ತಿರುಚಿರಾಪಳ್ಳಿ: ತಿರುಚ್ಚಿಯ ಸಿರುಗನೂರಿನಲ್ಲಿ ಸಂಸದ ತೊಲ್.ತಿರುಮಾವಳವನ್ ನೇತೃತ್ವದ ವಿಡುದಲೈ ಚಿರುತ್ತೈಗಳ್ (ಬಿಡುಗಡೆ ಚಿರುತೆಗಳು) ಪಾರ್ಟಿ ವತಿಯಿಂದ “ಪ್ರಜಾಪ್ರಭುತ್ವ ಗೆಲ್ಲುತ್ತದೆ” ಎಂಬ ಶೀರ್ಷಿಕೆಯಡಿ ನಡೆದ ಸಮಾವೇಶದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭಾಗವಹಿಸಿ ಮಾತನಾಡಿದರು.
ತಿರುಚ್ಚಿ ಸಿರುಗನೂರಿನಲ್ಲಿ ವಿಡುದಲೈ ಚಿರುತ್ತೈಗಳ್ ಪಾರ್ಟಿ ವತಿಯಿಂದ “ಪ್ರಜಾಪ್ರಭುತ್ವ ಗೆಲ್ಲುತ್ತದೆ” ಎಂಬ ಶೀರ್ಷಿಕೆಯಡಿ ಸಮಾವೇಶವನ್ನು ನಡೆಸಲಾಯಿತು. I.N.D.I.A ಮೈತ್ರಿ ಪಕ್ಷದ ನಾಯಕರು ಭಾಗವಹಿಸಿದ್ದ ಈ ಸಮಾವೇಶದಲ್ಲಿ ವಿಡುದಲೈ ಚಿರುತ್ತೈಗಳ್ ನಾಯಕ ತಿರುಮಾವಳವನ್ 33 ನಿರ್ಣಯಗಳನ್ನು ಪ್ರಸ್ತಾಪಿಸಿದರು.
ಈ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, “ಇಡೀ ಭಾರತಕ್ಕೆ ಸಾಮಾಜಿಕ ನ್ಯಾಯ ಮತ್ತು ಸಮತಾವಾದ ಚಿಂತನೆಯನ್ನು ಸಾರುವ ಸರ್ಕಾರವನ್ನು ಸ್ಥಾಪಿಸಲಿಕ್ಕಾಗಿ ಸಹೋದರ ತಿರುಮಾವಳವನ್ “ಪ್ರಜಾಪ್ರಭುತ್ವ ಗೆಲ್ಲುತ್ತದೆ” ಎಂಬ ಸಮಾವೇಶವನ್ನು ಆಯೋಜಿಸಿದ್ದಾರೆ. “ಪ್ರಜಾಪ್ರಭುತ್ವ ಗೆಲ್ಲುತ್ತದೆ” ಎಂದು ಹೇಳಿದರೆ ಸಾಲದು. ಅದಕ್ಕೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.
ತಮಿಳುನಾಡಿನಲ್ಲಿ ಬಿಜೆಪಿ ಎಂಬುದು ಶೂನ್ಯ. ತಮಿಳುನಾಡಿನಲ್ಲಿ ಬಿಜೆಪಿ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಕೇವಲ ತಮಿಳುನಾಡಿನಲ್ಲಿ ಮಾತ್ರ ಬಿಜೆಪಿಯನ್ನು ಸೋಲಿಸಿದರೆ ಸಾಲದು. ಅದನ್ನು ಅಖಿಲ ಭಾರತ ಮಟ್ಟದಲ್ಲಿ ಸೋಲಿಸಬೇಕು. ಅದಕ್ಕೆ ಬುನಾದಿ I.N.D.I.A ಮೈತ್ರಿಕೂಟ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಇರುವುದಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದಿಲ್ಲ, ಸಂಸದೀಯ ಪ್ರಕ್ರಿಯೆ ಇರುವುದಿಲ್ಲ, ಅಂತಿಮವಾಗಿ ರಾಜ್ಯಗಳೇ ಇರುವುದಿಲ್ಲ. ಇದನ್ನು ಎಲ್ಲರೂ ಅರಿತುಕೊಳ್ಳಬೇಕು. ಅವರು ರಾಜ್ಯಗಳನ್ನು ಪಾಲಿಕೆಗಳಾಗಿ (Corporation) ಮಾಡುತ್ತಾರೆ” ಎಂದು ಅವರು ಎಚ್ಚರಿಸಿದರು.
ಇದನ್ನು ಅನುಸರಿಸಿ ಮಾತನಾಡಿದ ತಿರುಮಾವಳವನ್, “ತಮಿಳುನಾಡು ಉತ್ತರ ಭಾರತದ ರಾಜ್ಯಗಳಂತೆ ಅಲ್ಲ. ಇದು ಚಿರತೆಗಳ ರಾಜ್ಯ. ತಮಿಳುನಾಡಿನ ಪ್ರತಿಯೊಂದು ಹಳ್ಳಿಯಲ್ಲೂ ಚಿರತೆಗಳಿವೆ. ಕುರಿಮರಿಗಳು ಇಲ್ಲಿ ಬಂದು ನೋಡಿದರೆ ಗೊತ್ತಾಗುತ್ತೆ. ಮೋದಿಯನ್ನು ಅಧಿಕಾರದಿಂದ ದೂರವಿಡಬೇಕು. ಇನ್ನು ವಿಳಂಬ ಮಾಡಲು, ಮೋಜು ಮಾಡಲು ಸಾಧ್ಯವಿಲ್ಲ.
ಇದು ಚುನಾವಣಾ ರಾಜಕೀಯ ಲೆಕ್ಕಾಚಾರವಲ್ಲ. ದೇಶವನ್ನು, ದೇಶದ ಜನರನ್ನು ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ. ಈ ಸಮ್ಮೇಳನದ ಸಮಾರಂಭದ ನಾಯಕ ಸಂವಿಧಾನವೇ ಆಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಂಚಿಸುವ ವಂಚಕರ ಕೈಗೆ ಈ ದೇಶ ಸಿಕ್ಕಿಬಿದ್ದಿದೆ. ಮೋದಿ ಜನರಿಗೆ ವಂಚಿಸುತ್ತಿದ್ದಾರೆ.
ಮೋದಿಯಿಂದ ನಾನು ಇದನ್ನು ಸಾಧಿಸಿದ್ದೇನೆ; ಅದನ್ನು ಸಾಧಿಸಿದ್ದೇನೆ, ಈ 10 ವರ್ಷಗಳಲ್ಲಿ ನಾವು ಈ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಲು ಸಾಧ್ಯವೇ? ಮೋದಿ ಮತ್ತು ಅಮಿತ್ ಶಾ ಅವರ ಸೇವೆ ಅಂಬಾನಿ ಮತ್ತು ಅಧಾನಿಗಾಗಿ ಕೆಲಸ ಮಾಡುವುದೊಂದೇ” ಎಂದು ಕಿಡಿಕಾರಿದರು.
“ಪ್ರಜಾಪ್ರಭುತ್ವ ಗೆಲ್ಲುತ್ತದೆ” ಸಮಾವೇಶಕ್ಕೆ ರಾಜ್ಯಾದ್ಯಂತ ಬಂದಿದ್ದ ಲಕ್ಷಾಂತರ ಕಾರ್ಯಕರ್ತರನ್ನು ನೋಡಿ ವಿರೋಧಿಗಳಿಗೆ ನಡುಕ ಉಂಟಾಗಿರುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಬಹುದು.