾರ! 

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೈಯಲ್ಲಿ ಕಟ್ಟಿರುವ ಸುಮಾರು 5 ಲಕ್ಷ ಬೆಲೆ ಬಾಳುವ ರಫೇಲ್ ಕೈ ಗಡಿಯಾರದ ವಿಚಾರವೇ ಈಗ ತಮಿಳುನಾಡಿಲ್ಲಿ ಟ್ರೆಂಡಿಂಗ್ ನ್ಯೂಸ್.

ತಮಿಳುನಾಡು ಇಂಧನ ಸಚಿವ ಸೆಂದಿಲ್ ಬಾಲಾಜಿ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ, ‘ಫ್ರೆಂಚ್ ಕಂಪನಿಯ ರಫೇಲ್ ವಾಚ್ ಹೊಂದಿರುವ ಅಣ್ಣಾಮಲೈ, ಖರೀದಿಯ ರಸೀದಿಯನ್ನು  ಒಂದು ಗಂಟೆಯ ಒಳಗೆ ಪ್ರಕಟಿಸಿದರೆ, ಸಾಮಾನ್ಯ ಜನರು ಸಹ ಅದನ್ನು ಖರೀದಿಸಿ ಆನಂದಿಸಬಹುದು. ಮತ್ತು ಕೇವಲ 4 ಕುರಿಮರಿಗಳನ್ನು ಹೊಂದಿರುವುದಾಗಿ ಹೇಳಿಕೊಳ್ಳುವ ಅಣ್ಣಾಮಲೈ, 5 ಲಕ್ಷಕ್ಕೂ ಹೆಚ್ಚು ಬೆಲೆಯ ದುಬಾರಿ ರಫೇಲ್ ವಾಚನ್ನು ಹೊಂದಿದ್ದಾರೆ ಎಂದು ಟೀಕಿಸಿದ್ದರು.

ಇದಕ್ಕೆ ಕೆಂಡಾಮಂಡಲವಾದ ಅಣ್ಣಾಮಲೈ ‘ನಾನು ಬಿಜೆಪಿ ಅಧ್ಯಕ್ಷನಾಗುವ ಮೊದಲೇ 2021 ಮೇ ತಿಂಗಳಲ್ಲಿ ರಫೇಲ್ ವಾಚನ್ನು ಖರೀದಿ ಮಾಡಿದ್ದೆ. ಅದರ ರಸೀದಿ, ಆದಾಯ ತೆರಿಗೆ ರಿಟರ್ನ್ಸ್, 10 ವರ್ಷಗಳು  ಬ್ಯಾಂಕಿನಲ್ಲಿ ನಡೆಸಿದ ಹಣಕಾಸಿನ ವ್ಯವಹಾರ, ಐಪಿಎಸ್ ಕಾಲದಲ್ಲಿ ಸಂಪಾದಿಸಿದ ಹಣ, ಮುಂತಾದ ಎಲ್ಲಾ ವಿವರಗಳನ್ನು ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ರಾಜ್ಯಾದ್ಯಂತ ನಡೆಯಲಿರುವ ಪಾದಯಾತ್ರೆಯ ಮೊದಲ ದಿನವೇ ಪ್ರಕಟಿಸುತ್ತೇನೆ’ ಎಂದು ಹೇಳಿದ ಅಣ್ಣಾಮಲೈ, ‘ಅದೇ ರೀತಿ ಡಿಎಂಕೆ ಪಕ್ಷದ ಆಸ್ತಿ ವಿವರಗಳನ್ನು ಪ್ರಕಟಿಸಲು ಅವರು ಸಿದ್ಧರಿದ್ದಾಯೇ’ ಎಂದೂ ಪ್ರಶ್ನೆ ಮಾಡಿದರು. ‘ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಅವರ ಕುಟುಂಬ ವರ್ಗದವರು, ಸಚಿವರುಗಳು, ಅವರ ಸಂಬಂಧಿಗಳು, ಅವರ ಬೇನಾಮಿಗಳು ಮಾಡಿರುವ ಭ್ರಷ್ಟಾಚಾರ ಎಲ್ಲವನ್ನೂ ಒಂದೊಂದಾಗಿ ಬಯಲು ಮಾಡುತ್ತೇನೆ’ ಎಂದೂ ಅಣ್ಣಾಮಲೈ ಗುಡುಗಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ಸೆಂದಿಲ್ ಬಾಲಾಜಿ, ‘ನಾವು ನಿಮ್ಮಲ್ಲಿ ಕೇಳಿದ್ದು ಬರೀ ಬಿಲ್ ಮಾತ್ರ‌. ಬಿಲ್ ಇದೆ ಅಥವಾ ಇಲ್ಲ ಎಂಬುದೇ ಇದಕ್ಕೆ ಸರಿಯಾದ ಉತ್ತರವಾಗಿರುತ್ತದೆ. ಚುನಾವಣೆ ನಂತರ ಖರೀದಿ ಮಾಡಿದ್ದು ಎಂದು ಹೇಳಿದರೆ, ಚುನಾವಣಾ ನಾಮಪತ್ರದಲ್ಲಿ ಏಕೆ ಲೆಕ್ಕ ತೋರಿಸಲಿಲ್ಲ ಎಂಬ ಪ್ರಶ್ನೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಕಾರಣಕ್ಕೆ 2021 ಮೇ ತಿಂಗಳಲ್ಲಿ ಖರೀದಿ ಮಾಡಿದ್ದು ಎಂದು ಹೇಳುವ ಸುಮಾರು 5 ಲಕ್ಷ ಬೆಲೆಬಾಳುವ  ರಫೇಲ್ ವಾಚಿಗೆ ನಿಮ್ಮ ಬಳಿ ಬಿಲ್ ಇದೆಯೇ? ಅಥವಾ ತಯಾರಿ ಮಾಡಬೇಕೇ? ಎಂದು ಪ್ರಶ್ನೆಯನ್ನು ಕೇಳಿದ್ದಾರೆ. 

