ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಬಿಜೆಪಿ ಚುನಾವಣೆಗೆ ಸಿದ್ದವಾಗುತ್ತಿದೆ: ವೆಲ್‌ಫೇರ್ ಪಾರ್ಟಿ
ಬೆಂಗಳೂರು: “ರಾಮನ ಮೇಲಿನ ಭಕ್ತಿಯನ್ನು ಬಿಜೆಪಿ ರಾಜಕೀಯ ಗೊಳಿಸಿ ಲಾಭ ಪಡೆಯಲು ಯತ್ನಿಸುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನರನ್ನು ಭಾವನಾತ್ಮಕವಾಗಿ ಪ್ರಚೋಧಿಸಿ ಮತ ಬ್ಯಾಂಕ್ ಭದ್ರಗೊಳಿಸುತ್ತಿದೆ. ಈ ಮೂಲಕ ಬಿಜೆಪಿ ಲೋಕಸಭಾ ಚುನಾವಣೆಗೆ ಸಿದ್ದವಾಗುತ್ತಿದೆ” ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.
ಅವರು ಮುಂದುವರಿಯುತ್ತಾ “ಧಾರ್ಮಿಕ ನಂಬಿಕೆಗಳನ್ನು ಬಳಸಿ ಮುಗ್ದ ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಯಾವುದೇ ಪಕ್ಷಗಳು ರಾಜಕೀಯ ಮಾಡಿದರೂ ಅದು ಖಂಡನಾರ್ಹ. ಕಾಂಗ್ರೆಸ್ ಕೂಡ ಆರಂಭದಲ್ಲಿ ಬಿಜೆಪಿಯ ಹಾದಿಯಲ್ಲಿ ಸಾಗುವ ಸೂಚನೆ ನೀಡಿದ್ದರೂ ಈಗ ಅದರಿಂದ ದೂರ ನಿಲ್ಲುವುದಾಗಿ ಹೇಳಿದ್ದು ಸ್ವಾಗತಾರ್ಹ” ಎಂದು ಹೇಳಿದ್ದಾರೆ.
ರಾಮನ ಮೇಲಿನ ಭಕ್ತಿಗಿಂತ ರಾಜಕೀಯವೇ ಮೇರೆ ಮೀರುತ್ತಿದೆ. ರಾಮ ಮಂದಿರ ಪೂರ್ಣಗೊಳ್ಳುವ ಮುನ್ನವೇ ತರಾತುರಿಯ ಉದ್ಘಾಟನೆಗೆ ಬಿಜೆಪಿ ಮುಂದಾಗುತ್ತಿರುವುದು ಏತಕ್ಕೆ? ಲೋಕಸಭೆ ಚುನಾವಣೆ ಆಸನ್ನವಾಗಿರುವಾಗ, ವಿಷಯವಿಲ್ಲದೇ ತಡಕಾಡುವ ಬಿಜೆಪಿಗೆ ಇದರ ಅಗತ್ಯವಿತ್ತು. ರಾಮಮಂದಿರ ವಿವಾದದಿಂದಲೇ ಸಾಕಷ್ಟು ಫಸಲು ತೆಗೆದ ಪಕ್ಷದಿಂದ ಇನ್ನೇನು ತಾನೇ ನಿರೀಕ್ಷಿಸಬಹುದು?” ಎಂದು ಅವರು ಪ್ರಶ್ನಿಸಿದ್ದಾರೆ.