ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Minorities Archives » Dynamic Leader
December 3, 2024
Home Posts tagged Minorities
ದೇಶ ರಾಜಕೀಯ

ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಮದುವೆ ಮೂಲಕ ಮತಾಂತರ ಮಾಡಲಾಗುತ್ತಿದೆ ಎಂದು ಬಿಜೆಪಿ ಹಲವು ವರ್ಷಗಳಿಂದ ಆರೋಪಿಸುತ್ತಲೇ ಬರುತ್ತಿವೆ. ಇದೇ ವೇಳೆ ಬಿಜೆಪಿ ಆಡಳಿತಾರೂಢ ಉತ್ತರಪ್ರದೇಶದಲ್ಲಿ ಯೋಗಿ ಸರಕಾರವು ಲವ್ ಜಿಹಾದ್ ವಿರುದ್ಧ 2021ರಲ್ಲಿ ಕಾನೂನನ್ನು ಜಾರಿಗೊಳಿಸಿತು.

ಈ ಕಾನೂನಿನ ಪ್ರಕಾರ, ಉದ್ದೇಶಪೂರ್ವಕವಾಗಿ ಯಾರನ್ನಾದರೂ ಪ್ರೀತಿಸಿ, ನಂತರ ಬಲವಂತವಾಗಿ ಮತಾಂತರಗೊಳಿಸಿ ಮದುವೆಯಾದರೆ, ಆ ಮದುವೆ ಅನೂರ್ಜಿತ ಎಂದು ಹಾಗೆ ಮದುವೆಯಾಗುವ ವ್ಯಕ್ತಿಯನ್ನು ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಬಂಧಿಸಿ, 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ, ಲವ್ ಜಿಹಾದ್ ಕಾಯ್ದೆಗೆ ತಿದ್ದುಪಡಿ ತರಲು ಉತ್ತರ ಪ್ರದೇಶ ಬಿಜೆಪಿ ಸರ್ಕಾರ ನಿರ್ಧರಿಸಿದ್ದು, ‘ಉತ್ತರ ಪ್ರದೇಶ ಮತಾಂತರ ನಿಷೇಧ ಕಾಯ್ದೆ 2024’ ಎಂದು ಪ್ರಸ್ತಾಪಿಸಲಾಗುವ ಈ ತಿದ್ದುಪಡಿ ಕಾಯ್ದೆಯನ್ನು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಖನ್ನಾ ಇಂದು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಂಡಿಸಿದರು.

ಹೊಸ ತಿದ್ದುಪಡಿಯು 10 ವರ್ಷಗಳ ಜೈಲು ಶಿಕ್ಷೆಯನ್ನು 20 ವರ್ಷಗಳಿಗೆ ಹೆಚ್ಚಿಸಲಿದೆ. ದಂಡದ ಮೊತ್ತವನ್ನು 50 ಸಾವಿರದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಲವ್ ಜಿಹಾದ್ ಪ್ರಕರಣದಲ್ಲಿ ಸಂತ್ರಸ್ತೆ ಮತ್ತು ಆಕೆಯ ಪೋಷಕರು ಹಾಗೂ ಒಡಹುಟ್ಟಿದವರು ದೂರು ನೀಡಿದರೆ ಮಾತ್ರ ಪ್ರಕರಣ ದಾಖಲಿಸಲಾಗುತ್ತಿತ್ತು. ಈಗ ಆ ಮಿತಿ ಸಡಿಲಿಸಲಾಗಿದ್ದು, ತಿದ್ದುಪಡಿ ಪ್ರಕಾರ ಯಾರೇ ದೂರು ನೀಡಿದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.

ರಾಜಕೀಯ

ಬೆಳಗಾವಿ: ಗೋಕಾಕ್ ಪಟ್ಟಣದಲ್ಲಿಂದು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯತೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಜನರು ಗಮನಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚುಸ್ಥಾನ ದೊರಕಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.

ಕಾಂಗ್ರೆಸ್ ಪರ ನಿರೀಕ್ಷೆಗೂ ಮೀರಿ ಜನಬೆಂಬಲ ಕಂಡುಬರುತ್ತಿದೆ. ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಗ್ಯಾರಂಟಿ ಯೋಜನೆಗಳು ಪ್ರತಿ ಮನೆಯನ್ನು ತಲುಪಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು 2014 ಹಾಗೂ 2019ರಲ್ಲಿ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಇದು ಈ ಚುನಾವಣೆಯ ಟ್ರಂಪ್ ಕಾರ್ಡ್ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರ ಹಿಂಸಾಚಾರದ ಬಗ್ಗೆ ತುಟಿ ಬಿಚ್ಚಿದ್ದಾರ? ಕೇಂದ್ರ ಬಿಜೆಪಿ ಸರ್ಕಾರ ಏನು ಕ್ರಮ ಕೈಗೊಂಡಿದೆ? ಅಮಿತ್ ಶಾ ಗೃಹ ಸಚಿವರಾಗಿ ವಿಫಲವಾದಂತೆ ಅಲ್ವಾ? ಮಣಿಪುರ ಹಿಂಸಾಚಾರಕ್ಕೆ ಮೋದಿ ಹೊಣೆಯಲ್ಲವೇ? ಎಂದು ಪ್ರಶ್ನಿಸಿದರು.

30 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಾಗುತ್ತಿದೆ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ಮುಸ್ಲಿಮರ 4% ಮೀಸಲಾತಿಯನ್ನು ರದ್ದು ಮಾಡಿದ್ದರು. ಈ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಸಮುದಾಯ ಸುಪ್ರೀಂ ಕೋರ್ಟ್ ಗೆ ಹೋದಾಗ, 4% ಮೀಸಲಾತಿಯನ್ನು ಮುಂದುವರೆಸುವುದಾಗಿ ಅವರೇ ಮುಚ್ಚಳಿಕೆಯನ್ನು ಬರೆದುಕೊಟ್ಟಿದ್ದಾರೆ ಎಂದು ಹೇಳಿದರು.  

