ಗೊಂದಲದ ಗೂಡಾಗಿರುವ ಮಾನ್ವಿಯಲ್ಲಿ ಬಿಜೆಪಿ ಖಾತೆ ತೆರೆಯುವುದೆ...? » Dynamic Leader
November 24, 2024
ರಾಜಕೀಯ

ಗೊಂದಲದ ಗೂಡಾಗಿರುವ ಮಾನ್ವಿಯಲ್ಲಿ ಬಿಜೆಪಿ ಖಾತೆ ತೆರೆಯುವುದೆ…?

ವರದಿ: ರಾಮು ನೀರಮಾನ್ವಿ

ರಾಯಚೂರು: ರಾಯಚೂರು ಜಿಲ್ಲೆ, ಮಾನ್ವಿ ವಿಧಾನ ಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ಚಿತ್ರಣ ಬದಲಾಗುತ್ತಲೇ ಇದೆ. ಕೊನೆಗೆ ಪಕ್ಷೇತರ ಅಭ್ಯರ್ಥಿ ಡಾ.ತನುಶ್ರಿ ಕೂಡಾ ತಮ್ಮ ನಾಮ ಪತ್ರವನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ ತನ್ನ ಪಕ್ಷದಿಂದ ಚುನಾವಣೆಗೆ ನಿಲ್ಲಿಸಲು ಅಭ್ಯರ್ಥಿಗಳನ್ನು ಅಯ್ಕೆ ಮಾಡಿಕೊಂಡ ರೀತಿಯ ಬಗ್ಗೆ ಅನುಮಾನಗಳಿವೆ. ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಯ್ಕೆ ಮಾಡುವಲ್ಲಿ ಗಜ ಪ್ರಸವದಂತಾಗಿದೆ. ಆದರೆ ಕೊನೆ ಗಳಿಗೆಯಲ್ಲಿ ಹಿರಿಯ ಮುಖಂಡ ಮಾಜಿ ಶಾಸಕ ಹಂಪಯ್ಯ ನಾಯಕ ಅವರಿಗೆ ಕಾಂಗ್ರೆಸ್‌ ಟಿಕೆಟ್ ಕೊಟ್ಟಿದೆ. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಕಾರಣ, ಶರಣಯ್ಯ ನಾಯಕರಿಗೆ ಟಿಕೆಟ್ ಕೊಡ್ತಿವಿ ಅಂತ ಹೇಳಿ, ಅವರನ್ನು ಬಿಜೆಪಿಗೆ ರಾಜಿನಾಮೆ ಕೊಡಿಸಿ, ಬಿಜೆಪಿಯಿಂದ ಕಾಂಗ್ರೆಸ್ ಗೆ ಕರೆತಂದರು. ನಂತರ ಹಂಪಯ್ಯ ನಾಯಕ ಅವರಿಗೆ ಟಿಕೆಟ್ ನೀಡಿ, ಶರಣಯ್ಯ ನಾಯಕ ಅವರನ್ನು ಅತಂತ್ರದಲ್ಲಿ ಬಿಟ್ಟಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಹಂಪಯ್ಯ ನಾಯಕ

 ಇದು ಕಾಂಗ್ರೆಸ್‌ನ ಕಥೆಯಾದರೆ, ಬಿಜೆಪಿಯಲ್ಲಿ ಬೇರೆಯದೆ ಆಟ ಇದೆ. ಮೊದಲಿಗೆ ಮಾನಪ್ಪ ನಾಯಕ, ಗಂಗಾಧರ ನಾಯಕ, ಇನ್ನಿತರ ಅಭ್ಯರ್ಥಿಗಳೆಲ್ಲ ಟಿಕೆಟ್‌ಗಾಗಿ ಹರಸಾಹಸ ಮಾಡಿದರೂ ಇವರೆಲ್ಲರನ್ನು ಕಡೆಗಣಿಸಿ ಪಕ್ಕದ ದೇವದುರ್ಗ ತಾಲ್ಲೂಕಿನ ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬಿ.ವಿ.ನಾಯಕರಿಗೆ ಟಿಕೆಟ್ ನೀಡಿದ್ದಾರೆ. ಇದರಿಂದ ಸ್ಥಳೀಯ ಬಿಜೆಪಿ ಮುಖಂಡರಿಗೆ ಇರುಸುಮುರುಸಾಗಿದೆ. ಪ್ರಬಲವಾದ ಗಂಗಾಧರ ನಾಯಕರಿಗೆ ಟಿಕೆಟ್ ಕೈ ತಪ್ಪಿರುವುದು ಅವರ ಅಭಿಮಾನಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ‘ಸ್ಥಳೀಯರನ್ನು ಬಿಟ್ಟು ವಲಸೆ ಬಂದವರಿಗೆ ಟಿಕೆಟ್ ಕೊಟ್ಟರೆ ನಾವೇನು ಕತ್ತೆ ಕಾಯುವುದೇ? ಬಿಜೆಪಿ ಪಕ್ಷ ಬೆಳೆಸಲು ನಾವು ಬೇಕು; ಟಿಕೆಟ್ ಇನ್ನೊಬ್ಬರಿಗೆ ಕೊಟ್ಟರೆ ನಾವೇನು ಮಾಡಬೇಕು; ಅಂತಿದ್ದಾರೆ ಬಿಜೆಪಿಯ ಕಾರ್ಯಕರ್ತರು.

