ನೀನೆಲ್ಲಾ ಕುದುರೆ ಮೇಲೆ ಮೆರವಣಿಗೆ ಮಾಡಬಹುದೇ? ದಲಿತ ಯುವಕನ ಮೇಲೆ ಹಲ್ಲೆ: ಮದುವೆಯಲ್ಲಿ ನಡೆದ ದೌರ್ಜನೆ!
ದೆಹಲಿ: ದೆಹಲಿ ಸಮೀಪದ ಆಗ್ರಾದ ನಿವಾಸಿ ಅಜಯ್ ಜಾಧವ್. ಇವರಿಗೆ ಮೇ 4 ರಂದು ಮದುವೆ ನಿಗದಿಯಾಗಿತ್ತು. ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿದ್ದವು. ನಂತರ ಮದುಮಗನನ್ನು ಸಂಬಂಧಿಕರು ಕುದುರೆ ಮೇಲೆ ಮೆರವಣಿಗೆ ಮೂಲಕ ಮದುವೆ ಮಂಟಪಕ್ಕೆ ಕರೆದುಕೊಂಡು ಬರುತ್ತಿದ್ದರು. ಮೆರವಣಿಗೆ ಸೊಹಲ್ಲಾ ಜವಾದ್ ಬಸ್ತಿ ನಗರದ ಬಳಿ ಬಂದಾಗ ಕೆಲವರು ಅದನ್ನು ತಡೆದು, ನೀನು ‘ನೀನು ಪರಿಶಿಷ್ಟ ಜಾತಿಯವನು; ನೀನು ಕುದುರೆ ಏರಿ ಮೆರವಣಿಗೆಯಲ್ಲಿ ಹೋಗುವುದಾದರೂ ಹೇಗೆ’ ಎಂದು ಹೇಳಿ ಮದುಮಗನನ್ನು ಕುದುರೆಯಿಂದ ಕೆಳಗಿಳಿಸಿರುತ್ತಾರೆ.
ನಂತರ ಮದುಮಗನನ್ನು ಹಾಗೂ ಆತನ ಜೊತೆಗಿದ್ದ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರನ್ನು ಮದುವೆ ಮಂಟಪದ ವರೆಗೆ ಓಡಿಸಿಕೊಂಡು ಹೋಗಿದ್ದಾರೆ. ಮದುವೆ ಮಂಟಪದಲ್ಲಿದ್ದವರ ಮೇಲೂ ಹಲ್ಲೆ ನಡೆಸಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಹಾಗಾಗಿ ನಡೆಯಬೇಕಿದ್ದ ಮದುವೆ ನಿಂತು ಹೋಗಿತ್ತು.
ಇದರ ಬಗ್ಗೆ ಮದುಮಗನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯೋಗೇಶ್ ಠಾಕೂರ್, ರಾಹುಲ್ ಕುಮಾರ್, ಸೋನು ಠಾಕೂರ್, ಕುನಾಲ್, ಶಿಶುಪಾಲ್ ಸೇರಿದಂತೆ 20 ಮಂದಿಯನ್ನು ಬಂಧಿಸಿದ್ದಾರೆ.