ಕೇವಲ ರಾಜಕಾರಣಕ್ಕಾಗಿ ಹಾಗೂ ಮತಗಳಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾವನಾತ್ಮಕ ವಿಚಾರಗಳಿಗೆ ಸಂಬಂಧಿಸಿದ ಸುಳ್ಳು ಹೇಳುತ್ತಾರೆ. ಕಾಂಗ್ರೆಸ್ ಪಕ್ಷ ಕಳೆದ ಐದು ದಶಕಗಳಿಂದ ದೇಶದಲ್ಲಿ ಅಧಿಕಾರದಲ್ಲಿತ್ತು, ಎಂದಾದರೂ ಮಹಿಳೆಯರ ತಾಳಿಗಳನ್ನು ಕಸಿದುಕೊಂಡಿದ್ದಾರಾ? ದೇಶದ ಜವಾಬ್ದಾರಿಯುತ ಪ್ರಧಾನಿಯಾಗಿ ಇಂತಹ ಹೇಳಿಕೆಗಳನ್ನು ನೀಡಲು ಕಾರಣ ಅವರ ಸಾಧನೆಶೂನ್ಯ ಆಡಳಿತ. ಕೆಲಸ ಮಾಡಿದ್ದೇನೆ ಓಟು ಕೊಡಿ ಎನ್ನುವ ಬದಲು ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಿ ಓಟು ಕೇಳುತ್ತಾರೆ ಎಂದರೆ ನೀವೇ ಯೋಚಿಸಿ ಎಂದು ಕಿಡಿಕಾರಿದರು.

ರಾಜಕೀಯ

ಬೆಂಗಳೂರು: ಮುಸ್ಲಿಂ ಸಮುದಾಯದ ವಿರುದ್ಧ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ದ್ವೇಷ ಭಾಷಣ ಅವರ ಹತಾಶ ಮನಸ್ಥಿತಿಯನ್ನು ತೋರಿಸುತ್ತಿದೆ. ಇದು ಅತ್ಯಂತ ಖಂಡನೀಯ ಎಂದು ‘ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ’ ಇದರ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಮೊದಲ ಹಂತದ ಮತದಾನದ ಬಳಿಕ ಪ್ರಧಾನಿಗಳಿಗೆ ಸೋಲಿನ ವಾಸನೆ ಬಡಿದಿರಬಹುದು. ಸುಳ್ಳು ಹೇಳಿ ಜನರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಪ್ರಧಾನಿಗಳ ಬಗ್ಗೆ ಜನರಿಗೆ ಅರಿವಾಗತೊಡಗಿದೆ. ಬೇರೆ ದಾರಿ ಕಾಣದೆ ಚುನಾವಣಾ ಪ್ರಚಾರ ಸಭೆಯಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸತೊಡಗಿದ್ದಾರೆ.

ಮುಸ್ಲಿಮರು ನುಸುಳುಕೋರರು ಅವರು ಹೆಚ್ಚು ಮಕ್ಕಳನ್ನು ಹುಟ್ಟಿಸುವವರು ಅವರಿಗೆ ದೇಶದ ವೈಯಕ್ತಿಕ ಸಂಪತ್ತನ್ನು ಕಾಂಗ್ರೆಸ್ ಹಂಚುತ್ತಿದೆ ಎಂಬ ರೀತಿಯ ಕೀಳು ಮಟ್ಟದ ಹೇಳಿಕೆ ನೀಡಿ ಪ್ರಧಾನಿ ಹುದ್ದೆಯ ಘನತೆಗೆ ದಕ್ಕೆ ತಂದಿದ್ದಾರೆ. ಇದೆಂತಹಾ ಸಬ್ಕಾ ಸಾತ್ ಸಬ್ ಕಾ ವಿಕಾಸ್? ಎಂದು ಕಿಡಿಕಾರಿದ್ದಾರೆ.

ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರಗಿಸಬೇಕು. ಚುನಾವಣಾ ಆಯೋಗವು ನ್ಯಾಯೋಚಿತ ರೀತಿಯಲ್ಲಿ ವರ್ತಿಸಬೇಕು. ದೇಶದ ಸ್ವಾಸ್ಥ್ಯ ಕೆಡಿಸುವ  ಪ್ರಧಾನಿಗಳ ಶ್ರಮ ಅಪಾಯಕಾರಿ. ಅಲ್ಪಸಂಖ್ಯಾತ ಸಮುದಾಯದ ಜನರನ್ನು ನಿಂಧಿಸಿ ಬಹುಸಂಖ್ಯಾತ ಸಮುದಾಯವನ್ನು ಎತ್ತಿ ಕಟ್ಟುವ ಈ ಪ್ರಧಾನಿಗಳಿಂದ ದೇಶ ಹೇಗೆ ಉದ್ದಾರವಾದೀತು? ಮತದಾರರು ಚುನಾವಣೆಯಲ್ಲಿ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ರಾಜಕೀಯ

ಬೆಂಗಳೂರು: ಶ್ರೀರಂಗಪಟ್ಟಣದ ಹನುಮಯಾತ್ರೆಯ ಸಂದರ್ಭದಲ್ಲಿ ಮಂಡ್ಯದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಮುಸ್ಲಿಂ ಮಹಿಳೆಯರ ಬಗ್ಗೆ ಅಸಾಂವಿಧಾನಿಕ ಮತ್ತು ಅಸಹ್ಯವಾದ ಅಶ್ಲೀಲ ಮಾತುಗಳನ್ನಾಡಿರುವುದನ್ನು ವೆಲ್‌ಫೇರ್ ಪಾರ್ಟಿ ಮಹಿಳಾ ವಿಭಾಗದ ರಾಜ್ಯ ಘಟಕದ ಅಧ್ಯಕ್ಷೆ ಸಬೀಹಾ ಪಟೇಲ್ ತೀವ್ರವಾಗಿ ಖಂಡಿಸಿದ್ದಾರೆ.