ಅಣ್ಣಾಮಲೈ ಕೈಯಲ್ಲಿ ಇರುವ ಕೈ ಗಡಿಯಾರ ಫ್ರಾನ್ಸ್ ದೇಶದ ರಫೇಲ್ ಕಂಪನಿಯಿಂದ ತಯಾರಿಸಿದ್ದು ಎಂದು ಹೇಳಲಾಗುತ್ತಿದೆ. ರಫೆಲ್ ಕಂಪನಿಯು ಈಗಾಗಲೇ ಯುದ್ಧ ರಾಕೆಟ್ ಗಳನ್ನು ತಯಾರಿಸಿ ನಮ್ಮ ದೇಶಕ್ಕೆ ಸರಬರಾಜು ಮಾಡಿದೆ. ‘ರಾಕೆಟ್ ಗಳ ಬಿಡಿ ಭಾಗಗಳಿಂದ ಈ ರಫೇಲ್ ವಾಚನ್ನು ತಯಾರಿಸಲಾಗಿದೆ. ಬರೀ 500 ವಾಚ್ ಗಳನ್ನಷ್ಟೇ ರಫೇಲ್ ಕಂಪನಿ ತಯಿರಿಸಿತ್ತು ಅದರಲ್ಲಿ ನನ್ನ ಬಳಿಯಿರುವುದು 149ನೇ ವಾಚ್’ ಎಂದು ಅಣ್ಣಾಮಲೈ ಹೇಳಿದ್ದಾರೆ.

ಈ ಹಿಂದೆ ಕರ್ನಾಟಕದಲ್ಲಿ ‘ರಿಯಲ್ ಸಿಂಗಮ್’, ‘ಕರ್ನಾಟಕ ಸಿಂಗಮ್’ ಎಂದೆಲ್ಲ ಅಡ್ಡಹೆಸರಿಟ್ಟು ಕರೆಯುತ್ತಿದ್ದ ಐಪಿಎಸ್ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈಗೆ 2016ರಲ್ಲಿ ಕಾಫಿ ಮಾಲೀಕರೊಬ್ಬರು ಈ ವಾಚನ್ನು ಉಡುಗೊರೆಯಾಗಿ ನೀಡಿದ್ದು ಎಂದು ಹೇಳಲಾಗುತ್ತಿದೆ.

ಈಗ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದವರು ಅಣ್ಣಾಮಲೈಗೆ ‘ಬಿಲ್ ಎಲ್ಲಿ’ ಎಂದು ಕೇಳುವುದನ್ನೇ ಟ್ರೆಂಡ್ ಮಾಡಿಕೊಂಡಿದ್ದಾರೆ.

ತಮಿಳುನಾಡು ಕರೂರಿನ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ‘ಅಣ್ಣಾಮಲೈನ 5 ಲಕ್ಷ ರೂಪಾಯಿಯ ಕೈ ಗಡಿಯಾರ, ಮೋದಿಯ 10 ಲಕ್ಷ ರೂಪಾಯಿಯ ಕೋಟ್ ಇವೆಲ್ಲವೂ ಸರಳ. ಪ್ರಾಮಾಣಿಕತೆಯ ಸಂಕೇತ. ಕುರಿಮರಿ ಮತ್ತು ಚಹಾ ಮಾರಾಟದಿಂದ ಗಳಿಸಿದ ಹಣದಿಂದ ಖರೀದಿಸಿದ್ದು. ಬಿಜೆಪಿಗೂ ಭ್ರಷ್ಟಾಚಾರಕ್ಕೂ ಅವಿನಾಭಾವ ಸಂಬಂಧ. ಅದನ್ನು ಯಾರಿಂದಲೂ ದೂರ ಮಾಡಲು ಸಾಧ್ಯವಿಲ್ಲ. ಬಿಜೆಪಿಯು ತನ್ನ ಭ್ರಷ್ಟಾಚಾರವನ್ನು ಮರೆಮಾಚಲು ದೇಶಭಕ್ತಿ  ಎಂಬ ಮುಖವಾಡವನ್ನು ಧರಿಸುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.

Related Posts