ಚಂದ್ರನಿಗೆ ಹೋಗಲು 41 ದಿನಗಳು ಸಾಕು; ಎಸ್‌ಬಿಐಗೆ ದಾನಿಗಳ ಹೆಸರುಗಳನ್ನು ನೀಡಲು 140 ದಿನಗಳು ಬೇಕೆ? » Dynamic Leader
November 23, 2024
ದೇಶ ರಾಜಕೀಯ

ಚಂದ್ರನಿಗೆ ಹೋಗಲು 41 ದಿನಗಳು ಸಾಕು; ಎಸ್‌ಬಿಐಗೆ ದಾನಿಗಳ ಹೆಸರುಗಳನ್ನು ನೀಡಲು 140 ದಿನಗಳು ಬೇಕೆ?

ಡಿ.ಸಿ.ಪ್ರಕಾಶ್ ಸಂಪಾದಕರು

ಕೇಂದ್ರ ಬಿಜೆಪಿ ಸರ್ಕಾರವು 2018ರಲ್ಲಿ ಚುನಾವಣಾ ಬಾಂಡ್ ಎಂಬ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯ ಮೂಲಕ ವ್ಯಕ್ತಿಗಳು ಮತ್ತು ಕಂಪನಿಗಳು ಚುನಾವಣಾ ಬಾಂಡ್‌ಗಳನ್ನು ಖರೀದಿಸಿ ತಮ್ಮ ನೆಚ್ಚಿನ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದು. ಅದಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಚುನಾವಣಾ ಬಾಂಡ್‌ಗಳು 1 ಸಾವಿರದಿಂದ 1 ಕೋಟಿ ರೂಪಾಯಿಯವರೆಗೆ ಮಾರಾಟ ಮಾಡಲಾಯಿತು.

ಈ ಯೋಜನೆಯ ವಿಶೇಷತೆ ಏನೆಂದರೆ, ಚುನಾವಣಾ ಬಾಂಡ್‌ಗಳನ್ನು ಖರೀದಿಸುವವರ ಹೆಸರು ಮತ್ತು ವಿಳಾಸ ಸೇರಿದಂತೆ ಯಾವುದೇ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ. ಈ ಬಾಂಡ್ ಅನ್ನು 15 ದಿನಗಳಲ್ಲಿ ನಗದು ರೂಪದಲ್ಲಿ ಪರಿವರ್ತಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಚುನಾವಣಾ ಬಾಂಡ್‌ಗಳ ಮೊತ್ತವು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಹೋಗುತ್ತವೆ. ಅಂತಹ ಸಮಸ್ಯೆ ಈ ಚುನಾವಣಾ ಬಾಂಡ್ನಲ್ಲಿ ಇದೆ.

ಈ ಚುನಾವಣಾ ಬಾಂಡ್ ಸಂಪೂರ್ಣವಾಗಿ ಬಿಜೆಪಿಯ ಪರವಾಗಿಯೇ ಇತ್ತು ಎಂದು ಹೇಳಲಾಗುತ್ತಿದೆ. 2016 ರಿಂದ 2022ರ ಅವಧಿಯಲ್ಲಿ ಬಿಜೆಪಿ ಮಾತ್ರ ರೂ.5,272 ಕೋಟಿ ದೇಣಿಗೆ ಪಡೆದಿತ್ತು. ಇದು ಒಟ್ಟು ನಿಧಿಯಲ್ಲಿ ಶೇ.58 ರಷ್ಟು ಆಗಿರುತ್ತದೆ. ಈ ಕಾರಣದಿಂದಾಗಿ, ಚುನಾವಣಾ ಬಾಂಡ್‌ಗಳಲ್ಲಿ ಪಾರದರ್ಶಕತೆ ಇಲ್ಲ, ಹೀಗಾಗಿ ಅದನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದವು.

