ಫೆಬ್ರವರಿ 23 ರಂದು 'ಮಾರ್ಟಿನ್' ಟೀಸರ್!  » Dynamic Leader
October 22, 2024
ಸಿನಿಮಾ

ಫೆಬ್ರವರಿ 23 ರಂದು ‘ಮಾರ್ಟಿನ್’ ಟೀಸರ್! 

ಅರುಣ್ ಜಿ.,

ದೃವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್. ಎ.ಪಿ. ಅರ್ಜುನ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ವಾಸವಿ ಎಂಟರ್ ಪ್ರೈಸಸ್ ಅಡಿಯಲ್ಲಿ ಉದಯ್ ಕೆ.ಮೆಹ್ತಾ ಅವರು ನಿರ್ಮಿಸುತ್ತಿರುವ 9ನೇ ಚಿತ್ರ ಇದಾಗಿದೆ. ಮಾರ್ಟಿನ್ ಚಿತ್ರದ ಪ್ಯಾನ್ ಇಂಡಿಯಾ ಟೀಸರ್ ಇದೇ ತಿಂಗಳ 23 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಚಿತ್ರತಂಡ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು, 

ಮೊದಲು ಮಾತನಾಡಿದ ನಿರ್ಮಾಪಕ ಉದಯ್ ಕೆ.ಮೆಹ್ತಾ ‘ಕಳೆದ ಆಗಸ್ಟ್ 15ಕ್ಕೆ ನಮ್ಮ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವುದರೊಂದಿಗೆ ಚಿತ್ರವನ್ನು ಆರಂಭಿಸಿದೆವು. ಈಗಾಗಲೇ ಚಿತ್ರದ ಟಾಕಿ ಪೋರ್ಷನ್ ಮುಗಿದಿದ್ದು, ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಫೆಬ್ರವರಿ 23 ರಂದು ವಿಐಪಿ ಅಭಿಮಾನಿಗಳಿಗೋಸ್ಕರ ಪೇಯ್ಡ್ ಪ್ರೀಮಿಯರ್ ಟೀಸರ್ ಪ್ರದರ್ಶನವನ್ನು ವೀರೇಶ್  ಚಿತ್ರಮಂದಿರದಲ್ಲಿ ಏರ್ಪಡಿಸಿದ್ದೇವೆ. ಹಾಗಂತ ಇದರಿಂದ ಹಣ ಮಾಡುವ ಉದ್ದೇಶವಿಲ್ಲ, ಚಿತ್ರಮಂದಿರದಲ್ಲಿ ಹೆವಿ ಕ್ರೌಡ್ ಆಗಬಾರದೆಂಬ ಉದ್ದೇಶ ನಮ್ಮದು. ಇದರಿಂದ ಬಂದ ಹಣವನ್ನು ಗೋಶಾಲೆಗೆ ಕೊಡುತ್ತಿದ್ದೇವೆ. ಅಲ್ಲದೆ ಅದೇ ದಿನ ಸಂಜೆ ತಮ್ಮ ಮೊಬೈಲ್‌ಗಳಲ್ಲೇ ಅಭಿಮಾನಿಗಳು ಮಾರ್ಟಿನ್ ಟೀಸರ್ ನೋಡಬಹುದು. ಅಲ್ಲದೆ 5 ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿರುವುದರಿಂದ ಬೇರೆ ಭಾಷೆಗಳ ಮಾದ್ಯಮದವರನ್ನು ಆಹ್ವಾನಿಸಿ ಪ್ಯಾನ್ ಇಂಡಿಯಾ ಪ್ರೆಸ್‌ಮೀಟ್ ಮಾಡುತ್ತಿದ್ದೇವೆ. ಆರಂಭದಲ್ಲಿ ನಮ್ಮ ಚಿತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಆಗುತ್ತೆ ಅಂದುಕೊಂಡಿರಲಿಲ್ಲ, ಬರುಬರುತ್ತಾ ದೊಡ್ಡದಾಗುತ್ತಾ ಹೋಯಿತು’ ಎಂದು ಹೇಳಿದರು.

