ಮತ್ತೊಮ್ಮೆ ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಘೋಷಿಸಿದ ಮಾಯಾವತಿ… ಆಕಾಶ್ ಆನಂದ್ ಯಾರು?
• ಡಿ.ಸಿ.ಪ್ರಕಾಶ್
ಲೋಕಸಭೆ ಚುನಾವಣೆ ವೇಳೆ ಆಕಾಶ್‌ನನ್ನು ಡಮ್ಮಿ ಮಾಡಿದ್ದ ಮಾಯಾವತಿ, ಚುನಾವಣೆಯ ನಂತರ ಅವರನ್ನು ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ!
ಮಾಯಾವತಿ ಅವರು 2019ರ ಲೋಕಸಭೆ ಚುನಾವಣೆಯಲ್ಲಿ 10 ಕ್ಷೇತ್ರಗಳನ್ನು ಗೆದ್ದರು. ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವು ಶೇ.9.39ರಷ್ಟು ಮತಗಳನ್ನು ಪಡೆದಿದ್ದರೂ ಪಕ್ಷ ಹೀನಾಯ ಸೋಲನ್ನು ಅನುಭವಿಸಿತು.
ಈ ಹಿನ್ನೆಲೆಯಲ್ಲಿ, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಮತ್ತೊಮ್ಮೆ ತಮ್ಮ ಅಣ್ಣನ ಮಗ ಆಕಾಶ್ ಆನಂದ್ ಅವರನ್ನು ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ. ಇದರೊಂದಿಗೆ ಆಕಾಶ್ ಆನಂದ್ ಅವರಿಗೆ ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯನ್ನೂ ನೀಡಲಾಗಿದೆ. ಬಹುಜನ ಸಮಾಜ ಪಕ್ಷದ ಕಾರ್ಯಕಾರಿಣಿ ಸಭೆ ಜೂನ್ 23 ರಂದು ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆಯಿತು. ಸಭೆಯ ನಂತರ ಮಾಯಾವತಿ ಈ ಕುರಿತು ಘೋಷಣೆ ಮಾಡಿದ್ದಾರೆ.
ಆಕಾಶ್ ಆನಂದ್ ಲಂಡನ್ ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಅವರು 2017ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿ ಅವರೊಂದಿಗೆ ಸೇರಿ ಕೆಲಸ ಮಾಡಿದ್ದರು. 2019ರ ಲೋಕಸಭಾ ಚುನಾವಣೆ ಸಮಯದಲ್ಲಿ, ಅವರು ಬಹುಜನ ಸಮಾಜ ಪಕ್ಷದ ಪ್ರಮುಖ ಮುಖವಾಗಿ ಗುರುತಿಸಿಕೊಂಡರು. ಮತ್ತು ಆಕಾಶ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಿಸಿದ್ದು ಅಲ್ಲದೇ ಅವರನ್ನು ಕಳೆದ ಡಿಸೆಂಬರ್‌ನಲ್ಲಿ ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದೂ ಘೋಷಿಸಿದರು.
ಆದರೆ, ತನ್ನ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ ನಾಲ್ಕೈದು ತಿಂಗಳಲ್ಲೇ ತಮ್ಮ ನಿಲುವನ್ನು ಬದಲಿಸಿಕೊಂಡ ಮಾಯಾವತಿ, ಆಕಾಶ್ ಆನಂದ್ ಅವರ ರಾಜಕೀಯ ಉತ್ತರಾಧಿಕಾರಿ ಘೋಷಣೆಯನ್ನು ಹಿಂಪಡೆಯುತ್ತಿರುವುದಾಗಿ ಕಳೆದ ಮೇ ತಿಂಗಳಲ್ಲಿ ಚುನಾವಣೆಯ ಸನಿಹದಲ್ಲಿ ಘೋಷಿಸಿದರು. ಅಲ್ಲದೇ ‘ಆಕಾಶ್ ಆನಂದ್ ರಾಜಕೀಯವಾಗಿ ಪ್ರಬುದ್ಧರಾಗುವವರೆಗೆ ಅವರನ್ನು ಪಕ್ಷದಿಂದ ತೆಗೆದುಹಾಕಲಾಗುತ್ತಿದೆ’ ಎಂದೂ ಮಾಯಾವತಿ ಹೇಳಿದರು.
ಬಿಜೆಪಿ ವಿರುದ್ಧ ಆಕಾಶ್ ಆನಂದ್ ಟೀಕೆ ಮಾಡಿರುವುದು ಮಾಯಾವತಿ ಅವರ ಈ ನಿರ್ಧಾರಕ್ಕೆ ಕಾರಣ ಎಂದು ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ.
