ರಾಜ್ಯದಲ್ಲಿ ಯಾವ ಪಕ್ಷಕ್ಕೆ ಪ್ರಭಾವವಿದೆಯೋ ಆ ಪಕ್ಷದ ನಾಯಕತ್ವದಲ್ಲಿ ಮೈತ್ರಿ: ಸ್ಟಾಲಿನ್
ಚೆನ್ನೈ:ರಾಜ್ಯದಲ್ಲಿ ಯಾವ ಪಕ್ಷಕ್ಕೆ ಪ್ರಭಾವವಿದೆಯೋ ಆ ಪಕ್ಷದ ನೇತೃತ್ವದಲ್ಲಿ ಮೈತ್ರಿ ಮಾಡಿಕೊಳ್ಳಬೇಕು ಎಂದು ವಿರೋಧ ಪಕ್ಷಗಳ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.
ಬಿಹಾರ ರಾಜ್ಯದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸಿ, ಚೆನ್ನೈಗೆ ಹಿಂತಿರುಗಿದ ಮುಖ್ಯಮಂತ್ರಿ ಸ್ಟಾಲಿನ್ ಹೇಳಿದರು: “ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದು ನನಗೆ ಅತೀವ ಸಂತೋಷ ಮತ್ತು ಭರವಸೆಯನ್ನು ನೀಡಿದೆ. ಪಾಟ್ನಾ ಸಭೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚಿಸಿದ್ದೇವೆ.
ಭಾರತದ ಪ್ರಜಾಪ್ರಭುತ್ವ, ಜಾತ್ಯತೀತತೆಯನ್ನು ಉಳಿಸಲು ಬಿಜೆಪಿ ಮತ್ತೆ ಸರ್ಕಾರ ರಚಿಸಬಾರದು ಎಂಬುದುಕ್ಕಾಗಿಯೇ ಈ ಸಭೆಯನ್ನು ಆಯೋಜಿಸಲಾಗಿತ್ತು. ಬಿಜೆಪಿಯನ್ನು ಸೋಲಿಸುವುದೇ ಎಲ್ಲ ಪಕ್ಷಗಳ ಒಂದೇ ಗುರಿಯಾಗಿದೆ. ರಾಜಕೀಯ ಪಕ್ಷಗಳ ನಡುವೆ ಕನಿಷ್ಠ ಕಾರ್ಯಕ್ರಮ ರೂಪಿಸುವಂತೆ ಒತ್ತಾಯಿಸಿದ್ದೇನೆ.
ಬಿಜೆಪಿಯನ್ನು ಸೋಲಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರಸ್ತುತ ಪರಿಸ್ಥಿತಿಯು ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದುಕೊಂಡಿದ್ದೇವು ಅದು ಈಗ ಪಾಟ್ನಾದಲ್ಲಿ ನೆರವೇರಿದೆ.
ಮೈತ್ರಿ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಕ್ಷೇತ್ರ ಹಂಚಿಕೊಳ್ಳಬಹುದು. ಕ್ಷೇತ್ರ ಹಂಚಿಕೆ ಸಾಧ್ಯವಾಗದಿದ್ದರೆ ಸಾಮಾನ್ಯ ಅಭ್ಯರ್ಥಿಯನ್ನು ಘೋಷಿಸಬಹುದು ಎಂದು ತೀರ್ಮಾನಿಸಲಾಗಿದೆ. ಮೈತ್ರಿ ರಚನೆಗೆ ಸಂಬಂಧಿಸಿದಂತೆ ಪಕ್ಷಗಳ ನಡುವೆ 7 ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದ್ದೇವೆ.
ರಾಜ್ಯದಲ್ಲಿ ಯಾವ ಪಕ್ಷಕ್ಕೆ ಪ್ರಭಾವವಿದೆಯೋ ಆ ಪಕ್ಷದ ನಾಯಕತ್ವದಲ್ಲಿ ಮೈತ್ರಿ ರಚನೆಯಾಗಬೇಕು ಎಂದು ಒತ್ತಾಯಿಸಲಾಗಿದೆ. ಪಾಟ್ನಾ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ” ಎಂದರು.