ನವದೆಹಲಿ: ಭಯೋತ್ಪಾದಕ ದಾಳಿ ನಡೆಸಿದ ಭಯೋತ್ಪಾದಕ ಹಶೀಮ್ ಮೂಸಾ ಪಾಕಿಸ್ತಾನದ ಸೇನಾ ಕಮಾಂಡೋ ಆಗಿದ್ದ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಮ್ಮ ನೆರೆಯ ರಾಷ್ಟ್ರವಾದ ಪಾಕಿಸ್ತಾನದ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಹಲವು ಆಕ್ರಮಣಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಪಹಲ್ಗಾಮ್ ಭಯೋತ್ಪಾದನಾ ದಾಳಿಯ ತನಿಖೆಯ ವೇಳೆ ಮಾಸ್ಟರ್ ಮೈಂಡ್ ಎಂದು ಗುರುತಿಸಲಾದ ಪಾಕಿಸ್ತಾನಿ ಭಯೋತ್ಪಾದಕ ಹಶೀಮ್ ಮೂಸಾ ಪಾಕಿಸ್ತಾನದ ಸೇನೆಯ ಮಾಜಿ ಪ್ಯಾರಾ ಕಮಾಂಡೋ ಆಗಿದ್ದ ಎಂದು ತಿಳಿದುಬಂದಿದೆ
ಭಯೋತ್ಪಾದಕ ಹಶೀಮ್ ಪಾಕಿಸ್ತಾನ ಸೇನೆಯ ವಿಶೇಷ ಘಟಕವಾದ ಎಸ್‌ಎಸ್‌ಜಿಗೆ ಸೇರಿದವನು. ಹಶೀಮ್ ಮೂಸಾನನ್ನು ಪಾಕಿಸ್ತಾನಿ ಸೇನೆಯು ಲಷ್ಕರ್-ಎ-ತೈಬಾಗೆ ಕಳುಹಿಸಿರಬಹುದು ಎಂದು ಗುಪ್ತಚರ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ.
ಈತ ಕಾಶ್ಮೀರದಲ್ಲಿ ನಡೆದ 3 ಭಯೋತ್ಪಾದಕ ದಾಳಿಗಳಲ್ಲಿ ಭಾಗವಹಿಸಿದ್ದಾನೆ. ಪಹಲ್ಗಾಮ್ ದಾಳಿಯ ತನಿಖೆಯ ಮಾಸ್ಟರ್ ಮೈಂಡ್ ಎಂದು ಶಂಕಿಸಲಾದ 15 ಜನರ ವಿಚಾರಣೆಯಲ್ಲಿ ಈ ಮಾಹಿತಿ ದೃಢಪಟ್ಟಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಕಾಶ್ಮೀರದಲ್ಲಿ ಹಿಂದಿನ ಭಯೋತ್ಪಾದನಾ ದಾಳಿಯಲ್ಲಿ ಹಶೀಮ್ ಮೂಸಾ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.