ಉತ್ತರ ಪ್ರದೇಶದ ಸೀತಾಪುರದಲ್ಲಿ ಬಹುಜನ ಸಮಾಜ ಪಕ್ಷ ಚುನಾವಣಾ ಪ್ರಚಾರ ನಡೆಸಿತು. ಅದರಲ್ಲಿ ಮಾತನಾಡಿದ ಆಕಾಶ್ ಆನಂದ್, ‘ಇದೊಂದು ಬುಲ್ಡೋಜರ್ ಸರಕಾರ, ದೇಶದ್ರೋಹಿಗಳ ಸರಕಾರ, ಯುವಕರನ್ನು ಹಸಿವಿನಿಂದ ಸಾಯಿಸುವ, ಮುದುಕರನ್ನು ಗುಲಾಮರನ್ನಾಗಿಸುವ ಭಯೋತ್ಪಾದಕರ ಸರಕಾರ. ಅಫ್ಘಾನಿಸ್ತಾನದ ತಾಲಿಬಾನಿಗಳಂತೆ ಬಿಜೆಪಿ ಆಡಳಿತ ನಡೆಸುತ್ತಿದೆ.
ಚುನಾವಣಾ ಬಾಂಡ್‌ಗಳ ಮೂಲಕ 16,000 ಕೋಟಿ ರೂ.ಗಳನ್ನು ತೆಗೆದುಕೊಂಡ ಕಳ್ಳರ ಪಕ್ಷ’ ಎಂದೆಲ್ಲಾ ಆಕಾಶ್ ಆನಂದ್ ಬಿಜೆಪಿಯನ್ನು ಟೀಕಿಸಿದ್ದರು. ಚುನಾವಣಾ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಈ ಕಾರಣದಿಂದಾಗಿ ಆಕಾಶ್ ಆನಂದ್ ಅವರನ್ನು ಪಕ್ಷದಿಂದ ದೂರವಿಡಲಾಗಿತ್ತು.
2019ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ 10 ಸಂಸದರನ್ನು ಪಡೆದಿದ್ದರೂ, ಆ ಸಂಸದರು ಬಿಜೆಪಿ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದಂತಹ ಇತರ ಪಕ್ಷಗಳಿಗೆ ಪಕ್ಷಾಂತರ ಮಾಡಿದರು. ಹಾಗಾಗಿ ಮಾಯಾವತಿ ಹತಾಶರಾಗಿದ್ದರು. ಈ ಹಿನ್ನೆಲೆಯಲ್ಲಿ, 2024ರ ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ‘ಇಂಡಿಯಾ’ ಮೈತ್ರಿಕೂಟ ಸೇರಿದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸುವುದು ಖಚಿತ ಎಂದು ರಾಜಕೀಯ ವಿಶ್ಲೇಷಕ ಅಭಿಪ್ರಾಯವಾಗಿತ್ತು. ಆದರೆ ಮಾಯಾವತಿ ಅಂತಹ ನಿರ್ಧಾರ ತೆಗೆದುಕೊಂಡಿಲ್ಲ. ಮಾಯಾವತಿ ಅವರು ‘ಇಂಡಿಯಾ’ ಮೈತ್ರಿಕೂಟ ಅಥವಾ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ಸೇರದೇ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದರು.
ಮಾಯಾವತಿ ಏಕಾಂಗಿಯಾಗಿ ಸ್ಪರ್ಧಿಸುವುದು ಬಿಜೆಪಿಗೆ ಲಾಭ ಎಂದು ರಾಜಕೀಯ ವಿಶ್ಲೇಷಕರು ಮತ್ತು ‘ಇಂಡಿಯಾ’ ಮೈತ್ರಿಕೂಟದ ಮುಖಂಡರು ಪದೇ ಪದೇ ಹೇಳುತ್ತಿದ್ದರು. ಅದೇ ರೀತಿ ಮಾಯಾವತಿಯವರ ನಿರ್ಧಾರ ಬಿಜೆಪಿಗೆ ಮಾತ್ರ ಲಾಭವಾಯಿತು. ಉತ್ತರ ಪ್ರದೇಶದಲ್ಲಿ ಬಿಜೆಪಿ 33 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಆದರೇ ಮಾಯಾವತಿ ಅವರು ‘ಇಂಡಿಯಾ’ ಮೈತ್ರಿಕೂಟಕ್ಕೆ ಸೇರಿದ್ದರೆ, ಬಿಜೆಪಿ ಉತ್ತರ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಸ್ಥಾನಗಳನ್ನು ಕಳೆದುಕೊಳ್ಳುತ್ತಿತ್ತು. ಅದು ಏನೇ ಇರಲಿ, ಈ ಬಾರಿಯ ಚುನಾವಣೆಯಲ್ಲಿ ಬಿಎಸ್‌ಪಿ ಹೀನಾಯ ಸೋಲು ಕಂಡ ನಂತರ ಮಾಯಾವತಿ ಮತ್ತೊಮ್ಮೆ ಆಕಾಶ್ ಆನಂದ್ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ.
