“ಭಯೋತ್ಪಾದಕರ ದಾಳಿಯ ಹೊಣೆ ಹೊತ್ತು ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿರುವ ತಿರುಮಾವಳವನ್, “ಮೋದಿ ಈ ದುರಂತವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಆಘಾತಕಾರಿಯಾಗಿದೆ” ಎಂದು ಹೇಳಿದ್ದಾರೆ. “ಭಯೋತ್ಪಾದಕರು ದಾಳಿ ನಡೆಸಿದ ಸ್ಥಳಕ್ಕೆ ಭೇಟಿ ನೀಡುವ ಬದಲು, ಪ್ರಧಾನಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ” ಎಂದು ತಿರುಮಾವಳವನ್ ಕಿಡಿಕಾರಿದ್ದಾರೆ.
ಇಂದು ಸುದ್ದಿಗಾರರನ್ನು ಭೇಟಿ ಮಾಡಿದ ತಿರುಮಾವಳವನ್, “ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಅತ್ಯಂತ ಆಘಾತಕಾರಿಯಾಗಿದ್ದು, ಭಯೋತ್ಪಾದನೆಯನ್ನು ತಡೆಗಟ್ಟಲು ಒಕ್ಕೂಟ ಸರ್ಕಾರದೊಂದಿಗೆ ಒಗ್ಗೂಡಿ ನಿಲ್ಲಬೇಕೆಂದು ಎಲ್ಲಾ ಭಾರತೀಯರಿಗೆ “ವಿಡುದಲೈ ಚಿರುತ್ತೈಗಳ್” ಮನವಿ ಮಾಡುತ್ತದೆ.
ಅದೇ ಸಮಯದಲ್ಲಿ, ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆಯಾಗಿದೆ… ಪ್ರಜಾಪ್ರಭುತ್ವವನ್ನು ಸ್ಥಾಪಿಸಲಾಗಿದೆ… ಯಾವುದೇ ದಾಳಿಗಳಿಲ್ಲ… ಶಾಂತಿ ಇದೆ… ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಬಹುದು… ಎಂದು ಅಮಿತ್ ಶಾ ಭರವಸೆ ನೀಡಿದ್ದರು.
ಅಮಿತ್ ಶಾ ಅವರು, ‘ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿ, ಶಾಂತಿಯನ್ನು ಪುನಃಸ್ಥಾಪಿಸಿದ್ದೇವೆ ಮತ್ತು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ್ದೇವೆ’ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ಆ ನಂತರವೇ ಇಂತಹ ಭಯಾನಕ ಘಟನೆ ನಡೆದಿದೆ” ಎಂದು ಹೇಳಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು, “ಭಾರತ ಸರ್ಕಾರದ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳು ವಿಫಲವಾಗಿವೆ. ಗೃಹ ಸಚಿವರನ್ನು ವಜಾ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
“ಗೃಹ ಸಚಿವ ಅಮಿತ್ ಶಾ ಅವರು, ಈ ದುರಂತದ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ‘ವಿಡುದಲೈ ಚಿರುತ್ತೈಗಳ್’ ಪಕ್ಷದ ಪರವಾಗಿ ನಾವು ಕೂಡ ಒತ್ತಾಯಿಸುತ್ತಿದ್ದೇವೆ. ಇದು ರಾಜಕೀಯ ಪ್ರೇರಿತ ಹೇಳಿಕೆಯಲ್ಲ, ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರವನ್ನು ಮುಂದಿಡಲಾಗುತ್ತಿದೆ.”
ಭಯೋತ್ಪಾದಕ ದಾಳಿಯನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಮೋದಿ
“ಪ್ರಧಾನಿ ಮೋದಿಯವರು ಸೌದಿ ಅರೇಬಿಯಾ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ದೇಶಕ್ಕೆ ಮರಳಿದ್ದರು. ಪ್ರವಾಸಿಗರು ದಾಳಿಗೆ ಒಳಗಾದ ಸ್ಥಳಕ್ಕೆ ಭೇಟಿ ನೀಡುತ್ತಾರೆ ಎಂದು ನಾವು ಕೂಡ ಭಾವಿಸಿದ್ದೆವು. ಆದರೆ ಅವರು, ಬಿಹಾರಕ್ಕೆ ತೆರಳಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಆಘಾತಕಾರಿಯಾಗಿದೆ.
ಗೃಹ ಸಚಿವರಷ್ಟೇ ಅಲ್ಲ, ಪ್ರಧಾನಿಯೂ ಅಲ್ಲಿಗೆ ಹೋಗಿದ್ದರೆ ಜನತೆಗೆ ಸಮಾಧಾನವಾಗುತ್ತಿತ್ತು. ಆದರೆ, ಈ ದಾಳಿಯನ್ನು ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ಬೇಸರ ವ್ಯಕ್ತಪ್ಡಿಸಿದ್ದಾರೆ.