ನವದೆಹಲಿ: ರಾಜ್ಯಪಾಲರು ಒಂದು ತಿಂಗಳೊಳಗೆ ಮಸೂದೆಗಳ ಅನುಮೋದನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಮಿಳುನಾಡು ಸರ್ಕಾರ ಹೂಡಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ತಮಿಳುನಾಡು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸಿದ್ದ 10 ಮಸೂದೆಗಳನ್ನು ಸುಪ್ರೀಂ ಕೋರ್ಟ್ ಅನುಮೋದಿಸಿದೆ.
ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ಮಸೂದೆಗಳ ಅನುಮೋದನೆಯನ್ನು ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಪರ್ದಿವಾಲಾ ಮತ್ತು ಮಹಾದೇವನ್ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿತ್ತು.
ಈ ಪ್ರಕರಣದಲ್ಲಿ, ಇಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪರ್ದಿವಾಲಾ ಮತ್ತು ಮಹಾದೇವನ್ ಅವರ ಪೀಠವು ಮಹತ್ವದ ತೀರ್ಪು ನೀಡಿದೆ.
ತೀರ್ಪಿನ ಮುಖ್ಯಾಂಶಗಳು:
• ಸಂವಿಧಾನದ 200ನೇ ವಿಧಿಯ ಪ್ರಕಾರ ರಾಜ್ಯಪಾಲರು ನಿರ್ಧಾರ ತೆಗೆದುಕೊಳ್ಳಬೇಕು.
• ತಮಿಳುನಾಡು ಸರ್ಕಾರದ 10 ಮಸೂದೆಗಳನ್ನು ರಾಜ್ಯಪಾಲರು ಒಪ್ಪಿಗೆ ನೀಡದೆ ತಡೆಹಿಡಿದಿರುವುದು ಕಾನೂನು ಬಾಹಿರ.
• ವಿಧಾನಸಭೆಯಲ್ಲಿ ಮತ್ತೆ ಅಂಗೀಕಾರವಾದ ಮಸೂದೆಗಳ ಕುರಿತು ರಾಜ್ಯಪಾಲರ ಕ್ರಮ ಸೂಕ್ತವಲ್ಲ.
• ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗೆ ಕಳುಹಿಸಿದ್ದು ತಪ್ಪು.
• ಪಂಜಾಬ್ ರಾಜ್ಯಪಾಲರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟ ತೀರ್ಪು ನೀಡಿದೆ.
• ಮಸೂದೆಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ 3 ಆಯ್ಕೆಗಳಿವೆ. ಮಸೂದೆಗಳನ್ನು ಅನುಮೋದಿಸಬೇಕು ಅಥವಾ ಅದನ್ನು ಅಮಾನತುಗೊಳಿಸಬೇಕು ಅಥವಾ ರಾಷ್ಟ್ರಪತಿಗೆ ಕಳುಹಿಸಬೇಕು.
• ರಾಜ್ಯಪಾಲರಿಗೆ ವೀಟೋ ಅಧಿಕಾರವಿಲ್ಲ.
• ರಾಜ್ಯಪಾಲರು ತಾವು ಅಮಾನತುಗೊಳಿಸಿದ ಮಸೂದೆಯನ್ನು ಅಮಾನ್ಯವೆಂದು ಘೋಷಿಸುವ ಯಾವುದೇ ಹಕ್ಕನ್ನು ಹೊಂದಿಲ್ಲ.
• ಮಸೂದೆಯನ್ನು ಅನುಮೋದಿಸದೇ ವಿಳಂಬ ಮಾಡಲು ಸಾಧ್ಯವಿಲ್ಲ.
• ರಾಜ್ಯಪಾಲರು ಸಚಿವ ಸಂಪುಟದ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕು. ರಾಜ್ಯಪಾಲರು ಒಂದು ತಿಂಗಳೊಳಗೆ ಮಸೂದೆಗಳನ್ನು ಅನುಮೋದಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು.
• ಅನುಮೋದನೆ ನೀಡದ ಮಾಸೂದೆಗಳನ್ನು 3 ತಿಂಗಳೊಳಗೆ ಹಿಂತಿರುಗಿಸಬೇಕು.
• ವಿಧಾನಸಭೆಯಲ್ಲಿ ಪುನಃ ಅಂಗೀಕಾರವಾದ ಮಸೂದೆಗಳನ್ನು ರಾಜ್ಯಪಾಲರು ಅನುಮೋದಿಸಿರಬೇಕು.
• ರಾಜ್ಯಪಾಲರು ನಿರಂಕುಶವಾಗಿ ವರ್ತಿಸಲು ಸಾಧ್ಯವಿಲ್ಲ.
• ಮಸೂದೆಗಳನ್ನು ಅನುಮೋದಿಸುವ ಬಗ್ಗೆ ರಾಜ್ಯಪಾಲರು ಸಕಾಲಿಕ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ಅಂಬೇಡ್ಕರ್ ಅವರನ್ನು ಉಲ್ಲೇಖಿಸಿ ಮಾತನಾಡಿರುವ ನ್ಯಾಯಮೂರ್ತಿ ಪರ್ದಿವಾಲಾ ಅವರು “ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ, ಅದನ್ನು ಜಾರಿಗೆ ತರುವವರು ಒಳ್ಳೆಯವರಲ್ಲದಿದ್ದರೆ, ಅದು ಕೆಟ್ಟ ಪರಿಸ್ಥಿತಿಗೆ ಕಾರಣವಾಗುತ್ತದೆ.” ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯಪಾಲರ ಮುಖಾಂತರ ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಪರ್ಯಾಯ ರಾಜಕೀಯ ನಡೆಸಲು ರಾಜಭವನವನ್ನು ಬಿಜೆಪಿಯ ಕಛೇರಿಗಳಂತೆ ಮಾರ್ಪಡಿಸಿದ್ದ ಬಿಜೆಪಿಗೆ ಮತ್ತು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿಗೆ ಇದು ಅರಗಿಸಿಕೊಳ್ಳಲಾಗದ ಅಪಮಾನ ಎಂಬುದರಲ್ಲಿ ಎರಡು ಮಾತಿಲ್ಲ.