ಬಿಡುಗಡೆಗೂ ಮೊದಲೆ ಕುತೂಹಲ ಹುಟ್ಟಿಸಿದೆ “ಕಡಲತೀರದ ಭಾರ್ಗವ” ಚಿತ್ರ!
ಅರುಣ್, ಜಿ.,
ಎರಡು ಲಕ್ಷಕ್ಕೆ ಮಾರಾಟವಾಯಿತು ಚಿತ್ರದ ಮೊದಲ ಟಿಕೆಟ್!!
ಶೀರ್ಷಿಕೆ, ಹಾಡುಗಳು ಹಾಗೂ ಟೀಸರ್ ಮೂಲಕ ಈಗಾಗಲೇ ಕನ್ನಡಿಗರ ಮನ ತಲುಪಿರುವ “ಕಡಲ ತೀರದ ಭಾರ್ಗವ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮಾಜಿ ಉಪ ಮಹಾಪೌರರಾದ ಮೋಹನ್ ರಾಜು, “ನೀರ್ ದೋಸೆ” ಚಿತ್ರದ ನಿರ್ಮಾಪಕರಾದ ಪ್ರಸನ್ನ ಹಾಗೂ “ಗಜಾನನ ಗ್ಯಾಂಗ್” ಚಿತ್ರದ ನಿರ್ಮಾಪಕರಾದ ನಾಗೇಶ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.
ಮಾರ್ಚ್ 3 ನೇ ತಾರೀಖು ರಾಜ್ಯಾದ್ಯಂತ ಈ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದ ಮೊದಲ ಟಿಕೆಟ್ ಹರಾಜಿನ ಮೂಲಕ ಮಾರಾಟ ಮಾಡಲಾಯಿತು. ಅತಿಥಿಯಾಗಿ ಆಗಮಿಸಿದ್ದ ಮೋಹನ್ ರಾಜು ಅವರು 2 ಲಕ್ಷ ರೂಪಾಯಿ ನೀಡಿ ಈ ಚಿತ್ರದ ಮೊದಲ ಟಿಕೆಟ್ ಪಡೆದುಕೊಂಡರು.
ಭಾರೀ ಬೆಲೆಗೆ ಟಿಕೆಟ್ ಮಾರಾಟವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ನಿರ್ಮಾಪಕರಾದ ಪಟೇಲ್ ವರುಣ್ ರಾಜು ಹಾಗೂ ಭರತ್ ಗೌಡ ಮೊದಲ ಟಿಕೆಟ್ ಮಾರಾಟದಿಂದ ಬಂದ ಹಣವನ್ನು ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೀಡುವುದಾಗಿ ತಿಳಿಸಿದ್ದಾರೆ.
ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಗೆಲ್ಲುತ್ತಿದೆ. ಅದರಲ್ಲೂ “ಕ” ಹೆಸರಿನಿಂದ ಆರಂಭವಾಗುವ “ಕೆ.ಜಿ.ಎಫ್”, “ಕಾಂತಾರ” ಚಿತ್ರಗಳು ಭರ್ಜರಿ ಯಶಸ್ಸು ಕಂಡಿದೆ. ಅದೇ “ಕ” ಅಕ್ಷರದಿಂದ ಆರಂಭವಾಗುವ “ಕಡಲ ತೀರದ ಭಾರ್ಗವ” ಕೂಡ ಪ್ರಚಂಡ ಯಶಸ್ಸು ಕಾಣಲಿ ಎಂದು ಮೋಹನ್ ರಾಜು ಹಾರೈಸಿದರು.
ಚಿತ್ರದಲ್ಲಿ ಕಡಲ ತೀರದಲ್ಲಿ ವಾಸಿಸುವ ಭಾರ್ಗವನಾಗಿ ನಾನು ಅಭಿನಯಿಸಿದ್ದೇನೆ. ಚಿತ್ರ ಚೆನ್ನಾಗಿ ಬಂದಿದೆ. ಅಧಿಕ ಮೊತ್ತ ಕೊಟ್ಟು ಟಿಕೆಟ್ ಖರೀದಿಸಿದ ಮೋಹನ್ ರಾಜು ಅವರಿಗೆ ಹಾಗೂ ಚಿತ್ರಕ್ಕೆ ಸಹಕಾರ ನೀಡಿದ್ದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ ಎಂದರು ನಟ – ನಿರ್ಮಾಪಕ ಪಟೇಲ್ ವರುಣ್ ರಾಜು.
ನಾನು ಭರತ್ ಎಂಬ ಪಾತ್ರದಲ್ಲೇ ಕಾಣಿಸಿಕೊಂಡಿದ್ದೇನೆ. ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಗೆ ಸಿಗುತ್ತಿರುವ ಪ್ರತಿಕ್ರಿಯೆಗೆ ಮನತುಂಬಿ ಬಂದಿದೆ ಎಂದು ನಾಯಕ ಭರತ್ ಗೌಡ ತಿಳಿಸಿದರು.
ಚಿತ್ರದ ಒಂದು ಸನ್ನಿವೇಶದ ಮೂಲಕ ಮಾತು ಪ್ರಾರಂಭಿಸಿದ ನಿರ್ದೇಶಕ ಪನ್ನಗ ಸೋಮಶೇಖರ್, ಇದು ಹಿರಿಯ ಸಾಹಿತಿ ಶಿವರಾಮ ಕಾರಂತರ ಜೀವನ್ನಾಧಾರಿತ ಚಿತ್ರವಲ್ಲ. ಕಡಲ ತೀರದಲ್ಲಿ ವಾಸಿಸುವ ನಮ್ಮ ನಾಯಕನ ಹೆಸರು ಭಾರ್ಗವ ಎಂದರು.
ಸಮಾರಂಭದಲ್ಲಿ ಹಾಜರಿದ್ದ ಅತಿಥಿಗಳು ಹಾಗೂ ಚಿತ್ರತಂಡದ ಸದಸ್ಯರು ತಮ್ಮ ಅನುಭವ ಹಂಚಿಕೊಂಡರು.