“ಪದೇ ಪದೇ ಒಂದು ಸಮುದಾಯದ ವಿರುದ್ದ ಪ್ರಚೋದನಾಕಾರಿ ಹೇಳಿಕೆಗಳನ್ನು ಕೊಡುತ್ತಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ರಾಜ್ಯ ಸರಕಾರ ಯಾವುದೇ ಕ್ರಮ ಯಾಕೆ ತೆಗೆದುಕೊಳ್ಳುತ್ತಿಲ್ಲ? ವಿಶೇಷವಾಗಿ ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಮಹಿಳೆಯರ ಪರವಾಗಿ ಸಹಾನುಭೂತಿ ತೋರಿಸುವ ರಾಜ್ಯ ಸರ್ಕಾರ ಈಗ ಕೇವಲ ಮೂಕ ಪ್ರೇಕ್ಷಕವಾಗಿದೆ. ಇಂತಹ ತುಚ್ಛ ಹೇಳಿಕೆ ಕೊಟ್ಟ ಕಲ್ಲಡ್ಕ ಪ್ರಭಾಕರ್ ಭಟ್ ಕೇವಲ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಮಾತ್ರ ಹೇಳಿದ ಮಾತುಗಳಲ್ಲ ಬದಲಾಗಿ ಇದು ಇಡೀ ಮಹಿಳಾ ಸಮಾಜಕ್ಕೆ ಅವಮಾನ ಮಾಡಿದ ಹೇಳಿಕೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸ್ತ್ರೀ ವಿರೋಧಿಯಾದ ಇವರು ಈ ಹಿಂದೆ ಎಷ್ಟೋ ಬಾರಿ ಹಿಂದೂ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ‘ಮುಸ್ಲಿಂ ಯುವಕರು ಸೆಂಟ್ ಹೊಡೆದು ಬಂದರೆ ಹಿಂದೂ ಯುವತಿಯರು ಅವರ ಹಿಂದೆ ಓಡಿ ಹೋಗುತ್ತಾರೆ’ ಎಂದು ಈ ಹಿಂದೆ ಅಸಭ್ಯ ಹೇಳಿಕೆಯೊಂದನ್ನು ನೀಡಿದ್ದರು. ಇನ್ನೊಂದು ಕಡೆ ಕ್ರಿಶ್ಚಿಯನ್ ಮಹಿಳೆಯರಿಗೆ ಮತ್ತು ಅವರ ಸೇವೆಗಳನ್ನು ಕೂಡಾ ವ್ಯಂಗ್ಯ ಮಾಡಿದ್ದಾರೆ. ಒಂದು ಸಂದರ್ಭದಲ್ಲಿ ಮಸೀದಿ ದರ್ಶನಕ್ಕೆ ಹೋದ ಸಹಧರ್ಮೀಯ ಮಹಿಳೆಯರಿಗೂ ಅಶ್ಲೀಲವಾದ ಮಾತುಗಳನ್ನಾಡಿದ್ದರು. ಇದು ಚುನಾವಣಾ ದಿನಗಳು ಹತ್ತಿರ ಬರುವಾಗ ಕೋಮುವಾದದ ವಿಷ ಬೀಜ ಬಿತ್ತುವ ಹುನ್ನಾರವಾಗಿದೆ.  ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಇಂತಹ ಕೊಳಕು ಮಾತುಗಳು ಅವರ ಸಂಸ್ಕಾರವನ್ನು ಬಿಂಬಿಸುತ್ತಿದೆ” ಎಂದು ಹೇಳಿದ್ದಾರೆ.

ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಯಾರೂ ದಾರಿ ತೋರಿಸುವ ಅವಶ್ಯಕತೆ ಇಲ್ಲ. ಸುಮಾರು 14 ನೂರು ವರ್ಷಗಳ  ಹಿಂದೆಯೇ ಇಸ್ಲಾಂ ಧರ್ಮ ಮಹಿಳೆಯ ಸ್ಥಾನಮಾನ ಹಾಗೂ ಅವಳ ಹಕ್ಕುಗಳನ್ನು ಎತ್ತಿ ಹಿಡಿದಿದೆ. ತ್ರಿವಳಿ ತಲಾಖನ್ನು ಮುಂದಿಟ್ಟುಕೊಂಡು ಯಾವುದೇ ಅಧ್ಯಯನ ಇಲ್ಲದೆ ಇಂತಹ ಹೇಳಿಕೆಗಳನ್ನು ಕೊಡುವುದು ಅಸಾಂವಿಧಾನಿಕ. ಹಲವಾರು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿರುವ ಇವರು ಎಂತಹಾ ಧರ್ಮರಕ್ಷಕ? ಎಂತಹಾ ಮುಖಂಡ? ಎನ್ನುವುದು ಒಂದು ದೊಡ್ಡ ಪ್ರಶ್ನೆಯಾಗಿದೆ. ಒಂದು ಸಮುದಾಯವನ್ನು ಅಶ್ಲೀಲವಾಗಿ ನಿಂದಿಸಿದರೆ ಅವರ ವಿರುದ್ಧ ಜಾಮೀನು ರಹಿತ ಕೇಸ್ ದಾಖಲಾಗಬೇಕು. ರಾಜ್ಯದಲ್ಲಿ ಹಿಜಾಬ್ ವಿಚಾರವನ್ನೆತ್ತಿಕೊಂಡು ರಾಜಕೀಯ ನಡೆಸುತ್ತಿರುವ ಸಂದರ್ಭದಲ್ಲಿ ಪುನಃ ಹೇಳಲಿಕ್ಕಾಗದ ಅಶ್ಲೀಲವಾದ ಮಾತುಗಳನ್ನಾಡಿ ಮುಸ್ಲಿಂ ಯುವತಿ ಮುಸ್ಕಾನ್ ಅವರಿಗೆ ಬೆದರಿಕೆ ಕೂಡ ಹಾಕಿದ್ದಾರೆ. ಇದೇ ತರಹ ಇನ್ನೂ ಹಲವಾರು ಪ್ರಕರಣಗಳನ್ನು ಇವರ ವಿರುದ್ಧ ದಾಖಲಿಸಬೇಕಾಗಿದೆ” ಎಂದು ಆಗ್ರಹಿಸಿದ್ದಾರೆ.

