ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಚುನಾವಣಾ ಬಾಂಡ್ Archives » Dynamic Leader
October 22, 2024
Home Posts tagged ಚುನಾವಣಾ ಬಾಂಡ್
ರಾಜಕೀಯ

ವಿರುದುನಗರ: ತಮಿಳುನಾಡು ವಿರುದುನಗರ ಜಿಲ್ಲಾ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಛೇರಿ ವತಿಯಿಂದ ಜಿಲ್ಲಾಧಿಕಾರಿಗಳ ಸಭೆಯಲ್ಲಿ, ಮುಸ್ಲಿಂ ಮಹಿಳಾ ಸಹಾಯ ಸಂಘದಿಂದ ಆಯೋಜಿಸಿದ್ದ ಕ್ಷೇಮಾಭಿವೃದ್ಧಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಜಯಶೀಲನ್ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿರುದುನಗರ ಸಂಸದ ಮಾಣಿಕಂ ಟ್ಯಾಗೋರ್ (Manickam Tagore) ಅವರು 108 ಫಲಾನುಭವಿಗಳಿಗೆ 10.24 ಲಕ್ಷ ರೂ.ಗಳ ಕಲ್ಯಾಣ ನೆರವನ್ನು ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಮಾಣಿಕಂ ಟ್ಯಾಗೋರ್, “ನೈತಿಕ ಹಕ್ಕು ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ಅದೇ ನೈತಿಕ ಹಕ್ಕು ನಿರ್ಮಲಾ ಸೀತಾರಾಮನ್ (Nirmala Sitharaman) ಅವರಿಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ನೈತಿಕ ಹಕ್ಕಿನೊಂದಿಗೆ ನಿರ್ಮಲಾ ಸೀತಾರಾಮನ್ ಕೂಡಲೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಹಾಗೆಯೇ ನಿರ್ಮಲಾ ಸೀತಾರಾಮನ್ ಕೆಳಗಿಳಿದು ಎಲ್ಲರಿಗೂ ಮಾದರಿಯಾಗಲಿದ್ದಾರೆಯೇ? ಅಥವಾ, ನೈತಿಕ ಹಕ್ಕು ಎಂಬುದಲ್ಲೆವೂ ಇತರರಿಗೆ ಮಾತ್ರ. ಇತರರಿಗೆ ಬಂದರೆ ರಕ್ತ.. ತನಗೆ ಬಂದರೆ ಅದು ಟೊಮೆಟೊ ಚಟ್ನಿ ಎಂದು ಹೇಳುತ್ತಾರೆಯೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಮುಂದುವರಿದು ಮಾತನಾಡಿದ ಸಂಸದ ಮಾಣಿಕಂ ಟ್ಯಾಗೋರ್, ನಿರ್ಮಲಾ ಸೀತಾರಾಮನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜಕೀಯ

ನವದೆಹಲಿ: ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಯು 45 ಸಂಶಯಾಸ್ಪದ ಕಂಪನಿಗಳಿಂದ 1,068 ಕೋಟಿ ರೂಪಾಯಿ ದೇಣಿಗೆಯನ್ನು ಪಡೆದಿದ್ದು, ಈ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.

ನಿನ್ನೆ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಮಾಡಿದ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ಜಾಸ್ಮಿನ್ ಶಾ ಅವರು, “ಬಿಜೆಪಿಗೆ 45 ಸಂಶಯಾಸ್ಪದ ಕಂಪನಿಗಳು ರೂ.1,068 ಕೋಟಿಯವರೆಗೆ ದೇಣಿಗೆ ನೀಡಿದೆ. ಅವು ನಷ್ಟದ ಕಂಪನಿಗಳಾಗಿವೆ. ಅಥವಾ ಅವರು ತೆರಿಗೆಗಳನ್ನು ಪಾವತಿಸದವರು ಅಥವಾ ಲಾಭಕ್ಕಿಂತ ಹೆಚ್ಚಾಗಿ ದೇಣಿಗೆ ನೀಡಿದವರಾಗಿದ್ದಾರೆ.

ಏಳು ವರ್ಷಗಳಲ್ಲಿ 33 ಕಂಪನಿಗಳು ಒಟ್ಟು ಒಂದು ಲಕ್ಷ ಕೋಟಿ ರೂಪಾಯಿಯವರೆಗೆ ನಷ್ಟ ಅನುಭವಿಸಿದ ಕಂಪನಿಗಳಾಗಿರುತ್ತವೆ. ಈ ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ 450 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿರುತ್ತವೆ. ಈ ಪೈಕಿ 17 ಕಂಪನಿಗಳು ಶೂನ್ಯ ತೆರಿಗೆ ಅಥವಾ ಋಣಾತ್ಮಕ ತೆರಿಗೆ ಪಾವತಿಸಿದ ಕಂಪನಿಗಳಾಗಿವೆ.

ಇದಲ್ಲದೆ, ಈ ಕಂಪನಿಗಳು ತೆರಿಗೆ ವಿನಾಯಿತಿಗಳನ್ನು ಸಹ ಪಡೆದಿರುತ್ತವೆ. ಅಲ್ಲದೆ, ಆರು ಕಂಪನಿಗಳು ಬಿಜೆಪಿಗೆ 600 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿವೆ. ಆ ಮೊತ್ತವು ಆ ಕಂಪನಿಗಳ ಲಾಭಕ್ಕಿಂತ ಹೆಚ್ಚಿನ ಮೊತ್ತವಾಗಿರುತ್ತದೆ. ಇನ್ನೊಂದು ಕಂಪನಿ ಅವರ ಲಾಭಕ್ಕಿಂತ 93 ಪಟ್ಟು ಹೆಚ್ಚು ನೀಡಿದೆ. ಮೂರು ಕಂಪನಿಗಳು 28 ಕೋಟಿ ದೇಣಿಗೆ ನೀಡಿ ಶೂನ್ಯ ತೆರಿಗೆ ಪಾವತಿಸಿವೆ. ಉದಾಹರಣೆಗೆ, ನಷ್ಟದ ನಡುವೆಯೂ ಅನೇಕ ಕಂಪನಿಗಳು ಉದಾರವಾಗಿ ಬಿಜೆಪಿಗೆ ದೇಣಿಗೆ ನೀಡಿದವು. ಅದರಲ್ಲಿ ಪ್ರಮುಖವಾದದ್ದು ಭಾರ್ತಿ ಏರ್‌ಟೆಲ್ ಕಂಪೆನಿ.