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ 5 ನ್ಯಾಯಾಧೀಶರ ಸಂವಿಧಾನ ಪೀಠವು, ಚುನಾವಣಾ ಬಾಂಡ್ ಕಾರ್ಯವಿಧಾನವನ್ನು ರದ್ದುಗೊಳಿಸಲಾಗಿದೆ ಎಂದು ಸರ್ವಾನುಮತದ ತೀರ್ಪು ನೀಡಿತು.

ಇದಲ್ಲದೆ, 2019 ರಿಂದ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದವರ ವಿವರಗಳನ್ನು ಮಾರ್ಚ್ 6 ರೊಳಗೆ ಎಸ್‌ಬಿಐ ಬ್ಯಾಂಕ್ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಮತ್ತು ದಾನಿಗಳ ವಿವರಗಳನ್ನು ಮಾರ್ಚ್ 13 ರೊಳಗೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು.

ಏತನ್ಮದ್ಯೆ, ಎರಡು ದಿನಗಳ ಹಿಂದೆ ಎಸ್‌ಬಿಐ ಬ್ಯಾಂಕ್, ಚುನಾವಣಾ ಬಾಂಡ್ ವಿವರಗಳನ್ನು ಬಹಿರಂಗಪಡಿಸಲು ಜೂನ್‌ 30 ರವರೆಗೆ ಕಾಲಾವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುವ ಮೂಲಕ ಭಾರಿ ವಿವಾದವನ್ನು ಸೃಷ್ಟಿಸಿತು. ಈ ಘಟನೆಯಲ್ಲಿ, ಚುನಾವಣೆಗೆ ಮುನ್ನ ಈ ವಿವರಗಳನ್ನು ಪ್ರಕಟಿಸುವುದನ್ನು ತಪ್ಪಿಸಲು ಎಸ್‌ಬಿಐ ಇಂತಹ ಬೇಡಿಕೆಯನ್ನು ಎತ್ತಿದೆ ಎಂದು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸುತ್ತಿವೆ.

ಈ ಹಿನ್ನಲೆಯಲ್ಲಿ, ತಮಿಳುನಾಡಿನ ಮಧುರೈ ಸಂಸದ ಎಸ್.ವೆಂಕಟೇಶನ್ ಅವರು ಈ ವಿಚಾರವಾಗಿ ಎಸ್‌ಬಿಐ ಬ್ಯಾಂಕ್ ಅನ್ನು ಟೀಕಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ, “ಚಂದ್ರಯಾನವು ಚಂದ್ರನನ್ನು ತಲುಪಲು 41 ದಿನಗಳನ್ನು ತೆಗೆದುಕೊಂಡಿತು, ಇದು ಆಧುನಿಕ ವಿಜ್ಞಾನದ ಸಾಧನೆಯಾಗಿದೆ. ಮುಂಬೈ ಮೂಲದ ಎಸ್‌ಬಿಐ ದೆಹಲಿಯ ಸುಪ್ರೀಂ ಕೋರ್ಟ್‌ಗೆ ದಾನಿಗಳ ಹೆಸರುಗಳನ್ನು ನೀಡಲು 140 ದಿನಗಳ ಕಾಲಾವಕಾಶ ಕೇಳುತ್ತಿದೆ. ಇದು ಆಧುನಿಕ ಭ್ರಷ್ಟಾಚಾರದ ಸಾಧನೆಯಾಗಿದೆ.

48 ಕೋಟಿ ಗ್ರಾಹಕರ ನಂಬಿಕೆಯಾಗಿದ್ದ ಎಸ್‌ಬಿಐ ಇನ್ನು ಮುಂದೆ ಹ್ಯಾಶ್‌ಟ್ಯಾಗ್ ಹಾಕಿ #ModiKaParivar ಎಂದು ನಮೂದಿಸಿಕೊಳ್ಳಲಿ” ಎಂದು ಟೀಕಿಸಿದ್ದಾರೆ.

Related Posts