ಡಿ.ಸಿ.ಪ್ರಕಾಶ್
ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಬಾಬುಸಾಬ್ ಪಾಳ್ಯದಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಇಂದು ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಕ್ಷೇತ್ರದ ಮುಖಂಡರಾದ ಡಿ.ಕೆ.ಮೋಹನ್ ಬಾಬು ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪಕ್ಷದ ಎಲ್ಲಾ ನಾಯಕರಿಂದಲೂ ಗೌರವ ಸಲ್ಲಿಸಲಾಯಿತು.
ಪ್ರಾಸ್ತಾವಿಕ ಭಾಷಣ ಮಾಡಿದ ಬೆಂಗಳೂರು ಪೂರ್ವ ಜಿಲ್ಲಾ ಅಧ್ಯಕ್ಷರಾದ ನಂದಕುಮಾರ್, “ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ತೀವ್ರವಾಗಿ ಖಂಡಿಸಿದರು. ಏಪ್ರಿಲ್ 17 ರಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ಆವರಣದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದು ಸೇರಬೇಕೆಂದು ಕರೆ ನೀಡಿದರು.
ಅವರ ನಂತರ ಮಾತನಾಡಿದ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷ ಮಂಜುನಾಥ್ ಅವರು, ಬೆಲೆ ಏರಿಕೆ, ನಿರುದ್ಯೋಗ, ವಕ್ಫ್ ಮುಂತಾದ ಹಲವಾರು ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ನೂರಾರು ಹೋರಾಟಗಳು ದಿನನಿತ್ಯವೂ ನಡೆಸುತ್ತಿದೆ. ಆದರೆ, ಕಾರಣವೇ ಇಲ್ಲದೆ ಬಿಜೆಪಿಗರು ಮಾಡುತ್ತಿರುವ ಹೊರಾಟಗಳಿಗೆ ಮಾತ್ರ ಕೆಲವೊಂದು ಮಾಧ್ಯಮಗಳು ಹೆಚ್ಚಿನ ಪ್ರಚಾರ ನೀಡುತ್ತಿವೆ. ಹಾಗಾಗಿ, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಗುರುವಾರ ನಡೆಯಲಿರುವ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಾರ್ಯಕರ್ತರು ಬಂದು ಸೇರಬೇಕು” ಎಂದು ಹೇಳಿದರು.
ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಎಂಎಲ್ ಸಿ ಹಾಗೂ ಬೆಂಗಳೂರು ಉತ್ತರ ಉಸ್ತುವಾರಿಗಳಾದ ನಾರಾಯಣಸ್ವಾಮಿ ಅವರು, “ಬಿಜೆಪಿಯವರು ಜನ ಆಕ್ರೋಶ ಯಾತ್ರೆಯನ್ನು ಮಾಡುತ್ತಿದ್ದಾರೆ. ಆದರೂ ಜನ ಸೇರುತ್ತಿಲ್ಲ. ಆದರೆ, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಪ್ರತಿಭಟಿಸಲು, ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗುರುವಾರ ಸುಮಾರು 30 ಸಾವಿರ ಕಾಂಗ್ರೆಸ್ ಕಾರ್ಯಕರ್ತರು ಸೇರಲಿದ್ದಾರೆ. ಅಂದು ಬೆಂಗಳೂರು ಮಹಾನಗರವೇ ಸ್ತಬ್ಧವಾಗಲಿದೆ” ಎಂದು ಹೇಳಿದರು.
ಅಧ್ಯಕ್ಷ ಭಾಷಣ ಮಾಡಿದ ಕ್ಷೇತ್ರದ ಮುಖಂಡರಾದ ಡಿ.ಕೆ.ಮೋಹನ್ ಬಾಬು ರವರು, “ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಇವತ್ತು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಎಲ್ಲಡೆಯೂ ಆಚರಿಸಲಾಗುತ್ತಿದೆ. ಅವರು ನಮಗೆ ಸಂವಿಧಾನವನ್ನು ತಂದು ಕೊಡದಿದ್ದರೆ, ಇವತ್ತು ನಾವೆಲ್ಲ ಈ ರೀತಿ ಕುಂತು ಮಾತನಾಡುತ್ತಿರಲಿಲ್ಲ” ಎಂದು ಅಂಬೇಡ್ಕರ್ ಅವರನ್ನು ಹಾಡಿ ಹೊಗಳಿದರು. “ಕ್ಷೇತ್ರದಲ್ಲಿ ಪಕ್ಷವು ಅಭೂತ ಪೂರ್ವವಾಗಿ ಬೆಳೆಯುತ್ತಿದ್ದು, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರುಗಳು ಬಹಳ ಹುಮ್ಮಸ್ಸಿನಿಂದ ಪಕ್ಷದ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ನಮ್ಮ ಕ್ಷೇತ್ರದಿಂದ ಹೆಚ್ಚಿನ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮುಖಂಡರುಗಳಿಗೆ ಆಶ್ವಾಸನೆ ನೀಡಿದರು.

ಕಾಂಗ್ರೆಸ್ ಮುಖಂಡರ ಪೂರ್ವಭಾವಿ ಸಭೆ ಮತ್ತು ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕಾಂಗ್ರೆಸ್ ನಾಯಕರುಗಳು, ಬ್ಲಾಕ್ ಅಧ್ಯಕ್ಷರುಗಳು, ವಾರ್ಡ್ ಅಧ್ಯಕ್ಷರುಗಳು, ಹಿರಿಯ ಮುಖಂಡರುಗಳು, ಸರ್ಕಾರದಿಂದ ನಿಯೋಜಿತಗೊಂಡ ಪದಾಧಿಕಾರಿಗಳು, ಮಾಜಿನಗರ ಪಾಲಿಕೆ ಸದಸ್ಯರುಗಳು, ಡಿಸಿಸಿಯ ಪದಾಧಿಕಾರಿಗಳು, ಮಹಿಳಾ ಮುಖಂಡರುಗಳು, ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು, ಮಹಿಳಾ ಮುಖಂಡರುಗಳು, ಯುವ ಕಾಂಗ್ರೆಸ್ ಪದಾಧಿಕಾರಿಗಳು ಈ ಸಭೆಯಲ್ಲಿ ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿದ್ದರು.