‘ಡೀಪ್‌ಪ್ಯಾಕ್’ ತಡೆಗೆ ‘ಡಿಜಿಟಲ್ ಇಂಡಿಯಾ’ ಮಸೂದೆ ತರಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ!
ನವದೆಹಲಿ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ‘ಡೀಪ್‌ಪ್ಯಾಕ್’ ವಿಡಿಯೋ ಹಾಗೂ ಫೋಟೋಗಳನ್ನು ಪ್ರಕಟಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ‘ಡಿಜಿಟಲ್ ಇಂಡಿಯಾ’ ಮಸೂದೆ ತರಲು ನಿರ್ಧರಿಸಿದೆ ಎಂದು ವರದಿಯಾಗಿದೆ.
‘ಎಐ’ ಎಂಬ ಕೃತಕ ತಂತ್ರಜ್ಞಾನದ ನೆರವಿನಿಂದ ‘ಮಾರ್ಫಿಂಗ್’ ಮಾಡಿ ಕೆಲ ಬಾಲಿವುಡ್ ನಟಿಯರ ವಿಡಿಯೋ, ಫೋಟೋಗಳನ್ನು ಕಳೆದ ವರ್ಷ ‘ಡೀಪ್‌ಪ್ಯಾಕ್’ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು ದೇಶಾದ್ಯಂತ ಸಂಚಲನ ಮೂಡಿಸಿತ್ತು. ಇದನ್ನು ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದ್ದರು. ಒಂದು ಹಂತದಲ್ಲಿ ಪ್ರಧಾನಿ ಮೋದಿಯ ‘ಗರ್ಬಾ’ ನೃತ್ಯದ ‘ಡೀಪ್‌ಪ್ಯಾಕ್’ ವಿಡಿಯೋ ಬಿಡುಗಡೆಯಾಗಿ ದೊಡ್ಡ ಸುದ್ಧಿಯಾಗಿತ್ತು. ಇದರ ಬಗ್ಗೆಯೂ ಮೋದಿ ಕಳವಳ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ, ‘ಡೀಪ್‌ಪ್ಯಾಕ್’ ಸಮಸ್ಯೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ‘ಡಿಜಿಟಲ್ ಇಂಡಿಯಾ’ ಮಸೂದೆಯನ್ನು ತರಲು ಮತ್ತು ನಿಯಂತ್ರಿಸಲು ಯೋಜಿಸುತ್ತಿದೆ. ತರುವಾಯ, ಮುಂಬರುವ ಸಂಸತ್ ಅಧಿವೇಶನದಲ್ಲಿ ಸರ್ವ ಪಕ್ಷಗಳ ಒಮ್ಮತದೊಂದಿಗೆ ಮಸೂದೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರ ಯೋಜಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.