ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ಮತ್ತು ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರಿಗೆ ಜಾರಿ ನಿರ್ದೇಶನಾಲಯ ಎರಡನೇ ಸಮನ್ಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ, ಅವರು ಇಂದು (ಏಪ್ರಿಲ್ 15) ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು.
ಕಳೆದ 2018ರಲ್ಲಿ, ಗುರುಗ್ರಾಮ್‌ನಲ್ಲಿ 3.5 ಎಕರೆ ಭೂಮಿ ಖರೀದಿ ಮತ್ತು ಮಾರಾಟದಲ್ಲಿ ಎರಡು ಕಂಪನಿಗಳ ನಡುವೆ ಅಕ್ರಮ ಹಣ ವರ್ಗಾವಣೆಯ ಆರೋಪಗಳು ಕೇಳಿಬಂದವು. ಇದರಲ್ಲಿ 65 ಕೋಟಿ ರೂಪಾಯಿ ಬಡ್ಡಿರಹಿತ ಸಾಲ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಕಳೆದ ಏಪ್ರಿಲ್ 8 ರಂದು ಸಮನ್ಸ್ ಕಳುಹಿಸಿತ್ತು. ಈಗ ಎರಡನೇ ಸಮನ್ಸ್ ಕಳುಹಿಸಲಾಗಿದೆ. ಆದರೂ ವಾದ್ರಾ ಹಾಜರಾಗದೇ ಕಾಲ ವಿಳಂಬ ಮಾಡಿಬರುತ್ತಿದ್ದರು. ಈ ಹಿನ್ನೆಲೆಯಲ್ಲಿ, ಅವರು ಇಂದು ವಿಚಾರಣೆಗೆ ಹಾಜರಾದರು.
ಇದಕ್ಕೂ ಮೊದಲು ಮಾತನಾಡಿದ ರಾಬರ್ಟ್ ವಾದ್ರಾ, “ಇದು ನನ್ನ ವಿರುದ್ಧ ಕೇಂದ್ರ ಸರ್ಕಾರ ನಡೆಸುತ್ತಿರುವ ಪಿತೂರಿ. ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಸರ್ಕಾರಿ ಯಂತ್ರಗಳನ್ನು ತಪ್ಪಾಗಿ ಬಳಸಲಾಗುತ್ತಿದೆ. ನಾನು ಜನರ ಪರವಾಗಿ ಮಾತನಾಡುವಾಗಲೆಲ್ಲಾ, ಕೇಂದ್ರ ಸರ್ಕಾರ ನನ್ನನ್ನು ಮೌನಗೊಳಿಸಲು ಇಂತಹ ಚಟುವಟಿಕೆಗಳಲ್ಲಿ ತೊಡಗುತ್ತದೆ” ಎಂದು ಅವರು ಆರೋಪಿಸಿದರು.