77,000 ಕೋಟಿ ನಷ್ಟ ಅನುಭವಿಸಿದರೂ ಕಂಪನಿ 200 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಇದಕ್ಕೆ ಪ್ರತಿಯಾಗಿ ರೂ.8,200 ಕೋಟಿ ತೆರಿಗೆ ರಿಯಾಯಿತಿ ಪಡೆದುಕೊಂಡಿದೆ. ಇನ್ನೊಂದು ಕಂಪನಿ DLF. 7 ವರ್ಷಗಳಲ್ಲಿ 130 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಆದರೂ 25 ಕೋಟಿ ರೂಪಾಯಿ ದೇಣಿಗೆ ನೀಡಿ, 20 ಕೋಟಿ ರೂಪಾಯಿ ತೆರಿಗೆ ಲಾಭವನ್ನು ಪಡೆದುಕೊಂಡಿದೆ. ಧರಿವಾಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ 115 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿ, ಬಿಜೆಪಿಗೆ ಸುಮಾರು 24.96 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದೆ. ಈ ಕಂಪನಿಯ ನಷ್ಟ ರೂ.299 ಕೋಟಿಯಾಗಿದೆ. ಹೀಗಾಗಿ ಅವರು ಶೂನ್ಯ ತೆರಿಗೆ ಪಾವತಿಸಿದ್ದಾರೆ.

ಅದೇ ರೀತಿ ಪಿಆರ್‌ಎಲ್ ಡೆವಲಪರ್ಸ್ 20 ಕೋಟಿ ರೂಪಾಯಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿ, 10 ಕೋಟಿ ರೂಪಾಯಿ ದೇಣಿಗೆ ನೀಡಿ 4.7 ಕೋಟಿ ರೂಪಾಯಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ. ಈ ಕಂಪನಿ 1550 ಕೋಟಿ ನಷ್ಟವನ್ನು ಅನುಭವಿಸಿದ ಕಂಪನಿಯಾಗಿದೆ. ಯುಜಿಯಾ ಫಾರ್ಮಾ ಲಿಮಿಟೆಡ್ ಶರತ್ ಚಂದ್ರ ರೆಡ್ಡಿ ಅವರ ಕಂಪನಿಯಾಗಿದೆ. 7 ವರ್ಷದಲ್ಲಿ 28 ಕೋಟಿ ನಷ್ಟ ಅನುಭವಿಸಿದ್ದರೂ ಚುನಾವಣಾ ಬಾಂಡ್ ನಿಧಿಯಾಗಿ 15 ಕೋಟಿ ನೀಡಿ, ರೂ.7.20 ಕೋಟಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ.

7 ವರ್ಷದಲ್ಲಿ ರೂ.86 ಕೋಟಿ ನಷ್ಟವನ್ನು ಉಂಟುಮಾಡಿಕೊಂಡಿದ್ದ ಮೈತ್ರಾ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪನಿ, 19 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿ, 9.99 ಕೋಟಿ ಪಾವತಿಸುವ ಮೂಲಕ ರೂ.126 ಕೋಟಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ.

ಪಿರಮಲ್ ಕ್ಯಾಪಿಟಲ್ ಮತ್ತು ಹೌಸಿಂಗ್ ಫೈನಾನ್ಸ್ ಲಿಮಿಟೆಡ್ 10 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸುವ ಮೂಲಕ 16,376 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದರೂ 10 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ. ಇದಕ್ಕೆ ರೂ.5178.50 ಕೋಟಿ ರೂ. ತೆರಿಗೆ ವಿನಾಯಿತಿ ಸಿಕ್ಕಿದೆ.

ಓರಿಯಂಟಲ್ ಸೌತ್ ದೆಹಲಿ ಹೊಟೇಲ್ ಪ್ರೈವೇಟ್ ಲಿಮಿಟೆಡ್ 5 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದು, 5 ಕೋಟಿ ದೇಣಿಗೆಯನ್ನೂ ನೀಡಿದೆ. ಕಂಪನಿ 49 ಕೋಟಿ ನಷ್ಟವನ್ನು ಅನುಭವಿಸಿದ್ದು, ಶೂನ್ಯ ತೆರಿಗೆ ಪಾವತಿಸಿದೆ. ವಿಲೇಜ್ ಡಿ ನಂದಿ ಪ್ರೈವೇಟ್ ಲಿಮಿಟೆಡ್ ಚುನಾವಣಾ ಬಾಂಡ್‌ಗಳನ್ನು ರೂ.5 ಕೋಟಿಗೆ ಖರೀದಿಸಿದೆ. ಮತ್ತು ರೂ.48 ಕೋಟಿ ನಷ್ಟದ ಹೊರತಾಗಿಯೂ, ಸಂಪೂರ್ಣ ಮೊತ್ತವನ್ನು ದೇಣಿಗೆಯಾಗಿ ನೀಡಿದೆ.