ಹಾಗಾಗಿ ಉತ್ತರ ಪ್ರದೇಶ ರಾಜಕೀಯದಲ್ಲಿ ಮತ್ತು ಮಾಧ್ಯಮಗಳಲ್ಲಿ ಆಕಾಶ್ ಆನಂದ್ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಮಾಯಾವತಿಯವರ ಸಹೋದರ ಆನಂದ್ ಕುಮಾರ್ ಅವರ ಮಗ ಆಕಾಶ್ 1995ರಲ್ಲಿ ಜನಿಸಿದ್ದಾರೆ. ಇಂಗ್ಲೆಂಡಿನಲ್ಲಿ ಎಂಬಿಎ ವ್ಯಾಸಂಗ ಮಾಡಿದ ಅವರು 2016ರಲ್ಲಿ ಬಹುಜನ ಸಮಾಜ ಪಕ್ಷ ಸೇರಿದರು. ಆ ಸಮಯದಲ್ಲಿ, ಸಹರಾನ್‌ಪುರದಲ್ಲಿ ಸಾರ್ವಜನಿಕ ಸಭೆ ನಡೆಯಿತು, ಇದರಲ್ಲಿ ಅಖಿಲೇಶ್ ಯಾದವ್ ಮತ್ತು ಅಜಿತ್ ಸಿಂಗ್ ಅವರಂತಹ ಪ್ರಮುಖ ನಾಯಕರು ಭಾಗವಹಿಸಿದ್ದರು. ಆಕಾಶ್ ಆನಂದ್ ಗೆ ಇದು ಮೊದಲ ವೇದಿಕೆಯಾಗಿತ್ತು.
ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ 2019ರಲ್ಲಿ ಆಗ್ರಾದಲ್ಲಿ ಬಹುಜನ ಸಮಾಜ ಪಕ್ಷದ ಮಹಾಸಭೆ ನಡೆಯಿತು. ಆ ಸಭೆಯಲ್ಲೇ ಆಕಾಶ್ ಆನಂದ್ ಮೊದಲ ಬಾರಿಗೆ ಭಾಷಣ ಮಾಡಿದರು. ತರುವಾಯ, ಬಿಎಸ್‌ಪಿಯೊಳಗೆ ಅವರ ಪ್ರಭಾವ ಹೆಚ್ಚಾಯಿತು. ಅವರು ಪಕ್ಷದ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಅತ್ತೆ ಮತ್ತು ಪಕ್ಷದ ನಾಯಕಿ ಮಾಯಾವತಿಯವರ ಪರವಾಗಿ ನಿಂತರು. ಆದ್ದರಿಂದಲೇ ಮಾಯಾವತಿ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದರು.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೂ, ಮಾಯಾವತಿ ಅವರು ಬಿಜೆಪಿಗೆ ಅನುಕೂಲವಾಗುವ ರಾಜಕೀಯ ನಿಲುವುಗಳನ್ನೇ ತೆಗೆದುಕೊಳ್ಳುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲೇ ಆಕಾಶ್ ಬಿಜೆಪಿಯನ್ನು ಟೀಕಿಸಿ ಮಾತನಾಡಿದ್ದರು. ಹಾಗಾಗಿ ಸಾಕಷ್ಟು ಪ್ರಕರಣಗಳನ್ನು ಎದುರಿಸುತ್ತಿರುವ ಮಾಯಾವತಿ, ಬಿಜೆಪಿಯ ಸಿಟ್ಟಿನಿಂದ ರಕ್ಷಿಸಿಕೊಳ್ಳಲು ಆಕಾಶ್ ಆನಂದ್ ವಿರುದ್ಧ ಕ್ರಮ ಕೈಗೊಂಡರು.
ಲೋಕಸಭೆ ಚುನಾವಣೆಯಲ್ಲಿ ಮಾಯಾವತಿ ಒಂದೇ ಒಂದು ಸ್ಥಾನವನ್ನು ಗೆಲ್ಲದಿದ್ದರೂ, ಆಜಾದ್ ಸಮಾಜ ಪಾರ್ಟಿಯ (ಕಾನ್ಸಿರಾಮ್) ನಾಯಕ ಚಂದ್ರಶೇಖರ ಆಜಾದ್, ನಜಿನಾ ಮುಂತಾದವರು ಲೋಕಸಭಾ ಸ್ಥಾನವನ್ನು ಗೆದ್ದಿದ್ದಾರೆ. ಚಂದ್ರಶೇಖರ ಆಜಾದ್ ಅವರು ಉತ್ತರ ಪ್ರದೇಶದಲ್ಲಿ ದಲಿತ ರಾಜಕಾರಣವನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ, ಮಾಯಾವತಿ ಅವರು ಆಕಾಶ್ ಆನಂದ್ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಉತ್ತರ ಪ್ರದೇಶದ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.