ಪಕ್ಷೇತರ ಅಭ್ಯರ್ಥಿ ಡಾ.ತನುಶ್ರಿ

ಕಾಂಗ್ರೆಸ್‌ನಿಂದ ವಲಸೆ ಬಂದವರಿಗೆ ಟಿಕೆಟ್ ಕೊಟ್ಟರೆ ನಾವೇನು ಮಾಡಬೇಕು. ನಮಗೂ ಶಕ್ತಿ ಇದೆ. ಚುನಾವಣೆ ಎದುರಿಸಲು ನಮಗೆ ತಾಕತ್ತು ಇಲ್ಲವಾದಲ್ಲಿ ಬೇರೆಯವರಿಗೆ ಟಿಕೆಟ್ ಕೊಡಬೇಕಾಗಿತ್ತು. ಮಾತೆತ್ತಿದರೆ ‘ಬಿಜೆಪಿ ಪಕ್ಷವು ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತದೆ’ ಎಂದು ಹೇಳುವ ಇವರು, ಗಂಗಾಧರ ನಾಯಕರಿಗೆ ಏಕೆ ಟಿಕೆಟ್ ಕೊಡಲಿಲ್ಲ ಅಂತ ಬಿಜೆಪಿ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿ.ವಿ.ನಾಯಕರ ತಂದೆ ನಾಲ್ಕು ಬಾರಿ ರಾಯಚೂರು ಲೋಕಸಭಾ ಸದಸ್ಯರಾಗಿದ್ದವರು. ಒಂದು ಬಾರಿ ಶಾಸಕರಾಗಿದ್ದರು. ಬಿ.ವಿ.ನಾಯಕರು ಒಂದು ಬಾರಿ ಸಂಸದರಾಗಿ ಅಯ್ಕೆ ಆದವರು, ಇನ್ನೊಬ್ಬ ಮಗ RDCC Bank Member. ಇಷ್ಟೆಲ್ಲ ಸ್ಥಳೀಯ ಮಟ್ಟದಲ್ಲಿ ಅಧಿಕಾರ ಅನುಭವಿಸಿದವರು ಈಗ ತನಗೆ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ರಾತ್ರೋರಾತ್ರಿ ಬಿಜೆಪಿಗೆ ವಲಸೆ ಹೋಗುವುದು ಸಮಂಜಸವಲ್ಲ.

ಮೇಲಾಗಿ ರಾಯಚೂರು ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬಿ.ವಿ.ನಾಯಕರೇ ಅವರ ಪಕ್ಷದ ಅಭ್ಯರ್ಥಿಯಾದವರಿಗೆ ಟಿಕೆಟ್ (ಬಿ ಪಾರ್ಮ) ಕೊಡಬೇಕು ಅಂತದರಲ್ಲಿ, ‘ನನಗೆ ಟಿಕೆಟ್ ಸಿಗಲಿಲ್ಲ’ ಅಂತ ಬಿಜೆಪಿಗೆ ಹೋಗುವುದು ಯಾವ ನ್ಯಾಯ ಎಂದು ಅವರ ಕಾರ್ಯಕರ್ತರೆ ಕೇಳುತ್ತಿದ್ದಾರೆ. ಒಂದುಕಡೆ ದೇವದುರ್ಗದ ಶಿವನಗೌಡನ ರಾಜಕೀಯಕ್ಕೆ ಬಿ.ವಿ.ನಾಯಕ ತಲೆಬಾಗಿರುವ ಸುದ್ದಿಗಳು ಹೊರ ಬರುತ್ತಿದೆ. ಅಂದರೆ ಅಧಿಕಾರಕ್ಕಾಗಿ ನಾವು ಒಂದೇ ಪಕ್ಷದಲ್ಲಿ ಇದ್ದರೆ, ನಮಗೆ ಎದುರಾಳಿಗಳು ಯಾರು ಇರುವುದಿಲ್ಲ; ಎಲ್ಲರೂ ನಾವೆ, ನಮ್ಮ ಕುಟುಂಬದವರೇ ಅಧಿಕಾರದಲ್ಲಿ ಇರುತ್ತೇವೆ ಅನ್ನುವ ಮನೋಭಾವ ಹೊರಬಿದ್ದಿದೆ.

ಜೆಡಿಎಸ್ ಅಭ್ಯರ್ಥಿ ರಾಜ ವೆಂಕಟಪ್ಪ ನಾಯಕ

ಕಾಂಗ್ರೆಸ್‌ನಿಂದ ಕೆಲವು ಮರಿ ಪುಡಾರಿಗಳು, ಹತ್ತು ಓಟು ಹಾಕಿಸದವರು, ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿದ್ದಾರೆ ಎಂಬ ಸುದ್ದಿಕೂಡ ಹೊರಬಂದಿದೆ. ಇದರಿಂದ ಕಾಂಗ್ರೆಸ್‌ಗೆ ಏನು ದಕ್ಕೆಯಾಗುವುದಿಲ್ಲ ಅಂತಿದ್ದಾರೆ ಅವರ ಪಕ್ಷದ ಮುಖಂಡರುಗಳು. ಮಾನ್ವಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ರಾಜ ವೆಂಕಟಪ್ಪ ನಾಯಕ ತಾಲೂಕಿನ ತುಂಬಾ ಬಿರುಸಿನಿಂದ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಪ್ರತಿಯೊಂದು ಹಳ್ಳಿಗೂ ಬೇಟಿ ನೀಡಿ ಮತ ಬೇಟೆಯಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ಗಿಂತ ಜೆಡಿಎಸ್ ಚುನಾವಣಾ ಆರ್ಭಟ ಮುಗಿಲು ಮುಟ್ಟಿದೆ. ಆದರೆ ಮುಂದಿನ ದಿನಗಳಲ್ಲಿ ಯಾರ ಅರ್ಭಟ ಹೆಚ್ಚಾಗುತ್ತದೆ ಎಂಬುದನ್ನು ಕಾದು ನೋಡಿ.! ನಮ್ಮ ನಿಖರವಾದ ವರದಿಯನ್ನೂ ನೋಡಿ.!!

Related Posts