ರೂ.167 ಕೋಟಿ ನಷ್ಟವನ್ನು ಅನುಭವಿಸಿದ ಟಕಿಡೋ ಲೀಸಿಂಗ್ ಆಪರೇಟರ್ಸ್ ಪ್ರೈವೇಟ್ ಲಿಮಿಟೆಡ್ 4 ಕೋಟಿ ಮೌಲ್ಯದ ಬಾಂಡ್ ಖರೀದಿಸಿ ಸಂಪೂರ್ಣ ಹಣವನ್ನು ನೀಡಿದೆ. ಇದಲ್ಲದೇ ಇನ್ನೂ ಹಲವು ಕಂಪನಿಗಳು ತಮ್ಮ ಲಾಭದ ಆರು ಪಟ್ಟು ಹಣವನ್ನು ಉದಾರವಾಗಿ ನೀಡಿದೆ. ಇದೆಲ್ಲವೂ ಅತ್ಯಂತ ಅನುಮಾನಾಸ್ಪದವಾಗಿದೆ. ಈ ಕಂಪನಿಗಳು ಮತ್ತು ಸಂಬಂಧಪಟ್ಟ ಬಿಜೆಪಿ ಮುಖಂಡರ ವಿರುದ್ಧ ಕೂಡಲೇ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.

ದೇಶ

ಹಿರಿಯ ವಕೀಲ ಪ್ರಶಾಂತ್ ಭೂಷಣ್ ತಮ್ಮ ಎಕ್ಸ್ ಪೇಜ್ ನಲ್ಲಿ ಪ್ರಧಾನಿ ಮೋದಿ ಪ್ರಚಾರದಲ್ಲಿ ಮಾತನಾಡುತ್ತಿರುವ ಹಾಗೆ ಬಿಂಬಿಸಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜಕಾರಣಿಗಳು ಬಿಜೆಪಿ ಸೇರಿದ ಮೇಲೆ ಅವರ ವಿರುದ್ಧದ ಪ್ರಕರಣಗಳನ್ನು ಮುಚ್ಚಿ ಹಾಕುವುದನ್ನು ಕಾಂಗ್ರೆಸ್ ಪಕ್ಷ ನಿರಂತರವಾಗಿ ಟೀಕಿಸುತ್ತಿದೆ. ಮುಂದುವರಿದು, ಮೋದಿ ವಾಷಿಂಗ್ ಪೌಡರ್ ಮತ್ತು ಬಿಜೆಪಿ ವಾಷಿಂಗ್ ಮೆಷಿನ್ ಅನ್ನು ಕಾಂಗ್ರೆಸ್ ಪಕ್ಷ ಪರಿಚಯಿಸಿ ಟೀಕಿಸಿದೆ.

ವಾಷಿಂಗ್ ಮೆಷಿನ್ ಬೆಲೆ 8,552 ಕೋಟಿ ರೂಪಾಯಿ ಎಂದು ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷ, ಇದು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಪಡೆದ ಮೊತ್ತವಾಗಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ತಮ್ಮ ಎಕ್ಸ್ ಪೇಜ್ ನಲ್ಲಿ ಪ್ರಧಾನಿ ಮೋದಿ ಪ್ರಚಾರದಲ್ಲಿ ಮಾತನಾಡುತ್ತಿರುವ ಹಾಗೆ ಬಿಂಬಿಸಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಅದರಲ್ಲಿ “ಈಗ ವಾಷಿಂಗ್ ಮಷಿನ್‌ಗಳನ್ನು ಮತ್ತು  ಚುನಾವಣಾ ಬಾಂಡ್‌ಗಳನ್ನು ತಂದಿದ್ದೇವೆ. ಮುಂದಿನ ಬಾರಿ ಅಧಿಕಾರಕ್ಕೆ ಬಂದರೆ ಪೇಟಿಎಂ (Paytm) ತರುವುದಿಲ್ಲ. ನೇರವಾಗಿ ಪ್ರಧಾನಿಗೆ ಹಣ ಸಂದಾಯ ಆಗುವ ಪೇಪಿಎಂ (PayPM) ಯೋಜನೆಯನ್ನು ತರುತ್ತೇವೆ” ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ.

ದೇಶ

ಚುನಾವಣಾ ಬಾಂಡ್‌ಗಳ ಯೋಜನೆಗೆ ಸುಪ್ರೀಂ ಕೋರ್ಟ್ ನಿಷೇಧ ಹೇರುವ ಮೂರು ದಿನಗಳ ಮೊದಲು, ರೂ.10,000 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಮುದ್ರಿಸಲು ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾಗೆ (SPMCIL) ಹಣಕಾಸು ಸಚಿವಾಲಯ ಅನುಮೋದನೆ ನೀಡಿತ್ತು ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ತಲಾ ರೂ.1 ಕೋಟಿ ರೂಪಾಯಿಯ 10,000 ಚುನಾವಣಾ ಬಾಂಡ್‌ಗಳನ್ನು ಮುದ್ರಿಸಲು ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿತ್ತು ಎಂಬ ಮಾಹಿತಿಯು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಯಿಂದ ಬಹಿರಂಗಗೊಂಡಿದೆ. 10,000 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳ ಮುದ್ರಣವನ್ನು ನಿಲ್ಲಿಸುವಂತೆ ಹಣಕಾಸು ಸಚಿವಾಲಯ ಕಳೆದ ತಿಂಗಳು 28 ರಂದು ಆದೇಶ ನೀಡಿತ್ತು.