“ಇಂತಹ ಪ್ರಚೋದನಾಕಾರಿ ಹೇಳಿಕೆಗಳು ನಿಲ್ಲದಿದ್ದರೆ, ಸರ್ಕಾರ ಇಂತಹ ಅಸಂಸ್ಕೃತಿಯ ಮುಖಂಡರುಗಳ ವಿರುದ್ಧ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳದೇ ಇದ್ದರೆ ವೆಲ್‌ಫೇರ್ ಪಾರ್ಟಿಯ ರಾಜ್ಯ ಮಹಿಳಾ ಘಟಕದ ವತಿಯಿಂದ ನೆಲದ ಕಾನೂನಿನ ಅಡಿಯಲ್ಲಿ ಉಗ್ರ ಹೋರಾಟವನ್ನು ಮಾಡುತ್ತೇವೆ. ಕಲ್ಲಡ್ಕ ಪ್ರಭಾಕರ್ ಭಟ್ ತಮ್ಮ ಈ ಅಶ್ಲೀಲವಾದ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆದು ಸಾರ್ವಜನಿಕವಾಗಿ ಮಹಿಳೆಯರಲ್ಲಿ ಕ್ಷಮೆ ಯಾಚಿಸಬೇಕು” ಎಂದು ವೆಲ್‌ಫೇರ್ ಪಾರ್ಟಿಯ ರಾಜ್ಯ ಮಹಿಳಾ ವಿಭಾಗ ಸಬೀಹಾ ಪಟೇಲ್ ಆಗ್ರಹಿಸಿದ್ದಾರೆ.

ರಾಜ್ಯ

ಸಂವಿಧಾನ ವಿರೋಧಿ, ಕೋಮು ದ್ವೇಷ ಹರಡುವ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಈ ಕೂಡಲೇ ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಕಾನೂನು ಕ್ರಮ ಜರುಗಿಸಿ ಬಂಧಿಸಲು ಕರ್ನಾಟಕ ಮುಸ್ಲಿಂ ಯುನಿಟಿ ಒತ್ತಾಯ.

ಇತ್ತೀಚಿಗೆ ಶ್ರೀರಂಗಪಟ್ಟಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, ಮುಸ್ಲಿಂ ಮಹಿಳೆಯರನ್ನು ಉದ್ದೇಶಿಸಿ ನೀಡಿದ ಹೇಳಿಕೆ ಕೋಮು ಪ್ರಚೋದನಕಾರಿ ಆಗಿದೆ. ಭಟ್ ಈ ಮೂಲಕ ಒಂದು ನಿರ್ಧಿಷ್ಟ ಸಮುದಾಯವನ್ನು ಗುರಿಯಾಗಿಸಿ, ಮತೀಯ ಉದ್ವಿಗ್ನತೆ ಸೃಷ್ಟಿಸುವ ಮತ್ತು ಕೋಮು ಗಲಭೆಗಳನ್ನು ಹುಟ್ಟು ಹಾಕುವ ರೀತಿಯ ಹೇಳಿಕೆ ನೀಡಿದ್ದಾರೆ. ಇದು ಸಂವಿಧಾನ ವಿರೋಧಿ ಎಂದು ಕರ್ನಾಟಕ ಮುಸ್ಲಿಂ ಯೂನಿಟಿಯ ಅಧ್ಯಕ್ಷ ಜಬ್ಬಾರ್ ಕಲ್ಬುರ್ಗಿ ಹೇಳಿದ್ದಾರೆ.  

ಅಲ್ಪಸಂಖ್ಯಾತರ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯ ಜೊತೆಗೆ ಮುಸ್ಲಿಂ ಮಹಿಳೆಯ ಗೌರವ ಘನತೆಗಳಿಗೆ ಕುಂದುಂಟು ಮಾಡಿರುವ ಇವರ ಕೋಮುದ್ವೇಷಿ ಹೇಳಿಕೆ ಖಂಡನೀಯ. ಕರ್ನಾಟಕ ರಾಜ್ಯದಲ್ಲಿ ಶಾಂತಿ ಭಂಗವನ್ನು ಉಂಟು ಮಾಡುವ ಮತ್ತು ಮಹಿಳಾ ಹಕ್ಕುಗಳ ಉಲ್ಲಂಘನೆಯ ಹೇಳಿಗಳನ್ನು ನೀಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಶೀಘ್ರ ಹಾಗೂ ಸೂಕ್ತ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲು ಗೊಳಿಸಬೇಕು ಎಂದು ಸರ್ಕಾರವನ್ನು ಹಾಗೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ಅವರೇ ನೇರಹೊಣೆ ಎಂದು ಹೇಳಿದ್ದಾರೆ.  

