ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು – ಜಾಟ್ ಯುವ ಮಹಾಸಭಾ ಆಗ್ರಹ!
ನವದೆಹಲಿ: ದೇಶದಲ್ಲೇ ಅತ್ಯಂತ ಹಳೆಯದಾದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವು ಉತ್ತರ ಪ್ರದೇಶದ ಅಲಿಗಢದಲ್ಲಿದೆ. ಇದನ್ನು ಸರ್ ಸೈಯದ್ ಅಹಮದ್ ಖಾನ್ ಎಂಬ ವಿದ್ವಾಂಸರು ಸ್ಥಾಪಿಸಿದರು. ಆದರೆ, ಇಲ್ಲಿ ಹಿಂದೂ ಸೇರಿದಂತೆ ಎಲ್ಲ ಧರ್ಮದವರು ಓದುತ್ತಿದ್ದಾರೆ. ಇದರ ಬೆಳವಣಿಗೆಯನ್ನು ನೋಡಿಯೇ ಉತ್ತರಪ್ರದೇಶದ ವಾರಣಾಸಿಯಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಇದು ಕೇಂದ್ರೀಯ ವಿಶ್ವವಿದ್ಯಾಲಯವಾಗಿದ್ದು, ಆವರಣದಲ್ಲಿ ಅನೇಕ ಸಣ್ಣ – ಪುಟ್ಟ ದೇವಾಲಯಗಳನ್ನು ಹೊಂದಿರುತ್ತದೆ.
ಆದ್ದರಿಂದ ಅಲಿಗಢ ವಿಶ್ವವಿದ್ಯಾನಿಲಯದಲ್ಲಿ ಒಂದು ದೇವಾಲಯವನ್ನು ಸ್ಥಾಪಿಸಬೇಕೆಂಬ ಬೇಡಿಕೆ ಆಗಾಗ ಕೇಳಿಬರುತ್ತದೆ. ಈ ಬಾರಿ ಜಾಟ್ ಯುವ ಮಹಾ ಸಭಾ ಎಂಬ ಸಾಮಾಜಿಕ ಸಂಘಟನೆಯು ಇದನ್ನು ಹುಟ್ಟುಹಾಕಿದೆ. ಮಾಜಿ ವಿದ್ಯಾರ್ಥಿಗಳಾದ ಇದರ ನಿರ್ವಾಹಕರು ತಮ್ಮ ಬೇಡಿಕೆಯನ್ನು ಒತ್ತಾಯಿಸಿ ಅಲಿಗಢ ವಿಶ್ವವಿದ್ಯಾನಿಲಯದ ಉಪಕುಲಪತಿ ತಾರಿಕ್ ಮನ್ಸೂರಿಗೆ ಪತ್ರವನ್ನು ಕಳುಹಿಸಿದ್ದಾರೆ. ಪತ್ರದಲ್ಲಿ ಕ್ಯಾಂಪಸ್‌ನಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಹಾಗೂ ಪೂಜೆಗೆ ಅವಕಾಶ ನೀಡದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಲಿಗಢ ಜಿಲ್ಲಾ ಜಾಟ್ ಯುವ ಮಹಾ ಸಭಾದ ಅಧ್ಯಕ್ಷ ಆದೇಶ್ ಚೌಧರಿ, ‘ಅಲಿಘರ್ ವಿಶ್ವವಿದ್ಯಾಲಯದಲ್ಲಿ ಸುಮಾರು 4000 ಹಿಂದೂ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಅವರಿಗೆ ಕ್ಯಾಂಪಸ್‌ನಲ್ಲಿ ಒಂದು ದೇವಸ್ಥಾನವೂ ಇಲ್ಲ. ಹಾಗಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು. ಇದಕ್ಕೆ ಆಡಳಿತದ ಬಳಿ ಹಣವಿಲ್ಲದಿದ್ದರೆ 21 ಲಕ್ಷ ರೂಗಳನ್ನು ನಾವೇ ಸಂಗ್ರಹಿಸಿ ಕೊಡುತ್ತೇವೆ.
ಪ್ರತಿ ಹಾಸ್ಟೆಲ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಸೀದಿ ಇದೆ. ಇದರ ಹೊರತಾಗಿ ಹಾಸ್ಟೆಲ್‌ಗಳ ಹೊರಗೆ ಮತ್ತು ಕ್ಯಾಂಪಸ್‌ನ ಅನೇಕ ಸ್ಥಳಗಳಲ್ಲಿ ಮಸೀದಿಗಳಿವೆ. ಅದರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಹಣ ಎಲ್ಲಿಂದ ಬರುತ್ತಿದೆ ಎಂಬುದನ್ನು ಆಡಳಿತ ಮಂಡಳಿ ವಿವರಿಸಬೇಕು. ಇವುಗಳ ನಿರ್ವಹಣೆಗೆ ಕೇಂದ್ರ ಸರ್ಕಾರದ ನಿಧಿ ಅಥವಾ ವಿದೇಶಿ ನಿಧಿ ಬಳಸಲಾಗಿದೆಯೇ ಎಂಬುದನ್ನು ತಿಳಿಸಬೇಕು.
ಇತ್ತೀಚೆಗೆ ಗಣರಾಜ್ಯೋತ್ಸವದಂದು ಧಾರ್ಮಿಕ ಘೋಷಣೆಯನ್ನು ಎತ್ತಲಾಯಿತು. ಧಾರ್ಮಿಕ ಸೌಹಾರ್ದ ವಿಶ್ವವಿದ್ಯಾನಿಲಯ ಅನುಮತಿ ನೀಡಿದರೆ ಅದನ್ನು ಹಿಂದೂ ವಿದ್ಯಾರ್ಥಿಗಳಿಗೂ ನೀಡಬೇಕು. ಕ್ಯಾಂಪಸ್‌ನಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗದಿದ್ದರೆ ನಮ್ಮ ತೀವ್ರ ಪ್ರತಿಭಟನೆಗೆ ಉಪಕುಲಪತಿಗಳೇ ಕಾರಣ’ ಎಂದು ಆದೇಶ್ ಚೌಧರಿ ತಿಳಿಸಿದ್ದಾರೆ.
ಕಳೆದ ಜನವರಿ 26 ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಅಲ್ಲಿ ನೆರೆದಿದ್ದ ಎನ್‌ಸಿಸಿ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ‘ಅಲ್ಲಾಹು ಅಕ್ಬರ್ ಮತ್ತು ನಾರೇ ತಕ್ಬೀರ್ ಅಲ್ಲಾಹು ಅಕ್ಬರ್’ ಎಂಬ ಘೋಷಣೆಗಳನ್ನು ಮೊಳಗಿದ್ದರು. ಇದರ ವಿಡಿಯೋ ವೈರಲ್ ಆದ ನಂತರ ಬಿಜೆಪಿ, ಹಿಂದೂ ಮಹಾಸಭಾ ಸೇರಿದಂತೆ ಸಂಘಟನೆಗಳು ದೂರು ದಾಖಲಿಸಿದ್ದವು.
ಘೋಷಣೆ ಕೂಗಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಡಳಿತ ಮಂಡಳಿ ತನಿಖೆ ನಡೆಸುತ್ತಿದೆ. ಅಲಿಗಢ ಪೊಲೀಸ್ ಇಲಾಖೆ ಕೂಡ ಈ ವಿಷಯದಲ್ಲಿ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಂಸ್ಥೆಯನ್ನು ಒತ್ತಾಯಿಸಿದೆ.