ದೇಶಭಕ್ತಿ, ಐಕ್ಯತೆ ಮತ್ತು ಸಮಗ್ರತೆ ಬಗ್ಗೆ ಬೋಗಸ್ ಜನತಾ ಪಾರ್ಟಿಯವರಿಂದ ಕಲಿಯುವ ದುಸ್ಥಿತಿ ನಮಗೆ ಬಂದಿಲ್ಲ: ಡಿ.ಕೆ.ಸುರೇಶ್ » Dynamic Leader
October 23, 2024
ರಾಜಕೀಯ

ದೇಶಭಕ್ತಿ, ಐಕ್ಯತೆ ಮತ್ತು ಸಮಗ್ರತೆ ಬಗ್ಗೆ ಬೋಗಸ್ ಜನತಾ ಪಾರ್ಟಿಯವರಿಂದ ಕಲಿಯುವ ದುಸ್ಥಿತಿ ನಮಗೆ ಬಂದಿಲ್ಲ: ಡಿ.ಕೆ.ಸುರೇಶ್

ಬೆಂಗಳೂರು: ದಕ್ಷಿಣ ರಾಜ್ಯಗಳು ಅದರಲ್ಲಿಯೂ ವಿಶೇಷವಾಗಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ನನ್ನ ಧರ್ಮ. ಕೇಂದ್ರ ಸರ್ಕಾರ ರಾಜ್ಯದ ಮೇಲೆ ತೋರಿಸುತ್ತಿರುವ ಮಲತಾಯಿ ಧೋರಣೆಯನ್ನು ಪ್ರಶ್ನೆ ಮಾಡುವ ಹಕ್ಕು ಎಲ್ಲರಿಗೂ ಇದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

ಈ ಅನ್ಯಾಯ ಹೀಗೆ ಮುಂದುವರೆದರೆ, ಪ್ರತ್ಯೇಕದ ಕೂಗು ಈಗಾಗಲೇ ಎಲ್ಲಡೆಯೂ ಕೇಳಿ ಬರುತ್ತಿದೆ; ನಾನೂ ಹೇಳಿದ್ದೇನೆ. ಭಾರತೀಯ ಜನತಾ ಪಕ್ಷದವರು ನನ್ನ ಹೇಳಿಕೆಯನ್ನು ತಿರುಚುವುದರಲ್ಲಿ ನಿಸ್ಸೀಮರು. ನಮ್ಮ ರಾಜ್ಯ ಕೇಂದ್ರದ ಬೊಕ್ಕಸಕ್ಕೆ ಅತಿ ಹೆಚ್ಚು ಕೊಡುಗೆ ನೀಡುವ ರಾಜ್ಯಗಳಲ್ಲಿ ಒಂದಾಗಿದೆ. ಅದಕ್ಕೆ ಪ್ರತಿಯಾಗಿ ನಾವು ಪಡೆದುಕೊಂಡ ಅನುದಾನ ಕಡಿಮೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಯೋಜನೆಗಳ ವಿಚಾರದಲ್ಲಿ ಸಂಪೂರ್ಣ ಮಲತಾಯಿ ಧೋರಣೆ ನಮಗೆ ಸಿಕ್ಕಿದೆ. ಕರ್ನಾಟಕ ಭಾರತದಲ್ಲೇ ಇದೆ. ಇದನ್ನು ಒಕ್ಕೂಟ ಸರ್ಕಾರ ಮರೆಯಬಾರದು ಇದಕ್ಕೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದರೆ ನಾವು “ಪ್ರತ್ಯೇಕತಾವಾದಿ”ಗಳು! ಎಂದು ಬಣ್ಣಿಸುತ್ತಾರೆ. ಮೇಕೆದಾಟು, ಮಹದಾಯಿ, ಬರ ಪರಿಹಾರ ಇರಲಿ, ಕೇಂದ್ರ ಬಿಜೆಪಿ ಸರಕಾರ ನಮ್ಮ ಯಾವುದೇ ಸಮಸ್ಯೆಗಳಿಗೆ ಈವರೆಗೆ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ.

ನಮ್ಮ ನಾಡಿನ ಭಾಷೆ ಉಳಿಸಿಕೊಳ್ಳಲು ನಾಮಫಲಕಗಳನ್ನು ಕನ್ನಡದಲ್ಲಿ ಕಡ್ಡಾಯ ಮಾಡಿದರೆ, ಅದನ್ನು ಬದಲಾಯಿಸಲು ಸುಗ್ರೀವಾಜ್ಞೆಗಳನ್ನೂ ಇವರು ರಾತ್ರೋ ರಾತ್ರಿ ತರುತ್ತಾರೆ. ದೇಶಭಕ್ತಿ, ಐಕ್ಯತೆ ಮತ್ತು ಸಮಗ್ರತೆ ಬಗ್ಗೆ ಬೋಗಸ್ ಜನತಾ ಪಾರ್ಟಿಯವರಿಂದ ಕಲಿಯುವ ದುಸ್ಥಿತಿ ನಮಗೆ ಬಂದಿಲ್ಲ, ಬರುವುದೂ ಇಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.

Related Posts