ಇತರೆ ಧರ್ಮ ಸಮುದಾಯದ ಹೆಣ್ಣು ಮಕ್ಕಳ ಕುರಿತು ಅಸಭ್ಯವಾಗಿ, ಅಶ್ಲೀಲವಾಗಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು ಆ ವೇದಿಕೆಯಲ್ಲಿ ಉಪಸ್ಥಿತರಿದ್ದ ಇತರೆ ಎಲ್ಲಾ ಮುಖಂಡರ ವಿರುದ್ಧವೂ ಕಾನೂನು ಕ್ರಮ ಜರುಗಿಸುವ ಹೊಣೆ ಸರಕಾರದ್ದಾಗಿದೆ. ಈ ಹೇಯ ಕೃತ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಪಕ್ಷದ ಮೌನವೂ ಸಹ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕಾನೂನು ಬಾಹಿರ ಕೃತ್ಯವನ್ನು ಕೆಎಂಯು ಖಂಡಿಸುತ್ತದೆ. ಅಲ್ಲದೆ, ಸಂವಿಧಾನ ವಿರೋಧಿ, ಕೋಮು ದ್ವೇಷ ಹರಡುವ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಈ ಕೂಡಲೇ ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಕಾನೂನು ಕ್ರಮ ಜರುಗಿಸಿ ಬಂಧಿಸಲು ಕರ್ನಾಟಕ ಮುಸ್ಲಿಂ ಯುನಿಟಿ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.

ರಾಜ್ಯ

ವಿಜಯಪುರದ ಮುಸ್ಲಿಂ ಧಾರ್ಮಿಕ ಮುಖಂಡರಾದ ಸೈಯ್ಯದ್ ತನ್ವೀರ್ ಹಾಶ್ಮಿಯವರ ವಿರುದ್ಧದ ಬಸನಗೌಡ ಪಾಟೀಲ್ ಯತ್ನಾಳ್‌  ಹೇಳಿಗೆ ಖಂಡನೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 4 ರಂದು ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಭಾಗಿಯಾಗಿದ್ದರು. ಅಲ್ಲಿನ ಒಂದು ಚಿತ್ರವೊಂದನ್ನು ಇಟ್ಟುಕೊಂಡು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು  ‘ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಐಸಿಸ್ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ’ ಎಂದು ಆರೋಪಿಸಿ ಸಂಚಲನ ಮೂಡಿಸಿದರು.

ಇದನ್ನು ಕರ್ನಾಟಕ ಮುಸ್ಲಿಂ ಯೂನಿಟಿಯ (ರಾಜ್ಯ ಸಮಿತಿ) ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಖಾಸಿಂ ಸಾಬ್. ಎ.,  ತೀವ್ರವಾಗಿ ಖಂಡಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. “ಸುನ್ನಿ ಜಮಾತ್‌ನ ಮುಖಂಡರು, ಹಿರಿಯ ಸಮಾಜ ಸೇವಕರು ಹಾಗೂ ಜಾತ್ಯತೀತ ಮನೋಭಾವದ ಧಾರ್ಮಿಕ ಪಂಡಿತರು ಆಗಿರುವ ತನ್ವೀರ್ ಪೀರಾ ರವರ ಕುರಿತು ಯತ್ನಾಳರ ತೇಜೋವದೆ ಹೇಳಿಕೆಯನ್ನು ಕರ್ನಾಟಕ ಮುಸ್ಲಿಂ ಯುನಿಟಿ ತೀವ್ರವಾಗಿ ಖಂಡಿಸುತ್ತದೆ” ಎಂದು ಹೇಳಿದ್ದಾರೆ.

“ಯತ್ನಾಳ್ ಅಪಪ್ರಚಾರ ಮಾಡುತ್ತಿರುವ ತನ್ವೀರ್ ಪೀರಾ ರವರ ಫೋಟೋಗಳಲ್ಲಿ ಒಂದು ಬಾಗ್ದಾದಿನ ಪ್ರಿನ್ಸ್‌ ಶೇಖ್‌ ಖಾಲಿದ್‌ ಅವರ ಜ್ಯೋತೆಗಿನ ಫೋಟೋ ಹಾಗೂ ಮತ್ತೊಂದು ಫೋಟೋದಲ್ಲಿ ಇರುವವರು ಇರಾಕ್‌ ಸರ್ಕಾರದ ಸೆಕ್ಯುರಿಟಿ ಆಫೀಸರ್‌ ಆಗಿರುವ ಸಜ್ಜಾದೇ ನಶೀನ್‌ ಹಜ್ರತ್‌ ಗೌಸ್‌ ಆಜಂ ರವರ ಜ್ಯೋತೆಗೆ ತನ್ವೀರ್ ಪೀರಾ ರವರು ಇರುವ ಹತ್ತು ವರ್ಷಗಳ ಹಿಂದಿನ ಫೋಟೋಗಳು” ಎಂದು ಸ್ಪಷ್ಟನೆ ನೀಡಿದ್ದಾರೆ.

“ಫೋಟೋಗಳನ್ನು ತಿರುಚಿ, ಬಳಸಿ ಐಸಿಸ್ ಬೆಂಬಲಿಗರು ಮತ್ತು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿರುವ ತನ್ವೀರ್ ಪೀರಾರ ಜೊತೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ ಎಂಬ ಅಪಪ್ರಚಾರದ ಹಿಂದೆ ಮುಸ್ಲಿಂ ವಿರೋಧಿ ಭಾವನೆ, ಶಾಂತಿಕದಡುವ ಉದ್ದೇಶ ಯತ್ನಾಳ್ ಹೊಂದಿದ್ದಾರೆ” ಆರೋಪಿಸಿದ್ದಾರೆ. “ಈ ಕೂಡಲೇ ಕರ್ನಾಟಕ ಸರಕಾರ ಬಿಜೆಪಿಯ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕರ್ನಾಟಕ ಮುಸ್ಲಿಂ ಯುನಿಟಿ ಒತ್ತಾಯಿಸುತ್ತಿದೆ” ಎಂದು ಹೇಳಿದ್ದಾರೆ.

