ರಿಯಾದ್: ಸೌದಿ ಅರೇಬಿಯಾದಲ್ಲಿ ಬಸ್-ಡೀಸೆಲ್ ಟ್ರಕ್ ಅಪಘಾತದಲ್ಲಿ 42 ಭಾರತೀಯರು ಸಾವನ್ನಪ್ಪಿದ ದಾರುಣ ಘಟನೆ ಸಂಚಲನ ಮೂಡಿಸಿದೆ.
ಉಮ್ರಾ ಯಾತ್ರೆಗಾಗಿ ಮೆಕ್ಕಾದಿಂದ ಮದೀನಾಗೆ ಯಾತ್ರಿಕರು ಪ್ರಯಾಣಿಸುತ್ತಿದ್ದಾಗ ಸೌದಿ ಅರೇಬಿಯಾದ ಮದೀನಾ ಬಳಿ ಬಸ್ ಮತ್ತು ಡೀಸೆಲ್ ಟ್ರಕ್ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದ್ದು, ಇದರಲ್ಲಿ ಬಸ್ಸಿನಲ್ಲಿದ್ದ 42 ಭಾರತೀಯ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ.
ಈ ಪೈಕಿ 20 ಮಹಿಳೆಯರು ಮತ್ತು 11 ಮಕ್ಕಳು ಹೈದರಾಬಾದ್ನವರಾಗಿದ್ದು, ಉಳಿದ ಶವಗಳ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಈ ಸಂಬಂಧ ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿರುವುದಾಗಿ ತೆಲಂಗಾಣ ಸರ್ಕಾರ ತಿಳಿಸಿದೆ.
ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ನವದೆಹಲಿಯ ಅಧಿಕಾರಿಗಳನ್ನು ಸಂಪರ್ಕಿಸಿ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಂತೆ ಕೇಳಿಕೊಂಡಿದ್ದಾರೆ.
ಬೆಳಗಿನ ಜಾವ ದುರಂತ
ಮದೀನಾದಿಂದ 160 ಕಿ.ಮೀ ದೂರದಲ್ಲಿ ಭಾರತೀಯ ಕಾಲಮಾನ ಬೆಳಗಿನ ಜಾವ 1:30 ಕ್ಕೆ ಅಪಘಾತ ಸಂಭವಿಸಿದೆ. ಆ ಸಮಯದಲ್ಲಿ ಅನೇಕ ಪ್ರಯಾಣಿಕರು ನಿದ್ರಿಸುತ್ತಿದ್ದರು. ಆದ್ದರಿಂದ ಡಿಕ್ಕಿಯ ನಂತರ ಬಸ್ ಬೆಂಕಿಗೆ ಆಹುತಿಯಾದಾಗ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ಕಾರಣದಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ಬಸ್ ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಬಲಿಪಶುಗಳನ್ನು ಗುರುತಿಸುವುದು ತುಂಬಾ ಸವಾಲಿನ ಸಂಗತಿಯಾಗಿದೆ.
ಸೌದಿ ಅರೇಬಿಯಾದಲ್ಲಿ ಭಾರತೀಯ ಯಾತ್ರಿಕರ ಸಾವಿಗೆ ಕಾಂಗ್ರೆಸ್ ಸಂತಾಪ ಸೂಚಿಸಿದೆ.
ಸೌದಿ ಅರೇಬಿಯಾದಲ್ಲಿ ಭಾರತೀಯ ಯಾತ್ರಿಕರ ಸಾವಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ ಮತ್ತು ಮೃತರ ಕುಟುಂಬಗಳಿಗೆ ಸಹಾಯ ಮಾಡಲು ರಾಜ್ಯ ಅಧಿಕಾರಿಗಳೊಂದಿಗೆ ನಿಕಟವಾಗಿ ಸಹಕರಿಸುವಂತೆ ಕೇಂದ್ರವನ್ನು ಒತ್ತಾಯಿಸಿದ್ದಾರೆ.
“ಹಲವಾರು ಭಾರತೀಯ ಪ್ರಜೆಗಳನ್ನು ಒಳಗೊಂಡ ಸೌದಿ ಅರೇಬಿಯಾದ ಮದೀನಾ ಬಳಿ ಸಂಭವಿಸಿದ ಹೃದಯ ವಿದ್ರಾವಕ ದುರಂತದಿಂದ ತೀವ್ರ ದುಃಖಿತನಾಗಿದ್ದೇನೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು ಮತ್ತು ಗಾಯಾಳುಗಳ ತ್ವರಿತ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.
“ಈ ಕಷ್ಟದ ಸಮಯದಲ್ಲಿ ಸಹಾಯ ಮತ್ತು ಪರಿಹಾರವನ್ನು ಒದಗಿಸಲು ಕೇಂದ್ರ ಸರ್ಕಾರ @MEAIndia ಮೂಲಕ ರಾಜ್ಯ ಅಧಿಕಾರಿಗಳು ಮತ್ತು ಭಾರತದಲ್ಲಿ ಬಲಿಪಶುಗಳ ಕುಟುಂಬಗಳೊಂದಿಗೆ ನಿಕಟವಾಗಿ ಸಹಕರಿಸಬೇಕು” ಎಂದು ಅವರು ಕೇಳಿಕೊಂಡಿದ್ದಾರೆ.
“ಸಂತ್ರಸ್ತರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ತೆಲಂಗಾಣ ಮುಖ್ಯಮಂತ್ರಿಗೆ ಸೂಚನೆ ನೀಡಿದ್ದೇನೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ” ಎಂದು ಖರ್ಗೆ ಹೇಳಿದ್ದಾರೆ.














