ಈ ವಾರದಿಂದ ಎಣಿಸಲು ಬರುತ್ತಿದೆ ‘ರೂಪಾಯಿ’!
ಅರುಣ್ ಜಿ.,
ಬೆಂಗಳೂರು: ವಿಜಯ್ ಜಗದಾಲ್ ಮೊದಲ ಬಾರಿಗೆ ನಟಿಸಿ-ನಿರ್ದೇಶಿಸಿರುವ ‘ರೂಪಾಯಿ’ ಚಿತ್ರವು ಫೆಬ್ರವರಿ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ವಾರವಷ್ಟೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಜನರ ಮೆಚ್ಚುಗೆ ಪಡೆದಿತ್ತು. ಈಗ ‘ಉಸಿರಾಟ’ ಎಂಬ ಹೊಸ ಹಾಡು ಬಿಡುಗಡೆಯಾಗಿದ್ದು. ಈ ಹಾಡಿಗೂ ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಯೂಟ್ಯೂಬ್ನ ಆನಂದ್ ಆಡಿಯೋ ಚಾನಲ್ನಲ್ಲಿ ಬಿಡುಗಡೆಯಾಗಿರುವ ‘ಉಸಿರಾಟ’ ಹಾಡನ್ನು ವ್ಯಾಸರಾಜ ಸೋಸಲೆ ಹಾಡಿದ್ದು, ಆನಂದ್ ರಾಜಾವಿಕ್ರಮ್ ಸಂಗೀತ ಸಂಯೋಜಿಸಿದ್ದಾರೆ. ಇನ್ನು, ನಟ-ನಿರ್ದೇಶಕ ವಿಜಯ್ ಜಗದಾಲ್ ಅವರೇ ಈ ಚಿತ್ರಕ್ಕೆ ಸಾಹಿತ್ಯ ರಚಿಸಿದ್ದಾರೆ.
‘ರೂಪಾಯಿ’ ಒಂದು ಪಕ್ಕಾ ಮನರಂಜನಾತ್ಮಕ ಚಿತ್ರವಾಗಿದ್ದು, ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳೂ ಈ ಚಿತ್ರದಲ್ಲಿದೆಯಂತೆ. ‘ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದ ಹಾಗೆ ಚಿತ್ರಕಥೆ ಮಾಡಿದ್ದು, ಹಣದ ಮೌಲ್ಯದ ಕುರಿತು ನಗುವಿನ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ. ಇಲ್ಲಿ ನಗಿಸುವುದಕ್ಕೆ ಯಾವುದೇ ಪ್ರತ್ಯೇಕ ಪಾತ್ರಗಳಿಲ್ಲ. ಸನ್ನಿವೇಶಗಳೇ ನಗು ಉಕ್ಕಿಸುವಂತಿದೆ’ ಎನ್ನುತ್ತಾರೆ ವಿಜಯ್ ಜಗದಾಲ್. ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ರಚಿಸಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ವಿಜಯ್ ಜಗದಾಲ್, ‘ಇದೊಂದು ರೆಗ್ಯುಲರ್ ಚಿತ್ರ ಅಲ್ಲ. ಐದು ಜನರ ಸುತ್ತ ಸುತ್ತುವ ಕಥೆ ಇಲ್ಲಿದೆ. ಅವರಿಗೆ ಆಕಸ್ಮಿಕವಾಗಿ ಒಂದಿಷ್ಟು ಹಣ ಸಿಗುತ್ತದೆ. ಒಂದ ದೊಡ್ಡ ಹಗರಣಕ್ಕೆ ಸಂಬಂಧಿಸಿದ ಹಣ, ಮಧ್ಯಮ ವರ್ಗದ ಜನರಿಗೆ ಸಿಕ್ಕಾಗ ಅವರ ಜೀವನದಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ ಎಂಬುದರ ಕುರಿತು ಹೇಳುವುದಕ್ಕೆ ಹೊರಟಿದ್ದೇವೆ. ದುಡ್ಡಿಗಿಂತ ಸಂಬಂಧಗಳ ಕುರಿತಾದ ಚಿತ್ರ ಇದು. ಆ ದುಡ್ಡು ಸಂಬಂಧಗಳನ್ನು ಹೇಗೆ ಹಾಳು ಮಾಡುತ್ತದೆ ಎಂದು ಹೇಳುವ ಚಿತ್ರ ಇದು’ ಎಂದು ಹೇಳುತ್ತಾರೆ.
ವಿವಿಧ್ ಸಿನಿಮಾಸ್ ಬ್ಯಾನರ್ನಡಿ ಮಂಜುನಾಥ್ ಎಂ., ಹರೀಶ್,ಬಿ.ಕೆ. ಮತ್ತು ವಿನೋದ ಎನ್. ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ವಿಜಯ್ ಜಗದಾಲ್ ಜೊತೆಗೆ ಕೃಷಿ ತಾಪಂಡ, ಯಶ್ವಿಕ್, ‘ಮೈತ್ರಿ’ ಜಗದೀಶ್, ಶಂಕರ್ ಮೂರ್ತಿ, ರಾಮ್ ಚಂದನ್, ಚಂದನಾ ರಾಘವೇಂದ್ರ, ಪ್ರಮೋದ್ ಶೆಟ್ಟಿ, ರಾಕ್ಲೈನ್ ಸುಧಾಕರ್, ಮೋಹನ್ ಜನೇಜ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಆನಂದ್ ರಾಜವಿಕ್ರಮ್ ಅವರ ಸಂಗೀತ, ಆರ್.ಡಿ.ನಾಗಾರ್ಜುನ್ ಅವರ ಛಾಯಾಗ್ರಹಣ ಮತ್ತು ಶಿವರಾಜ್ ಮೇಹು ಅವರ ಸಂಕಲನವಿದೆ.