ಚುನಾವಣಾ ಬಾಂಡ್‌ಗಳನ್ನು ನಿಷೇಧಿಸಿದ ಸುಪ್ರೀಂ ಕೋರ್ಟ್‌ನ ಆದೇಶ ಹೊರಬಿದ್ದ 2 ವಾರಗಳ ನಂತರ, ಮುದ್ರಣವನ್ನು ಸ್ಥಗಿತಗೊಳಿಸುವಂತೆ ಎಸ್‌ಬಿಐ ಹಣಕಾಸು ಸಚಿವಾಲಯವನ್ನು ಕೋರಿದ ನಂತರ ಈ ಆದೇಶ ಹೊರಡಿಸಲಾಗಿದೆ. ಆದರೆ, ಅಷ್ಟರೊಳಗೆ ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ  10,000 ಚುನಾವಣಾ ಬಾಂಡ್‌ಗಳಲ್ಲಿ ತಲಾ ರೂ.1 ಕೋಟಿಯ 8,350 ಚುನಾವಣಾ ಬಾಂಡ್‌ಗಳನ್ನು ಸಿದ್ಧಪಡಿಸಿ ಎಸ್‌ಬಿಐಗೆ ಕಳುಹಿಸಿಕೊಟ್ಟಿತ್ತು. ಹಾಗಾಗಿ ಉಳಿದ 1,650 ಚುನಾವಣಾ ಪತ್ರಿಕೆಗಳ ಮುದ್ರಣವನ್ನು ಮಾತ್ರ ತಡೆಹಿಡಿಯಲಾಗಿದೆ.

ವ್ಯಕ್ತಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ರೂ.1,000, ರೂ.10,000, ರೂ.1 ಲಕ್ಷ, ರೂ.10 ಲಕ್ಷ ಮತ್ತು 1 ಕೋಟಿ ರೂ.ಗಳ ಬಾಂಡ್‌ಗಳನ್ನು ವಿತರಿಸಲು ಅವಕಾಶ ನೀಡುವ ಸಲುವಾಗಿ ಎಲೆಕ್ಟೋರಲ್ ಬಾಂಡ್ ಯೋಜನೆ ಪರಿಚಯಿಸಲಾಯಿತು. ರಾಜಕೀಯ ಪಕ್ಷದಿಂದ 15 ದಿನಗಳೊಳಗೆ ಬಾಂಡ್‌ಗಳಿಂದ ಹಣವನ್ನು ಪಡೆಯಬಹುದು. ಆದರೆ, ಯಾವ್ಯಾವ ರಾಜಕೀಯ ಪಕ್ಷಗಳಿಗೆ ಯಾರು ಹಣ ನೀಡಿದ್ದಾರೆ ಎಂಬ ಮಾಹಿತಿಯನ್ನು ಇದರಲ್ಲಿ ಸೂಚ್ಯವಾಗಿ ರಕ್ಷಿಸಲಾಗುತ್ತದೆ ಎಂಬುದು ಗಮನಾರ್ಹ.

ರಾಜ್ಯ

ಬೆಂಗಳೂರು: ಚುನಾವಣಾ ಬಾಂಡ್ ಪ್ರಕರಣವು ಕೇಂದ್ರ ಸರ್ಕಾರವನ್ನು ತೀವ್ರ ಸ್ವರೂಪದಲ್ಲಿ ಕಾಡುತ್ತಿದೆ. ತನ್ನ ರಕ್ಷಣೆಗಾಗಿ ತರಾತುರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಕೇಂದ್ರ ಸರಕಾರ ಜಾರಿಗೆ ತಂದಿದೆ. ಸರಕಾರದ ಈ ನಡೆಯು ಜನರ ಗಮನ ಬೇರೆಡೆಗೆ ಸೆಳೆಯುವ ಹುನ್ನಾರವಾಗಿದೆ ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ತಾಹೇರ್ ಹುಸೇನ್, “ಈಗಿರುವ ಕೇಂದ್ರ ಸರ್ಕಾರಕ್ಕೆ ಈ ದೇಶದ ಜನರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಸಿಎಎ ಜಾರಿಗೆ ತರುವ ಮೂಲಕ ಹೊರದೇಶದವರನ್ನು ನಮ್ಮ ದೇಶದಲ್ಲಿ ತುಂಬಿಸಲು ಪ್ರಯತ್ನಿಸುತ್ತಿದ್ದಾರೆ.

ಇಲ್ಲಿನ ಜನಸಾಮಾನ್ಯರ ನೈಜ ಸಮಸ್ಯೆಗಳ ಕಡೆ ಗಮನ ಹರಿಸುತ್ತಿಲ್ಲ. ರೈತರ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ಕೃಷಿ ಕಾಯ್ದೆ ಹೇರಿ ಅವರನ್ನೂ ಕಾಡಲಾಗುತ್ತಿದೆ. ರೈತರು ಬೀದಿಗಿಳಿದಿದ್ದಾರೆ. ನಿರುದ್ಯೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ‌. ಗ್ರಹಬಳಕೆಯ ಆಹಾರ ವಸ್ತುಗಳ ದರಗಳ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಈ ಪ್ರಮುಖ ಸಮಸ್ಯೆಗಳ ಕಡೆಗೆ ಗಮನ ಹರಿಸುತ್ತಿಲ್ಲ.

ಕೇಂದ್ರದ ವೈಫಲ್ಯದ ವಿರುದ್ಧ ಜನ ರೋಸಿ ಹೋಗಿದ್ದಾರೆ. ಜೊತೆಗೆ ಬಿಜೆಪಿ ಚುನಾವಣಾ ಬಾಂಡ್ ಪ್ರಕರಣದಿಂದ ಸಂಕಷ್ಟದಲ್ಲಿದೆ.  ಹೀಗಿರುವಾಗ ಚುನಾವಣೆ ಆಸನ್ನವಾಗಿರುವ ಈ ಹೊತ್ತಿಗೆ ಸರಕಾರದ ನಡೆಯು ಬಹಳಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.