“ಹುಬ್ಬಳ್ಳಿಯ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಮ್ ಸಮುದಾಯದ ರಕ್ಷಣೆ ನಮ್ಮ ಸರಕಾರ ಜವಾಬ್ದಾರಿಯಾಗಿರುತ್ತದೆ ಮತ್ತು ಮುಂದಿನ ದಿನಗಳಲ್ಲಿ ಅವರ ಅಭಿವೃದ್ಧಿಗೆ ಹತ್ತು ಸಾವಿರ ಕೋಟಿಗಳನ್ನು ಮೀಸಲು ಇರಿಸುವುದಾಗಿ ಘೋಷಣೆ ಮಾಡಿದ್ದು ಸ್ವಾಗತಾರ್ಹ. ಅಲ್ಲದೆ, ರಾಜ್ಯದಲ್ಲಿ ಮುಸ್ಲಿಮರ ಮೀಸಲಾತಿಯನ್ನು ಮರು ಸ್ಥಾಪಿಸಬೇಕು. ಓಬಿಸಿಯೊಳಗಿನ ಮುಸ್ಲಿಮರ ಶೇ.4ರಷ್ಟು ಇರುವ ಮೀಸಲಾತಿಯನ್ನು ಶೇ.8ಕ್ಕೆ ಹೆಚ್ಚಿಸಬೇಕೆಂದು KMU ಸರಕಾರಕ್ಕೆ ಒತ್ತಾಯಿಸುತ್ತಿದೆ” ಎಂದು ಹೇಳಿದ್ದಾರೆ.

ರಾಜಕೀಯ

ಡಿ.ಸಿ.ಪ್ರಕಾಶ್

‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸಂಸತ್ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಖಚಿತವಾಗಿ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮೋದಿ ನಾಯಕತ್ವದಲ್ಲಿ ಮೂರನೇ ಬಾರಿಗೆ ಗೆದ್ದು ಅಧಿಕಾರವನ್ನು ಉಳಿಸಿಕೊಳ್ಳಲು, ಕೇಂದ್ರ ಬಿಜೆಪಿ ಸರ್ಕಾರವು ಹಿಂದೂ ಮತಗಳನ್ನು ಗುರಿಯಾಗಿಟ್ಟುಕೊಂಡು, ಸಿಎಎ ವಿಷಯವನ್ನು ಮತ್ತೆ ಕೈಗೆತ್ತಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಯನ್ನು ಪ್ರತಿಪಕ್ಷಗಳು ಎತ್ತುತ್ತಿವೆ.

ಡಿಸೆಂಬರ್ 31, 2014 ಕ್ಕಿಂತ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಸೇರಿದಂತೆ ನೆರೆಯ ರಾಷ್ಟ್ರಗಳಿಂದ ಧಾರ್ಮಿಕ ಕಿರುಕುಳದಿಂದ ಭಾರತಕ್ಕೆ ಬಂದ ಹಿಂದೂಗಳು, ಪಾರ್ಸಿಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು ಮತ್ತು ಜೈನರಿಗೆ ಭಾರತೀಯ ಪೌರತ್ವ ನೀಡುವ ಮಸೂದೆಯನ್ನು 2019ರಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಲಾಯಿತು.

ಅಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ತಕ್ಷಣವೇ ಈ ಮಸೂದಗೆ ಅನುಮೋದನೆ ನೀಡಿದರು. ನಂತರ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿತು. ಇದಕ್ಕೆ ಸಂಬಂಧಿಸಿದ ಸಮೀಕ್ಷೆ ಮುಂದಿನ ಒಂದು ವರ್ಷ ನಡೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತು.

ಅದೇ ಸಮಯದಲ್ಲಿ, ಕೇಂದ್ರ ಬಿಜೆಪಿ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತರಲು ಎಷ್ಟು ಗಂಭೀರವಾದ ಕ್ರಮಗಳನ್ನು ಕೈಗೊಂಡಿತೋ, ಅದಕ್ಕಿಂತ ಎರಡು ಪಟ್ಟು ಅಧಿಕವಾಗಿ ಸದರಿ ಕಾಯ್ದೆಗೆ ದೇಶಾದ್ಯಂತ ವಿರೋಧವೂ ಹುಟ್ಟಿಕೊಂಡಿತು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತದಲ್ಲಿ ನೆಲೆಸಿರುವ ಹಿಂದೂಗಳು, ಸಿಖ್ಖರು ಮತ್ತು ಇತರ ಧರ್ಮಗಳಿಗೆ ಭಾರತೀಯ ಪೌರತ್ವವನ್ನು ನೀಡುವ ಪೌರತ್ವ ತಿದ್ದುಪಡಿ ಕಾಯ್ದೆ (CAA), ಆ ದೇಶಗಳಿಂದ ಬಂದು ಭಾರತದಲ್ಲಿ ನೆಲೆಸಿರುವ ಮುಸ್ಲಿಮರಿಗೆ ಮಾತ್ರ ಪೌರತ್ವವನ್ನು ನೀಡಲಾಗುವುದಿಲ್ಲ ಎಂದು ಹೇಳುತ್ತದೆ.

