ಬೆಂಗಳೂರು: ವಿಧಾನಸೌಧದಲ್ಲಿ ಇಂದು ಕೇಂದ್ರದ ಮಧ್ಯಂತರ ಬಜೆಟ್ ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
“ದೇಶದಲ್ಲಿ ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ನಲ್ಲಿ ಅನ್ಯಾಯ ಮಾಡಿದ್ದು, ಈ ಬಜೆಟ್ನಿಂದ ನಮಗೆ ಬಹಳ ನಿರಾಸೆಯಾಗಿದೆ. ಇದರ ಬಗ್ಗೆ ಹೋರಾಟ ಮಾಡುವ ಕುರಿತು ನಿರ್ಧಾರ ಮಾಡುತ್ತೇವೆ. ಲೋಕಸಭೆ ಚುನಾವಣೆ ಹಿನ್ನೆಲೆ ಜನರಿಗೆ ಏನು ಕೊಡುತ್ತೇವೆ ಎಂಬ ದಿಕ್ಸೂಚಿಯನ್ನಾದರೂ ಹೇಳಬೇಕಿತ್ತು. ರಾಜ್ಯಕ್ಕೆ ಹಲವು ಕೊಡುಗೆಗಳನ್ನು ನಿರೀಕ್ಷೆ ಮಾಡಲಾಗಿತ್ತು. ಎಲ್ಲವೂ ಹುಸಿಯಾಗಿದೆ” ಎಂದು ಹೇಳಿದ್ದಾರೆ.
“ಬಿಜೆಪಿ ಸಂಸದರು ಈ ಕುರಿತು ಪ್ರಶ್ನೆ ಮಾಡಿ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ತಂದಿರುವ ಜನಪರ ಯೋಜನೆಗಳನ್ನು ನೋಡಿಯಾದರೂ ಕೇಂದ್ರ ಸರಕಾರ ಬಜೆಟ್ ಮಂಡಿಸಬಹುದಿತ್ತು. ಈಗಾಗಲೇ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿರುವ ಕೇಂದ್ರ ಬಿಜೆಪಿ ಸರ್ಕಾರ ದೇಶದ ಜನರ ಮೇಲೆ ಮತ್ತಷ್ಟು ಹೊರೆ ಹೊರಿಸುವುದರಲ್ಲಿ ಸಂದೇಹವಿಲ್ಲ” ಎಂದು ಹೇಳಿದ್ದಾರೆ.
 
  
 

 
  
 










 
 