ದೇಶ ಸಂಪಾದಕೀಯ

ನವದೆಹಲಿ: ಕಳೆದ ತಿಂಗಳು, ಅನಾಮಧೇಯ ರಾಜಕೀಯ ಹಣವನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು, ಇದನ್ನು “ಅಸಂವಿಧಾನಿಕ” ಎಂದು ಕರೆದಿತ್ತು.

ಈ ಹಿನ್ನಲೆಯಲ್ಲಿ, ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಕಾಲಾವಕಾಶವನ್ನು ವಿಸ್ತರಿಸುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ. ಎಸ್‌ಬಿಐ ಅನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಮಾರ್ಚ್ 12 ರಂದು (ನಾಳೆ ಸಂಜೆಯೊಳಗೆ) ವ್ಯವಹಾರ ಮುಗಿಯುವ ಮೊದಲು ವಿವರಗಳನ್ನು ಬಹಿರಂಗಪಡಿಸುವಂತೆ ಬ್ಯಾಂಕ್‌ಗೆ ಆದೇಶಿಸಿದೆ.

ಎಸ್‌ಬಿಐ, ಮೊಹರು ಮಾಡಿದ ಲಕೋಟೆಯನ್ನು ತೆರೆದು, ವಿವರಗಳನ್ನು ಕ್ರೋಢೀಕರಿಸಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ಈ ಬೆಳವಣಿಗೆ ನಡೆದಿದೆ.

ಕಳೆದ ತಿಂಗಳು, ಸುಪ್ರೀಂ ಕೋರ್ಟ್ ಅನಾಮಧೇಯ ರಾಜಕೀಯ ಹಣವನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು “ಅಸಂವಿಧಾನಿಕ” ಎಂದು ಕರೆದು ರದ್ದುಗೊಳಿಸಿತು ಮತ್ತು ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ ಏಪ್ರಿಲ್ 12, 2019 ರಿಂದ ಖರೀದಿಸಿದ ಬಾಂಡ್‌ಗಳ ವಿವರಗಳನ್ನು ಸಲ್ಲಿಸುವಂತೆ ಎಸ್‌ಬಿಐಗೆ ನಿರ್ದೇಶನ ನೀಡಿತ್ತು.

ಚುನಾವಣಾ ಬಾಂಡ್‌ಗಳನ್ನು ನೀಡುವ ಬ್ಯಾಂಕ್ ಆಗಿದ್ದ ಎಸ್‌ಬಿಐ, ರಾಜಕೀಯ ಪಕ್ಷಗಳು ಎನ್‌ಕ್ಯಾಶ್ ಮಾಡಿದ ಪ್ರತಿ ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ವಿಸ್ತರಣೆಯನ್ನು ಕೋರಿತ್ತು.

ಚುನಾವಣಾ ಬಾಂಡ್‌ಗಳ ಪ್ರಕರಣ: ಸುಪ್ರೀಂ ಕೋರ್ಟ್ನ ಕೆಲವು ಉಲ್ಲೇಖಗಳು:
• ಎಸ್‌ಬಿಐನ ಸಲ್ಲಿಕೆಗಳು ಕೇಳಿದ ಮಾಹಿತಿಯು ಸುಲಭವಾಗಿ ಲಭ್ಯವಿದೆ ಎಂದು ಸೂಚಿಸುತ್ತದೆ. ಹೀಗಾಗಿ ಜೂನ್ 30ರ ವರೆಗೆ ಕಾಲಾವಕಾಶವನ್ನು ವಿಸ್ತರಿಸುವಂತೆ ಕೋರಿ ಎಸ್‌ಬಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಮಾರ್ಚ್ 12, 2024 ರ (ನಾಳೆ ಸಂಜೆಯೊಳಗೆ) ಕೆಲಸದ ಸಮಯದ ಮುಕ್ತಾಯದೊಳಗೆ ವಿವರಗಳನ್ನು ಬಹಿರಂಗಪಡಿಸಲು SBI ಗೆ ನಿರ್ದೇಶಿಸಲಾಗಿದೆ.

• ಕಳೆದ 26 ದಿನಗಳಲ್ಲಿ, ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ನಿಮ್ಮ ಅರ್ಜಿಯು ಅದರ ಬಗ್ಗೆ ಮೌನವಾಗಿದೆ.

• ನೀವು ಈ ರೀತಿಯ ವಿಸ್ತರಣೆಯೊಂದಿಗೆ ಬಂದಾಗ ಇದು ಗಂಭೀರ ವಿಷಯವಾಗಿದೆ. ನಮ್ಮ ತೀರ್ಪು ಕ್ರಿಸ್ಟಲ್ ಕ್ಲಿಯರ್ ಆಗಿದೆ.

• SBI ಕೇವಲ ಮುಚ್ಚಿದ ಕವರ್ ತೆರೆಯಬೇಕು, ವಿವರಗಳನ್ನು ಕೊಲೇಟ್ ಮಾಡಿ ಮತ್ತು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು.

• ನೀವು ದೇಶದ ನಂಬರ್ 1 ಬ್ಯಾಂಕ್ ಆಗಿದ್ದೀರಿ, ಎಸ್‌ಬಿಐ ಮುಂದೆ ಬಂದು ವಿವರಗಳನ್ನು ಹಂಚಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಕೇಂದ್ರ ಬಿಜೆಪಿ ಸರ್ಕಾರವು 2018ರಲ್ಲಿ ಚುನಾವಣಾ ಬಾಂಡ್ ಎಂಬ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯ ಮೂಲಕ ವ್ಯಕ್ತಿಗಳು ಮತ್ತು ಕಂಪನಿಗಳು ಚುನಾವಣಾ ಬಾಂಡ್‌ಗಳನ್ನು ಖರೀದಿಸಿ ತಮ್ಮ ನೆಚ್ಚಿನ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದು. ಅದಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಚುನಾವಣಾ ಬಾಂಡ್‌ಗಳು 1 ಸಾವಿರದಿಂದ 1 ಕೋಟಿ ರೂಪಾಯಿಯವರೆಗೆ ಮಾರಾಟ ಮಾಡಲಾಯಿತು.