ಈ ಕಾರಣಕ್ಕಾಗಿಯೇ ಆ ಕಾನೂನಿನ ವಿರುದ್ಧ ಭಾರತದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಂತಹ ರಾಜಧಾನಿಗಳಲ್ಲಿ ಪ್ರಮುಖ ಪ್ರತಿಭಟನೆಗಳು ನಡೆಯುತ್ತಿದ್ದರೆ, ಪ್ರತಿಭಟನೆಗಳು ಸಣ್ಣ ಪಟ್ಟಣಗಳಲ್ಲಿಯೂ ಹರಡಿತು. ಈ ಪ್ರತಿಭಟನೆ ಕೇಂದ್ರ ಬಿಜೆಪಿ ಸರ್ಕಾರಕ್ಕೂ ಬೆದರಿಕೆಯೊಡ್ಡಿತು. ಪ್ರತಿಭಟನೆಯನ್ನು ಎದುರಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ, ಹಠಾತ್ ಕೊರೋನ ವೈರಸ್‌ನ ಉಲ್ಬಣದಿಂದಾಗಿ, ಸಿಎಎ ವಿರುದ್ಧದ ಪ್ರತಿಭಟನೆ ಆ ಸಂದರ್ಭದಲ್ಲಿ ಅಂತ್ಯಗೊಂಡಿತು.

ಆ ಬಳಿಕ ಸಿಎಎ ವಿಚಾರದಲ್ಲಿ ಶಾಂತಿ ಕಾಪಾಡಿಕೊಂಡು ಬಂದಿದ್ದ ಕೇಂದ್ರ ಬಿಜೆಪಿ ಸರ್ಕಾರ, ಸಿಎಎ ಕಾಯ್ದೆಗೆ ನಿಯಮಗಳನ್ನು ರೂಪಿಸಿಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಕೇಂದ್ರ ಗೃಹ ಸಚಿವಾಲಯವು ಈ ನಿಯಮಗಳನ್ನು ರೂಪಿಸಲು ಹಲವು ಬಾರಿ ಕಾಲಾವಕಾಶ ಕೋರಿದೆ. ಈ ಹಿನ್ನಲೆಯಲ್ಲಿ, ಕೋಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಖಂಡಿತವಾಗಿಯೂ ಸಿಎಎ ಕಾನೂನನ್ನು ತರಲಾಗುವುದು’ ಎಂದು ಹೇಳಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯವನ್ನು ಹಾಳು ಮಾಡಿದ್ದಾರೆ. ಇಲ್ಲಿ 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಅದಕ್ಕೂ ಮುನ್ನ 2024ರ ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು.

ಪೌರತ್ವ ತಿದ್ದುಪಡಿ ಕಾಯ್ದೆ ಈ ದೇಶದ ಕಾನೂನು; ಇದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು.

ಇತ್ತೀಚೆಗೆ, ಪಶ್ಚಿಮ ಬಂಗಾಳದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಸಂಸದ ಅಜಯ್ ಮಿಶ್ರಾ, ‘ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳನ್ನು ಮಾರ್ಚ್ 30, 2024 ರೊಳಗೆ ಕೇಂದ್ರ ಸರ್ಕಾರವು ರೂಪಿಸಲಿದೆ’ ಎಂದು ಹೇಳಿದ್ದರು.

ಮೇ ತಿಂಗಳಿನಲ್ಲಿ ಸಂಸತ್ ಚುನಾವಣೆ ನಡೆಯಲಿರುವುದರಿಂದ ಅದಕ್ಕೂ ಮುನ್ನ ಸಿಎಎ ಕಾನೂನಿಗೆ ನಿಯಮ ರೂಪಿಸಿದರೆ ಹಿಂದೂಗಳನ್ನು ಒಗ್ಗೂಡಿಸಿ, ಗಣನೀಯ ಪ್ರಮಾಣದಲ್ಲಿ ಹಿಂದೂ ಮತಗಳನ್ನು ಗಿಟ್ಟಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ರಾಜಕೀಯ ವಿಮರ್ಶಕರು ಹೇಳುತ್ತಿದ್ದಾರೆ. ಇದು ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ವಿದೇಶ

ಬ್ಯಾಂಕಾಕ್: ಜಗತ್ತಿನಾದ್ಯಂತ ಇರುವ ಹಿಂದೂ ಸಂಘಟನೆಗಳನ್ನು ಒಗ್ಗೂಡಿಸಿ ಬಲಪಡಿಸಲು ಹಾಗೂ ಸನಾತನ ಧರ್ಮ ವಿರೋಧಿ ಹೋರಾಟಕ್ಕೆ ತಕ್ಕ ಉತ್ತರ ನೀಡುವುದು ಸೇರಿದಂತೆ ಮಹತ್ವದ ನಿರ್ಣಯಗಳನ್ನು ವಿಶ್ವ ಹಿಂದೂ ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು.

