ಲವ್ ಜಿಹಾದ್ ಅಪರಾಧಕ್ಕೆ ಜೀವಾವಧಿ ಶಿಕ್ಷೆ: ಯೋಗಿ ಸರ್ಕಾರ ನಿರ್ಧಾರ!
ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಮದುವೆ ಮೂಲಕ ಮತಾಂತರ ಮಾಡಲಾಗುತ್ತಿದೆ ಎಂದು ಬಿಜೆಪಿ ಹಲವು ವರ್ಷಗಳಿಂದ ಆರೋಪಿಸುತ್ತಲೇ ಬರುತ್ತಿವೆ. ಇದೇ ವೇಳೆ ಬಿಜೆಪಿ ಆಡಳಿತಾರೂಢ ಉತ್ತರಪ್ರದೇಶದಲ್ಲಿ ಯೋಗಿ ಸರಕಾರವು ಲವ್ ಜಿಹಾದ್ ವಿರುದ್ಧ 2021ರಲ್ಲಿ ಕಾನೂನನ್ನು ಜಾರಿಗೊಳಿಸಿತು.
ಈ ಕಾನೂನಿನ ಪ್ರಕಾರ, ಉದ್ದೇಶಪೂರ್ವಕವಾಗಿ ಯಾರನ್ನಾದರೂ ಪ್ರೀತಿಸಿ, ನಂತರ ಬಲವಂತವಾಗಿ ಮತಾಂತರಗೊಳಿಸಿ ಮದುವೆಯಾದರೆ, ಆ ಮದುವೆ ಅನೂರ್ಜಿತ ಎಂದು ಹಾಗೆ ಮದುವೆಯಾಗುವ ವ್ಯಕ್ತಿಯನ್ನು ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಬಂಧಿಸಿ, 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ, ಲವ್ ಜಿಹಾದ್ ಕಾಯ್ದೆಗೆ ತಿದ್ದುಪಡಿ ತರಲು ಉತ್ತರ ಪ್ರದೇಶ ಬಿಜೆಪಿ ಸರ್ಕಾರ ನಿರ್ಧರಿಸಿದ್ದು, ‘ಉತ್ತರ ಪ್ರದೇಶ ಮತಾಂತರ ನಿಷೇಧ ಕಾಯ್ದೆ 2024’ ಎಂದು ಪ್ರಸ್ತಾಪಿಸಲಾಗುವ ಈ ತಿದ್ದುಪಡಿ ಕಾಯ್ದೆಯನ್ನು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಖನ್ನಾ ಇಂದು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಂಡಿಸಿದರು.
ಹೊಸ ತಿದ್ದುಪಡಿಯು 10 ವರ್ಷಗಳ ಜೈಲು ಶಿಕ್ಷೆಯನ್ನು 20 ವರ್ಷಗಳಿಗೆ ಹೆಚ್ಚಿಸಲಿದೆ. ದಂಡದ ಮೊತ್ತವನ್ನು 50 ಸಾವಿರದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಲವ್ ಜಿಹಾದ್ ಪ್ರಕರಣದಲ್ಲಿ ಸಂತ್ರಸ್ತೆ ಮತ್ತು ಆಕೆಯ ಪೋಷಕರು ಹಾಗೂ ಒಡಹುಟ್ಟಿದವರು ದೂರು ನೀಡಿದರೆ ಮಾತ್ರ ಪ್ರಕರಣ ದಾಖಲಿಸಲಾಗುತ್ತಿತ್ತು. ಈಗ ಆ ಮಿತಿ ಸಡಿಲಿಸಲಾಗಿದ್ದು, ತಿದ್ದುಪಡಿ ಪ್ರಕಾರ ಯಾರೇ ದೂರು ನೀಡಿದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.