ಈ ಯೋಜನೆಯ ವಿಶೇಷತೆ ಏನೆಂದರೆ, ಚುನಾವಣಾ ಬಾಂಡ್‌ಗಳನ್ನು ಖರೀದಿಸುವವರ ಹೆಸರು ಮತ್ತು ವಿಳಾಸ ಸೇರಿದಂತೆ ಯಾವುದೇ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ. ಈ ಬಾಂಡ್ ಅನ್ನು 15 ದಿನಗಳಲ್ಲಿ ನಗದು ರೂಪದಲ್ಲಿ ಪರಿವರ್ತಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಚುನಾವಣಾ ಬಾಂಡ್‌ಗಳ ಮೊತ್ತವು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಹೋಗುತ್ತವೆ. ಅಂತಹ ಸಮಸ್ಯೆ ಈ ಚುನಾವಣಾ ಬಾಂಡ್ನಲ್ಲಿ ಇದೆ.

ಈ ಚುನಾವಣಾ ಬಾಂಡ್ ಸಂಪೂರ್ಣವಾಗಿ ಬಿಜೆಪಿಯ ಪರವಾಗಿಯೇ ಇತ್ತು ಎಂದು ಹೇಳಲಾಗುತ್ತಿದೆ. 2016 ರಿಂದ 2022ರ ಅವಧಿಯಲ್ಲಿ ಬಿಜೆಪಿ ಮಾತ್ರ ರೂ.5,272 ಕೋಟಿ ದೇಣಿಗೆ ಪಡೆದಿತ್ತು. ಇದು ಒಟ್ಟು ನಿಧಿಯಲ್ಲಿ ಶೇ.58 ರಷ್ಟು ಆಗಿರುತ್ತದೆ. ಈ ಕಾರಣದಿಂದಾಗಿ, ಚುನಾವಣಾ ಬಾಂಡ್‌ಗಳಲ್ಲಿ ಪಾರದರ್ಶಕತೆ ಇಲ್ಲ, ಹೀಗಾಗಿ ಅದನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದವು.

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ 5 ನ್ಯಾಯಾಧೀಶರ ಸಂವಿಧಾನ ಪೀಠವು, ಚುನಾವಣಾ ಬಾಂಡ್ ಕಾರ್ಯವಿಧಾನವನ್ನು ರದ್ದುಗೊಳಿಸಲಾಗಿದೆ ಎಂದು ಸರ್ವಾನುಮತದ ತೀರ್ಪು ನೀಡಿತು.

ಇದಲ್ಲದೆ, 2019 ರಿಂದ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದವರ ವಿವರಗಳನ್ನು ಮಾರ್ಚ್ 6 ರೊಳಗೆ ಎಸ್‌ಬಿಐ ಬ್ಯಾಂಕ್ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಮತ್ತು ದಾನಿಗಳ ವಿವರಗಳನ್ನು ಮಾರ್ಚ್ 13 ರೊಳಗೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು.

ಏತನ್ಮದ್ಯೆ, ಎರಡು ದಿನಗಳ ಹಿಂದೆ ಎಸ್‌ಬಿಐ ಬ್ಯಾಂಕ್, ಚುನಾವಣಾ ಬಾಂಡ್ ವಿವರಗಳನ್ನು ಬಹಿರಂಗಪಡಿಸಲು ಜೂನ್‌ 30 ರವರೆಗೆ ಕಾಲಾವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುವ ಮೂಲಕ ಭಾರಿ ವಿವಾದವನ್ನು ಸೃಷ್ಟಿಸಿತು. ಈ ಘಟನೆಯಲ್ಲಿ, ಚುನಾವಣೆಗೆ ಮುನ್ನ ಈ ವಿವರಗಳನ್ನು ಪ್ರಕಟಿಸುವುದನ್ನು ತಪ್ಪಿಸಲು ಎಸ್‌ಬಿಐ ಇಂತಹ ಬೇಡಿಕೆಯನ್ನು ಎತ್ತಿದೆ ಎಂದು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸುತ್ತಿವೆ.

ಈ ಹಿನ್ನಲೆಯಲ್ಲಿ, ತಮಿಳುನಾಡಿನ ಮಧುರೈ ಸಂಸದ ಎಸ್.ವೆಂಕಟೇಶನ್ ಅವರು ಈ ವಿಚಾರವಾಗಿ ಎಸ್‌ಬಿಐ ಬ್ಯಾಂಕ್ ಅನ್ನು ಟೀಕಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ, “ಚಂದ್ರಯಾನವು ಚಂದ್ರನನ್ನು ತಲುಪಲು 41 ದಿನಗಳನ್ನು ತೆಗೆದುಕೊಂಡಿತು, ಇದು ಆಧುನಿಕ ವಿಜ್ಞಾನದ ಸಾಧನೆಯಾಗಿದೆ. ಮುಂಬೈ ಮೂಲದ ಎಸ್‌ಬಿಐ ದೆಹಲಿಯ ಸುಪ್ರೀಂ ಕೋರ್ಟ್‌ಗೆ ದಾನಿಗಳ ಹೆಸರುಗಳನ್ನು ನೀಡಲು 140 ದಿನಗಳ ಕಾಲಾವಕಾಶ ಕೇಳುತ್ತಿದೆ. ಇದು ಆಧುನಿಕ ಭ್ರಷ್ಟಾಚಾರದ ಸಾಧನೆಯಾಗಿದೆ.