ನಿರ್ದೇಶಕ ಎ.ಪಿ.ಅರ್ಜುನ್ ಮಾತನಾಡುತ್ತ ‘ಮಾರ್ಟಿನ್ ನಮ್ಮ ಕನ್ನಡದ ಸಿನಿಮಾ. ಮೊದಲು ನಮ್ಮವರ ಜೊತೆ ಮಾಹಿತಿ ಹಂಚಿಕೊಂಡು ನಂತರ ಬೇರೆಯವರ ಮುಂದೆ ಹೋಗುತ್ತಿದ್ದೇವೆ. ಇದು ಎಲ್ಲಾ ಕಡೆಗೂ ಸಲ್ಲುವ ಯೂನಿವರ್ಸಲ್ ಕಥೆಯಾಗಿದ್ದರಿಂದ, ಬೇರೆ ಬೇರೆ ಭಾಷೆಗಳಲ್ಲಿ ನಿರ್ಮಿಸಿದ್ದೇವೆ. ಕಳೆದ 2021ರ ಸೆಪ್ಟೆಂಬರ್‌ನಲ್ಲಿ ಚಿತ್ರ ಆರಂಭವಾಯಿತು. ಇಷ್ಟುದಿನ, ಈ ಮಟ್ಟದಲ್ಲಿ ಆಗುತ್ತೆ ಅಂದ್ಕೊಂಡಿರಲಿಲ್ಲ, ಹೈದರಾಬಾದ್‌ ನಲ್ಲಿ ಸೆಟ್ ಹಾಕಿ 45 ದಿನ ಶೂಟ್ ಮಾಡಿದೆವು. ವೈಜಾಕ್‌ನಲ್ಲಿ ಚೇಸ್‌ಸೀನ್ 20 ದಿನಗಳವರೆಗೆ ಆಯಿತು, ಜೊತೆಗೆ ಆಗಾಗ ಬರುತ್ತಿದ್ದ ಮಳೆಯಿಂದಲೂ ತಡವಾಯಿತು. ಇನ್ನು ಕಾಶ್ಮೀರದಲ್ಲಿ 25 ದಿನ  ಅಲ್ಲದೆ ಮುಂಬೈನಲ್ಲಿ ಚೇಸಿಂಗ್ ಸೀನ್  ಚಿತ್ರೀಕರಣ ಮಾಡಿಕೊಂಡು ಬಂದೆವು. ಒಂದೊಂದು ಕಡೆ ಶೂಟ್ ಮಾಡಿಕೊಂಡು ಬಂದಾಗಲೂ ಒಂದಷ್ಟು ದಿನ ಗ್ಯಾಪ್ ಬೇಕಾಯಿತು. ಚಿತ್ರದಲ್ಲಿ ದ್ರುವ ಅವರಿಗೆ ತುಂಬಾ ಗೆಟಪ್ ಇದೆ, ನನ್ನ ಕೆರಿಯರ್‌ನಲ್ಲೇ ಅತಿದೊಡ್ಡ ಪವರ್ ಪ್ಯಾಕ್ಡ್ ಚಿತ್ರವಿದು. ವಿಶೇಷವಾದ ಮೋಕೋಬೋಟ್ ಕ್ಯಾಮೆರಾದಲ್ಲಿ 52 ದಿನ ಕ್ಲೈಮ್ಯಾಕ್ಸ್ ಸೀನ್ ಚಿತ್ರೀಕರಿಸಿದ್ದೇವೆ. ರಾಮ್ ಲಕ್ಷ್ಮಣ್ ಆಕ್ಷನ್ ಹಾಗೂ ರವಿವರ್ಮಾ ಚೇಸಿಂಗ್ ಸೀನ್ ಮಾಡಿದ್ದಾರೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಪರೀಕ್ಷೆಗಳು, ಐಪಿಎಲ್, ಚುನಾವಣೆ ಮುಗಿದ ನಂತರ ಚಿತ್ರವನ್ನು ರಿಲೀಸ್ ಮಾಡುವ ಯೋಜನೆಯಿದೆ ಎಂದು ಹೇಳಿದರು.

ನಾಯಕ ದ್ರುವ ಮಾತನಾಡಿ ’23ರ ಸಂಜೆ 5.55ಕ್ಕೆ ಲಹರಿ ಯುಟ್ಯೂಬ್ ಚಾನೆಲ್‌ನಲ್ಲಿ ನಮ್ಮ ಚಿತ್ರದ ಟೀಸರ್ ರಿಲೀಸಾಗುತ್ತಿದೆ. ಈ ಚಿತ್ರದಲ್ಲಿ ನನ್ನ ಪಾತ್ರ ಈವರೆಗೆ ಮಾಡಿದ್ದಕ್ಕಿಂತ ಬೇರೆ ಥರನೇ ಇದೆ. ಇಡೀ ಸಿನಿಮಾದಲ್ಲಿ  ತುಂಬಾ ಕಡಿಮೆ ಡೈಲಾಗ್ ಇದ್ದು,  ಆಕ್ಷನ್ ಸೀನ್ ಜಾಸ್ತಿ ಇರುತ್ತದೆ’ ಎಂದು ಹೇಳಿದರು. ಛಾಯಾಗ್ರಾಹಕ ಸತ್ಯ ಹೆಗಡೆ ಮಾತನಾಡಿ ಕ್ಯಾಮೆರಾ ವರ್ಕ್ ಬಗ್ಗೆ ಮಾಹಿತಿ ನೀಡಿದರು. ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಮಣಿ ಶರ್ಮಾ ಅವರ ಸಂಗೀತ ಸಂಯೋಜನೆ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಕಾಶ್ಮೀರದ ಮೈನಸ್ 7 ಡಿಗ್ರೀ ತಾಪಮಾನ ಇರುವ ಲೊಕೇಶನ್‌ಗಳಲ್ಲಿ ಆಕ್ಷನ್‌ಸೀನ್ ಚಿತ್ರೀಕರಿಸಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದ ಹೈಲೈಟ್.

Related Posts