ಮುಂಬೈ: ಕಳೆದ ಜನವರಿಯಲ್ಲಿ ಮುಂಬೈನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವುದಕ್ಕಾಗಿ, ತಾನು ವಾಸಿಸುವ ಅಪಾರ್ಟ್‌ಮೆಂಟ್‌ನ ನಿರ್ವಹಣಾ ತಂಡವು ತನಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿ, ಲೀಲಾ ವರ್ಮಾ ಎಂಬ ಮಹಿಳೆ ವಸತಿ ಸಂಘದ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು.
ಜನವರಿ 21 ರಂದು ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, “ಬೀದಿ ನಾಯಿಗಳಿಗೆ ಆಹಾರ ನೀಡುವ ಬಗ್ಗೆ ಅಥವಾ ಅದಕ್ಕೆ ನಿಗದಿಪಡಿಸಿದ ಜಾಗಗಳ ಬಗ್ಗೆ ವಸತಿ ಸಂಘಗಳಿಗೆ ಯಾವುದೇ ಅಸಮಾಧಾನಗಳಿದ್ದರೆ, ನಿವಾಸಿಗಳಿಗೆ ಕಿರುಕುಳ ನೀಡುವ ಬದಲು ಪುರಸಭೆಯನ್ನು ಸಂಪರ್ಕಿಸಬಹುದು” ಎಂದು ಹೇಳಿತ್ತು.
“ಕಾನೂನಿನ ಪ್ರಕಾರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWAs) ಮತ್ತು ಅಪಾರ್ಟ್‌ಮೆಂಟ್ ಮಾಲೀಕರ ಸಂಘಗಳು (AOAs) ತಮ್ಮ ಆವರಣದಲ್ಲಿ ಬೀದಿ ಪ್ರಾಣಿಗಳಿಗೆ ಆಹಾರ ನೀಡಲು ಅವಕಾಶ ನೀಡಬೇಕು ಮತ್ತು ಸ್ಥಳೀಯ ಅಧಿಕಾರಿಗಳು ಆಹಾರ ಪ್ರದೇಶಗಳನ್ನು ಗೊತ್ತುಪಡಿಸಿ, ಸಮುದಾಯ ಪ್ರಾಣಿಗಳಿಗೆ ಅಗತ್ಯ ವ್ಯವಸ್ಥೆ ಮಾಡಬೇಕು” ಎಂದು ವರ್ಮಾ ತಮ್ಮ ದೂರಿನಲ್ಲಿ ತಿಳಿಸಿದ್ದರು.
ಇದರ ಬೆನ್ನಲ್ಲೇ ಲೀಲಾ ವರ್ಮಾ ವಾಸವಿರುವ ವಸತಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ವಿನಿತಾ ಶ್ರೀನಂದನ್ ಅವರು, ನ್ಯಾಯಾಲಯವನ್ನು ನಿಂದನೆ ಮಾಡುವ ರೀತಿಯಲ್ಲಿ, “ಡಾಗ್ ಮಾಫಿಯಾ” ಎಂಬ ಅಭಿಪ್ರಾಯವನ್ನು ಇತರ ಸಮಿತಿಯ ಸದಸ್ಯರಿಗೆ ಇಮೇಲ್ ಮೂಲಕ ಕಳುಹಿಸಿದ್ದರು.
ವಿನಿಮಯ ಮಾಡಿಕೊಂಡ ಇಮೇಲ್‌ಗಳು ಮತ್ತು ಪತ್ರಗಳ ಮೂಲಕ ನ್ಯಾಯಾಂಗ ನಿಂದನೆ ಆರೋಪದ ಮೇಲೆ ವಿನಿತಾ ಶ್ರೀನಂದನ್ ಅವರನ್ನು ಬಂಧಿಸಲಾಗಿದೆ.
ಏಪ್ರಿಲ್ 23 ರಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ಅದ್ವೈತ್ ಸೇಠ್ನಾ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿತ್ತು. ಶ್ರೀನಂದನ್ ಅವರ ಕ್ಷಮಾಪಣೆಯನ್ನು ಸ್ವೀಕರಿಸಲು ನಿರಾಕರಿಸಿ, “ಮೊಸಳೆ ಕಣ್ಣೀರು ಮತ್ತು ಅಂತಹ ಪ್ರಕರಣಗಳನ್ನು ಖಂಡಿಸುವವರು ಸಾಮಾನ್ಯವಾಗಿ ಕೇಳುವ ಕ್ಷಮೆ ಮಂತ್ರವನ್ನು ನಾವು ಸ್ವೀಕರಿಸುವುದಿಲ್ಲ” ಎಂದು ಹೇಳಿತು.
ಅಲ್ಲದೆ, ನ್ಯಾಯಾಲಯವನ್ನು “ಡಾಗ್ ಮಾಫಿಯಾ” ಎಂದು ಕರೆಯುವ ಅಭಿಪ್ರಾಯವನ್ನು ವಿದ್ಯಾವಂತರಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾ, “ವಿನಿತಾ ಶ್ರೀನಂದನ್ ಅವರಿಗೆ ಒಂದು ವಾರದ ಸಾದಾ ಜೈಲು ಶಿಕ್ಷೆ ಮತ್ತು ರೂ.20 ಸಾವಿರ ದಂಡವನ್ನು ವಿಧಿಸಿ ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.