48 ಕೋಟಿ ಗ್ರಾಹಕರ ನಂಬಿಕೆಯಾಗಿದ್ದ ಎಸ್‌ಬಿಐ ಇನ್ನು ಮುಂದೆ ಹ್ಯಾಶ್‌ಟ್ಯಾಗ್ ಹಾಕಿ #ModiKaParivar ಎಂದು ನಮೂದಿಸಿಕೊಳ್ಳಲಿ” ಎಂದು ಟೀಕಿಸಿದ್ದಾರೆ.

ರಾಜಕೀಯ

ನವದೆಹಲಿ: ಖಾಸಗಿ ಕಂಪನಿಗಳ ಮೇಲೆ ದಾಳಿ ಮಾಡಿ, ಅವುಗಳ ಮೂಲಕ ಬಿಜೆಪಿಗೆ ದೇಣಿಗೆ ಸಂಗ್ರಹಿಸಲಿಕ್ಕಾಗಿ ಕೇಂದ್ರ ಗುಪ್ತಚರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೈರಾಮ್ ರಮೇಶ್, ‘ಕಳೆದ ಹಣಕಾಸು ವರ್ಷಗಳ 2018-19 ಮತ್ತು 2022-23ರ ನಡುವೆ ಬಿಜೆಪಿಗೆ ಒಟ್ಟು 335 ಕೋಟಿ ರೂ ದೇಣಿಗೆ ನೀಡಿರುವ ಸುಮಾರು 30 ಕಂಪನಿಗಳು, ಅದೇ ಅವಧಿಯಲ್ಲಿ ಕೇಂದ್ರ ಗುಪ್ತಚರ ಸಂಸ್ಥೆಯಿಂದ ತನಿಖೆಗಳನ್ನು ಎದುರಿಸಿರುತ್ತದೆ.

ಈ ಸಮಸ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು. ಬಿಜೆಪಿ ಅವರ ಹಣಕಾಸಿನ ಮೂಲಗಳ ಬಗ್ಗೆ ಸ್ವೇತ ಪತ್ರ ಹೊರಡಿಸಬೇಕು. ಇಲ್ಲದಿದ್ದರೆ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಈ ಅನುಮಾನಾಸ್ಪದ ದೇಣಿಗೆಗಳನ್ನು ತನಿಖೆ ಮಾಡಲು ಒಪ್ಪಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ, ‘ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ) ಮತ್ತು ಸಿಬಿಐ ಮುಂತಾದ ಕೇಂದ್ರೀಯ ಗುಪ್ತಚರ ಸಂಸ್ಥೆಗಳ ತನಿಖೆಯನ್ನು ಎದುರಿಸಿದ ನಂತರ, ಹಲವು ಖಾಸಗಿ ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿವೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.

ಇದು ಕೇಂದ್ರ ಗುಪ್ತಚರ ಸಂಸ್ಥೆಯ ಸ್ವಾತಂತ್ರ್ಯ, ಸ್ವಾಯತ್ತತೆ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಈ 3 ತನಿಖಾ ಸಂಸ್ಥೆಗಳ ಪೈಕಿ 2 ಕೇಂದ್ರ ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಒಳಪಡುತ್ತವೆ.

ಗುಪ್ತಚರ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ಹೇಗೆ ನಿಯಂತ್ರಿಸುತ್ತದೆ ಎಂಬುದು ಇಡೀ ದೇಶಕ್ಕೆ ತಿಳಿದಿದೆ. ರಾಜಕಾರಣಿಗಳ ಮೇಲಿನ ಜಾರಿ ನಿರ್ದೇಶನಾಲಯದ ಪ್ರಕರಣಗಳು 2014 ರಿಂದ ನಾಲ್ಕು ಪಟ್ಟು ಹೆಚ್ಚಾಗಿದೆ. ಇದರಲ್ಲಿ ಶೇಕಡಾ ಶೇ.95ರಷ್ಟು ಪ್ರಕರಣಗಳು ವಿರೋಧ ಪಕ್ಷದ ನಾಯಕರ ವಿರುದ್ಧವೇ ಆಗಿವೆ.

ಬಿಜೆಪಿಗೆ ಒಟ್ಟು 187.58 ಕೋಟಿ ರೂ.ನೀಡಿದ 30 ಕಂಪನಿಗಳ ಪೈಕಿ, 23 ಕಂಪನಿಗಳು, 2014 ರಿಂದ ದಾಳಿ ನಡೆದ ವರ್ಷದವರೆಗೆ ಬಿಜೆಪಿಗೆ ಯಾವುದೇ ದೇಣಿಗೆ ನೀಡಿರುವುದಿಲ್ಲ. ಆದರೆ ಅದರ ನಂತರ ದೇಣಿಗೆಯನ್ನು ನೀಡಿದೆ. ಈಗಾಗಲೇ ದೇಣಿಗೆ ನೀಡುತ್ತಿದ್ದ ಸಂಸ್ಥೆಗಳು ದಾಳಿಯ ನಂತರ ಹೆಚ್ಚಿನ ದೇಣಿಗೆಗಳನ್ನು ನೀಡಿವೆ.

ತನಿಖಾ ಸಂಸ್ಥೆಗಳು ದಾಖಲಿಸಿರುವ ಪ್ರಕರಣಗಳು ಅಕ್ರಮ ಎಂದು ನಾವು ಹೇಳುತ್ತಿಲ್ಲ. ಆದರೆ ಈ ಕಂಪನಿಗಳು ತನಿಖೆ ಎದುರಿಸಿದ ನಂತರ ಬಿಜೆಪಿಗೆ ಏಕೆ ದೇಣಿಗೆ ನೀಡುತ್ತಿವೆ ಎಂಬುದು ತನಿಖೆಯಾಗಬೇಕಾದ ವಿಚಾರವಾಗಿದೆ’ ಎಂದು ಹೇಳಿದ್ದಾರೆ.

ಜಾರಿ ನಿರ್ದೇಶನಾಲಯದ ಕ್ರಮದ ನಂತರ ಅವರು ಬಿಜೆಪಿಗೆ ದೇಣಿಗೆ ನೀಡುತ್ತಿರುವುದು ಕೇವಲ ಕಾಕತಾಳೀಯವೇ? ನಾವು ಈ ವಿಷಯವನ್ನು ನ್ಯಾಯಾಂಗ ಮತ್ತು ಜನರ ಬಳಿಗೆ ಕೊಂಡೊಯ್ಯುತ್ತೇವೆ. ಎರಡೂ ಕಡೆಯೂ ನಿಮ್ಮನ್ನು ಸೋಲಿಸುತ್ತೇವೆ’ ಎಂದು ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.

ದೇಶ

ಚುನಾವಣಾ ಬಾಂಡ್ ಯೋಜನೆಯು ಸಮಾನತೆ, ನ್ಯಾಯಸಮ್ಮತತೆ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಉಲ್ಲಂಘಿಸಿದೆ. ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪು ಚುನಾವಣೆಯಲ್ಲಿ ಪಾರದರ್ಶಕತೆ, ಮಾಹಿತಿ ಹಕ್ಕು ಮತ್ತು ಸಮಾನತೆ ಮುಂತಾದವುಗಳಿಗೆ ಸಿಕ್ಕಿದ ಜಯವಾಗಿದೆ.

ರಾಜಕೀಯ ಪಕ್ಷಗಳು ದೇಣಿಗೆ ಪಡೆಯುವ ಚುನಾವಣಾ ಬಾಂಡ್ ಯೋಜನೆ ಅಸಿಂಧು ಎಂದು ಸುಪ್ರೀಂ ಕೋರ್ಟ್ ನಿನ್ನೆ ತೀರ್ಪು ನೀಡಿದೆ. ದೇಣಿಗೆಗಳ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡುವಂತೆಯೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಆದೇಶಿಸಿದೆ.

ಹೀಗಾಗಿ ಕಾರ್ಪೊರೇಟ್ ಕಂಪನಿಗಳು ಮತ್ತು ದೊಡ್ಡ ಉದ್ಯಮಿಗಳಿಂದ ಪ್ರತಿ ಪಕ್ಷಗಳು ಎಷ್ಟು ಹಣ ಪಡೆದಿವೆ ಎಂಬ ವಿವರವನ್ನು ಮಾರ್ಚ್ 31 ರೊಳಗೆ ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ.

ಈ ಹಿನ್ನಲೆಯಲ್ಲಿ, ಸುಪ್ರೀಂ ಕೋರ್ಟ್ನ ಈ ತೀರ್ಪನ್ನು ಮಾಜಿ ಹಣಕಾಸು ಸಚಿವ ಹಾಗೂ ರಾಜ್ಯಸಭಾ ಸದಸ್ಯ ಪಿ.ಚಿದಂಬರಂ ಸ್ವಾಗತಿಸಿದ್ದಾರೆ. ಮತ್ತು ಈ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ್ದಾರೆ.

‘ಚುನಾವಣಾ ಬಾಂಡ್ ಯೋಜನೆಯು ಸಮಾನತೆ, ನ್ಯಾಯಸಮ್ಮತತೆ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಉಲ್ಲಂಘಿಸಿದೆ. ಮತ್ತು  ಸುಪ್ರೀಂ ಕೋರ್ಟ್‌ನ ತೀರ್ಪು ಚುನಾವಣೆಯಲ್ಲಿ ಪಾರದರ್ಶಕತೆ, ಮಾಹಿತಿ ಹಕ್ಕು ಮತ್ತು ಸಮಾನತೆ ಮುಂತಾದವುಗಳಿಗೆ ಸಿಕ್ಕಿದ ಜಯವಾಗಿದೆ’ ಎಂದು ಹೇಳಿದ್ದಾರೆ.

‘ಪ್ರಸ್ತುತ ದೊಡ್ಡ ಕಾರ್ಪೊರೇಟ್‌ಗಳಿಂದ ಮತ್ತು ದೊಡ್ಡ ದೊಡ್ಡ ಬಂಡವಾಳಶಾಹಿಗಳಿಂದ ಬಿಜೆಪಿ ಪಡೆದ ದೇಣಿಗೆಯಲ್ಲಿ ಶೇಕಡಾ 90ರಷ್ಟು ಬಹಿರಂಗಗೊಳ್ಳಲಿದೆ.

ಹಣ ಕೊಟ್ಟವರು ಯಾರು? ಅವರು ಹಣ ಪಾವತಿಸಿದಾಗ, ಅದಕ್ಕೆ ಪ್ರತಿಯಾಗಿ ಪಕ್ಷ ಅವರಿಗೆ ನೀಡಿದ್ದು ಏನು? ಎಂಬುದನ್ನು ಜಗತ್ತೇ ತಿಳಿಯಲಿದೆ. ರಾಜಕೀಯ ಪಕ್ಷಗಳಿಗೆ ಹಣ ಏಕೆ ಕೊಡಲಾಯಿತು ಎಂದು ಜನ ಪ್ರಶ್ನಿಸುತ್ತಾರೆ. ಆಗ ಜನರು ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ’ ಎಂದು ಚಿದಂಬರಂ ಹೇಳಿದ್ದಾರೆ.