ಮಾನ್ವಿ ಶ್ರೀ.ಯಲ್ಲಮ್ಮ ದೇವಿಯ ಜಾತ್ರೆಯಲ್ಲಿ ಅಕ್ರಮ; ಮೂಲಭೂತ ಸೌಲಭ್ಯಗಳ ಕೊರತೆ! ಜಿಲ್ಲಾಡಳಿತ ಏನು ಮಾಡುತ್ತಿದೆ? » Dynamic Leader
October 22, 2024
ದೇಶ

ಮಾನ್ವಿ ಶ್ರೀ.ಯಲ್ಲಮ್ಮ ದೇವಿಯ ಜಾತ್ರೆಯಲ್ಲಿ ಅಕ್ರಮ; ಮೂಲಭೂತ ಸೌಲಭ್ಯಗಳ ಕೊರತೆ! ಜಿಲ್ಲಾಡಳಿತ ಏನು ಮಾಡುತ್ತಿದೆ?

ವರದಿ: ರಾಮು, ನೀರಮಾನ್ವಿ

ರಾಯಚೂರು: ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿ ನಾಳೆ ಫೆಬ್ರವರಿ 10 ರಂದು ಶ್ರೀ.ಯಲ್ಲಮ್ಮ ದೇವಿಯ ಜಾತ್ರೆಯು ಬಹಳ ಅದ್ದೂರಿಯಾಗಿ ನಡೆಯಲಿದೆ.

ಪ್ರತಿವರ್ಷವು ಈ ಜಾತ್ರೆಯ ಹೆಸರಿನಲ್ಲಿ ಅದಿಕಾರಿಗಳು ಟೆಂಡರ್ ಕರೆಯುತ್ತಾರೆ. ಆದರೆ, ಟೆಂಡರ್ ನಿಯಮಗಳು ಎಲ್ಲಿಯೂ ಪಾಲನೆ ಆಗುತ್ತಿಲ್ಲ. ಜಾತ್ರೆಗೆ ಬರುವ ಭಕ್ತಾದಿಗಳಿಂದ ಅಕ್ರಮವಾಗಿ ಒಂದಕ್ಕೆ ಎರಡು ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಇದು ದೊಡ್ಡ ದರೋಡೆಯಾಗಿದೆ. ಈ ವಿಷಯದ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕಿನ ಆಡಳಿತಕ್ಕೆ ಗೊತ್ತಿದ್ದರು, ಗುತ್ತಿಗೆದಾರರಿಗೆ ಅಕ್ರಮವಾಗಿ ಸಹಾಯ ಮಾಡುತ್ತಿದ್ದಾರೆ. ಶ್ರೀ.ಯಲ್ಲಮ್ಮ ದೇವಿಯ ಜಾತ್ರೆಯಲ್ಲಿ ನಡೆಯುವ ಈ ಕರಾಳ ದಂದೆಯಲ್ಲಿ, ಜಿಲ್ಲಾ ಮತ್ತು ತಾಲ್ಲೂಕಿನ ಅಧಿಕಾರಿಗಳಿಗೂ ಪಾಲು ಕೊಡುತ್ತೇವೆ ಎಂದು ಗುತ್ತಿಗೆದಾರರು ರಾಜಾರೋಷವಾಗಿ ಹೇಳಿಕೊಂಡು ತಿರುಗಾಡುವುದೇ ಇದಕ್ಕೆ ಸಾಕ್ಷಿಯಾಗಿದೆ. ಈ ಅಕ್ರಮ ದಂದೆ ಪ್ರತಿವರ್ಷವು ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಬೇಕಾದವರು ಯಾರು?

ಪ್ರತಿವರ್ಷ ಯಲ್ಲಮ್ಮನ ದೇವಸ್ಥಾನಕ್ಕೆ ಕಾಣಿಕೆಯಾಗಿ ಬರುವ ಲಕ್ಷಾಂತರ ರೂಪಾಯಿಗಳು ಖಜಾನೆಯಲ್ಲಿ ಜಮಾವಣೆಯಾಗುತ್ತಿದ್ದರು, ಇಲ್ಲಿ ಶೌಚಾಲಯ, ತಂಗುದಾಣ, ಕುಡಿಯುವ ನೀರಿನ ಸೌಲಭ್ಯಗಳು ಮರೀಚಿಕೆಯಾಗಿದೆ. ಸ್ಥಳೀಯ ಆಡಳಿತ ಮಂಡಳಿ ಭಕ್ತಾಧಿಗಳಿಗೆ ಮಾಡಿಕೊಡಬೇಕಾದ ಮೂಲಭೂತ ಸೌಲಭ್ಯಗಳನ್ನು ಮಾಡುವುದರಲ್ಲಿಯೂ ಅಧಿಕಾರಿಗಳು ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ.

ಮದ್ಯ, ಮಾಂಸ ನೀಷೇಧ ವಿದ್ದರೂ ದೇವಸ್ಥಾನದ ಅಕ್ಕ ಪಕ್ಕದಲ್ಲಿ ಪ್ರಾಣಿ ಬಲಿ ನಡೆಯುತ್ತಿದೆ. ಇದಕ್ಕೆ ಅಧಿಕಾರಿಗಳು ಹಾಗೂ ದೇವಸ್ಥಾನದ ಪ್ರಮುಖರು ಕಣ್ಣು ಮುಚ್ಚಿ ಸಹಕಾರ ನೀಡುತ್ತಿದ್ದಾರೆ. ಕಾನೂನನ್ನು ಗಾಳಿಗೆ ತೂರುವುದೆಲ್ಲ ಇವರಿಗೆ ಹಾಲು ಅನ್ನ ಸವಿದಂಗೆ.

ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಸುತ್ತಮುತ್ತ ನೆಡೆಯುವ ಅಕ್ರಮ ಚಟುವಟಿಕೆಗಳನ್ನು ಸ್ಥಳೀಯ ಆಡಳಿತ ಮಂಡಳಿ ಕೂಡಲೇ ತಡೆಗಟ್ಟಿ, ಸೇರಲಿರುವ ಲಕ್ಷಾಂತರ ಭಕ್ತಾಧಿಗಳಿಗೆ ಅನುಕೂಲ ಮಾಡಿಕೊಡಬೇಕೆಂಬುದು ನೀರಮಾನ್ವಿ ಗ್ರಾಮ ಜನರ ಆಶಯವಾಗಿದೆ.

Related Posts