1.25 ಕೋಟಿ ಅಭಿಪ್ರಾಯಗಳು ಸಂಗ್ರಹ: ಸದನ ಸಮಿತಿ ಸಂಸದನಿಗೆ ಆಘಾತ; ವಿದೇಶಿಗರ ಕೈವಾಡ ಎಂದು ಅಳಲು! » Dynamic Leader
November 24, 2024
ದೇಶ

1.25 ಕೋಟಿ ಅಭಿಪ್ರಾಯಗಳು ಸಂಗ್ರಹ: ಸದನ ಸಮಿತಿ ಸಂಸದನಿಗೆ ಆಘಾತ; ವಿದೇಶಿಗರ ಕೈವಾಡ ಎಂದು ಅಳಲು!

ಡಿ.ಸಿ.ಪ್ರಕಾಶ್

ವಕ್ಫ್ ಬೋರ್ಡ್ ತಿದ್ದುಪಡಿ ಕುರಿತು ಅಧ್ಯಯನ ನಡೆಸಲು ರಚಿಸಲಾದ ಜಂಟಿ ಸದನ ಸಮಿತಿಗೆ 1.25 ಕೋಟಿ ಪ್ರತಿಕ್ರಿಯೆಗಳು ಬಂದಿವೆ. ಇದರಲ್ಲಿ ವಿದೇಶಿಯರ ಪಾತ್ರವಿರಬಹುದೆಂದು ಬಿಜೆಪಿ, ಸಂಸದ ನಿಶಿಕಾಂತ್ ದುಬೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನು ಕಾಂಗ್ರೆಸ್ ಖಂಡಿಸಿದೆ.

ವಕ್ಫ್ ಬೋರ್ಡ್ (Waqf Board) ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಹೊಸ ಮಸೂದೆಯನ್ನು ತಂದಿತು. ಲೋಕಸಭೆಯಲ್ಲಿ ಮಂಡನೆಯಾದ ಈ ಮಸೂದೆಯನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿತು. ಚರ್ಚೆಯ ಸಂದರ್ಭದಲ್ಲಿ ಮಸೂದೆಯನ್ನು ಜಂಟಿ ಸದನ ಸಮಿತಿಯ ಪರಿಗಣನೆಗೆ ಕಳುಹಿಸಬೇಕು ಎಂದು ಅವರು ಒತ್ತಾಯಿಸಿದರು. ಇದರ ನಂತರ, ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲಾಯಿತು.

ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ (Jagdambika Pal) ನೇತೃತ್ವದ ಈ ಸಮಿತಿಗೆ ವಿವಿಧ ಪಕ್ಷಗಳ ಸದಸ್ಯರನ್ನು ನೇಮಿಸಲಾಗಿದೆ. ತಂಡವು ವಿವಿಧ ಪಕ್ಷಗಳಿಂದ ಸಲಹೆ ಪಡೆಯುತ್ತಿದೆ. ಸಾರ್ವಜನಿಕರು, ದತ್ತಿ ಸಂಸ್ಥೆಗಳು ಮತ್ತು ತಜ್ಞರು ಇಮೇಲ್ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಎಂದು ಸಮಿತಿ ತಿಳಿಸಿತ್ತು. ಇದೀಗ ಇಮೇಲ್ ಮೂಲಕ 1.25 ಕೋಟಿ ಅಭಿಪ್ರಾಯಗಳು ದಾಖಲಾಗಿವೆ. ಈ ಮಟ್ಟಿಗೆ ಅಭಿಪ್ರಾಯಗಳು ಬರುತ್ತವೆ ಎಂದು ಸಂಸತ್ತಿನ ಜಂಟಿ ಸಮಿತಿಯೇ ನಿರೀಕ್ಷಿಸಿರಲಿಲ್ಲ.

ಅನುಮಾನ
ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಕಳುಹಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ (Nishikant Dubey),  ‘ಜಂಟಿ ಸಮಿತಿಗೆ ಬಂದಿರುವ ಪ್ರತಿಕ್ರಿಯೆಗಳು ಹಿಂದೆಂದೂ ಕಾಣದು. ಇದು ವಿಶ್ವದಾಖಲೆ ಸೃಷ್ಟಿಸಿದೆ. ಇದರ ಹಿಂದೆ ಚೀನಾ, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ, ಝಾಕಿರ್ ನಾಯಕ್ ಮುಂತಾದವರ ಕೈವಾಡ ಇರುವ ಸಾಧ್ಯತೆ ಇದೆ.

