ಐಎಸ್‌ಐಎಸ್‌ ಸಂಘಟನೆಗೆ ಸದಸ್ಯರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಆರೋಪಿಗೆ 10 ವರ್ಷ ಜೈಲು 2 ಲಕ್ಷ ದಂಡ! » Dynamic Leader
October 21, 2024
ಕ್ರೈಂ ರಿಪೋರ್ಟ್ಸ್

ಐಎಸ್‌ಐಎಸ್‌ ಸಂಘಟನೆಗೆ ಸದಸ್ಯರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಆರೋಪಿಗೆ 10 ವರ್ಷ ಜೈಲು 2 ಲಕ್ಷ ದಂಡ!

ಬೆಂಗಳೂರು: ನಿಷೇಧಿತ ಭಯೋತ್ಪಾಧಕ ಸಂಘಟನೆಯಾದ ಐಎಸ್‌ಐಎಸ್‌ಗೆ ಬೆಂಬಲ್ ಸೂಚಿಸಿ, ಟ್ವಿಟ್ಟರ್ ಮೂಲಕ ಉಗ್ರ ಸಂಘಟನೆಗೆ ಸದಸ್ಯರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಆರೋಪಿಗೆ 10 ವರ್ಷ ಕಾರಾಗೃಹ ಶಿಕ್ಷೆ ಮತ್ತು 2,15,000/- ರೂ ದಂಡ ವಿಧಿಸಿದ ವಿಶೇಷ ನ್ಯಾಯಾಲಯ!

2014ರಲ್ಲಿ ಐಎಸ್‌ಐಎಸ್‌ ಎಂಬುವ ನಿಷೇಧಿತ ಭಯೋತ್ಪಾಧಕ ಸಂಘಟನೆಯು ಅಬೂಬಕ್ಕರ್ ಬಾಗ್ದಾದಿ ಎಂಬಾತನ ನೇತೃತ್ವದಲ್ಲಿ ಸಿರಿಯಾ ದೇಶದಲ್ಲಿ ಭಯೋತ್ಪಾದಕ ಕೃತ್ಯವನ್ನು ನಡೆಸುತ್ತಾ ಆ ದೇಶದ ಮೇಲೆ ಯುದ್ಧ ಸಾರಿದ್ದು, ಆ ಸಮಯದಲ್ಲಿ, ಪಶ್ಚಿಮ ಬಂಗಾಳ ಮೂಲದ ಮೆಹದಿ ಮೆಸ್ರೂಸ್ ಬಿಸ್ವಾಸ್ ಎಂಬಾತನು ಬೆಂಗಳೂರು ನಗರದ ಗಂಗಮ್ಮನಗುಡಿ ಪೊಲೀಸ್ ಠಾಣೆಯ ಸರಹದ್ದಿನ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸಮಾಡಿಕೊಂಡು, “SAMY WITNESS” ಎಂಬುವ ಟ್ವಿಟ್ಟರ್ ಖಾತೆಯ ಮೂಲಕ ಐಎಸ್‌ಐಎಸ್‌ ಉಗ್ರರಿಗೆ ಬೆಂಬಲವನ್ನು ಸೂಚಿಸುತ್ತಾ, ಐಎಸ್‌ಐಎಸ್ ಸಂಘಟನೆಗೆ ಹಲವಾರು ಸದಸ್ಯರನ್ನು ನೇಮಕಾತಿ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿಕೊಂಡಿದ್ದನು.

ಈ ಕುರಿತು ಖಚಿತ ಮಾಹಿತಿ ಸಂಗ್ರಹಿಸಿದ್ದ ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ ಅಧಿಕಾರಿ ಮತ್ತು ಸಿಬ್ಬಂಧಿಗಳು ದಾಳಿ ಮಾಡಿ, ಆರೋಪಿ ಮೆಹದಿ ಮೆಸ್ರೂರ್ ಬಿಸ್ವಾಸ್‌ನನ್ನು ದಸ್ತಗಿರಿ ಮಾಡಿರುತ್ತಾರೆ. ಈ ಬಗ್ಗೆ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣ ತನಿಖೆಯನ್ನು ಸಿಸಿಬಿ ಘಟಕದ ಹಿಂದಿನ ಸಹಾಯಕ ಪೊಲೀಸ್ ಕಮೀಷನರ್ ಎಂ.ಕೆ.ತಿಮ್ಮಯ್ಯ ಮತ್ತು ಅವರ ತಂಡದವರು ಕೈಗೊಂಡು, ಆರೋಪಿಯು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಲ್ಯಾಪ್‌ಟ್ಯಾಪ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳಿಂದ ಆರೋಪಿತನು ಕೃತ್ಯವೆಸಗಿರುವ ಬಗ್ಗೆ ಸಾವಿರಾರು ಪುಟಗಳ ದಾಖಲೆಗಳನ್ನು ಸಂಗ್ರಹಿಸಿ, ಅಮೆರಿಕಾ ದೇಶದಲ್ಲಿರುವ ಟ್ವಿಟ್ಟರ್ ಸಂಸ್ಥೆಯಿಂದ ದಾಖಲಾತಿಗಳನ್ನು ಸಂಗ್ರಹಿಸುತ್ತಾರೆ.

ನಂತರ ಈ ಪ್ರಕರಣದಲ್ಲಿ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ (ಸಿಸಿಹೆಚ್-50) ಸುಮಾರು 37 ಸಾವಿರ ಪುಟಗಳ ದಾಖಲಾತಿಗಳನ್ನೊಳಗೊಂಡ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ವಿಶೇಷ ನ್ಯಾಯಾಲಯದಲ್ಲಿ, ಪ್ರಕರಣ ಸಂಖ್ಯೆ: ಎಸ್.ಸಿ. ನಂ.272/2016 ರಲ್ಲಿ ವಿಚಾರಣೆ ನಡೆದು ದಿನಾಂಕ: 25.01.2024 ರಂದು ಆರೋಪಿತನಿಗೆ 10 ವರ್ಷ ಕಾರಾಗೃಹ ಶಿಕ್ಷೆ ಮತ್ತು 2 ಲಕ್ಷ 15 ಸಾವಿರ ರೂಪಾಯಿಗಳು ದಂಡ ವಿಧಿಸಿರುತ್ತದೆ.

ಈ ಪ್ರಕರಣವು ದೇಶದಲ್ಲಿಯೇ ಐಎಸ್‌ಐಎಸ್‌ ಭಯೋತ್ಪಾದಕ ಸಂಘಟನೆಯ ವಿರುದ್ಧ ದಾಖಲಾಗಿದ್ದ ಮೊದಲ ಪ್ರಕರಣವಾಗಿರುವುದು ಗಮನಾರ್ಹ.

ಈ ಪ್ರಕರಣದಲ್ಲಿ ಎಸಿಪಿ ಎಂ.ಕೆ.ತಮ್ಮಯ್ಯ ತನಿಖಾಧಿಕಾರಿಗಳಾಗಿದ್ದು, ನ್ಯಾಯಾಲಯದಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಬಿಕ್ಕಣ್ಣನವರ್ ಸರ್ಕಾರದ ಪರವಾಗಿ ವಾದವನ್ನು ಮಂಡಿಸಿದ್ದರು. ಈ ಪ್ರಕರಣವನ್ನು ಭಯೋತ್ಪಾದಕ ನಿಗ್ರಹ ದಳದ (ಎಟಿಸಿ) ಎಸಿಪಿ ಬಿ.ಆರ್.ವೇಣುಗೋಪಾಲ್ ಹಾಗೂ ಅವರ ತಂಡದವರು ನ್ಯಾಯಾಲಯದ ದಿನನಿತ್ಯದ ಪ್ರಕ್ರಿಯೆಗಳ ಮೇಲ್ವಿಚಾರಣೆ ನಡೆಸಿ, ಈ ಪ್ರಕರಣದಲ್ಲಿ ಆರೀಪಿತನಿಗೆ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.

Related Posts