ಹಿರಿಯ ನಟಿ ಶ್ರೀಮತಿ ಲೀಲಾವತಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯಂತಹ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆಯದಿರುವುದು ದುರಂತ!
ಬೆಂಗಳೂರು: ಮುಖ್ಯಮಂತ್ರಿ ಅವರು ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟಿ ಶ್ರೀಮತಿ ಲೀಲಾವತಿಯವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವವನ್ನು ಸಲ್ಲಿಸಿ ಮಾತನಾಡಿದರು. “ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ, ಹಿರಿಯ ನಟಿ ಲೀಲಾವತಿಯವರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಲು ಆದೇಶಿಸಲಾಗಿದೆ” ಎಂದರು.
“ಲೀಲಾವತಿಯವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರ ನಿವಾಸಕ್ಕೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿದ್ದೆ. ಆಗ ಅವರ ಮಗ ವಿನೋದ್ ರಾಜ್‌ರನ್ನು ಭೇಟಿಯಾಗಿ, ಅವರಿಗೆ ಯಾವುದೇ ರೀತಿಯ ಸಹಾಯ ಮಾಡಲು ಸರ್ಕಾರ ಸಿದ್ಧವಿದೆ ಎಂದು ಧೈರ್ಯ ತುಂಬಲಾಗಿತ್ತು. ಲೀಲಾವತಿ ಹಾಗೂ ವಿನೋದರಾಜ್ ಅವರ ತಾಯಿಮಗನ ಸಂಬಂಧ ಆದರ್ಶಮಯವಾದದ್ದು” ಎಂದು ಹೇಳಿದರು.
“ರಂಗಭೂಮಿಯಿಂದ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಲೀಲಾವತಿಯವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನೈಜ ನಟನೆಗೆ ಹೆಸರಾಗಿದ್ದ ಅವರು ದಕ್ಷಿಣ ಭಾರತದ ಎಲ್ಲ ಭಾಷೆಯ ಚಿತ್ರರಂಗದಲ್ಲಿ ನಟಿಸಿದ್ದಾರೆ. ಬಹುಭಾಷಾ ಕಲಾವಿದರಾಗಿದ್ದ ಲೀಲಾವತಿಯವರು ನಾಯಕಿ, ಪೋಷಕ ನಟಿಯಾಗಿ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ಡಾ.ರಾಜ್ ಕುಮಾರ್ ಹಾಗೂ ಲೀಲಾವತಿಯವರದು ಜನಪ್ರಿಯ ಜೋಡಿಯಾಗಿತ್ತು. ವಿದ್ಯಾರ್ಥಿ ದೆಸೆಯಲ್ಲಿ ಗೆಜ್ಜೆಪೂಜೆ, ಕುಲವಧು, ಭಕ್ತ ಕುಂಬಾರ ಸೇರಿದಂತೆ ಅನೇಕ ಚಲನಚಿತ್ರಗಳನ್ನು ವೀಕ್ಷಿಸಿದ್ದೆ” ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡರು.
“ಲೀಲಾವತಿಯವರು ಒಬ್ಬ ಪರಿಪೂರ್ಣ ಕಲಾವಿದರಾಗಿದ್ದರು. ಐತಿಹಾಸಿಕ, ಸಾಮಾಜಿಕ, ಪೌರಾಣಿಕ ಪಾತ್ರಗಳನ್ನು ಲೀಲಾಜಾಲವಾಗಿ, ಮನೋಜ್ಞವಾಗಿ ಅಭಿನಯಿಸುತ್ತಿದ್ದರು. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಲೀಲಾವತಿಯವರು ಆಸ್ಪತ್ರೆ, ಪಶುವೈದ್ಯಕೀಯ ಆಸ್ಪತ್ರೆಗಳನ್ನು ನಿರ್ಮಿಸಿದ್ದರು. ರೈತಾಪಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಲೀಲಾವತಿಯವರು ಪ್ರಾಣಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದರು. ಜೀವಿಗಳೆಡೆಗಿನ ಪ್ರೀತಿ ಅವರಿಗೆ ರಕ್ತಗತವಾಗಿ ಬಂದಿತ್ತು.
ಕೊರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದ ಲೀಲಾವತಿಯವರು ಮನುಷ್ಯತ್ವದ ಮೂರ್ತರೂಪವಾಗಿದ್ದರು. ತಾನು ಗಳಿಸಿದ್ದನ್ನು ಪರರಿಗೆ ಹಂಚುವ ದೊಡ್ಡ ಗುಣ ಅವರಲ್ಲಿತ್ತು. ಅವರ ಪ್ರತಿಭೆಗೆ ಪದ್ಮಶ್ರೀ ಪ್ರಶಸ್ತಿಯಂತಹ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆಯದಿರುವುದು ದುರಂತ” ಎಂದು ವಿಷಾಧಿಸಿದರು.
ನಟಿ ಲೀಲಾವತಿಯವರ ಸಾವು ಆಘಾತವನ್ನುಂಟು ಮಾಡಿದ್ದು, ಕನ್ನಡ ಚಿತ್ರರಂಗವಲ್ಲದೇ, ಭಾರತೀಯ ಸಿನಿಮಾ ರಂಗಕ್ಕೂ ತುಂಬಲಾರದ ನಷ್ಟವುಂಟಾಗಿದೆ. ಅವರ ಕುಟುಂಬ ಹಾಗೂ ಅಪಾರ ಅಭಿಮಾನ ಬಳಗಕ್ಕೆ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಹಾರೈಸುತ್ತೇನೆ” ಎಂದು ಹೇಳಿದರು.