ಆಗ್ನೇಯ ಏಷ್ಯಾದ ದೇಶವಾದ ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ, ‘ವಿಶ್ವ ಹಿಂದೂ ಕಾಂಗ್ರೆಸ್ 2023’ ಸಮ್ಮೇಳನವು ಇದೇ 24 ರಂದು ಪ್ರಾರಂಭವಾಗಿ ನಿನ್ನೆ ಕೊನೆಗೊಂಡಿತು. ಥೈಲ್ಯಾಂಡ್‌ ಪ್ರಧಾನಿ ಶ್ರೇತಾ ಥಾವಿಸಿನ್ ಅವರು ಉದ್ಘಾಟಿಸಿದ ಈ ಸಮ್ಮೇಳನದಲ್ಲಿ 61 ದೇಶಗಳ 2,100 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಇದರಲ್ಲಿ ಆರ್‌ಎಸ್‌ಎಸ್ ಅಧ್ಯಕ್ಷ ಮೋಹನ್ ಭಾಗವತ್, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಸೇರಿದಂತೆ ಹಲವರು ಭಾಗವಹಿಸಿದ್ದರು. ಅಂತಿಮ ದಿನವಾದ ನಿನ್ನೆ ಸಮ್ಮೇಳನದಲ್ಲಿ ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಇದರಲ್ಲಿ ಜಗತ್ತಿನಾದ್ಯಂತ ಇರುವ ಹಿಂದೂ ಸಂಘಟನೆಗಳನ್ನು ಕ್ರೋಢೀಕರಿಸಿ ಬಲಪಡಿಸಬೇಕು, ಸನಾತನ ಧರ್ಮದ ವಿರುದ್ಧದ ಅಭಿಪ್ರಾಯಗಳಿಗೆ ತಕ್ಕ ಉತ್ತರ ನೀಡಬೇಕು ಸೇರಿದಂತೆ ನಾನಾ ನಿರ್ಣಯಗಳನ್ನು ಅಂಗೀಕರಿಸಲಾಯಿತು.ಕಾರ್ಯಕ್ರಮದ ಕೊನೆಯಲ್ಲಿ ವಿಶ್ವ ಹಿಂದೂ ಸಮ್ಮೇಳನದ ಸಂಸ್ಥಾಪಕ ಸ್ವಾಮಿ ವಿಜ್ಞಾನಾನಂದ ಅವರು ಮಾತನಾಡಿದರು.

“ಕರೋನಾ ಅವಧಿಯಲ್ಲಿ ಹಿಂದೂಗಳನ್ನು ಸಂಘಟಿಸುವುದರಲ್ಲಿ ಕುಸಿತ ಕಂಡುಬಂದಿತು; ಈಗ ಈ ಚಟುವಟಿಕೆ ಪುನಶ್ಚೇತನಗೊಂಡಿದೆ. ಕ್ರೈಸ್ತ ಸಂಘಟನೆಗಳ ವಶದಲ್ಲಿರುವ ಹಿಂದೂ ದೇವಾಲಯದ ಭೂಮಿಯನ್ನು ವಾಪಸ್ ಪಡೆಯಬೇಕು. ಅದಕ್ಕಾಗಿ ಕಾನೂನು ಕ್ರಮವನ್ನೂ ಕೈಗೊಳ್ಳಬೇಕು” ಎಂದು ಹೇಳಿದರು.

ದೇಶ

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮುಂದಿನ ವಾರ ಸಾಮಾನ್ಯ ನಾಗರಿಕ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಉತ್ತರಾಖಂಡದಲ್ಲಿ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಾಮಾನ್ಯ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಭರವಸೆ ನೀಡಿತ್ತು. ಅಲ್ಲಿ ಅಧಿಕಾರವನ್ನು ಉಳಿಸಿಕೊಂಡ ನಂತರ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸಾಮಾನ್ಯ ನಾಗರಿಕ ಸಂಹಿತೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ರಂಜನ್ ದೇಸಾಯಿ ನೇತೃತ್ವದ ಸಮಿತಿಯನ್ನು ಸ್ಥಾಪಿಸಿದರು.

ಸಮಿತಿಯು ವಿವಿಧ ಸಮಾಲೋಚನೆಗಳ ನಂತರ ಸಾಮಾನ್ಯ ನಾಗರಿಕ ಕಾನೂನಿನ ಕರಡು ವರದಿಯನ್ನು ಸಿದ್ಧಪಡಿಸಿದೆ. ಒಂದೆರೆಡು ದಿನದಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ.

ಈ ಕುರಿತು ರಾಜ್ಯ ಸರ್ಕಾರದ ಮೂಲಗಳ ಪ್ರಕಾರ, ರಂಜನ್ ದೇಸಾಯಿ ಅವರ ವರದಿ ನಂತರ ವಿಶೇಷ ವಿಧಾನಸಭೆ ಅಧಿವೇಶನ ಕರೆಯಲು ರಾಜ್ಯ ಸರ್ಕಾರ ಮುಂದಾಗಿದ್ದು ಅದರಲ್ಲಿ, ಸಾಮಾನ್ಯ ನಾಗರಿಕ ಸಂಹಿತೆಯನ್ನು ಮಂಡಿಸಿ, ಅನುಮೋದನೆ ಪಡೆಯಲಾಗುದು. ಆ ಬಳಿಕ ಕಾನೂನು ಜಾರಿಗೊಳಿಸಲಾಗುವುದು.

ಕರಡು ವರದಿಯಲ್ಲಿ ಬಹುಪತ್ನಿತ್ವದ ವಿವಾಹಗಳನ್ನು ನಿಷೇಧಿಸುವುದು, ‘ಲಿವ್-ಇನ್’ ದಂಪತಿಗಳ ನೋಂದಣಿಯನ್ನು ಕಡ್ಡಾಯಗೊಳಿಸುವುದು ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ಮಗ ಮತ್ತು ಮಗಳಿಗೆ ಸಮಾನ ಹಕ್ಕುಗಳನ್ನು ನೀಡುವುದು ಮುಂತದ ಶಿಫಾರಸುಗಳನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಕಾನೂನು ಜಾರಿಗೆ ಬಂದರೆ ಸಾಮಾನ್ಯ ನಾಗರಿಕ ಸಂಹಿತೆ ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ. ಈ ರಾಜ್ಯವನ್ನು ಅನುಸರಿಸಿ ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಗುಜರಾತ್ ರಾಜ್ಯವೂ ಸಾಮಾನ್ಯ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದು ವರದಿಯಾಗಿದೆ.