ವಿದೇಶಿ ಸಂಘಟನೆಗಳು ಅಥವಾ ಸಂಸ್ಥೆಗಳು ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ದುರ್ಬಲಗೊಳಿಸಲು ಅತಿಯಾಗಿ ಪ್ರತಿಕ್ರಿಯಿಸುವಲ್ಲಿ ತೊಡಗಿರುವ ಶಂಕೆ ಇದೆ. ಎಲ್ಲ ಉತ್ತರಗಳು ಎಲ್ಲಿಂದ ಬರುತ್ತಿವೆ ಎಂದು ಕೇಂದ್ರ ಗೃಹ ಸಚಿವಾಲಯದಿಂದ ವಿವರವಾದ ತನಿಖೆಯಾಗಬೇಕು’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಲ್ಪನೆ
ಇದಕ್ಕೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಕ್ತಾರರು, ‘ಇಷ್ಟೊಂದು ಪ್ರತಿಕ್ರಿಯೆಗಳು ಬರುತ್ತವೆ ಎಂದು ನಿರೀಕ್ಷಿಸಲಾಗಿತ್ತು. ವಾಸ್ತವವಾಗಿ, ಜಂಟಿ ಸದನ ಸಮಿತಿಗೆ 1.25 ಕೋಟಿ ಅಭಿಪ್ರಾಯಗಳು ಬಂದಿದೆ ಎಂದು ಕಡಿಮೆಗೊಳಿಸಿ ಹೇಳಲಾಗುತ್ತಿದೆ. 3.7 ಕೋಟಿ ಮುಸ್ಲಿಮರು ನಮ್ಮ ಪರವಾಗಿ ಅಭಿಪ್ರಾಯಗಳನ್ನು ಕಳುಹಿಸಿದ್ದಾರೆ. ಇತರ ಮುಸ್ಲಿಂ ಸಂಘಟನೆಗಳೂ ವಕ್ಫ್ ಬೋರ್ಡ್ ಕಾಯಿದೆ ತಿದ್ದುಪಡಿ ಕುರಿತು ಪ್ರತಿಕ್ರಿಯೆಗಳನ್ನು ಕಳುಹಿಸಿವೆ. ಈ ಮೂಲಕ ಜಂಟಿ ಸದನ ಸಮಿತಿಗೆ 5 ಕೋಟಿ ಪ್ರತಿಕ್ರಿಯೆಗಳು ಬಂದಿರಬಹುದು.

ಸರ್ಕಾರ ಕೇಳಿದ್ದಕ್ಕೆ ಉತ್ತರಗಳು ಬಂದಿವೆ; ಇಷ್ಟೊಂದು ಜನ ಸ್ಪಂದಿಸಿರುವುದರಲ್ಲಿ ಸಮಸ್ಯೆ ಏನಿದೆ? ವಿದೇಶಿಯರ ಪಾತ್ರ ಎಂಬುದೆಲ್ಲ ಕಾಲ್ಪನಿಕ. ಏಕರೂಪ ನಾಗರಿಕ ಸಂಹಿತೆಯ (UCC) ಬಗ್ಗೆ 4.85 ಕೋಟಿ ಜನರು ಅಭಿಪ್ರಾಯಗಳನ್ನು ಕಳುಹಿಸಿದ್ದರು’ ಎಂದು ಹೇಳಿದ್ದಾರೆ.

ಖಂಡನೆ
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಶಕ್ತಿ ಸಿನ್ಹಾ ಗೋಹಿಲ್ (Shaktisinh Gohil), ‘ಭಾರತದಂತಹ ದೊಡ್ಡ ದೇಶದಲ್ಲಿ 1.5 ಕೋಟಿ ಜನರು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದು ಬಿಜೆಪಿಗೆ ನೋವು ತಂದಿದೆ. ಈ ಮೂಲಕ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ.

Related Posts